ADVERTISEMENT

ಸಂಪಾದಕೀಯ | ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಶಮನಕ್ಕೆ ಚೀನಾ ಮುಂದಾಗಲಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 20:30 IST
Last Updated 27 ಮೇ 2020, 20:30 IST
ಭಾರತ-ಚೀನಾ ಗಡಿ ವಿವಾದ
ಭಾರತ-ಚೀನಾ ಗಡಿ ವಿವಾದ   

ಭಾರತ–ಚೀನಾ ನಡುವಣ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹತ್ತು ದಿನಗಳಿಂದ ಪ್ರಕ್ಷುಬ್ಧ ಸ್ಥಿತಿ ಮನೆಮಾಡಿದೆ. ಲಡಾಖ್‌ನ ಪಾಂಗ್ಯಾಂಗ್‌ ಸರೋವರ ಮತ್ತು ಗಾಲ್ವನ್‌ ನದಿ ತಟದ ಕಣಿವೆಯ ಮೂಲಕ ಎಲ್‌ಎಸಿ ಹಾದು ಹೋಗುತ್ತದೆ. ಗಾಲ್ವನ್‌ ಕಣಿವೆಯ ಚೀನಾದ ಭಾಗದಲ್ಲಿ ಐದರಿಂದ ಹತ್ತು ಸಾವಿರದಷ್ಟು ಯೋಧರನ್ನು ಈ ದೇಶ ಠಿಕಾಣಿ ಹೂಡಿಸಿದೆ. ದೊಡ್ಡ ಮಟ್ಟದಲ್ಲಿ, ತಾತ್ಕಾಲಿಕ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದೆ.

ಚೀನಾ ಜತೆಗಿನ ಗಡಿಯ ಇನ್ನೊಂದು ಭಾಗವಾದ ಪಾಂಗ್ಯಾಂಗ್‌ ಸರೋವರದ ಪ್ರದೇಶದಲ್ಲಿ ಎಲ್‌ಎಸಿ ಸ್ಪಷ್ಟವಾಗಿಲ್ಲ. ಹಾಗಾಗಿ, ಇಲ್ಲಿ ಗಸ್ತು ನಡೆಸುವ ಭಾರತ ಮತ್ತು ಚೀನಾ ಸೈನಿಕರ ನಡುವೆ ಆಗಾಗ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಗಾಲ್ವನ್‌ ಕಣಿವೆಯಲ್ಲಿ ಎಲ್‌ಎಸಿ ವಿಚಾರದಲ್ಲಿ ತಕರಾರು ಇಲ್ಲ. ಇಲ್ಲಿ ಇದೇ ಮೊದಲ ಬಾರಿ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸೇನಾ ಕಮಾಂಡರ್‌ಗಳ ನಡುವಣ ಸಭೆ ಯಶಸ್ವಿಯಾಗಿಲ್ಲ. ರಾಜತಾಂತ್ರಿಕ ಮಟ್ಟದ ಮಾತುಕತೆಯ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಭೆಯು ಆದಷ್ಟು ಬೇಗ ನಡೆದು, ಗಡಿಯಲ್ಲಿನ ಬಿಗುವಿನ ಸನ್ನಿವೇಶ ಶಮನ ಆಗಬೇಕು. ಗಡಿ ವಿವಾದವೂ ಸೇರಿ ಯಾವುದೇ ಸಮಸ್ಯೆಗೆ ಸೇನಾ ಕಾರ್ಯಾಚರಣೆ ಪರಿಹಾರವಲ್ಲ ಎಂಬುದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು.

ಗಡಿಯ ಆಚೆ ಭಾಗದಲ್ಲಿ ಚೀನಾ ಸೇನೆಯನ್ನು ಜಮಾವಣೆ ಮಾಡಿದರೆ, ಈಚೆ ಭಾಗದಲ್ಲಿ ಭಾರತ ಅದಕ್ಕೆ ತಿರುಗೇಟು ನೀಡುತ್ತದೆ. ಅದು ಅತ್ಯಂತ ಸಹಜವಾದ ನಡೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಇದೆ. ದೇಶಗಳ ಮುಖ್ಯಸ್ಥರು ಹಲವು ಬಾರಿ ಭೇಟಿಯಾಗಿ ಉಭಯ ದೇಶಗಳ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ಒಯ್ಯಬೇಕು ಎಂದು ಪ್ರತಿಪಾದಿಸಿದ್ದಾರೆ. ಹಾಗಿರುವಾಗ ಗಡಿಯಲ್ಲಿ ಸೈನಿಕರನ್ನು ಮುಖಾಮುಖಿಯಾಗಿಸಿ ಸಾಧಿಸುವುದಾದರೂ ಏನನ್ನು ಎಂಬುದನ್ನು ಎರಡೂ ದೇಶಗಳು ಪ್ರಶ್ನಿಸಿಕೊಳ್ಳಬೇಕು. ಚೀನಾ ಮೊದಲಿಗೆ ಸೈನಿಕರನ್ನು ಜಮಾಯಿಸಿದ್ದರಿಂದಾಗಿ ಸನ್ನಿವೇಶ ತಿಳಿಗೊಳಿಸುವ ಗುರುತರ ಹೊಣೆಗಾರಿಕೆ ಆ ದೇಶದ ಮೇಲೆಯೇ ಇದೆ.

ADVERTISEMENT

ಬೌದ್ಧಿಕ ಪಾರಮ್ಯದ ಈ ಜಗತ್ತಿನಲ್ಲಿ ನೆರೆಯವರ ಮೇಲೆ ಅಷ್ಟೇ ಅಲ್ಲ, ಯಾರದ್ದೇ ಜೊತೆಗೆ ಸೈನಿಕ–ಶಸ್ತ್ರಾಸ್ತ್ರ ಸಂಘರ್ಷಕ್ಕೆ ಇಳಿಯುವುದು ಅರ್ಥಹೀನ. ಭಾರತಕ್ಕಂತೂ ಶಾಂತಿ ಮತ್ತು ಅಹಿಂಸೆ ಪ್ರತಿ‍ಪಾದನೆಯ ದೊಡ್ಡ ಪರಂಪರೆಯೇ ಇದೆ. ಹಾಗಿದ್ದರೂ, ಒಂದು ದೇಶವು ತನ್ನ ಗಡಿಗಳು, ಸಾರ್ವಭೌಮತೆಯ ವಿಚಾರದಲ್ಲಿ ಉದಾಸೀನ ತಾಳಲಾಗದು.

ಇಡೀ ಜಗತ್ತು ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಹೈರಾಣಾಗಿರುವ ಸಮಯದಲ್ಲಿ ಕಾಲು ಕೆರೆದು ಜಗಳ ಕಾಯುವ ಚೀನಾದ ಪ್ರವೃತ್ತಿಯ ಹಿಂದೆ ದೊಡ್ಡ ಲೆಕ್ಕಾಚಾರ ಇದ್ದಂತೆ ಕಾಣಿಸುತ್ತಿದೆ. ಚೀನಾದ ಅತಿಕ್ರಮಣಕಾರಿ ಮನೋಭಾವವನ್ನು ಭಾರತವು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಿದೆ. 1959ರಿಂದಲೇ ಎರಡೂ ದೇಶಗಳ ನಡುವೆ ಗಡಿಗೆ ಸಂಬಂಧಿಸಿ ವಾಗ್ವಾದ ಇದೆ. 2017ರಲ್ಲಿ ದೋಕಲಾದಲ್ಲಿ ಚೀನಾದ ಸೈನಿಕರನ್ನು ಭಾರತದ ಯೋಧರು ತಡೆದು ನಿಲ್ಲಿಸಿದ್ದರು. 73 ದಿನಗಳ ಈ ಮುಖಾಮುಖಿಯಲ್ಲಿ ಚೀನಾ ಹಿಂದಿರುಗಬೇಕಾಗಿ ಬಂದದ್ದು ಆ ದೇಶಕ್ಕೆ ದೊಡ್ಡ ಅವಮಾನ ಅನಿಸಿರಬಹುದು.

ಭಾರತದ ನೆರೆ ದೇಶಗಳನ್ನು ತನ್ನೆಡೆಗೆ ಸೆಳೆಯುವ ತಂತ್ರವನ್ನು ಚೀನಾ ಅನುಸರಿಸುತ್ತಿದೆ. ವಿವಾದಾತ್ಮಕವಾದ ಲಿಂಪಿಯಾಧರ, ಲಿಪುಲೇಕ್‌ ಮತ್ತು ಕಾಲಾಪಾನಿಯನ್ನು ತನ್ನ ಪ್ರದೇಶ ಎಂದು ಗುರುತಿಸಿ ಹೊಸ ನಕ್ಷೆಯನ್ನು ನೇಪಾಳದ ಕಮ್ಯುನಿಸ್ಟ್‌ ಸರ್ಕಾರ ಕಳೆದ ವಾರ ಬಿಡುಗಡೆ ಮಾಡಿತ್ತು. ಇದರ ಹಿಂದೆ ಇರುವುದು ಚೀನಾ ಎಂದೇ ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನವು ಚೀನಾಕ್ಕೆ ಸಾರ್ವಕಾಲಿಕ ಮಿತ್ರದೇಶವಾಗಿ ಮಾರ್ಪಟ್ಟಿದೆ. ಶ್ರೀಲಂಕಾ, ನೇಪಾಳ ಮತ್ತು ಮಾಲ್ಡೀವ್ಸ್‌ನಲ್ಲಿ ಚೀನಾದ ಹೂಡಿಕೆ ಹೆಚ್ಚುತ್ತಿದೆ.

ಕೋವಿಡ್‌ ಪಿಡುಗು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಲೋಪ ಎಸಗಿದೆಯೇ ಎಂಬುದರ ಸ್ವತಂತ್ರ ತನಿಖೆ ನಡೆಯಬೇಕು ಎಂಬ 62 ದೇಶಗಳ ಒತ್ತಾಯಕ್ಕೆ ಭಾರತವೂ ದನಿಗೂಡಿಸಿದೆ. ಇಂತಹ ತನಿಖೆಗೆ ಚೀನಾದ ವಿರೋಧ ಇದೆ. ಕೊರೊನಾ ನಂತರದ ದಿನಗಳಲ್ಲಿ ಚೀನಾವನ್ನು ಜಗತ್ತು ನೋಡುವ ರೀತಿ ಬದಲಾಗಿದೆ. ಮುಂದಿನ ‘ಸೂಪರ್‌ ಪವರ್‌’ ಎಂದು ಬೀಗುತ್ತಿದ್ದ ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಂತಹ ಸನ್ನಿವೇಶದಲ್ಲಿ ಭಾರತವನ್ನು ಅಂಕೆಯಲ್ಲಿ ಇರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಒತ್ತಡ ಹೇರುವ ತಂತ್ರವನ್ನು ಚೀನಾ ನೆಚ್ಚಿಕೊಂಡಿರಬಹುದು. ಏನೇ ಇದ್ದರೂ, ಸೈನಿಕ ಸಂಘರ್ಷ ಶಮನಗೊಳ್ಳಬೇಕು. ಚೀನಾದ ಕಾರ್ಯತಂತ್ರವನ್ನು ಅರ್ಥ ಮಾಡಿಕೊಂಡು ತನ್ನ ರಾಜತಾಂತ್ರಿಕ ನಿಲುವನ್ನು ಇನ್ನಷ್ಟು ಸ್ಪಷ್ಟಗೊಳಿಸುವ ಕೆಲಸವನ್ನು ಭಾರತ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.