ADVERTISEMENT

ಬ್ಯಾಂಕ್‌ಗಳಿಗೆ ಪುನರ್ಧನ ನೆರವು: ಸಕಾಲಿಕ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಬ್ಯಾಂಕ್‌ಗಳಿಗೆ ಪುನರ್ಧನ ನೆರವು: ಸಕಾಲಿಕ ಕ್ರಮ
ಬ್ಯಾಂಕ್‌ಗಳಿಗೆ ಪುನರ್ಧನ ನೆರವು: ಸಕಾಲಿಕ ಕ್ರಮ   

ಸರ್ಕಾರಿ ಸ್ವಾಮ್ಯದ ಇಪ್ಪತ್ತು ಬ್ಯಾಂಕ್‌ಗಳಿಗೆ ಇದೇ ಮಾರ್ಚ್‌ ಅಂತ್ಯದ ಒಳಗೆ ₹ 88 ಸಾವಿರ ಕೋಟಿಗಳ ಪುನರ್ಧನ ನೆರವಿನ ಜೊತೆಗೆ, ರಚನಾತ್ಮಕ  ಸುಧಾರಣಾ ಕ್ರಮಗಳನ್ನೂ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ₹ 9.5ಲಕ್ಷ ಕೋಟಿಗೂ ಹೆಚ್ಚು ವಸೂಲಾಗದ ಸಾಲದ (ಎನ್‌ಪಿಎ) ಸುಳಿಗೆ ಸಿಲುಕಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿದೆ ಎಂಬುದು ಇಲ್ಲಿ ಮುಖ್ಯ. ಬಜೆಟ್‌ ನೆರವು, ಪುನರ್ಧನ ಬಾಂಡ್‌ ಮತ್ತು ಮಾರುಕಟ್ಟೆಯಿಂದ ಎತ್ತುವ ಸಾಲಗಳಿಂದ ಬ್ಯಾಂಕ್‌ಗಳಲ್ಲಿ ಈ ವರ್ಷಾಂತ್ಯದ ವೇಳೆಗೆ ₹ 1 ಲಕ್ಷ ಕೋಟಿಗಳಷ್ಟು ಸಂಪನ್ಮೂಲ ಸಂಗ್ರಹವಾಗಲಿದೆ. ಈ ಹೆಚ್ಚುವರಿ ಸಂಪನ್ಮೂಲವು ಬ್ಯಾಂಕ್‌ಗಳು ಮತ್ತು ದೇಶಿ ಆರ್ಥಿಕತೆ ಪಾಲಿಗೆ ಹೊಸ ಶಕ್ತಿವರ್ಧಕವಾಗಿರಲಿದೆ. ಸುಧಾರಣಾ ಕ್ರಮಗಳ ಜಾರಿಗೆ ಬದ್ಧತೆ ತೋರುವ ಬ್ಯಾಂಕ್‌ಗಳಿಗೆ ಮಾತ್ರ ನೆರವು ನೀಡುತ್ತಿರುವುದು ಸ್ವಾಗತಾರ್ಹ ನಿರ್ಧಾರ. ಇದರಿಂದ ಬ್ಯಾಂಕ್‌ಗಳ ಉತ್ತರದಾಯಿತ್ವಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಲಿದೆ. ಪುನರ್ಧನ ನೆರವಿನಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ₹ 5 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಸುಲಭವಾಗಿ ಸಾಲ ದೊರೆಯಲಿದೆ. ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಬಂಡವಾಳ ಹೂಡಿಕೆ ಚಕ್ರ ಪುನಶ್ಚೇತನಗೊಳ್ಳಲಿದೆ. ಸುಧಾರಣಾ ಕ್ರಮಗಳಲ್ಲಿ,  ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಸ್‌ಎಂಇ) ಹೆಚ್ಚು ನೆರವು ನೀಡಲು ಮತ್ತು ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ತಾಕೀತು ಮಾಡಲಾಗಿದೆ. ಸಾಲ ಮಂಜೂರಾತಿಯಲ್ಲಿ ನಿರ್ದೇಶಕ ಮಂಡಳಿಗಳ ಹೊಣೆಗಾರಿಕೆ ಹೆಚ್ಚಿಸಲಾಗಿದೆ. ಬ್ಯಾಂಕಿಂಗ್‌ ಸೇವೆಗಳನ್ನು ಹೊಣೆಗಾರಿಕೆಯಿಂದ ನಿರ್ವಹಿಸಲು, ಉದ್ಯಮಿ ಸ್ನೇಹಿಯಾಗಿಸಲು ಹಾಗೂ ಹಣಕಾಸು ಸೇರ್ಪಡೆ ಹೆಚ್ಚಿಸಲು ಸೂಚಿಸಿರುವುದು ಉದ್ದೇಶಿತ ಫಲ ಪಡೆಯಲು ಸಹಕಾರಿ ಎನ್ನಬಹುದು.

ಸಾಲ ಮಂಜೂರಾತಿಗೆ ಸದ್ಯಕ್ಕೆ ಬ್ಯಾಂಕ್‌ಗಳು ಅನುಸರಿಸುತ್ತಿರುವ ವಿಧಾನಗಳು ಆಮೂಲಾಗ್ರವಾಗಿ ಬದಲಾಗಬೇಕಾಗಿವೆ. ಸಾಲ ನೀಡಿಕೆಯಲ್ಲಿ ಸರ್ಕಾರದ ಮಧ್ಯಪ್ರವೇಶ ಇರುವುದಿಲ್ಲ ಎನ್ನುವ ಒಣಮಾತಿನ ಭರವಸೆ ಬೇಕಾಗಿಲ್ಲ. ಬ್ಯಾಂಕ್‌ಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕಾಗಿದೆ. ಗರಿಷ್ಠ ಮಟ್ಟಕ್ಕೆ ತಲುಪಿರುವ ವಸೂಲಾಗದ ಸಾಲದ ಸಮಸ್ಯೆ ಪರಿಹರಿಸಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲ ಉಪಕ್ರಮಗಳಿಂದ ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಹೆಚ್ಚಲಿದೆ ಎಂಬ ನಿರೀಕ್ಷೆ ಸರಿಯಾದದ್ದು. ಬ್ಯಾಂಕ್‌ಗಳನ್ನು  ತನ್ನ ಸಂಪೂರ್ಣ ನಿಯಂತ್ರಣದಿಂದ ಬಿಟ್ಟುಕೊಡಲು ಸರ್ಕಾರಕ್ಕೆ ಮನಸ್ಸು ಇರದಿದ್ದರೆ, ಅವುಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸುವ ಹೊಸ ವ್ಯವಸ್ಥೆ ರೂಪಿಸಬೇಕು. ಇನ್ನು ಮುಂದೆ ₹ 250 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ವಿತರಣೆಯ ನಿರ್ಧಾರವು ವಿಶೇಷ ನಿಗಾ ವ್ಯವಸ್ಥೆಗೆ ಒಳಪಟ್ಟಿರುತ್ತದೆ ಎಂಬುದು ಸ್ವಾಗತಾರ್ಹ. ರಾಷ್ಟ್ರದ ಹಣಕಾಸು ವ್ಯವಸ್ಥೆಯ ನಿರ್ವಹಣೆ ಜವಾಬ್ದಾರಿಯುತವಾದ ಸಂಕೀರ್ಣ ಕೆಲಸ. ಯಾವುದೇ ರಾಜಕೀಯ ಪರಿಗಣನೆಗಳಿಂದ ಅದು ಮುಕ್ತವಾಗಿರಬೇಕು ಎಂಬುದು ನೆನಪಿರಬೇಕಾದದ್ದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT