ADVERTISEMENT

ಶಾಸಕ ಪುತ್ರನ ಗೂಂಡಾಗಿರಿ ಪೊಲೀಸ್‌ ವರ್ತನೆ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಶಾಸಕ ಪುತ್ರನ ಗೂಂಡಾಗಿರಿ ಪೊಲೀಸ್‌ ವರ್ತನೆ ಅಕ್ಷಮ್ಯ
ಶಾಸಕ ಪುತ್ರನ ಗೂಂಡಾಗಿರಿ ಪೊಲೀಸ್‌ ವರ್ತನೆ ಅಕ್ಷಮ್ಯ   

ದೊಡ್ಡ ಸುದ್ದಿಯಾಗಬಹುದಾದ ಘಟನೆಯೊಂದು ನಡೆಯುವ ತನಕವೂ ನಮ್ಮ ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ಒಂದು ವೇಳೆ ಮಾತನಾಡಿದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅಪರೂಪಕ್ಕೆ ಯಾರಾದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾದರೆ ‘ಕಡ್ಡಿಯನ್ನು ಗುಡ್ಡ ಮಾಡುತ್ತಾರೆ’ ಎಂಬ ಟೀಕೆಗೆ ಗುರಿಯಾಗಬೇಕಾಗುತ್ತದೆ. ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್‌ ನಲಪಾಡ್ ಬೆಂಗಳೂರಿನ ‘ಫರ್ಜಿ ಕೆಫೆ’ಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ನಡೆಸಿದ ಹಲ್ಲೆ ಮತ್ತು ನಂತರದ ಬೆಳವಣಿಗೆಗಳನ್ನು ಇದೇ ದೃಷ್ಟಿಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಈ ಬಗೆಯ ಪ್ರಕರಣಗಳು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೇನೂ ನಡೆಯುತ್ತಿಲ್ಲ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ರೆಸ್ಟೊರೆಂಟ್ ಒಂದರಲ್ಲಿ ನಡೆಸಿದ ದಾಂದಲೆಯೂ ದೊಡ್ಡ ಸುದ್ದಿಯಾಗಿತ್ತು. ಶಾಸಕ ವಿಜಯಾನಂದ ಕಾಶಪ್ಪನವರ ಅವರು ರೆಸ್ಟೊರೆಂಟ್‌ನಲ್ಲಿ ನಡೆಸಿದ ದಾಂದಲೆಯೂ ಬಹಳ ಚರ್ಚೆಗೆ ಕಾರಣವಾಗಿತ್ತು. ಆದರೆ ಇವೆಲ್ಲವೂ ಮಾಧ್ಯಮ ಚರ್ಚೆಗಳಿಗಷ್ಟೇ ಸೀಮಿತವಾಗಿ ಮುಗಿದುಹೋದವು. ಅಧಿಕಾರ ಮತ್ತು ಹಣದಲ್ಲಿ ಬಲಶಾಲಿಗಳಾಗಿರುವವರನ್ನು ಕಾಪಾಡುವುದಕ್ಕೆ ಪೊಲೀಸ್ ವ್ಯವಸ್ಥೆಯೇ ಪ್ರಯತ್ನಿಸುತ್ತದೆ ಎಂಬುದು ಈ ಹಿಂದೆಯೇ ಸಾಬೀತಾಗಿರುವ ಸತ್ಯ. ಹ್ಯಾರಿಸ್ ಪುತ್ರನ ವಿಷಯದಲ್ಲಿ ಅದು ಮತ್ತೊಮ್ಮೆ ಸಾಬೀತಾಯಿತಷ್ಟೇ. ಹಲ್ಲೆಗೊಳಗಾಗಿರುವ ವಿದ್ವತ್‌ನ ಗೆಳೆಯರು ದೂರು ಕೊಡಲು ಧೈರ್ಯ ಮಾಡಿದ್ದು ಹಾಗೂ ಮಾಧ್ಯಮಗಳಲ್ಲಿ ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದ್ದರಿಂದಲೇ ಮೊಹಮದ್ ನಲಪಾಡ್ ವಿರುದ್ಧ ಕೊನೆಗೂ ಕೇಸು ದಾಖಲಾಗಿದೆ. ಇಲ್ಲವಾಗಿದ್ದರೆ ಇದು ಉಳ್ಳವರ ಮಕ್ಕಳು ನಡೆಸುವ ನೂರೆಂಟು ದಾಂದಲೆಗಳಲ್ಲಿ ಒಂದಾಗಿ ಮುಚ್ಚಿ ಹೋಗುತ್ತಿತ್ತು. ಅಧಿಕಾರಾರೂಢ ರಾಜಕಾರಣಿಗಳು ಹಾಗೂ ಸಾಮಾಜಿಕವಾಗಿ ಪ್ರತಿಷ್ಠಿತ ಸ್ಥಾನಗಳಲ್ಲಿ ಇರುವವರು ಅಧಿಕಾರದ ಅಮಲಿನಲ್ಲಿ ತೇಲುವುದು ಸರಿಯಲ್ಲ. ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂಬ ನೀತಿಪಾಠದ ಬೋಧನೆ ಈಗಾಗಲೇ ಹಲವು ಮೂಲಗಳಿಂದ ಆರಂಭವಾಗಿದೆ. ಇಂಥದ್ದೊಂದು ಸಾಮಾಜಿಕ ಒತ್ತಡದ ಅಗತ್ಯವಿದೆ. ಆದರೆ ಈ ಬಗೆಯ ಸಮಸ್ಯೆಗಳನ್ನು ಸಾಮಾಜಿಕ ಒತ್ತಡಗಳಿಂದಷ್ಟೇ ಪರಿಹರಿಸಲು ಸಾಧ್ಯವಾಗುವುದಿಲ್ಲ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಯುಳ್ಳ ಪೊಲೀಸರು ಕಾನೂನನ್ನು ಪಾಲಿಸುವ ಕೆಲಸವನ್ನಷ್ಟೇ ಮಾಡಿದರೆ ಸಾಕಾಗುತ್ತದೆ. ಶಾಸಕ, ಮಂತ್ರಿ ಅಥವಾ ಹಿರಿಯ ಅಧಿಕಾರಿಯೊಬ್ಬನ ಪುತ್ರ ತಪ್ಪು ಮಾಡಿದರೆ ಅದನ್ನು ಕಾನೂನಿನ ಚೌಕಟ್ಟಿನೊಳಗೆ ಅರ್ಥ ಮಾಡಿಕೊಂಡು ಕ್ರಮ ಕೈಗೊಳ್ಳುವ ಬದಲಿಗೆ ಆರೋಪಿಯ ಕೌಟುಂಬಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ನೋಡಿಕೊಂಡು ಕಾರ್ಯಪ್ರವೃತ್ತರಾಗುವ ಪೊಲೀಸರೇ ಇಲ್ಲಿರುವ ದೊಡ್ಡ ಸಮಸ್ಯೆ. ಇದನ್ನು ನಿವಾರಿಸುವುದಕ್ಕೆ ಇರುವುದು ಒಂದೇ ಮಾರ್ಗ. ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಮಾಡುವುದು. ಪೊಲೀಸರ ವರ್ಗಾವಣೆಯಿಂದ ಆರಂಭಿಸಿ ಸೇವಾಕ್ಷಮತೆಯನ್ನು ಅಳೆಯುವುದರ ತನಕದ ಎಲ್ಲವನ್ನೂ ರಾಜಕಾರಣಿಗಳಿಂದ ದೂರವಿರಿಸುವುದಕ್ಕೆ ಒಂದು ವ್ಯವಸ್ಥೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿ ಬಹುಕಾಲವಾಯಿತು. ಇದರ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿ ಮಂಡಳಿಯೊಂದರ ಸ್ಥಾಪನೆಯೇನೋ ಆಯಿತು. ಆದರೆ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸುವ ಪ್ರಕ್ರಿಯೆ ಇನ್ನೂ ಮಂತ್ರಿಗಳು ಮತ್ತು ಶಾಸಕರ ಮರ್ಜಿಯಲ್ಲಿಯೇ ಉಳಿದುಕೊಂಡಿದೆ. ಪ್ರತೀ ಶಾಸಕರೂ ತಮಗೆ ‘ಬೇಕಿರುವ’ ಅಧಿಕಾರಿಗಳನ್ನೇ ಬಯಸುವ ವ್ಯವಸ್ಥೆಯಲ್ಲಿ ಆ ಶಾಸಕ ಅಥವಾ ಮಂತ್ರಿಯ ಪುತ್ರನ ತಪ್ಪನ್ನು ಈ ‘ಬೇಕಾದ’ ಅಧಿಕಾರಿಗಳು ಮುಚ್ಚಿಹಾಕಲು ಪ್ರಯತ್ನಿಸುವುದರಲ್ಲಿ ಆಶ್ಚರ್ಯಪಡಬೇಕಾದುದೇನೂ ಇಲ್ಲ. ಇತ್ತೀಚೆಗೆ ಬೆಂಗಳೂರಿನ ಆರ್.ಟಿ. ನಗರದ ಸಣ್ಣ ಹೋಟೆಲ್‌ವೊಂದರ ಮಾಲೀಕರನ್ನು ಪೊಲೀಸ್ ಅಧಿಕಾರಿಯೊಬ್ಬರು ಥಳಿಸಿದ್ದೂ ಇದೇ ಮಾದರಿಯಲ್ಲೇ. ಮಾಧ್ಯಮಗಳಲ್ಲಿ ಸುದ್ದಿಯಾದ ಪರಿಣಾಮವಾಗಿ ಆ ಅಧಿಕಾರಿಯ ವರ್ಗಾವಣೆಯಾಯಿತು. ಆದರೆ ಅವರ ವರ್ತನೆಗೆ ಆಗಬೇಕಾದ ಶಿಕ್ಷೆಯಾಯಿತೆ ಎಂಬ ಪ್ರಶ್ನೆ ಇನ್ನೂ ಉಳಿದುಕೊಂಡಿದೆ. ಪೊಲೀಸ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸದೇ ಇದ್ದರೆ, ಪೊಲೀಸರನ್ನು ರಾಜಕೀಯ ಪ್ರಭುತ್ವದ ಒತ್ತಡಗಳಿಂದ ದೂರವಿಡದೇ ಇದ್ದರೆ, ಅಧಿಕಾರವುಳ್ಳವರು ಮತ್ತು ಅವರ ಕುಟುಂಬಸ್ಥರು ನಡೆಸುವ ದೌರ್ಜನ್ಯಗಳು ಮುಂದುವರಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT