ADVERTISEMENT

ಬರಗಾಲದ ಆತಂಕ ತಕ್ಷಣ ಎಚ್ಚೆತ್ತುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST
   

ಮೈಸೂರು ಸಹಿತ ಒಂದೆರಡು ಜಿಲ್ಲೆಗಳನ್ನು ಬಿಟ್ಟು ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ಬರಗಾಲದ ಕರಿಛಾಯೆ ಆವರಿಸಿದೆ. 24 ಜಿಲ್ಲೆಗಳ 72 ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಸರ್ಕಾರವೇ ಘೋಷಿಸಿದೆ. 28 ತಾಲ್ಲೂಕುಗಳಲ್ಲಿ ಭಾಗಶಃ ಬರ ಎಂದು ಗುರುತಿಸಲಾಗಿದೆ. ವಿಜಯಪುರ, ಕೋಲಾರ, ಬೀದರ್‌, ಚಿಕ್ಕಬಳ್ಳಾಪುರ, ತುಮಕೂರು ಮುಂತಾಗಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಕೊಪ್ಪಳದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇದ್ದರೆ, ಕಲಬುರ್ಗಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆನಾಶದ ವರದಿಗಳು ಬಂದಿವೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚೇ ಮಳೆ ಸುರಿದಾಗ ‘ಈ ಸಲ ಮುಂಗಾರು ಮಳೆ ಚೆನ್ನಾಗಿ ಆಗಲಿದೆ’ ಎಂದು ಅಂದುಕೊಂಡದ್ದು ನಿಜ. ಮುಂಗಾರಿನ ಭರ್ಜರಿ ಆರಂಭದಿಂದಾಗಿ ರೈತರೂ ಖುಷಿ ಪಟ್ಟಿದ್ದರು. ಆದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಯ ಪ್ರಮಾಣ ತೀವ್ರ ಕುಸಿದಿದೆ. ಮುಂಗಾರು ಕೈಕೊಟ್ಟದ್ದು ಖಚಿತವಾದ ಬಳಿಕ, ಕೆಲವೆಡೆ ಹಿಂಗಾರು ಮಳೆಯಾದರೂ ಸಕಾಲಕ್ಕೆ ಸುರಿದೀತು ಎಂಬ ನಿರೀಕ್ಷೆ ಇತ್ತು. ಆದರೆ ನವೆಂಬರ್‌ನಲ್ಲಿ ಎರಡು ವಾರಗಳು ಉರುಳಿದರೂ ಹಿಂಗಾರು ಮಳೆಯ ಸುಳಿವಿಲ್ಲ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹೆಸರು. ಜೋಳ, ಶೇಂಗಾ, ಮೆಣಸಿನ ಗಿಡ, ಗೋವಿನ ಜೋಳ, ಹತ್ತಿ, ತೊಗರಿ ಬೆಳೆಗಳು ಮೊಳಕೆ ಹಂತದಲ್ಲೇ ಒಣಗಿವೆ. ರಾಜ್ಯ ಬರಗಾಲದ ದವಡೆಗೆ ಸಿಕ್ಕಿದ್ದು ಎಲ್ಲೆಡೆ ಆತಂಕದ ಕಾರ್ಮೋಡ ಆವರಿಸಿದೆ.

ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಕರ್ತವ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳದ್ದು. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಕಾರ್ಯದರ್ಶಿಗಳ ಜತೆಗೂಡಿ ಬರಪರಿಹಾರ ಮಾರ್ಗೋಪಾಯಗಳ ಯೋಜನೆಯನ್ನು ರೂಪಿಸಬೇಕಿದೆ. ಈ ಯೋಜನೆಯನ್ವಯಬಹುತೇಕ ಜಿಲ್ಲೆಗಳಲ್ಲಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಸಮಿತಿಗಳು ಸಭೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸಲು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಇದ್ಯಾವುದೂ ಆಗಿಲ್ಲ ಎನ್ನುವುದು ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನಷ್ಟೇ ತೋರುತ್ತಿದೆ.ಬರಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಬರಪರಿಹಾರ ಕಾಮಗಾರಿಗಳೇಕೆ ಇನ್ನೂ ಶುರುವಾಗಿಲ್ಲ? ಚುನಾವಣೆಯ ಗಡಿಬಿಡಿಯಲ್ಲಿ ಎಲ್ಲರೂ ಬರಗಾಲವನ್ನು ಮರೆತಿದ್ದಾರೆಯೆ? ಕೆಲವು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಉತ್ತರ ಭಾರತದ ಪಂಚರಾಜ್ಯಗಳ ಚುನಾವಣೆಯ ಉಸ್ತುವಾರಿಗೆ ತೆರಳಿದ್ದಾರೆ ಎನ್ನುವ ಸಬೂಬು ಕೂಡಾ ಈ ಸಂದರ್ಭದಲ್ಲಿ ಅಕ್ಷಮ್ಯವೇ ಆಗುತ್ತದೆ.ಮುಖ್ಯಮಂತ್ರಿಯವರು ಹಳೇ ಮೈಸೂರಿನ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಡೆಸಿದ್ದಾರೆ ಎನ್ನುವುದು ನಿಜ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳತ್ತಲೂ ಅವರು ಗಮನ ಹರಿಸಬೇಕಲ್ಲವೇ? ಉಪಮುಖ್ಯಮಂತ್ರಿಗಳೂ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಬಹುದಲ್ಲವೇ? ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ತಕ್ಷಣ ಬರಪರಿಹಾರ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಯವರು ಒತ್ತಡ ಹೇರಬೇಕಿದೆ. ಒಣಗುತ್ತಿರುವ ಕೆರೆ ಕುಂಟೆಗಳ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು, ಜಾನುವಾರುಗಳಿಗೆ ಎಲ್ಲ ಜಿಲ್ಲೆಗಳಲ್ಲೂ ಮೇವು ಸಂಗ್ರಹ ಸಾಕಷ್ಟು ಇರುವಂತೆ ನೋಡಿಕೊಳ್ಳುವುದು ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಕೃಷಿ ಕಾರ್ಮಿಕರು, ರೈತರು ಹೊರರಾಜ್ಯಗಳಿಗೆ ಗುಳೇ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸುವುದು ಈಗ ಮುಖ್ಯವಾಗಿ ಆಗಬೇಕಾದ ಕೆಲಸ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಮಾತ್ರವಲ್ಲ, ವಿರೋಧ ಪಕ್ಷದ ಶಾಸಕರೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಎದ್ದು ಕಾಣುತ್ತಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವನ್ನು ತಿವಿದು ಎಚ್ಚರಿಸುವ ಕೆಲಸವನ್ನು ಮಾಡುವಲ್ಲಿ ವಿರೋಧಪಕ್ಷವೂ ವಿಫಲವಾಗಿರುವುದು ವಿಷಾದದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT