ADVERTISEMENT

ಮಾಲ್ಡೀವ್ಸ್‌ನಲ್ಲಿ ಜನತಂತ್ರಕ್ಕೆ ಪೆಟ್ಟು: ಭಾರತಕ್ಕೆ ಇಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 20:13 IST
Last Updated 6 ಫೆಬ್ರುವರಿ 2018, 20:13 IST
ಮಾಲ್ಡೀವ್ಸ್‌ನಲ್ಲಿ ಜನತಂತ್ರಕ್ಕೆ ಪೆಟ್ಟು: ಭಾರತಕ್ಕೆ ಇಕ್ಕಟ್ಟು
ಮಾಲ್ಡೀವ್ಸ್‌ನಲ್ಲಿ ಜನತಂತ್ರಕ್ಕೆ ಪೆಟ್ಟು: ಭಾರತಕ್ಕೆ ಇಕ್ಕಟ್ಟು   

ಹಿಂದೂಮಹಾಸಾಗರದಲ್ಲಿನ ಪುಟ್ಟ ದ್ವೀಪರಾಷ್ಟ್ರ ಮಾಲ್ಡೀವ್ಸ್‌ ರಾಜಕೀಯವಾಗಿ ಹೊತ್ತಿ ಉರಿಯುತ್ತಿದೆ. ಜನತಂತ್ರದ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಹಿಡಿದು ಈಗ ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಅಧ್ಯಕ್ಷ ಅಬ್ದುಲ್ಲಾ ಯಮೀನ್‌, ದೇಶವನ್ನು ಅಂತಃಕಲಹದ ಅಂಚಿಗೆ ತಂದು ನಿಲ್ಲಿಸಿದ್ದಾರೆ. ದಿಢೀರನೆ ತುರ್ತು ಪರಿಸ್ಥಿತಿ ಘೋಷಿಸಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ದಮನ ಮಾಡಿದ್ದಾರೆ.

ರಾಜಕೀಯ ಎದುರಾಳಿಗಳನ್ನು ಅವರು ಈ ಹಿಂದೆಯೇ ಜೈಲಿಗಟ್ಟಿದ್ದರು. ಆದರೆ ಅದು ತಪ್ಪು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು. ಬಂಧಿತರ ಬಿಡುಗಡೆಗೆ ಆದೇಶಿಸಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಅವರು ಸುಪ್ರೀಂ ಕೋರ್ಟ್‌ ಮೇಲೆಯೇ ಭದ್ರತಾ ಪಡೆಗಳಿಂದ ದಾಳಿ ಮಾಡಿಸಿದ್ದಾರೆ. ಮುಖ್ಯ ನ್ಯಾಯಾಧೀಶ ಮತ್ತು ಇನ್ನೊಬ್ಬ ನ್ಯಾಯಾಧೀಶರ ಬಂಧನವಂತೂ ಉರಿಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಮತ್ತಷ್ಟು ತುಪ್ಪ ಸುರಿದಿದೆ. ತಮ್ಮದೇ ಸೋದರ ಸಂಬಂಧಿಯೂ ಆದ ಮತ್ತು ಸುಮಾರು 30 ವರ್ಷ ಬಿಗಿಮುಷ್ಟಿಯಿಂದ ದೇಶದ ಆಡಳಿತ ಸೂತ್ರ ಹಿಡಿದಿದ್ದ ಗಯೂಮ್‌ ಅವರನ್ನೂ ಬಿಡದೆ ಗೃಹಬಂಧನದಲ್ಲಿ
ಇರಿಸಿದ್ದಾರೆ. ಜನತಂತ್ರದ ಮರುಸ್ಥಾಪನೆ ಮತ್ತು ಯಮೀನ್‌ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳನ್ನು ಬೆಂಬಲಿಸಿದ್ದೇ ಗಯೂಮ್‌ ಮಾಡಿದ ‘ಮಹಾಪರಾಧ’.

ಕೇವಲ 4 ಲಕ್ಷ ಜನಸಂಖ್ಯೆಯುಳ್ಳ ಮತ್ತು ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯ ಮೂಲವಾಗಿ ಹೊಂದಿದ ದೇಶದಲ್ಲಿ ಇವೆಲ್ಲ ಅನಪೇಕ್ಷಿತ ಬೆಳವಣಿಗೆಗಳು. ಇದಕ್ಕೆಲ್ಲ ಮುಖ್ಯ ಕಾರಣ ಯಮೀನ್‌ ಅವರ ನಡವಳಿಕೆ, ಜನತಂತ್ರ ವಿರೋಧಿ ಮನಸ್ಥಿತಿ. ವಿಶ್ವದಲ್ಲಿ ಆಗಿಹೋದ ಮತ್ತು ಈಗಿರುವ ಸರ್ವಾಧಿಕಾರಿಗಳದೆಲ್ಲ ಇದೇ ಕತೆ. ಅದಕ್ಕೆ ಯಮೀನ್‌ ಕೂಡ ಹೊರತಲ್ಲ.

ADVERTISEMENT

ಚುನಾವಣೆ ಮೂಲಕ ಆಯ್ಕೆಯಾಗಿ ದೇಶದ ಮೊದಲ ಪ್ರಜಾಸತ್ತಾತ್ಮಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಷೀದ್‌ ಅವರನ್ನು ವಿವಾದಾತ್ಮಕ ವಿಧಾನದ ಮೂಲಕ ಇಳಿಸಿ 2013ರಲ್ಲಿ ಅಧಿಕಾರಕ್ಕೇರಿದ ಯಮೀನ್‌ ನಂತರ ಪ್ರಜಾಸತ್ತೆಯನ್ನು, ಪ್ರಜೆಗಳ ಸ್ವಾತಂತ್ರವನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಲೇ ಬಂದರು. ನಷೀದ್‌ರನ್ನು ಜೈಲಿಗೆ ಹಾಕಿಸಿದರು.

ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾದಾಗ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅವಕಾಶ ಕೊಟ್ಟರಾದರೂ ಮತ್ತೆ ದೇಶಕ್ಕೆ ಮರಳದಂತೆ ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಲೇ ಬಂದರು. ಪ್ರತಿಪಕ್ಷಗಳ ಅನೇಕ ಸಂಸದರನ್ನು ಅನರ್ಹಗೊಳಿಸಿದರು. ರಾಜಕೀಯ ಎದುರಾಳಿಗಳನ್ನು ತುಳಿಯುತ್ತ ಸಾಗಿದರು. ಅವರ ಅಕೃತ್ಯಗಳನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಅನೂರ್ಜಿತಗೊಳಿಸಿತ್ತು. ಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದಕ್ಕಾಗಿ ಈಗ ಪೊಲೀಸ್‌ ಮುಖ್ಯಸ್ಥರನ್ನೇ ವಜಾ ಮಾಡಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವುದು ಆ ದೇಶದ ಆಂತರಿಕ ವಿದ್ಯಮಾನ ಎಂದು ನಾವು ಸುಮ್ಮನಿರುವಂತೆಯೂ ಇಲ್ಲ. ಹಿಂದೂಮಹಾಸಾಗರದಲ್ಲಿ ಅದು ನಮ್ಮ ಪಾಲಿಗೆ ಅತ್ಯಂತ ಆಯಕಟ್ಟಿನ ದೇಶ. ಸಾರ್ಕ್‌ ಸದಸ್ಯತ್ವವನ್ನೂ ಹೊಂದಿದೆ.

ಹೀಗಾಗಿ ಸಾರ್ಕ್‌ನ ಪ್ರಮುಖ ದೇಶವಾಗಿ ಅಲ್ಲಿನ ಬೆಳವಣಿಗೆಗಳಿಗೆ ನಾವು ಪ್ರತಿಕ್ರಿಯಿಸುವುದು ಅನಿವಾರ್ಯ. ಇಲ್ಲದೇ ಹೋದರೆ ಭಾರತೀಯ ಉಪಖಂಡದಲ್ಲಿ ಸ್ಥಿರತೆಗೆ ಧಕ್ಕೆ ಬರಲಿದೆ. ಯಮೀನ್‌ ಅಧಿಕಾರದ ಅವಧಿಯಲ್ಲಿ ಮಾಲ್ಡೀವ್ಸ್‌ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಲೇ ಬಂದಿದೆ. ಅದನ್ನೂ ನಾವು ನಿರ್ಲಕ್ಷಿಸುವಂತಿಲ್ಲ.

ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಜನತಂತ್ರದ ಕಗ್ಗೊಲೆ ತಡೆಯಲು ಮಧ್ಯಪ್ರವೇಶಿಸಬೇಕು ಎಂದು ನಷೀದ್‌ ಅವರೇ ಈಗ ಖುದ್ದಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸೇನೆಯನ್ನು ಕಳಿಸುವಂತೆ ಒತ್ತಾಯಿಸಿದ್ದಾರೆ. ಭಾರತ ಮಾತ್ರ ತಮ್ಮ ದೇಶವನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಬಲ್ಲದು ಎಂದು ಅವರು ನಂಬಿದ್ದಾರೆ. ಕೋರ್ಟ್‌ ಆದೇಶ ಪಾಲಿಸುವಂತೆ ಯಮೀನ್‌ ಅವರಿಗೆ ಭಾರತ, ಅಮೆರಿಕ ಸಲಹೆ ನೀಡಿದ್ದರೂ ಪ್ರಯೋಜನವಾಗಿಲ್ಲ.

ಅಮೆರಿಕ ಕೂಡ ಅಲ್ಲಿನ ವಿದ್ಯಮಾನಗಳ ಬಗ್ಗೆ ತೀವ್ರ ಕಳವಳ, ಅಸಮಾಧಾನ ವ್ಯಕ್ತಪಡಿಸಿದೆ. ಇಡೀ ವಿಶ್ವ ಗಮನಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಂತಹ ಸನ್ನಿವೇಶವನ್ನು ನಾವು ತುಂಬ ನಾಜೂಕಾಗಿ ನಿಭಾಯಿಸಬೇಕು. ಎಲ್ಲ ಕೋನಗಳಿಂದಲೂ ಆಲೋಚಿಸಿ ರಾಜತಾಂತ್ರಿಕ ಮುತ್ಸದ್ದಿತನ ಪ್ರದರ್ಶಿಸಬೇಕು. ಏಕೆಂದರೆ ಇದು ನಮಗೂ ತುಂಬ ಇಕ್ಕಟ್ಟಿನ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.