ADVERTISEMENT

ಸಂಪಾದಕೀಯ | ಮಂದಿರ ನಿರ್ಮಾಣಕ್ಕೆ ಚಾಲನೆ; ರಾಮನ ಆಶಯ ಮರೆಯದಿರೋಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 16:47 IST
Last Updated 5 ಆಗಸ್ಟ್ 2020, 16:47 IST
ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ
ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ   

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸುವುದರೊಂದಿಗೆ, ಮಂದಿರ ನಿರ್ಮಾಣ ಕೆಲಸಕ್ಕೆ ಚಾಲನೆ ದೊರೆತಿದೆ. ರಾಮನ ಜನ್ಮಭೂಮಿ ರೂಪದ ಅಯೋಧ್ಯೆಯು ನಮ್ಮ ಭಾವಕೋಶದಲ್ಲಿ ಉಳಿದಿರುವ ಒಂದು ಸುಂದರ ರೂಪಕ. ರಾಮ ಜನ್ಮಭೂಮಿ ವಿವಾದ ಪಡೆದುಕೊಂಡ ಧಾರ್ಮಿಕ ಹಾಗೂ ರಾಜಕೀಯ ಆಯಾಮಗಳು ಭಾರತದ ಸಾಮಾಜಿಕ ಬದುಕನ್ನೂ ಪ್ರಭಾವಿಸಿವೆ. ಆ ಸುದೀರ್ಘ ಸಂಘರ್ಷದ ಹಾದಿಯ ನಂತರ ರೂಪುಗೊಳ್ಳುತ್ತಿರುವ ರಾಮಮಂದಿರ ನಿರ್ಮಾಣವು ಭಕ್ತಸಮೂಹದಲ್ಲಿ ಸಹಜವಾಗಿಯೇ ಸಂಭ್ರಮವನ್ನು ಉದ್ದೀಪಿಸಿದೆ. ಈ ಉತ್ಸಾಹವನ್ನೇ ‘ಇಡೀ ದೇಶ ರಾಮಮಯವಾಗಿದೆ, ರೋಮಾಂಚನಗೊಂಡಿದೆ ಹಾಗೂ ಭಾವುಕವಾಗಿದೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ‘ರಾಮ ಜನ್ಮಭೂಮಿ ಇಂದು ಮುಕ್ತವಾಗಿದ್ದು, ಈ ದಿನ ತ್ಯಾಗ, ಬಲಿದಾನದ ಸಂಕೇತ ಹಾಗೂ ಸಂಕಲ್ಪದ ದಿನವಾಗಿದೆ’ ಎಂದು ಹೇಳಿರುವ ಅವರು, ಭೂಮಿಪೂಜೆಯ ದಿನವನ್ನು ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವದೊಂದಿಗೆ ತಳಕು ಹಾಕಿದ್ದಾರೆ. ರಾಮಮಂದಿರ ನಿರ್ಮಾಣದ ಹಿಂದಿರುವ ದೇಶದ ಅತ್ಯಂತ ದೀರ್ಘವಾದ ಸಾಮಾಜಿಕ–ರಾಜಕೀಯ ಸಂಘರ್ಷ ಹಾಗೂ ಕಾನೂನು ಹೋರಾಟದ ಘಟನಾವಳಿಗಳ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಮಾತುಗಳನ್ನು ಆಡಿರಬಹುದಾದರೂ ರಾಮಜನ್ಮಭೂಮಿ ಆಂದೋಲನವನ್ನು ಸ್ವಾತಂತ್ರ್ಯ ಚಳವಳಿಯೊಂದಿಗೆ ಸಮೀಕರಿಸುವುದು ಸಮಂಜಸವೇ ಎಂಬ ಪ್ರಶ್ನೆ ಮೂಡದಿರದು. ಮಂದಿರ ನಿರ್ಮಾಣದ ಜತೆಗೆ ‘ಬಹುತ್ವ ಭಾರತ’ವನ್ನು ಕಾಪಾಡಿಕೊಳ್ಳುವ ವಿವೇಕವೂ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು.

‘ಸರ್ವರ ಜೊತೆಗೂಡಿ ಸರ್ವರ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದೆ. ರಾಮನ ಆದರ್ಶದೊಂದಿಗೆ ಭಾರತ ಮುಂದುವರಿಯುತ್ತಿದೆ’ ಎನ್ನುವ ಪ್ರಧಾನಿಯವರ ಮಾತುಗಳೊಂದಿಗೆ, ಭಾರತದ ಮುನ್ನಡೆಗೆ ಅದರದ್ದೇ ಆದ ಸಂವಿಧಾನವೂ ಇದೆ ಎನ್ನುವುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆಯು ಪ್ರಜಾಪ್ರತಿನಿಧಿಗಳ ಮೇಲಿದೆ.

ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುವುದರೊಂದಿಗೆ ಅನಪೇಕ್ಷಿತ ಘಟನಾವಳಿಗಳಿಗೆ ತಾರ್ಕಿಕ ಅಂತ್ಯ ದೊರೆಯಿತು ಎಂದು ಭಾವಿಸಬಹುದಾದರೂ ಈ ನಿರ್ಮಾಣ ಪ್ರಕ್ರಿಯೆಯಲ್ಲಿ ಸರ್ಕಾರ ನೇರವಾಗಿ ಗುರುತಿಸಿಕೊಂಡಿರುವುದರ ಔಚಿತ್ಯ ಪ್ರಶ್ನಾರ್ಹವಾಗಿದೆ. ಮಂದಿರದ ಭೂಮಿಪೂಜೆಯು ‘ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ನ ಕಾರ್ಯಕ್ರಮವಾಗಿದ್ದರೂ ಅದು ಸರ್ಕಾರದ, ಒಂದು ಪಕ್ಷದ, ಒಂದು ಸಿದ್ಧಾಂತದ ಕಾರ್ಯಕ್ರಮದಂತೆ ಬಿಂಬಿತವಾದುದು ಸರಿಯಲ್ಲ. ಕೊರೊನಾ ವೈರಾಣುವಿನ ಸೋಂಕು ದೇಶದಲ್ಲಿ ತೀವ್ರಗೊಂಡು ಜನಸಾಮಾನ್ಯರು ಆತಂಕಗೊಂಡಿರುವ ಹಾಗೂ ಆರ್ಥಿಕ ಹಿಂಜರಿತದಿಂದ ಶ್ರೀಸಾಮಾನ್ಯರ ಬದುಕು ದುಸ್ತರಗೊಂಡಿರುವ ಸಂದರ್ಭದಲ್ಲಿ ಅದ್ಧೂರಿ ಮಂದಿರ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಮಂತ್ರಿ ಭಾಗವಹಿಸಿದ್ದನ್ನು
‘ಧರ್ಮ ರಾಜಕಾರಣ’ದ ಭಾಗವಾಗಿಯೇ ನೋಡಬೇಕಾಗಿದೆ. ರಾಮಮಂದಿರ ನಿರ್ಮಾಣದ ಚಟುವಟಿಕೆಗಳಿಂದ ಕೇಂದ್ರ ಸರ್ಕಾರವು ಇನ್ನು ಮುಂದಾದರೂ ಅಂತರವನ್ನು ಕಾಪಾಡಿಕೊಂಡು, ಮಂದಿರದ ವೇದಿಕೆಯು ರಾಜಕೀಯೇತರ ಹಾಗೂ ಧಾರ್ಮಿಕ ಸಾಮರಸ್ಯದ ವೇದಿಕೆಯಾಗಿ ರೂಪುಗೊಳ್ಳಲು ಬೆಂಬಲವಾಗಿ ನಿಲ್ಲಬೇಕಾಗಿದೆ. ಮಂದಿರ ರಾಜಕಾರಣದಲ್ಲಿ ನಿರತರಾಗಿರುವ ರಾಜಕಾರಣಿಗಳು, ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡು, ಪ್ರಜಾಪ್ರತಿನಿಧಿಗಳಾಗಿ ತಾವೆಷ್ಟರ ಮಟ್ಟಿಗೆ ರಾಮನ ಮೌಲ್ಯಗಳ ವಾರಸುದಾರರಾಗಿದ್ದೇವೆ ಎನ್ನುವುದನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಸಾಬೀತುಪಡಿಸಬೇಕಾಗಿದೆ. ಇತಿಹಾಸದಲ್ಲಿ ಬದುಕತೊಡಗಿದಾಗ ವರ್ತಮಾನದ ಸಂಕಟ, ತಲ್ಲಣ, ಸವಾಲುಗಳನ್ನು ಮರೆಯತೊಡಗುತ್ತೇವೆ. ಆಡಳಿತದಲ್ಲಿ ಇರುವವರು ಈ ಮರೆವಿಗೊಳಗಾದರೆ ಅದರ ಅಪಾಯವನ್ನು ಸಮಾಜ ಎದುರಿಸಬೇಕಾಗುತ್ತದೆ. ಅಂಥ ಮರೆವು ಮರುಕಳಿಸದಿರಲಿ. ಶತಮಾನಗಳ ಇತಿಹಾಸ ಹೊಂದಿರುವ ವಿವಾದವೊಂದು ನ್ಯಾಯಾಂಗದ ಚೌಕಟ್ಟಿನಲ್ಲಿ ಇತ್ಯರ್ಥವಾಗಿದೆ. ಅದನ್ನು ಈ ದೇಶದ ಪ್ರಜೆಗಳೆಲ್ಲರೂ ಗೌರವಿಸಬೇಕು. ಮುಂದಿನ ದಿನಗಳಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವಂತಹ ವಿವಾದಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪ್ರಜೆಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಮತ್ತು ಅಧಿಕಾರಸ್ಥರ ಮೇಲೆ ಇದೆ. ಸರ್ವಧರ್ಮ ಸಾಮರಸ್ಯದ ಮೂಲಕ ಎಲ್ಲರ ಏಳಿಗೆಗಾಗಿ ಶ್ರಮಿಸುವುದೇ ಮರ್ಯಾದಾಪುರುಷೋತ್ತಮನಿಗೆ ನಾವು ಸಲ್ಲಿಸುವ ಗೌರವ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.