ADVERTISEMENT

ಗುಜರಾತ್ ಕೋಮು ಗಲಭೆ; ಹೊಸದೇನೂ ಹೇಳದ ವರದಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:34 IST
Last Updated 17 ಡಿಸೆಂಬರ್ 2019, 19:34 IST
ಸಂಪಾದಕೀಯ
ಸಂಪಾದಕೀಯ   

ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ, ನರೇಂದ್ರ ಮೋದಿ ನೇತೃತ್ವದ ಗುಜರಾತ್‌ ಸರ್ಕಾರವನ್ನು ಜಿ.ಟಿ. ನಾನಾವತಿ– ಎ.ಎಚ್. ಮೆಹ್ತಾ ವಿಚಾರಣಾ ಆಯೋಗವು ದೋಷಮುಕ್ತಗೊಳಿಸಿದೆ. ಗುಜರಾತ್‌ನಲ್ಲಿ ನಡೆದ ಈ ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು ಎಂಬ ಅಂದಾಜು ಇದೆ. ದೇಶದ ಅಂತಃಸಾಕ್ಷಿಯನ್ನು ಕಲಕಿದ ಗಲಭೆಗಳನ್ನು ತಡೆಯುವಲ್ಲಿ ಆಳುವ ಸರ್ಕಾರ ಸರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲವೇ ಎಂಬ ಬಗ್ಗೆ ವಿಚಾರಣೆ ನಡೆಸಿದ ಯಾವುದೇ ಆಯೋಗವು ಸರ್ಕಾರದ ವಿರುದ್ಧ ಬೊಟ್ಟು ಮಾಡಿದ ಉದಾಹರಣೆಗಳು ವಿರಳ. ವಿಚಾರಣಾ ಆಯೋಗಗಳ ವರದಿಗಳನ್ನು ದುರ್ಘಟನೆ ನಡೆದ ಹಲವು ವರ್ಷಗಳ ನಂತರ ಬಹಿರಂಗಪಡಿಸಿದಾಗ, ಬಹುತೇಕ ಸಂದರ್ಭಗಳಲ್ಲಿ ಆ ವರದಿಗಳೇ ಮಹತ್ವ ಕಳೆದುಕೊಂಡಿರುತ್ತವೆ. ಕೆಲವು ಸಂದರ್ಭಗಳಲ್ಲಿ ಸರ್ಕಾರ ಕೂಡ ವರದಿ ಬಹಿರಂಗಪಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತದೆ.

ನಾನಾವತಿ– ಮೆಹ್ತಾ ಆಯೋಗದ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾದ ಐದು ವರ್ಷಗಳ ನಂತರ ಬಹಿರಂಗವಾಗಿದೆ. ಅಂದರೆ, ಗುಜರಾತ್ ಗಲಭೆ ನಡೆದ ಹದಿನೇಳು ವರ್ಷಗಳ ನಂತರ ಈ ಆಯೋಗದ ವರದಿಯು ಸಾರ್ವಜನಿಕ ಅವಗಾಹನೆಗೆ ಲಭ್ಯವಾಗಿದೆ. ಈ ಸುದೀರ್ಘ ಅವಧಿಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮೋದಿ ಅವರು ಕೇಂದ್ರದಲ್ಲಿ ಬಹುಮತದೊಂದಿಗೆ ಎರಡನೆಯ ಬಾರಿ ಸರ್ಕಾರ ರಚಿಸಿದ್ದಾರೆ. ಈಗ ಈ ವರದಿ ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆ ಕ್ಷೀಣ. ಅಷ್ಟೇ ಅಲ್ಲದೆ, ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವೊಂದನ್ನು (ಎಸ್‌ಐಟಿ)ಸುಪ್ರೀಂ ಕೋರ್ಟ್ ರಚಿಸಿತ್ತು. ಸಿಬಿಐನ ನಿವೃತ್ತ ನಿರ್ದೇಶಕ ಆರ್.ಕೆ. ರಾಘವನ್ ಅವರು ಎಸ್‌ಐಟಿ ನೇತೃತ್ವ ವಹಿಸಿದ್ದರು. ಆ ಎಸ್‌ಐಟಿ ಕೂಡ ಮೋದಿ ಅವರನ್ನು ದೋಷಮುಕ್ತಗೊಳಿಸಿದೆ.

ಈ ಗಲಭೆಗಳಿಗೆ ಸಂಬಂಧಿಸಿದಂತೆ ಮೋದಿ ಅವರ ವಿರುದ್ಧ ಇದ್ದದ್ದು ಎರಡು ಪ್ರಮುಖ ಆರೋಪಗಳು. ‘ಮುಸ್ಲಿಮರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಹಿಂದೂಗಳಿಗೆ ಅವಕಾಶ ಕೊಡಿ’ ಎಂದು ಮೋದಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಭೆಯೊಂದರಲ್ಲಿ ಸೂಚನೆ ನೀಡಿದ್ದರು ಎಂಬುದು ಒಂದು ಆರೋಪ. ಪೊಲೀಸ್‌ ನಿಯಂತ್ರಣ ಕೊಠಡಿಯಲ್ಲಿ ಇಬ್ಬರು ಸಚಿವರನ್ನು ಇರಿಸಿದ ಪರಿಣಾಮವಾಗಿ, ನಿಯಂತ್ರಣ ಕೊಠಡಿಯಿಂದ ಆಗಬೇಕಾದ ಕೆಲಸಗಳು ಸರಿಯಾಗಿ ಆಗಲಿಲ್ಲ ಎಂಬುದು ಇನ್ನೊಂದು ಆರೋಪ. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಎಸ್‌ಐಟಿ ಹೇಳಿತ್ತು. ಆದರೆ, ಆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿದ್ದ ರಾಜು ರಾಮಚಂದ್ರನ್ ಅವರು ಎಸ್‌ಐಟಿ ಹೇಳಿದ್ದಕ್ಕೆ ಭಿನ್ನವಾದ ನಿಲುವು ತಳೆದಿದ್ದರು. ‘ಎರಡು ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಿದ’ ಆರೋಪದ ಅಡಿ ಮೋದಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲು ಮೇಲ್ನೋಟಕ್ಕೆ ಆಧಾರಗಳು ಇವೆ ಎಂದು ಅವರು ಹೇಳಿದ್ದನ್ನು ಸುಪ್ರೀಂ ಕೋರ್ಟ್‌ ಒಪ್ಪಲಿಲ್ಲ ಎಂಬುದನ್ನು ಗಮನಿಸಬೇಕು.

ADVERTISEMENT

ಈಗ, ಇದಕ್ಕಿಂತ ಭಿನ್ನವಾದುದೇನನ್ನೂ ಆಯೋಗದ ವರದಿ ಹೇಳಿಲ್ಲ. ಆದರೆ, ಗಲಭೆಗಳಲ್ಲಿ ಯಾವುದೇ ಪಕ್ಷ ಅಥವಾ ಸಂಘಟನೆಯು ಪಾತ್ರ ಹೊಂದಿದ್ದರ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಆಯೋಗ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ, ‘ವ್ಯವಸ್ಥಿತ ಹಿಂಸಾಚಾರ’ ನಡೆದಿಲ್ಲ ಎಂದು ಆಯೋಗ ಹೇಳಿದ್ದೂ ಬಹಳ ಮುಖ್ಯವಾಗುತ್ತದೆ. ಗುಜರಾತಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವೆ ಆಗಿದ್ದ ಮಾಯಾ ಕೊಡ್ನಾನಿ ಸೇರಿದಂತೆ ಕೆಲವು ರಾಜಕೀಯ ವ್ಯಕ್ತಿಗಳನ್ನು ಈ ಗಲಭೆಗೆ ಸಂಬಂಧಿಸಿದಂತೆ ದೋಷಿಗಳು ಎಂದು ಕೋರ್ಟ್‌ಗಳು ಘೋಷಿಸಿವೆ. ಕೋರ್ಟ್‌ಗಳು ಕಂಡುಕೊಂಡಿದ್ದಕ್ಕೂ ಈಗ ಆಯೋಗ ಹೇಳಿರುವುದಕ್ಕೂ ವ್ಯತ್ಯಾಸ ಇದೆ. ಗಲಭೆಗಳ ಸಮಯದಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಎಂದು ಗುಜರಾತಿನ ಮೂವರು ಪೊಲೀಸ್ ಅಧಿಕಾರಿಗಳು ನೀಡಿದ್ದ ಹೇಳಿಕೆಗಳನ್ನು ಆಯೋಗವು ಪರಿಗಣಿಸಿಲ್ಲ ಎನ್ನುವುದು ಕೂಡ ಈ ಆಯೋಗದ ವರದಿಯ ವಿಚಾರದಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.