ADVERTISEMENT

ಭಾರತದ ಬಾಹ್ಯಾಂತರಿಕ್ಷದಲ್ಲಿ ಚಾಣಾಕ್ಷ ಚಕ್ಷು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 5:29 IST
Last Updated 29 ನವೆಂಬರ್ 2019, 5:29 IST
ಸಂಪಾದಕೀಯ
ಸಂಪಾದಕೀಯ   

ಐದು ನೂರು ಕಿಲೊಮೀಟರ್ ಎತ್ತರದಿಂದ ಭಾರತದ ಭೂಪ್ರದೇಶದ ಆಗುಹೋಗುಗಳನ್ನು ಕಣ್ಣಿಟ್ಟು ನೋಡಬಲ್ಲ ಹೊಚ್ಚ ಹೊಸ ‘ಕಾರ್ಟೊಸ್ಯಾಟ್-3’ ಉಪಗ್ರಹವನ್ನು ನಮ್ಮ ಬಾಹ್ಯಾಕಾಶ ಸಂಸ್ಥೆ ‘ಇಸ್ರೊ’ ಯಶಸ್ವಿಯಾಗಿ ಕಕ್ಷೆಗೆ ಏರಿಸಿದೆ. ಇದನ್ನು ಸಲೀಸಾಗಿ ಹೊತ್ತೊಯ್ದ ಪಿಎಸ್‍ಎಲ್‍ವಿ-ಸಿ47 ರಾಕೆಟ್ ತನ್ನ ಉಡಿಯಲ್ಲಿ ಅಮೆರಿಕದ 13 ಅತಿಪುಟ್ಟ ಉಪಗ್ರಹಗಳನ್ನೂ ಕೊಂಡೊಯ್ದು ಕಕ್ಷೆಯಲ್ಲಿ ತೇಲಿಬಿಟ್ಟಿದೆ. ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಏರಿಸುವಲ್ಲಿ ಭಾರತ ಈಗಾಗಲೇ ಸರ್ವೋನ್ನತ ದಾಖಲೆಯನ್ನು ಸ್ಥಾಪಿಸಿದೆ. ಹಿಂದೆ 2017ರಲ್ಲಿ ಇದೇ ಪಿಎಸ್‍ಎಲ್‍ವಿ ರಾಕೆಟ್ ನಮ್ಮ ‘ಕಾರ್ಟೊಸ್ಯಾಟ್-2ಡಿ’ ಉಪಗ್ರಹದ ಜೊತೆಗೆ ಇತರ 104 ವಿದೇಶಿ ಉಪಗ್ರಹಗಳನ್ನೂ ಯಶಸ್ವಿಯಾಗಿ ಕೊಂಡೊಯ್ದು, ರಷ್ಯಾದ ದ್ನೀಪರ್ ರಾಕೆಟ್‍ನ (37 ಉಪಗ್ರಹಗಳನ್ನು ಹೊತ್ತೊಯ್ದ) ಅದುವರೆಗಿನ ದಾಖಲೆಯನ್ನು ಮೀರಿಸಿತ್ತು. ಈಗಿನ ವಿಶೇಷ ಇರುವುದು ಉಪಗ್ರಹದ ಭೂವೀಕ್ಷಣ ಸಾಮರ್ಥ್ಯದಲ್ಲಿ. ಕಾರ್ಟೊಸ್ಯಾಟ್-3 ನಮ್ಮ ನೆಲವನ್ನು ಅಂಗುಲ ಅಂಗುಲ ಅಲ್ಲದಿದ್ದರೂ ಅಡಿಅಡಿಯಾಗಿ ವೀಕ್ಷಣೆ ಮಾಡಬಲ್ಲ ಸಾಮರ್ಥ್ಯ ಪಡೆದಿದೆ. ನೆಲದ ಮೇಲಿನ ಯಾವುದೇ ವಸ್ತು, ಅದು 25x25 ಸೆಂಟಿಮೀಟರ್‌ಗಿಂತ ದೊಡ್ಡದಾಗಿದ್ದರೆ ಈ ಉಪಗ್ರಹದ ‘ಕಣ್ಣು’ಗಳು ಅದನ್ನು ನಿಖರವಾಗಿ ಗುರುತಿಸುತ್ತವೆ.

ಕೇವಲ ಚಿತ್ರಗಳನ್ನಷ್ಟೇ ಅಲ್ಲ, ನಮ್ಮ ಇಂದ್ರಿಯಗಳ ಗ್ರಹಿಕೆಗೆ ನಿಲುಕದ ಇತರೆಲ್ಲ ಬಗೆಯ ವಿಕಿರಣಗಳನ್ನೂ ಗ್ರಹಿಸುತ್ತವೆ. ಇನ್ನು ಮೇಲೆ ಬಾಹ್ಯಾಕಾಶದಿಂದ ಲಭಿಸುವ ಬಿಂಬಗಳು ಇನ್ನಷ್ಟು ನಿಚ್ಚಳವಾಗಿರುವುದರಿಂದ ರಕ್ಷಣಾ ಚಟುವಟಿಕೆಗೆ ಸಂಬಂಧಿಸಿದಂತೆ ಸುಸ್ಪಷ್ಟ ಮಾಹಿತಿಗಳು ಸಿಗಲಿದ್ದು, ನಿಖರ ಕಾರ್ಯಾಚರಣೆ ಸಾಧ್ಯವಾಗುತ್ತದೆ. ಗಡಿಯಂಚಿನ ಮಿಲಿಟರಿ ಚಟುವಟಿಕೆ, ನುಸುಳುಕೋರರ ಸುಳಿವು, ಹಿಮಕುಸಿತದಲ್ಲಿ ಸಿಲುಕಿದವರ ಚಿತ್ರಣ ಪಡೆಯಲು ಸುಲಭವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ನಗರ ನಿರ್ಮಾಣ, ಮೂಲಸೌಲಭ್ಯಗಳ ವೀಕ್ಷಣೆ, ದುರಂತ ಸಂದರ್ಭದ ನಿರ್ವಹಣೆ ಮುಂತಾದ ಇತರ ಅನೇಕ ಬಗೆಯ ನಾಗರಿಕ ಅಗತ್ಯಗಳಿಗೆ ನಮಗೊಂದು ಅಚ್ಚುಕಟ್ಟಾದ ಪರಿವೀಕ್ಷಣಾ ವ್ಯವಸ್ಥೆ ಬೇಕಾಗಿತ್ತು. ಹಿಂದಿನ, ಎರಡನೇ ಪೀಳಿಗೆಯ ಕಾರ್ಟೊಸ್ಯಾಟ್ ಉಪಗ್ರಹಗಳು ಕಡಿಮೆ ಎಂದರೆ 65x65 ಸೆಂಟಿಮೀಟರ್ ವಿಸ್ತೀರ್ಣದ ಬಿಂಬಗಳನ್ನು ಮಾತ್ರ ಗುರುತಿಸುವ ಸಾಮರ್ಥ್ಯ ಪಡೆದಿದ್ದವು. ಅದಕ್ಕಿಂತ ಚಿಕ್ಕ ಬಿಂಬಗಳು ಮಂಜುಮಂಜಾಗಿ ಕಾಣುತ್ತಿದ್ದವು. ಈಗ ಹಾಗಲ್ಲ. ಗಣಿಗಾರಿಕೆ, ಹೆದ್ದಾರಿ ವಿಸ್ತರಣೆ, ನೀರಾವರಿ ಯೋಜನೆಗಳಲ್ಲಿ ಅಡ್ಡಾದಿಡ್ಡಿ ಕತ್ತರಿಸಿ ತೆಗೆದ ಮರಗಳ ಬೊಡ್ಡೆಗಳನ್ನೂ ಈಗಿನ ಹೊಸ ‘ಕನ್ನಡಕ’ದಲ್ಲಿ ಗುರುತಿಸಬಹುದು. ನೆರೆಹಾವಳಿ, ಚಂಡಮಾರುತ, ಭೂಕುಸಿತ, ಕಾಡಿನ ಬೆಂಕಿ ಮುಂತಾದ ಬಿಸಿಯುಗದ ಪ್ರಕೃತಿ ವಿಕೋಪಗಳ ಆಯಾ ಕ್ಷಣದ ಸ್ಪಷ್ಟ ಚಿತ್ರಣ ಸಿಗಲಿದೆ.

ಆದರೆ, ಇಸ್ರೊ ಮೂಲಕ ಸಿಗುವ ಇಂಥ ಚಿತ್ರಗಳು ಸರ್ಕಾರಿ ಸ್ವತ್ತಾಗಿದ್ದು, ನಾಗರಿಕರು ಮತ್ತು ಸ್ವಯಂಸೇವಾ ಸಂಘ–ಸಂಸ್ಥೆಗಳು ಅವನ್ನು ಬಳಸಬೇಕೆಂದರೆ ತೀರಾ ಬಿಗಿಯಾದ ನಿಯಮಗಳಿವೆ. ದೇಶದ ಸುರಕ್ಷೆಯ ದೃಷ್ಟಿಯಿಂದ ಅಂಥ ಕಟ್ಟುಪಾಡುಗಳು ಅಗತ್ಯವೇ ಹೌದಾಗಿದ್ದರೂ ಉಪಗ್ರಹಗಳಿಂದ ಲಭಿಸುವ ಅನುಕೂಲಗಳು ಜನರಿಗೆ ಲಭಿಸಬೇಕಿದೆ ಮತ್ತು ಅದರ ಮೂಲಕ ವಾಣಿಜ್ಯ ಸಂಬಂಧಿ ಚಟುವಟಿಕೆ ಹಾಗೂ ಉದ್ಯೋಗಾವಕಾಶಗಳ ವಿಸ್ತರಣೆಯೂ ಆಗಬೇಕಿದೆ. ನಮ್ಮ ನೆಲದ ಇಂಥ ಸುಸ್ಪಷ್ಟ ಬಿಂಬಗಳು ಅಧಿಕೃತ ನಾಗರಿಕ ಸಂಸ್ಥೆಗಳಿಗೂ ಲಭಿಸುವಂತಾದರೆ, ಎಷ್ಟೊಂದು ಬಗೆಯ ಭೂಬಳಕೆ ಚಟುವಟಿಕೆಗಳು ಸಲೀಸಾಗುತ್ತವೆ. ಕೃಷಿ, ಮೀನುಗಾರಿಕೆ, ಅರಣ್ಯವರ್ಧನೆ, ಕಿರು ಜಲಾಶಯ, ಗಾಳಿಯಂತ್ರ- ಸೋಲಾರ್‌ ಪಾರ್ಕ್‌ಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿಯಂಥ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ; ಭೂಮಾಪನ ದಾಖಲೆಗಳು ನಿಖರವಾಗುತ್ತವೆ. ಅಷ್ಟೇ ಅಲ್ಲ, ಭ್ರಷ್ಟಾಚಾರವೂ ಕಡಿಮೆ ಆಗಬಹುದಾಗಿದೆ. ಆಧುನಿಕ ತಂತ್ರಜ್ಞಾನದ ಅಂತಿಮ ಗುರಿ ಅವೇ ಆಗಿರಬೇಕು ತಾನೆ? ಇನ್ನು, ‘ಕಾರ್ಟೊಸ್ಯಾಟ್-3’ ಉಪಗ್ರಹದಿಂದ ಲಭಿಸುವ ದತ್ತಾಂಶ ಅದೆಷ್ಟೇ ಉನ್ನತಮಟ್ಟದ್ದಾಗಿದ್ದರೂ ಅದನ್ನು ವಿಶ್ಲೇಷಣೆ ಮಾಡಲು ಅಷ್ಟೇ ಚುರುಕಿನ ತಂತ್ರಾಂಶ ಬೇಕು; ಸಸ್ಯ, ನೀರು, ಮಣ್ಣು, ವಿಕಿರಣ ವಸ್ತುಗಳ ಲಕ್ಷಣಗಳನ್ನು ದತ್ತಾಂಶಗಳ ಮೂಲಕ ಅರ್ಥ ಮಾಡಿಕೊಳ್ಳಲು ಬೇಕಾದ ವಿಷಯ ಪರಿಣತರನ್ನೂ ಸಜ್ಜುಗೊಳಿಸಬೇಕಾಗಿದೆ. ‘ಇಸ್ರೊ’ದ ಆಚೆಗಿನವರನ್ನೂ ಒಳಗೊಂಡಾಗ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ. ರಾಕೆಟ್ ಉಡಾವಣೆ ಮತ್ತು ಉಪಗ್ರಹ ರಂಗದಲ್ಲಿನ ವಾಣಿಜ್ಯ ಅವಕಾಶಗಳನ್ನು ವಿಸ್ತರಿಸಲೆಂದೇ ಇಸ್ರೊದ ಸಹಯೋಗದಲ್ಲಿ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ (ಎನ್‍ಎಸ್‍ಐಎಲ್) ಎಂಬ ಹೊಸ ಕಂಪನಿಯೊಂದು ಅಸ್ತಿತ್ವಕ್ಕೆ ಬಂದಿದ್ದು, ಇದರ ಮಧ್ಯಸ್ಥಿಕೆಯಿಂದಾಗಿಯೇ ಅಮೆರಿಕದ 13 ಅತಿಪುಟ್ಟ ಉಪಗ್ರಹಗಳೂ ನಮ್ಮ ರಾಕೆಟ್ ಮೂಲಕ ಮೇಲೇರಿವೆ. ಇನ್ನಂತೂ ಬಾಹ್ಯಾಕಾಶದಿಂದ ಉತ್ತಮ ಗುಣಮಟ್ಟದ ಬಿಂಬಗಳನ್ನೂ ಗ್ರಹಿಸುವ ಸಾಮರ್ಥ್ಯ ‘ಇಸ್ರೊ’ಕ್ಕೆ ಲಭಿಸಿದೆ. ಅಕ್ಕಪಕ್ಕದ ದೇಶಗಳಿಗೆ ಅಂಥ ಬಿಂಬಗಳನ್ನು ಪೂರೈಸುವ ಅವಕಾಶಗಳೂ ತೆರೆದುಕೊಳ್ಳಲಿವೆ. ಬಾಹ್ಯಾಕಾಶ ಎಂದರೆ ಹೊಸ ಅವಕಾಶಗಳ ಅಸೀಮ ಸಾಗರ ಎಂಬ ಮಾತು ಈಗ, ಈ ಹೊಸ ‘ಕನ್ನಡಕ’ದ ಮೂಲಕ ಸುಸ್ಪಷ್ಟವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.