ADVERTISEMENT

ಸಂಪಾದಕೀಯ: ಇಂಗ್ಲಿಷ್‌ ನಿರಾಕರಣೆಯ ಹಿಂದೆ ಹಿಂದಿ ಹೇರಿಕೆ ಹುನ್ನಾರ ಅಡಗಿದೆ

ಸಂಪಾದಕೀಯ
Published 20 ಜೂನ್ 2025, 23:31 IST
Last Updated 20 ಜೂನ್ 2025, 23:31 IST
ಸಂಪಾದಕೀಯ
ಸಂಪಾದಕೀಯ   

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂಗ್ಲಿಷ್‌ ಭಾಷೆಯನ್ನು ನಿರಾಕರಿಸಿ ನೀಡಿರುವ ಹೇಳಿಕೆಯು ಅಪಕ್ವ ಮತ್ತು ಅಜ್ಞಾನದಿಂದ ಕೂಡಿದ್ದಾಗಿದೆ. ಇಂತಹ ಮನೋಭಾವವು ದೇಶದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಮಾರಕವಾಗಿ ಕೆಲಸ ಮಾಡುತ್ತದೆ. ನಿವೃತ್ತ ಅಧಿಕಾರಿಯೊಬ್ಬರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದೆಹಲಿಯಲ್ಲಿ ಗುರುವಾರ ಶಾ ಅವರು ಮಾತನಾಡಿದ್ದಾರೆ. ‘ದೇಶದಲ್ಲಿರುವ ಇಂಗ್ಲಿಷ್‌ ಮಾತನಾಡುವ ಜನರು ನಾಚಿಕೆ ಪಟ್ಟುಕೊಳ್ಳುವ ದಿನ ಬಹಳ ದೂರವೇನೂ ಇಲ್ಲ’ ಎಂದು ಅವರು ಹೇಳಿದ್ದಾರೆ. ಇಂಗ್ಲಿಷ್‌ ಕುರಿತು ಇರುವ ಪೂರ್ವಗ್ರಹವು ಅವರ ಪಕ್ಷದ ಸಿದ್ಧಾಂತ ಮತ್ತು ರಾಜಕಾರಣದ ಭಾಗವೇ ಆಗಿದೆ ಮತ್ತು ಶಾ ಅವರು ಅದನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ. ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ಆಭರಣಗಳಿದ್ದಂತೆ ಎಂಬ ಶಾ ಅವರ ಮಾತು ಸರಿಯಾದುದೇ ಆಗಿದೆ. ಆದರೆ, ಸಂಪರ್ಕ ಮತ್ತು ಒಗ್ಗೂಡಿಸುವ ಭಾಷೆಯಾಗಿ ಇಂಗ್ಲಿಷ್‌ನ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ಭಾಷೆಯ ಕುರಿತು ನಮಗೆ ಹೆಮ್ಮೆ ಇರಬೇಕು ಎಂಬ ಅವರ ಮಾತು ಕೂಡ ಸರಿಯಾದುದೇ ಆಗಿದೆ. ಆದರೆ, ಒಂದು ಭಾಷೆಯ ಕುರಿತು ಇರುವ ಹೆಮ್ಮೆಯು ಬೇರೊಂದು ಭಾಷೆಯ ಕುರಿತು ಅಸಹನೆಯಾಗಿ ಪರಿವರ್ತನೆ ಆಗಬಾರದು. ಭಾಷೆಯು ಪೈಪೋಟಿಯ ವಿಚಾರ ಅಲ್ಲ. ಬೇರೊಂದು ಭಾಷೆಯನ್ನು ತಿಳಿದಿರುವುದು ಎಂದರೆ ಮಾತೃಭಾಷೆಯನ್ನು ಕೀಳಾಗಿ ನೋಡಿದಂತೆ ಅಥವಾ ಅಪಮಾನ ಮಾಡಿದಂತೆ ಅಲ್ಲ. ಸಂವಹನದ ಮೂಲಕ ಭಾಷೆಗಳು ಬೆಳೆಯುತ್ತವೆ. ಭಾರತದ ಎಲ್ಲ ಭಾಷೆಗಳೂ ಇಂಗ್ಲಿಷ್‌ನೊಂದಿಗಿನ ಒಡನಾಟದಿಂದಾಗಿ ಸಮೃದ್ಧಗೊಂಡಿವೆ. 

ಭಾರತದಲ್ಲಿ ಹತ್ತು ಕೋಟಿಗೂ ಹೆಚ್ಚು ಜನರು ಇಂಗ್ಲಿಷ್‌ ಮಾತನಾಡುತ್ತಾರೆ ಮತ್ತು ಇತರ ಯಾವುದೇ ಭಾಷೆ ಮಾತನಾಡುವವರಿಗಿಂತ ಇಂಗ್ಲಿಷ್‌ ಮಾತನಾಡುವವರ ಸಂಖ್ಯೆ ಹೆಚ್ಚು. ಕೆಲವು ರಾಜ್ಯಗಳಲ್ಲಿ ಇಂಗ್ಲಿಷ್‌ಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಲಾಗಿದೆ. ಜಗತ್ತಿನಲ್ಲಿ ಇಂಗ್ಲಿಷ್‌ ಮಾತನಾಡುವ ಅತಿಹೆಚ್ಚು ಜನರು ಇರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ ಇದೆ. ಹಲವು ಭಾಷೆಗಳಿರುವ ನಮ್ಮ ದೇಶದಲ್ಲಿ ಇಂಗ್ಲಿಷ್‌ ಭಾಷೆಯು ಅಧಿಕೃತ ಮತ್ತು ಸಂಪರ್ಕ ಭಾಷೆಯಾಗಿ ಇತ್ತು. ಈ ಭಾಷೆ ಬಗ್ಗೆ ಜನರಿಗೆ ಒಲವು ಇದೆ. ಹಾಗಾಗಿ, ಈ ಭಾಷೆಯು ತನ್ನ ಸ್ಥಾನವನ್ನು ಕಳೆದುಕೊಳ್ಳಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಭಾಷೆಯೊಂದರ ಉಪಯುಕ್ತತೆ ಮತ್ತು ಜನಪ್ರಿಯತೆಯು ಆ ಭಾಷೆಯ ಕುರಿತು ಜನರು ಯಾವ ಧೋರಣೆ ಹೊಂದಿದ್ದಾರೆ ಎಂಬುದನ್ನು ಅವಲಂಬಿಸಿ ಇದೆಯೇ ಹೊರತು ಸರ್ಕಾರ ಅಥವಾ ಇನ್ಯಾವುದೋ ಸಂಸ್ಥೆಯ ನೀತಿಗಳ ಮೇಲೆ ಅಲ್ಲ. ಭಾಷೆಯ ಜೊತೆಗೆ ಜನರ ಸಂಬಂಧವು ಭಾವನಾತ್ಮಕವಾದುದು. ಹಾಗಾಗಿ, ಇಂತಹ ಸೂಕ್ಷ್ಮ ವಿಷಯಗಳನ್ನು ಸರ್ಕಾರವು ಅತೀವ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ನಿರ್ವಹಿಸಬೇಕು.

ಹಿಂದಿ ಭಾಷೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ಶಾ ಅವರ ಇಂಗ್ಲಿಷ್‌ ದೂಷಣೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಶಾ ಅವರ ಹೇಳಿಕೆಯು ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಕಳವಳ ಮೂಡಲು ಕಾರಣವಾಗಿದೆ. ವಸಾಹತುಶಾಹಿ ಕಾಲದಲ್ಲಿ ಇಂಗ್ಲಿಷ್‌ ಅಧಿಕಾರದ ಭಾಷೆಯಾಗಿತ್ತು. ಸ್ವಾತಂತ್ರ್ಯದ ಬಳಿಕ ಇದು ಸಂಪರ್ಕ ಭಾಷೆಯಾಗಿದೆ ಮತ್ತು ದೇಶದ ಎಲ್ಲ ಜನರಿಗೂ ಈ ಭಾಷೆಯ ಜೊತೆಗೆ ಸಮಾನವಾದ ಸಂಬಂಧ ಇದೆ. ಇಂಗ್ಲಿಷ್‌ ಭಾಷೆಯನ್ನು ನಿರಾಕರಿಸಿದರೆ ಆ ಸ್ಥಾನ‌ಕ್ಕೆ ಹಿಂದಿಯು ಬರುತ್ತದೆ. ಹಾಗಾದರೆ, ಅದಕ್ಕೆ ರಾಜಕೀಯ ಅರ್ಥಗಳೂ ಇರುತ್ತವೆ. ಇಂಗ್ಲಿಷ್‌ ಭಾಷೆಯು ಎಲ್ಲ ರೀತಿಯಲ್ಲಿಯೂ ಜಗತ್ತಿನೆಡೆಗೆ ಇರುವ ಭಾರತದ ಕಿಟಕಿಯಾಗಿದೆ. ಈ ಕಿಟಕಿಯನ್ನು ಮುಚ್ಚಿದರೆ ಅದರಿಂದ ಹಾನಿಯಷ್ಟೇ ಆಗುತ್ತದೆ ಮತ್ತು ದೇಶವು ಹಿಂದಕ್ಕೆ ಚಲಿಸಿದಂತಾಗುತ್ತದೆ. ವಿದೇಶಿ ಭಾಷೆಯೊಂದಿಗೆ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದಾರೆ. ಭಾರತ ಎಂಬ ಕಲ್ಪನೆಯು ಸ್ಥಾವರವಲ್ಲ; ಇಲ್ಲಿ ಇಂಗ್ಲಿಷ್‌ಗೂ ಸ್ಥಾನ ಇದೆ. ಹಾಗೆಯೇ ಇಂಗ್ಲಿಷ್‌ ಅನ್ನು ವಿದೇಶಿ ಭಾಷೆ ಎಂದು ಪರಿಗಣಿಸಲೂ ಆಗುವುದಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.