ADVERTISEMENT

ಬ್ಯಾಂಕ್‌ಗಳಿಗೆ ಪುನರ್ಧನ, ತೆರಿಗೆ ಹಣದ ದುರ್ಬಳಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:15 IST
Last Updated 5 ಮಾರ್ಚ್ 2019, 20:15 IST
   

ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳ ಆರ್ಥಿಕ ಪುನಶ್ಚೇತನ ಉದ್ದೇಶಕ್ಕೆ ಕೇಂದ್ರ ಸರ್ಕಾರವು ಇತ್ತೀಚೆಗೆ ₹ 48,239 ಕೋಟಿ ಪುನರ್ಧನ ನೆರವು ಘೋಷಿಸಿದೆ. ಬೆಟ್ಟದಂತೆ ಬೆಳೆಯುತ್ತಿದ್ದ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಯಿಂದ ಬ್ಯಾಂಕ್‌ಗಳನ್ನು ಪಾರು ಮಾಡಿ ಲಾಭದ ಹಾದಿಗೆ ಮರಳುವಂತೆ ಮಾಡಲು ಸರ್ಕಾರ 2017ರ ಅಕ್ಟೋಬರ್‌ನಲ್ಲಿ ಈ ಪುನರ್ಧನ ಯೋಜನೆಗೆ ಚಾಲನೆ ನೀಡಿತ್ತು. ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ ₹ 2.11 ಲಕ್ಷ ಕೋಟಿ ನೆರವು ನೀಡುವ ಕಾರ್ಯಕ್ರಮ ಇದಾಗಿದೆ. ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ನೀಡುವುದು ಸರ್ಕಾರದ ಸದುದ್ದೇಶ ಆಗಿರುವುದರಲ್ಲಿ ಎರಡು ಮಾತಿಲ್ಲ.

ಆದರೆ, ಇದರಿಂದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯು ನಿರೀಕ್ಷಿಸಿದ ಪ್ರಮಾಣದಲ್ಲಿ ಸುಧಾರಿಸದಿರುವುದು ಚಿಂತೆಗೆ ಕಾರಣವಾಗಿದೆ. ಈ ಹಿಂದೆ ಬಳಕೆಯಲ್ಲಿದ್ದ ಸಾಲಗಳ ಪುನರ್‌ ಹೊಂದಾಣಿಕೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಮತಿ ನೀಡುತ್ತಿಲ್ಲ. ಹೀಗಾಗಿ ಬ್ಯಾಂಕ್‌ಗಳ ನಷ್ಟದ ಪ್ರಮಾಣವು ಹಿಂದಿನ ವರ್ಷಕ್ಕಿಂತ ಹೆಚ್ಚುತ್ತಲೇ ಇದೆ. 2018ರ ಮಾರ್ಚ್‌ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳ ಎನ್‌ಪಿಎ ಮೊತ್ತವು ₹ 9.6 ಲಕ್ಷ ಕೋಟಿಗೆ ತಲುಪಿತ್ತು. ಇದನ್ನೆಲ್ಲ ನೋಡಿದರೆ, ನಿರೀಕ್ಷಿತ ಫಲಿತಾಂಶ ನೀಡದ ಉದ್ದೇಶಕ್ಕೆ ಸರ್ಕಾರವು ಸುಖಾಸುಮ್ಮನೆ ಬ್ಯಾಂಕ್‌ಗಳಿಗೆ ಹಣ ಭರ್ತಿ ಮಾಡುತ್ತಿದೆ. ಇದೊಂದು ವ್ಯರ್ಥ ಪ್ರಯತ್ನವಾಗಿದೆ ಎಂದೂ ಭಾಸವಾಗುತ್ತದೆ.

ಆರಂಭದಲ್ಲಿ ಪುನರ್ಧನದ ಬಹುಪಾಲು, ಆರ್ಥಿಕವಾಗಿ ಸದೃಢವಾಗಿದ್ದ ಬ್ಯಾಂಕ್‌ಗಳ ಪಾಲಾಗಿತ್ತು. ಅವುಗಳ ಸಾಲ ನೀಡಿಕೆ ಪ್ರಮಾಣವು ಗಣನೀಯವಾಗಿ ಹೆಚ್ಚಳಗೊಳ್ಳಲಿ ಎನ್ನುವ ಆಶಯ ಸಾಕಾರಗೊಳ್ಳಲು ಹೀಗೆ ಮಾಡಲಾಗಿತ್ತು. ಆದರೆ, ಇತ್ತೀಚಿನ ನೆರವಿನಲ್ಲಿ ಈ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಆರ್‌ಬಿಐ ವಿಧಿಸಿದ್ದ ಕಠಿಣ ಸ್ವರೂಪದ ನಿರ್ಬಂಧ ಕ್ರಮಗಳಿಂದ ಈ ಬ್ಯಾಂಕ್‌ಗಳು ಹೊರಬರುವಂತೆ ಮಾಡಬೇಕು ಎನ್ನುವ ಕಾಳಜಿ ಈ ಬಾರಿ ಕಂಡು ಬಂದಿಲ್ಲ. ಕೇಂದ್ರೀಯ ಬ್ಯಾಂಕ್‌ನ ಬಳಿ ಇರುವ ಹೆಚ್ಚುವರಿ ಮೀಸಲು ಹಣದ ಕೆಲ ಭಾಗವನ್ನು ತಮಗೆ ವರ್ಗಾಯಿಸಬೇಕು ಎನ್ನುವುದು ನಷ್ಟಪೀಡಿತ ಬ್ಯಾಂಕ್‌ಗಳ ಇಚ್ಛೆಯಾಗಿತ್ತು.

ADVERTISEMENT

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆರ್‌ಬಿಐನ ಮನವೊಲಿಸಬೇಕು ಎನ್ನುವುದು ಅವುಗಳ ಹಕ್ಕೊತ್ತಾಯವಾಗಿತ್ತು. ಪುನರ್ಧನ ರೂಪದಲ್ಲಿ ಈ ಬೇಡಿಕೆ ಕಾರ್ಯಗತಗೊಂಡಿರುವ ಅನುಮಾನ ಮೂಡುತ್ತದೆ. ಲೋಕಸಭೆಗೆ ಚುನಾವಣೆ ನಡೆಯುವ ಹೊಸ್ತಿಲಲ್ಲಿ, ಉದ್ದಿಮೆ ವಲಯಕ್ಕೆ ಅದರಲ್ಲೂ ವಿಶೇಷವಾಗಿ ಕಿರು, ಸಣ್ಣ ಮತ್ತು ಮಧ್ಯಮ ವಲಯಕ್ಕೆ (ಎಂಎಸ್‌ಎಂಇ) ಸಾಲ ನೀಡಿಕೆ ಪ್ರಮಾಣ ಹೆಚ್ಚಳಗೊಳ್ಳಬೇಕು ಎನ್ನುವುದು ಸರ್ಕಾರದ ಇರಾದೆಯಾಗಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯ ಅಸಮರ್ಪಕ ಜಾರಿಯಿಂದಾಗಿ ಈ ವಲಯವು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಆರ್‌ಬಿಐನ ಹಿಂದಿನ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಎನ್‌ಪಿಎ ನಿರ್ವಹಣೆ ಬಗ್ಗೆ ಕಠಿಣ ನಿಲುವು ತಳೆದಿದ್ದರು. ಅವರ ಈ ನಿಲುವು ಸಂಘರ್ಷಕ್ಕೂ ಕಾರಣವಾಗಿತ್ತು. ಹೊಸ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಸರ್ಕಾರದ ಬೇಡಿಕೆಗೆ ಮಣಿದಂತೆ ಕಾಣುತ್ತಿದೆ.

ಆರ್ಥಿಕತೆಗೆ ಬೇಕಾದ ಸಾಲದ ಅಗತ್ಯಗಳನ್ನು ಬ್ಯಾಂಕ್‌ಗಳು ಈಡೇರಿಸುವುದು ಅಪೇಕ್ಷಣೀಯ. ಆದರೆ, ಸಾಲ ನೀಡುವುದರಿಂದಲೇ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯು ಬಿಗಡಾಯಿಸಬಾರದು. ಅರ್ಥವ್ಯವಸ್ಥೆಗೆ ಬೇಕಾಗುವ ಸಾಲದ ಬಹುತೇಕ ಬೇಡಿಕೆಯನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೇ ಈಡೇರಿಸುತ್ತವೆ. ಜತೆಗೆ, ಕೃಷಿ ಸಾಲ ಮನ್ನಾ ನಿರ್ಧಾರದ ದುಷ್ಪರಿಣಾಮಗಳನ್ನೂ ಎದುರಿಸುತ್ತವೆ. ಬ್ಯಾಂಕ್‌ಗಳ ಮೇಲೆ ಒತ್ತಡ ಇರುವುದೂ ನಿಜ. ಜನರ ತೆರಿಗೆಯ ಹಣವು ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಕಾಳಜಿಯಾಗಬೇಕು. ಬ್ಯಾಂಕ್‌ಗಳು ತಮ್ಮ ಹಣಕಾಸು ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಜಾರಿಗೆ ತರುವ ವಿಷಯದಲ್ಲಿ ದಕ್ಷತೆ ರೂಢಿಸಿಕೊಳ್ಳುವಂತೆ ಮನವೊಲಿಸುವುದು ಸದ್ಯದ ತುರ್ತು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.