ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುವ ಕೆಲವು ಪೋಸ್ಟ್‌ಗಳು ಸಾಮಾಜಿಕವಾಗಿ ಬೀರುವ ಪ್ರಭಾವವು ಜನರ ಅರಿವಿಗೆ ಈಗಾಗಲೇ ಬಂದಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳುಸುದ್ದಿ (ನಿಷೇಧ) ಕಾಯ್ದೆ’ ಜಾರಿಗೆ ತರಲು ಉದ್ದೇಶಿಸಿರುವುದು ಡಿಜಿಟಲ್ ವೇದಿಕೆಗಳ ಮೂಲಕ ಸುಳ್ಳುಸುದ್ದಿ ಹರಡುವುದನ್ನು ತಡೆಯುವ ತುರ್ತು ಇರುವುದನ್ನು ಸೂಚಿಸುತ್ತಿದೆ. ಸುಳ್ಳುಸುದ್ದಿ, ತಪ್ಪು ಮಾಹಿತಿ ಮತ್ತು ನಿಂದನಾತ್ಮಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಆಗುವುದನ್ನು ತಡೆಯುವ ಉದ್ದೇಶವು ಇದಕ್ಕೆ ಇದೆ. ತಪ್ಪು ಮಾಡಿದವರಿಗೆ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವನ್ನು ಈ ಕಾನೂನು ಕಲ್ಪಿಸಲಿದೆ. ಈ ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಗುರುತಿಸುವ ಕೃತ್ಯಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ತಪ್ಪುದಾರಿಗೆ ಎಳೆಯುವ ಮಾಹಿತಿಯನ್ನು ಸರಿಪಡಿಸುವ ಅಧಿಕಾರವಿರುವ ನಿಯಂತ್ರಣ ಪ್ರಾಧಿಕಾರದ ರಚನೆಯು ಕಾನೂನಿನ ಭಾಗವಾಗಿ ಇರಲಿವೆ. ಸುಳ್ಳುಸುದ್ದಿ ನಿಯಂತ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಹೊಂದಿರುವ ಕಳಕಳಿಯು ಸರಿಯಾಗಿಯೇ ಇದೆ. ವಿಶ್ವ ಆರ್ಥಿಕ ವೇದಿಕೆಯ 2024ರ ವರದಿಯೊಂದು, ಸುಳ್ಳು ಸುದ್ದಿ ಹಾಗೂ ತಪ್ಪುಮಾಹಿತಿಯ ಕೆಟ್ಟ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಅತಿಹೆಚ್ಚಾಗಿರುವ ದೇಶ ಭಾರತ ಎಂದು ಹೇಳಿದೆ. ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ನಿನ ಜನರಿಗಿಂತ ಭಾರತದ ಜನ ಸುಳ್ಳುಸುದ್ದಿ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಈ ವರ್ಷದ ಮೇ ತಿಂಗಳಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನ ವರದಿ ಹೇಳಿದೆ. ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯು ಹೆಚ್ಚಿರುವುದು, ಡಿಜಿಟಲ್ ವೇದಿಕೆಗಳನ್ನು ಹಲವರು ಸುದ್ದಿ ತಿಳಿಯಲು ಪ್ರಧಾನ ಮೂಲವಾಗಿ ನೆಚ್ಚಿಕೊಂಡಿರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರವಾಗಿಸಿವೆ. ರಾಜಕೀಯ ಧ್ರುವೀಕರಣ ಹೆಚ್ಚಾಗುತ್ತಿರುವ ಹಾಗೂ ತಪ್ಪು ಮಾಹಿತಿಯನ್ನು ಅಸ್ತ್ರವನ್ನಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಸುಳ್ಳುಸುದ್ದಿಗಳಿಂದ ಆಗುವ ಅಪಾಯ ದೊಡ್ಡದಾಗಿರುತ್ತದೆ.
ಆನ್‌ಲೈನ್ ಮೂಲಕ ಬಿತ್ತರವಾಗುವ ಸುಳ್ಳು ಮಾಹಿತಿಗಳನ್ನು ನಿರ್ವಹಿಸಲು ಕರಡು ಮಸೂದೆಯು ವ್ಯವಸ್ಥಿತವಾದ ಚೌಕಟ್ಟೊಂದನ್ನು ಒದಗಿಸಿಕೊಡುತ್ತದೆ ಎಂದು ಅದರ ಪರವಾಗಿ ಇರುವವರು ವಾದಿಸುತ್ತಿದ್ದಾರೆ. ಕಾನೂನಿನ ಚೌಕಟ್ಟೊಂದನ್ನು ರೂಪಿಸುವ ಮೂಲಕ ಸರ್ಕಾರವು ಅಪಾಯಕಾರಿ ಮಾಹಿತಿಯ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವ ಉದ್ದೇಶ ಹೊಂದಿದೆ. ಅಸಭ್ಯ, ಸ್ತ್ರೀದ್ವೇಷಿ ಹಾಗೂ ಸನಾತನ ಧರ್ಮಕ್ಕೆ ಅಗೌರವ ತರುವಂತಹ ವಿಷಯಗಳನ್ನು ನಿಷೇಧಿಸುವ ಮೂಲಕ ಸರ್ಕಾರವು ಸಾಂಸ್ಕೃತಿಕ ಭಾವನೆಗಳನ್ನು ರಕ್ಷಿಸುವ ಇರಾದೆಯನ್ನೂ ಹೊಂದಿದೆ. ಆದರೆ, ಇತರ ಧರ್ಮಗಳಿಗೆ ಅವಮಾನ ಎಸಗುವ ಪೋಸ್ಟ್‌ಗಳ ಬಗ್ಗೆ ಯಾವ ಕ್ರಮ ಜರುಗಿಸಲಾಗುತ್ತದೆ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಆನ್‌ಲೈನ್ ವರ್ತನೆಗಳು ಜವಾಬ್ದಾರಿಯುತವಾಗಿ ಇರುವಂತೆ ನೋಡಿಕೊಳ್ಳುವ ಹಾಗೂ ಮಾಹಿತಿ ಖಚಿತವಾಗಿರುವಂತೆ ನೋಡಿಕೊಳ್ಳುವ ಗುರಿಯನ್ನು ಉದ್ದೇಶಿತ ಕಾನೂನು ಹೊಂದಿದೆ. ಆದರೆ ಈ ಕಾನೂನು ಒಂದಿಷ್ಟು ಕಳವಳಗಳನ್ನೂ ಮೂಡಿಸುತ್ತದೆ. ಅವುಗಳ ಪೈಕಿ ಬಹಳ ಮುಖ್ಯವಾದುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಬಹುದಾದ ಅಪಾಯ. ‘ಸುಳ್ಳುಸುದ್ದಿ’ ಹಾಗೂ ‘ತಪ್ಪು ಮಾಹಿತಿ’ ಎಂಬ ಪದಗಳ ವ್ಯಾಖ್ಯಾನವು ಬಹಳ ಅಸ್ಪಷ್ಟ. ಹೀಗಾಗಿ ಅವುಗಳನ್ನು ವಿಶಾಲಾರ್ಥದಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗುತ್ತದೆ. ಅಭಿಪ್ರಾಯ, ವ್ಯಂಗ್ಯ, ಧಾರ್ಮಿಕ ಕರೆ ಮುಂತಾದವನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ ಎಂದು ಕರಡು ಮಸೂದೆ ಹೇಳಿದೆ. ಆದರೆ ರಾಜಕೀಯವಾಗಿ ಬಹಳ ಸೂಕ್ಷ್ಮವಾಗಿರುವ ಈಗಿನ ಕಾಲಘಟ್ಟದಲ್ಲಿ ಇವುಗಳ ನಡುವಿನ ವ್ಯತ್ಯಾಸವು ಬಹಳ ತೆಳುವಾಗಿಬಿಡುತ್ತದೆ. ಹೀಗಾಗಿ, ಕರಡು ಮಸೂದೆಯ ಬಗ್ಗೆ ಇನ್ನಷ್ಟು ಚರ್ಚೆ ಆಗುವ ಅಗತ್ಯ ಇದೆ ಎಂದು ಐ.ಟಿ., ಬಿ.ಟಿ. ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಸ್ವಾಗತಾರ್ಹ.
ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 159ನೇ ಸ್ಥಾನದಲ್ಲಿದೆ. ಸತ್ಯ ಯಾವುದು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರ ನೇತೃತ್ವದ ಸಮಿತಿಯೊಂದಕ್ಕೆ ನೀಡುವುದು ಅಪಾಯಕಾರಿ ಕ್ರಮ ಆಗುತ್ತದೆ. ಹೀಗೆ ಮಾಡುವುದರಿಂದ, ರಾಜ್ಯ ಸರ್ಕಾರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಅಧಿಕಾರ ಕೊಟ್ಟಂತೆಯೂ ಆಗುತ್ತದೆ. ಈ ಮಸೂದೆಯ ಕರಡನ್ನು ಸಿದ್ಧಪಡಿಸುವಾಗ ರಾಜ್ಯ ಸರ್ಕಾರವು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿಲ್ಲ. ಇದು ಗಂಭೀರ ಲೋಪ. ಸುಳ್ಳುಸುದ್ದಿಗಳಿಗೆ ಹಿಂಸಾಕೃತ್ಯಗಳನ್ನು ಪ್ರಚೋದಿಸುವ ಶಕ್ತಿ ಇದೆ. ಹೀಗಿರುವಾಗ, ಇಂತಹ ಸುದ್ದಿಗಳನ್ನು ನಿಗ್ರಹಿಸುವುದು ಅಗತ್ಯ ಹೌದು. ಹಾಗೆಂದ ಮಾತ್ರಕ್ಕೆ, ಸುಳ್ಳುಸುದ್ದಿಯ ಸಮಸ್ಯೆಯನ್ನು ಪರಿಹರಿಸಲು ತರುವ ಕ್ರಮವು ಮೂಲ ಸಮಸ್ಯೆಗಿಂತಲೂ ಹೆಚ್ಚು ಅಪಾಯಕಾರಿ ಆಗಿಬಿಡಬಾರದು! ಹಕ್ಕುಗಳನ್ನು ರಕ್ಷಿಸುವ ಕ್ರಮಗಳನ್ನು, ಪಾರದರ್ಶಕತೆಯನ್ನು ಖಾತರಿಪಡಿಸುವ ಅಂಶಗಳನ್ನು, ಇಡೀ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಮೇಲ್ವಿಚಾರಣೆ ಇರುವಂತೆ ಮಾಡುವುದನ್ನು ಕಾನೂನಿನಲ್ಲಿ ಸೇರಿಸಬೇಕು. ಇಲ್ಲವಾದರೆ, ಸುಳ್ಳನ್ನು ಸೋಲಿಸುವ ಹೆಸರಿನಲ್ಲಿ ಸತ್ಯದ ಬಾಯಿ ಮುಚ್ಚಿಸುವ ಕೆಲಸ ಆಗಿಬಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.