ADVERTISEMENT

ಎಪಿಪಿ ಖಾಲಿ ಹುದ್ದೆ ಭರ್ತಿ ವಿಳಂಬ ಅಸಮರ್ಥನೀಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
ಎಪಿಪಿ ಖಾಲಿ ಹುದ್ದೆ ಭರ್ತಿ ವಿಳಂಬ ಅಸಮರ್ಥನೀಯ
ಎಪಿಪಿ ಖಾಲಿ ಹುದ್ದೆ ಭರ್ತಿ ವಿಳಂಬ ಅಸಮರ್ಥನೀಯ   

ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿ ತ್ವರಿತವಾಗಿ ನಡೆಯುತ್ತಿಲ್ಲ ಎನ್ನುವ ವಿಷಯ ಲೆಕ್ಕವಿಲ್ಲದಷ್ಟು ಸಲ ಚರ್ಚೆಯಾಗಿದೆ. ವಿಳಂಬಕ್ಕೆ ಏನು ಕಾರಣ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲಿ ಸರ್ಕಾರದ ಪಾತ್ರವೇ ದೊಡ್ಡದು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ತ್ವರಿತ ನ್ಯಾಯದಾನಕ್ಕೆ ಬೇಕಾದ ಸೌಲಭ್ಯ ಒದಗಿಸುವುದು ಸರ್ಕಾರದ ಕೆಲಸ. ಅದು ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರೆ ಇವತ್ತು ಜೆಎಂಎಫ್‌ಸಿ ಕೋರ್ಟ್‌ಗಳಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೆ ಎಲ್ಲ ಹಂತದಲ್ಲಿಯೂ ಲಕ್ಷಾಂತರ ಪ್ರಕರಣಗಳು ಸಕಾಲಕ್ಕೆ ವಿಲೇವಾರಿಯಾಗದೆ ಕೊಳೆಯುತ್ತಿರಲಿಲ್ಲ.

ಟಿ.ಎಸ್‌. ಠಾಕೂರ್‌ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಒಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿಯೇ ಕಣ್ಣೀರು ಹಾಕಿದ್ದರು.

‘ನ್ಯಾಯಾಂಗದ ಕರ್ತವ್ಯದ ಭಾರ ವಿಪರೀತ ಹೆಚ್ಚಿದೆ; ಅಗತ್ಯ ಸೌಕರ್ಯಗಳನ್ನು ಸರ್ಕಾರಗಳು ಕಲ್ಪಿಸದೇ ಇರುವುದೇ ಈ ಸ್ಥಿತಿಗೆ ಕಾರಣ. ಇದರಿಂದ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಪ್ರಕರಣಗಳ ವಿಳಂಬದ ಇಡೀ ಹೊಣೆಯನ್ನು ನ್ಯಾಯಾಂಗದ ತಲೆಗಷ್ಟೇ ಕಟ್ಟಬೇಡಿ’ ಎಂದು ಅಲವತ್ತುಕೊಂಡಿದ್ದರು. ಅವರ ಮಾತು ಅಕ್ಷರಶಃ ನಿಜ. ನ್ಯಾಯದಾನ ವಿಳಂಬದಿಂದ ಜನ ರೋಸಿಹೋಗಿದ್ದಾರೆ. ಕಾನೂನಿನ ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಜನತಂತ್ರಕ್ಕೆ ಇದು ಅತ್ಯಂತ ಅಪಾಯಕಾರಿ. ಇಷ್ಟಾದರೂ ಸರ್ಕಾರಗಳು ಜಡ ನಿದ್ರೆಯಿಂದ ಎದ್ದೇ ಇಲ್ಲ.

ADVERTISEMENT

ನ್ಯಾಯಾಂಗಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಎಂದರೆ ಇನ್ನಷ್ಟು ನ್ಯಾಯಾಧೀಶರ ನೇಮಕ, ಹೊಸ ಹೊಸ ಕೋರ್ಟ್‌ಗಳ ಸ್ಥಾಪನೆ, ಕಟ್ಟಡಗಳ ನಿರ್ಮಾಣ, ಕಂಪ್ಯೂಟರ್‌ ಅಳವಡಿಕೆ, ತಂತ್ರಜ್ಞಾನದ ಬಳಕೆ... ಇಷ್ಟಕ್ಕೇ ಸೀಮಿತ ಅಲ್ಲ. ಕೋರ್ಟ್‌ಗಳು ಸರಿಯಾಗಿ ಕೆಲಸ ನಿರ್ವಹಿಸಲು ಬೇಕಾದ ಅನುಕೂಲಗಳನ್ನು ಮಾಡಿಕೊಡುವುದು ಕೂಡ ಅಷ್ಟೇ ಮುಖ್ಯ. ಬುನಾದಿ ಹಂತದಲ್ಲಿನ ಕೋರ್ಟ್‌ಗಳಿಗೆ ಅಂದರೆ ಮ್ಯಾಜಿಸ್ಟ್ರೇಟ್‌, ಸಿವಿಲ್‌ ಮತ್ತು ಜಿಲ್ಲಾ ಕೋರ್ಟ್‌ಗಳ ಸುಗಮ ಕಾರ್ಯ ನಿರ್ವಹಣೆಗಾಗಿ ಸರ್ಕಾರಿ ವಕೀಲರನ್ನು ಅಂದರೆ ಪಬ್ಲಿಕ್‌ ಮತ್ತು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳನ್ನು (ಪಿ.ಪಿ. ಮತ್ತು ಎ.ಪಿ.ಪಿ.) ನೇಮಕ ಮಾಡುವುದು ಕೂಡ ಆದ್ಯತೆಯ ವಿಷಯವಾಗಬೇಕು.

ಸರ್ಕಾರವೇ ಫಿರ್ಯಾದಿಯಾಗಿರುವ, ವಾದ ಮಂಡಿಸಬೇಕಾದ ಪ್ರಕರಣಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರೇ ಇಲ್ಲದೇ ಹೋದರೆ ವಿಚಾರಣೆ ಮುಂದುವರಿಯುವುದೇ ಇಲ್ಲ. ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ಕೋರ್ಟ್‌ಗಳು ಕೈಗೆತ್ತಿಕೊಂಡಾಗ ಸಹಾಯಕ ಪ್ರಾಸಿಕ್ಯೂಟರ್‌ಗಳ ಅಗತ್ಯ ಬಹಳ.

ಏಕೆಂದರೆ ಪೊಲೀಸ್‌ ತನಿಖೆಯಲ್ಲಿ ಸಂಗ್ರಹವಾದ ಮಾಹಿತಿಯನ್ನು ಕೋರ್ಟ್‌ ಗಮನಕ್ಕೆ ತಂದು ಸಮರ್ಥವಾಗಿ ವಾದ ಮಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಹೊಣೆ ಇವರದು. ಆದರೆ, ನಮ್ಮ ರಾಜ್ಯ ಸರ್ಕಾರವು ಇಂತಹ ಮಹತ್ವದ ಹುದ್ದೆಗಳನ್ನೂ ಭರ್ತಿ ಮಾಡದೆ ಖಾಲಿ ಬಿಟ್ಟಿದೆ ಎನ್ನುವುದಂತೂ ಆಘಾತಕಾರಿ. ರಾಜ್ಯ ಪ್ರಾಸಿಕ್ಯೂಟರ್‌ಗಳ ಸಂಘದ ಅಧ್ಯಕ್ಷರೇ ಹೇಳುವಂತೆ, ಈ ಸಮಸ್ಯೆ ಅನೇಕ ವರ್ಷಗಳಿಂದಲೂ ಇದೆ. ಖಾಲಿ ಇರುವ 150ಕ್ಕೂ ಹೆಚ್ಚು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎ.ಪಿ.ಪಿ.) ಹುದ್ದೆ ತುಂಬಲು ಪದೇಪದೇ ಮಾಡಿಕೊಂಡ ಮನವಿಗೂ ಸರ್ಕಾರ ಸ್ಪಂದಿಸಿಲ್ಲ ಎಂದೂ ಅವರು ದೂರಿದ್ದಾರೆ.

ಈ ಹುದ್ದೆಗೆ ಅಗತ್ಯವಿರುವ ವಕೀಲಿ ಪದವಿ ಹೊಂದಿದವರಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಅರ್ಹ ವಕೀಲರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವಂತೆ ಹೈಕೋರ್ಟ್ ಸುಮಾರು 9 ವರ್ಷಗಳ ಹಿಂದೆಯೇ ಸೂಚಿಸಿದೆ. ಆದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಸುಮಾರು 650 ಹಿರಿಯ ಸರ್ಕಾರಿ ವಕೀಲರು (ಪಿ.ಪಿ.) ಕೆಲಸದ ಒತ್ತಡದಿಂದ ಬಳಲುತ್ತಿದ್ದರೂ ಎ.ಪಿ.ಪಿ.ಗಳ ಕೆಲಸವನ್ನೂ ಅವರ ತಲೆಗೆ ಕಟ್ಟಿದೆ. ಇದರಿಂದ ಎರಡೆರಡು ಕಡೆ ಓಡಾಡಬೇಕಾದ ಸ್ಥಿತಿ ಅವರದು.

ಹೀಗಾಗಿ ಅವರು ಮೂಲತಃ ನಿಯೋಜನೆಗೊಂಡ ಕೋರ್ಟ್‌ಗಳಲ್ಲೂ ಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಆಗುತ್ತಿಲ್ಲ, ಇತ್ತ ಎ.ಪಿ.ಪಿ.ಯ ಹೆಚ್ಚುವರಿ ಹೊಣೆ ನಿರ್ವಹಿಸಲೂ ಆಗುತ್ತಿಲ್ಲ. ಇದು ಪ್ರಕರಣಗಳ ತ್ವರಿತ ವಿಲೇವಾರಿಗೆ ದೊಡ್ಡ ಅಡಚಣೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈ ವಿಷಯದಲ್ಲಂತೂ ಅತಿ ದೊಡ್ಡ ತಪ್ಪಿತಸ್ಥ ಯಾರಾದರೂ ಇದ್ದರೆ ಅದು ಸರ್ಕಾರ. ಈಗಾಗಲೇ‌ ವಿಳಂಬದಿಂದ ಸಾಕಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಇಂತಹ ಖಾಲಿ ಹುದ್ದೆಗಳ ಭರ್ತಿ ನಿಯಮಿತವಾಗಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.