ADVERTISEMENT

ಸಂಪಾದಕೀಯ: ಭಾರತ– ಬ್ರಿಟನ್‌ ವ್ಯಾಪಾರ ಒಪ್ಪಂದ– ಆರ್ಥಿಕತೆಗೆ ದೊರೆಯಲಿದೆ ಪುಷ್ಟಿ

ಪ್ರಮುಖ ದೇಶಗಳೊಂದಿಗೆ ಈವರೆಗೆ ಮಾಡಿಕೊಂಡಿರುವ ಒಪ್ಪಂದಗಳಿಗಿಂತ ಹೆಚ್ಚು ಸಮಗ್ರವಾಗಿದೆ ಈ ಒಪ್ಪಂದ

ಸಂಪಾದಕೀಯ
Published 9 ಮೇ 2025, 20:25 IST
Last Updated 9 ಮೇ 2025, 20:25 IST
<div class="paragraphs"><p>ಸಂಪಾದಕೀಯ: ಭಾರತ– ಬ್ರಿಟನ್‌ ವ್ಯಾಪಾರ ಒಪ್ಪಂದ– ಆರ್ಥಿಕತೆಗೆ ದೊರೆಯಲಿದೆ ಪುಷ್ಟಿ</p></div>

ಸಂಪಾದಕೀಯ: ಭಾರತ– ಬ್ರಿಟನ್‌ ವ್ಯಾಪಾರ ಒಪ್ಪಂದ– ಆರ್ಥಿಕತೆಗೆ ದೊರೆಯಲಿದೆ ಪುಷ್ಟಿ

   

ಭಾರತ– ಬ್ರಿಟನ್‌ ನಡುವಣ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದ್ದು ಸಹಿ ಹಾಕುವುದಷ್ಟೇ ಬಾಕಿ ಇದೆ. ಎರಡೂ ದೇಶಗಳ ಅರ್ಥವ್ಯವಸ್ಥೆಗೆ ಅನುಕೂಲಕರವಾದ ಈ ಒಪ್ಪಂದಕ್ಕೆ ಮುಂಚೆ ಸುದೀರ್ಘ ಮಾತುಕತೆ ಮತ್ತು ಕಠಿಣ ಚೌಕಾಸಿ ನಡೆದಿದೆ. ಭಾರತದ ಆರ್ಥಿಕತೆಯು ಬ್ರಿಟನ್‌ಗಿಂತ ದೊಡ್ಡದು. ಭಾರತ ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿದ್ದರೆ, ಬ್ರಿಟನ್‌ಗೆ ಆರನೇ ಸ್ಥಾನ ಇದೆ. ಆದರೆ ಬ್ರಿಟನ್‌ನ ಅರ್ಥವ್ಯವಸ್ಥೆಯು ಹೆಚ್ಚು ಅಭಿವೃದ್ಧಿ ಹೊಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಆರಂಭಿಸಿರುವ ಸುಂಕ ಸಮರದ ಕಾರಣಕ್ಕೆ ಈ ವ್ಯಾಪಾರ ಒಪ್ಪಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯುಟಿಒ) ನಿಷ್ಕ್ರಿಯವಾದ ಬಳಿಕ ಇಂತಹ ಒಪ್ಪಂದಗಳು ಮುಖ್ಯವಾಗಿವೆ. ಭಾರತ–ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದವು ಈವರೆಗೆ ಪ್ರಮುಖ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳಿಗಿಂತ ಹೆಚ್ಚು ಸಮಗ್ರವಾಗಿದೆ. ಆಸ್ಟ್ರೇಲಿಯಾ ಮತ್ತು ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಜೊತೆಗೆ ಭಾರತವು ಪ್ರಮುಖ ಒಪ್ಪಂದಗಳನ್ನು ಮಾಡಿಕೊಂಡಿದೆ. ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇತರ ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಜಾಗತಿಕ ವ್ಯಾಪಾರ ವಲಯದಲ್ಲಿ ಭಾರತದ ವರ್ಚಸ್ಸು ಹೆಚ್ಚಲು ಈ ಒಪ್ಪಂದಗಳು ನೆರವಾಗಲಿವೆ. ಭಾರತ–ಬ್ರಿಟನ್‌ ಒಪ್ಪಂದವು ಅಂತಿಮಗೊಳ್ಳಲು ಮೂರು ವರ್ಷಗಳು ಬೇಕಾದವು. ‘ಇದೊಂದು ಚಾರಿತ್ರಿಕ ಮೈಲಿಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಂದವನ್ನು ಬಣ್ಣಿಸಿದ್ದಾರೆ.‌‌

ಭಾರತ– ಬ್ರಿಟನ್‌ ನಡುವಣ ದ್ವಿಪಕ್ಷೀಯ ವ್ಯಾಪಾರದ ಮೊತ್ತವು ಸುಮಾರು ಆರು ಸಾವಿರ ಕೋಟಿ ಡಾಲರ್‌ (ಸುಮಾರು ₹5.12 ಲಕ್ಷ ಕೋಟಿ) ಇದ್ದು, 2030ರ ಹೊತ್ತಿಗೆ ಇದು ದುಪ್ಪಟ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಕಂಪನಿಗಳಿಗೆ ಬ್ರಿಟನ್‌ನ ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ದೊರಕಲಿದ್ದು, ಇದು ಬಹುತೇಕ ಸುಂಕಮುಕ್ತವಾಗಿರಲಿದೆ. ಹಾಗೆಯೇ ಬ್ರಿಟನ್‌ನಿಂದ ಭಾರತಕ್ಕೆ ಬರುವ ಸರಕುಗಳೂ ಕ್ರಮೇಣ ಸುಂಕಮುಕ್ತವಾಗಲಿವೆ. ಇದರ ಪ್ರಯೋಜನ ಗ್ರಾಹಕರಿಗೆ ದೊರೆಯಲಿದೆ. ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗುವ ಶೇ 99ರಷ್ಟು ಸರಕುಗಳ ಮೇಲಿನ ಸುಂಕ ರದ್ದಾಗಲಿದೆ. ಜವಳಿ, ಪಾದರಕ್ಷೆ, ಯಂತ್ರೋಪಕರಣದಂತಹ ಸರಕುಗಳು ಇದರಲ್ಲಿ ಸೇರಿವೆ. ಸೇವಾ ವಲಯದಲ್ಲಿ ಭಾರತಕ್ಕೆ ಹೆಚ್ಚಿನ ಅನುಕೂಲಗಳು ದೊರೆಯಬಹುದು. ಹಲವು ಕ್ಷೇತ್ರಗಳನ್ನು ಸೇವಾ ವಲಯಕ್ಕೆ ಬ್ರಿಟನ್‌ ತೆರೆದಿಡ
ಬಹುದು. ವೃತ್ತಿಪರರು ಅಲ್ಲಿಗೆ ಹೋಗಿ ಬರುವುದು ಸುಗಮವಾಗಬಹುದು. ಆದರೆ, ಈ ವಿಚಾರದಲ್ಲಿ ಭಾರತದ ನಿರೀಕ್ಷೆಯಷ್ಟು ಪ್ರಗತಿ ಸಾಧ್ಯವಾಗಿಲ್ಲ. ದೇಶದಲ್ಲಿ ಪ್ರಸಕ್ತ ಇರುವ ಜನಾಭಿಪ್ರಾಯ ದಿಂದಾಗಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲು ಬ್ರಿಟನ್‌ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬ್ರಿಟನ್‌ನಲ್ಲಿರುವ ಭಾರತದ ವೃತ್ತಿಪರರು ಮತ್ತು ಅವರ ಉದ್ಯೋಗದಾತರಿಗೆ ಸಾಮಾಜಿಕ ಸುರಕ್ಷತೆ ದೇಣಿಗೆ ಪಾವತಿಸುವುದರಿಂದ ಮೂರು ವರ್ಷ ವಿನಾಯಿತಿ ನೀಡಲಾಗಿದೆ. ಭಾರತವು ಬ್ರಿಟನ್‌ನ ವಿಸ್ಕಿ ಮತ್ತು ಜಿನ್‌ ಮೇಲಿನ ಸುಂಕವನ್ನು ಶೇ 75ರಷ್ಟಕ್ಕೆ ಇಳಿಸಿದೆ. ಮುಂದಿನ 10 ವರ್ಷಗಳಲ್ಲಿ ಶೇ 40ಕ್ಕೆ ಇಳಿಸುವ ಭರವಸೆ ಕೊಟ್ಟಿದೆ. ವಾಹನಗಳ ಮೇಲಿನ ಸುಂಕವನ್ನು ಕೂಡ ಕಡಿತಗೊಳಿಸಲಾಗಿದೆ. ಸೌಂದರ್ಯವರ್ಧಕಗಳು, ವೈಮಾನಿಕ ಉಪಕರಣಗಳು, ವೈದ್ಯಕೀಯ ಉಪಕರಣಗಳು ಇತ್ಯಾದಿ ಮೇಲಿನ ಸುಂಕವೂ ಕಡಿಮೆಯಾಗಿದೆ. ಈ ಒಪ್ಪಂದದಿಂದಾಗಿ ಬ್ರಿಟನ್‌ ಅರ್ಥವ್ಯವಸ್ಥೆಯು ಮುಂದಿನ ವರ್ಷಗಳಲ್ಲಿ ಶೇ 0.1ರಷ್ಟು ಹೆಚ್ಚಿನ ಪ್ರಗತಿ ಕಾಣಬಹುದು ಎಂಬ ನಿರೀಕ್ಷೆ ಇದೆ.‌‌

ADVERTISEMENT

ಬ್ರಿಟನ್‌ನ ಪ್ರಸ್ತಾವಿತ ಇಂಗಾಲ ತೆರಿಗೆಗೆ ಪ್ರತಿತೆರಿಗೆ ಹೇರುವುದಕ್ಕೆ ಒಪ್ಪಂದದಲ್ಲಿ ಅವಕಾಶ ಇಲ್ಲ. ಆದರೆ, ಈ ತೆರಿಗೆಯಿಂದಾಗಿ ದೇಶಿ ರಫ್ತಿನ ಮೇಲೆ ಪರಿಣಾಮವಾದರೆ ಅದನ್ನು ಸರಿದೂಗಿಸಲು ರಿಯಾಯಿತಿಗಳನ್ನು ಪರಿಷ್ಕರಿಸುವ ಅವಕಾಶವನ್ನು ಭಾರತವು ಉಳಿಸಿಕೊಂಡಿದೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಕುರಿತು ಮಾತುಕತೆ ನಡೆಯುತ್ತಿದೆ. ಮುಕ್ತ ವ್ಯಾಪಾರ ಒಪ್ಪಂದದ ಜೊತೆಗೆ ಈ ಒಪ್ಪಂದಕ್ಕೂ ಸಹಿ ಬೀಳುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ಅಭಿಪ್ರಾಯಭೇದವಿದ್ದು ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ. ಈ ಒಪ್ಪಂದ ಅಂತಿಮಗೊಂಡರೆ ಎರಡೂ ದೇಶಗಳಲ್ಲಿ ಪರಸ್ಪರರ ಹೂಡಿಕೆ ಹೆಚ್ಚಳವಾಗಿ ಆರ್ಥಿಕತೆಗೆ ಪುಷ್ಟಿ ದೊರೆಯಲಿದೆ. ಈ ಒಪ್ಪಂದವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪೂರಕವಾಗಿ ಇರಲಿದೆ.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.