ಮದುವೆಯ ಹೆಸರಿನಲ್ಲಿ ಬಾಲಕಿಯರ ಬಾಲ್ಯವನ್ನು ಕಸಿದುಕೊಂಡು, ಅವರ ಒಟ್ಟಾರೆ ಬದುಕನ್ನೇ ಗಾಸಿಗೊಳಿಸುವ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಘಟನೆ ನಿದರ್ಶನದಂತಿದೆ. ಎಂಟನೇ ತರಗತಿಯ ಬಾಲಕಿಗೆ ಆಕೆಯ ಸೋದರಮಾವ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ಪ್ರಯತ್ನಿಸಿದ್ದಾನೆ. ಆ ಪ್ರಯತ್ನಕ್ಕೆ ಬಾಲಕಿಯ ತಾಯಿ ಹಾಗೂ ಅಜ್ಜಿ ಕೂಡ ಬೆಂಬಲವಾಗಿ ನಿಂತಿದ್ದಾರೆ. ತಾಳಿ ಕಟ್ಟಿಸಿಕೊಳ್ಳಲು ಪ್ರತಿಭಟಿಸಿರುವ ಹುಡುಗಿಯ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದನ್ನು ಗಮನಿಸಿರುವ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಆದರೆ, ಬಾಲ್ಯವಿವಾಹ ನಡೆಯದ ಕಾರಣದಿಂದಾಗಿ ಪೊಲೀಸರು ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಮದುವೆಯನ್ನು ತೀವ್ರವಾಗಿ ಪ್ರತಿಭಟಿಸಿದ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ಆಕೆಯ ತಾಯಿ, ಅಜ್ಜಿ, ಸೋದರಮಾವ, ಆತನ ಅಣ್ಣ ಹಾಗೂ ಅತ್ತಿಗೆಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜ್ಯದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವುದರ ನಡುವೆಯೇ, ಬಾಲ್ಯವಿವಾಹದ ಕಂಟಕದಿಂದ ತಪ್ಪಿಸಿಕೊಂಡಿರುವ ಬಾಲಕಿಯ ದಿಟ್ಟತನ ಮೆಚ್ಚುವಂತಹದ್ದು. ಈ ಪ್ರಕರಣವನ್ನು ಬಾಲ್ಯವಿವಾಹದ ಬಗ್ಗೆ ಹೆಣ್ಣುಮಕ್ಕಳಲ್ಲಿ ಉಂಟಾಗುತ್ತಿರುವ ಜಾಗೃತಿಯ ಸಂಕೇತವಾಗಿಯೂ ನೋಡಬಹುದು. ಬೆಳಗಾವಿ ಜಿಲ್ಲೆಯ ರಾಯಬಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪೋಷಕರ ಒತ್ತಡದಿಂದ ಬಾಲ್ಯವಿವಾಹಕ್ಕೆ ಕೊರಳೊಡ್ಡಿದರೂ ‘ಮಕ್ಕಳ ಸಹಾಯವಾಣಿ’ಯ ನೆರವು ಪಡೆದು ಸವದತ್ತಿಯ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದು ಕಳೆದ ವರ್ಷ ವರದಿಯಾಗಿತ್ತು. ಮೊದಲ ವರ್ಷದ ಇಂಟರ್‌ಮೀಡಿಯಟ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದ ವಿದ್ಯಾರ್ಥಿನಿಯೊಬ್ಬಳು, ಬಾಲ್ಯವಿವಾಹವನ್ನು ಪ್ರತಿಭಟಿಸಿ ಜಿಲ್ಲಾಡಳಿತದಿಂದ ರಕ್ಷಣೆ ಪಡೆದು ವಿದ್ಯಾಭ್ಯಾಸ ಮುಂದುವರಿಸಿದ ವಿದ್ಯಮಾನವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಿಂದ ವರದಿಯಾಗಿತ್ತು. ಈಗ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತಿದ ಗಟ್ಟಿಗಿತ್ತಿಯರ ಸಾಲಿಗೆ ಚಿತ್ರದುರ್ಗ ಜಿಲ್ಲೆಯ ಬಾಲಕಿಯೂ ಸೇರಿಕೊಂಡಿದ್ದಾಳೆ. ಬಾಲ್ಯವಿವಾಹ ವಿರುದ್ಧದ ಹೋರಾಟಕ್ಕೆ ರಾಯಭಾರಿಗಳಂತಿರುವ ಜಾಗೃತ ಮನಃಸ್ಥಿತಿಯ ಈ ಬಾಲಕಿಯರು, ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸುವುದಕ್ಕೆ ಪ್ರೇರಣೆಯೂ ಆಗಿದ್ದಾರೆ.
ಬಾಲ್ಯವಿವಾಹವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ರೂಪದಲ್ಲಿ ವಿಶ್ವಸಂಸ್ಥೆ ಗುರುತಿಸಿದೆ. ಹದಿನೆಂಟು ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಯಾವುದೇ ರೂಪದ ಮದುವೆಗೆ ಒಳಪಡಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ವಿಶ್ವದಲ್ಲಿ ಪ್ರತಿ ಐವರು ಹುಡುಗಿಯರಲ್ಲಿ ಓರ್ವ ಬಾಲಕಿಯ ಮದುವೆ ಹದಿನೆಂಟು ವರ್ಷ ತುಂಬುವ ಮೊದಲೇ ನಡೆಯುತ್ತಿದೆ. ಬಾಲ್ಯದಲ್ಲೇ ಮದುವೆಯಾದ 64 ಕೋಟಿ ಬಾಲಕಿಯರು ಮತ್ತು ಮಹಿಳೆಯರು ಪ್ರಸ್ತುತ ವಿಶ್ವದ ವಿವಿಧ ಭಾಗಗಳಲ್ಲಿದ್ದು, ಈ ಗುಂಪಿಗೆ ಪ್ರತಿವರ್ಷ 1.20 ಕೋಟಿ ನವ ಬಾಲವಿವಾಹಿತೆಯರು ಸೇರ್ಪಡೆ ಆಗುತ್ತಿದ್ದಾರೆ. ಪ್ರತಿ ಮೂರು ಸೆಕೆಂಡಿಗೊಮ್ಮೆ ಜಗತ್ತಿನ ಯಾವುದೋ ಮೂಲೆಯಲ್ಲಿ ಬಾಲಕಿಯೊಬ್ಬಳು ಬಾಲ್ಯವಿವಾಹದ ತೆಕ್ಕೆಗೆ ಸಿಲುಕುತ್ತಿದ್ದಾಳೆ. ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿರುವ ದೇಶದ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಇದೆ. ಅಪ್ರಾಪ್ತ ವಯಸ್ಸಿಗೆ ಗರ್ಭ ಧರಿಸುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಹಾಗೂ ಶೇ 21ಕ್ಕಿಂತಲೂ ಹೆಚ್ಚಿನ ಹುಡುಗಿಯರಿಗೆ ಹದಿನೆಂಟು ತುಂಬುವ ಮೊದಲೇ ಮದುವೆಯಾಗುತ್ತಿರುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 4 ಮತ್ತು 5ರ ವರದಿಗಳು ಸ್ಪಷ್ಟಪಡಿಸಿವೆ. ‘ಬಾಲ್ಯವಿವಾಹ ಪ್ರತಿಬಂಧಕ ಕಾಯ್ದೆ– 2006’ ಬಾಲ್ಯವಿವಾಹಗಳನ್ನು ನಿಷೇಧಿಸುತ್ತದೆ ಹಾಗೂ ಬಾಲ್ಯವಿವಾಹದ ಸಂತ್ರಸ್ತರಿಗೆ ರಕ್ಷಣೆ ಮತ್ತು ನೆರವು ಒದಗಿಸುತ್ತದೆ. ಬಾಲ್ಯವಿವಾಹ ತಡೆಗೆಂದೇ ಸಹಾಯವಾಣಿ (1098) ಜಾರಿಯಲ್ಲಿದೆ. ಕರ್ನಾಟಕದಲ್ಲಿ ವಿವಾಹ ನೋಂದಣಿ ಮಾಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೀಡಿರುವುದು ಬಾಲ್ಯವಿವಾಹಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಸರ್ಕಾರದ ಏನೆಲ್ಲ ಪ್ರಯತ್ನಗಳು ಹಾಗೂ ಕಾನೂನು ನಿರ್ಬಂಧಗಳ ನಡುವೆಯೂ ದೇಶದ ವಿವಿಧ ಭಾಗಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಿ, ಮದುವೆಯ ಮೂಲಕ ಅವರ ಜವಾಬ್ದಾರಿಯನ್ನು ವರ್ಗಾಯಿಸುವ ಪೋಷಕರ ಪೂರ್ವಗ್ರಹ ಹಾಗೂ ಅವರನ್ನು ಹೆರುವ ಯಂತ್ರಗಳಾಗಿಯಷ್ಟೇ ನೋಡುವ ಮನೋಧರ್ಮ ಬಾಲ್ಯವಿವಾಹವನ್ನು ಜೀವಂತವಾಗಿರಿಸಿದೆ. ಲಿಂಗ ತಾರತಮ್ಯವನ್ನು ಉತ್ತೇಜಿಸುವ ಈ ಪದ್ಧತಿಯನ್ನು ಬೇರುಸಮೇತ ನಾಶಗೊಳಿಸಲು ವ್ಯವಸ್ಥಿತ ಆಂದೋಲನವೇ ನಡೆಯಬೇಕಾಗಿದೆ. ಬಾಲ್ಯವಿವಾಹದ ಸವಾಲನ್ನು ಸರ್ಕಾರ ಹಾಗೂ ಸಮಾಜ ಜೊತೆ ಜೊತೆಯಾಗಿ ಎದುರಿಸಬೇಕಾಗಿದ್ದು, ಆ ಹೋರಾಟದ ಕೇಂದ್ರದಲ್ಲಿ ಜಾಗೃತ ಬಾಲಕಿಯರು ನಿಲ್ಲಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.