ಸಂಪಾದಕೀಯ: ಅಭಿವೃದ್ಧಿ ಜೊತೆ ರಾಷ್ಟ್ರೀಯ ಭದ್ರತೆ– ಕಾಳಜಿ ಹಿಂದೆ ವಿಭಜನೆ ರಾಜಕೀಯ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹನ್ನೆರಡನೇ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ವಿಚಾರಗಳು ವಿಶಾಲ ದೃಷ್ಟಿಕೋನದಿಂದ ಕೂಡಿವೆ. ಆರ್ಥಿಕತೆ, ಕಾನೂನು ಮತ್ತು ನ್ಯಾಯವ್ಯವಸ್ಥೆ, ಯುವಜನರ ಅಗತ್ಯಗಳು ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಪಟ್ಟಿ ಮಾಡಿದ್ದಾರೆ. ರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಪ್ರಮುಖ ದಿನವಾದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ದೇಶದ ಕುರಿತ ತಮ್ಮ ಕಳಕಳಿ, ವಿಶ್ವಾಸ, ಹಾಗೂ ನಿರೀಕ್ಷೆಗಳನ್ನು ಹಂಚಿಕೊಳ್ಳುವುದು ಪ್ರಧಾನಿ ಅವರಿಗೆ ಇರುವ ವಿಶೇಷಾಧಿಕಾರ. ಆದರೆ, ತಮ್ಮ ಸರ್ಕಾರದ ಸಾಧನೆಗಳನ್ನು ಹೆಮ್ಮೆಯಿಂದಲೂ ಸ್ಪಷ್ಟತೆಯಿಂದಲೂ ನೆನಪಿಸಿಕೊಂಡಿರುವ ಅವರು, ಉಳಿದವರ ವೈಫಲ್ಯದ ಬಗ್ಗೆ ಅಷ್ಟೇನೂ ಮನದಟ್ಟಾಗುವಂತೆ ಮಾತನಾಡುವಲ್ಲಿ ಯಶಸ್ವಿಯಾಗಿಲ್ಲ. ದೇಶದ ಉಜ್ವಲವಾದ ‘ವಿಕಸಿತ’ ಭವಿಷ್ಯಕ್ಕೆ ಸಂಬಂಧಿಸಿದಂತೆ ದೂರಾಲೋಚನೆಯ ಸಂಗತಿಗಳ ಮೇಲೆಯೇ ಅವರು ಹೆಚ್ಚು ಬೆಳಕು ಚೆಲ್ಲಿದ್ದಾರೆ. ಕಲ್ಪಿತ ಕಾಳಜಿಯ ವಿಚಾರಗಳನ್ನು ತುರ್ತು ಹಾಗೂ ಮಹತ್ವದವು ಎನ್ನುವಂತೆ ಹರಿಬಿಟ್ಟಿದ್ದಾರೆ; ತಮ್ಮ ವಿಚಾರಗಳನ್ನು ರಾಜಕೀಯ ಹಾಗೂ ಮತೀಯ ಪದಪುಂಜಗಳಿಂದ ಸಿಂಗರಿಸಿದ್ದಾರೆ. ರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಮಾತನಾಡುವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ರಾಜಕೀಯ ಚೌಕಟ್ಟಿನಿಂದ ಹೊರಬರುವುದರಲ್ಲಿ ಕೆಲವೊಮ್ಮೆ ವಿಫಲರಾಗುತ್ತಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾ ಚರಣೆ ನಡೆಸಿದ ಸೇನಾಪಡೆಗಳನ್ನು ಪ್ರಧಾನಿ ಶ್ಲಾಘಿಸಿದ್ದಾರೆ; ದೇಶದ ರಕ್ಷಣೆಗಾಗಿ ಸೇನಾಪಡೆಗಳು ಕಟಿಬದ್ಧ ವಾಗಿರುವ ಸೇನೆಯ ಬದ್ಧತೆಯನ್ನು ಶಂಕಿಸುವವರ ಸ್ನೇಹಶೀಲವಲ್ಲದ ಧೋರಣೆಯನ್ನು ಕಟುವಾಗಿ ಟೀಕಿಸಿ ದ್ದಾರೆ. ದೇಶವನ್ನು ಸ್ವಾವಲಂಬಿ ಆಗಿಸ ಬೇಕು ಎಂದು ಹೇಳುತ್ತಾ, ದೇಸಿ ಉತ್ಪನ್ನಗಳತ್ತ ಒಲವು ತೋರಬೇಕು ಎನ್ನುವುದಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಸ್ಥಳೀಯ ಉತ್ಪಾದನೆಗೆ ಒತ್ತುನೀಡುವ ಆತ್ಮನಿರ್ಭರ ನೀತಿಗಳನ್ನು ಉಲ್ಲೇಖಿಸಿದ್ದಾರೆ. ವಿಶೇಷವಾಗಿ, ಆರ್ಥಿಕ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಅವರ ‘ಆತ್ಮನಿರ್ಭರ’ ಪರಿಕಲ್ಪನೆ ಹೆಚ್ಚು ಒತ್ತು ನೀಡುವಂತಿದೆ. ಪಾಕಿಸ್ತಾನದೊಂದಿಗೆ ಮೇ ತಿಂಗಳಲ್ಲಿ ನಡೆದ ಸಂಘರ್ಷ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಸುಂಕ ಸಮರ ಸಾರಿರುವ ಪ್ರಸಕ್ತ ಸಂದರ್ಭದಲ್ಲಿ ಪ್ರಧಾನಿ ಅವರ ಈ ಮಾತುಗಳಿಗೆ ಮಹತ್ವವಿದೆ. ದೇಸಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವ ‘ಸುದರ್ಶನ ಚಕ್ರ’ ಹೆಸರಿನ ಮಹತ್ವಾಕಾಂಕ್ಷಿ ಯೋಜನೆಯನ್ನು ಅವರು ಪ್ರಕಟಿಸಿದ್ದು, 2035ರ ವೇಳೆಗೆ ಆ ಯೋಜನೆ ಸಾಕಾರಗೊಳ್ಳಲಿದೆ ಎನ್ನುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಯುವಜನತೆಗೆ ಒಂದು ಕೋಟಿ ಉದ್ಯೋಗಾವಕಾಶ ಕಲ್ಪಿಸುವುದು, ನಾರೀಶಕ್ತಿಯ ಪ್ರತಿಪಾದನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದೇಶದ ಸಾಧನೆ, ಪ್ರಧಾನಿ ಅವರ ಭಾಷಣದಲ್ಲಿನ ಕೆಲವು ಮುಖ್ಯಾಂಶಗಳು. ದೀಪಾವಳಿ ವೇಳೆಗೆ ಜಿಎಸ್‌ಟಿ ಪರಿಷ್ಕರಣೆಯಾಗಲಿದೆ ಎನ್ನುವುದು ಅವರು ನೀಡಿದ ಭರವಸೆಗಳಲ್ಲಿ ಮುಖ್ಯವಾದುದು. ಉದ್ದೇಶಿತ ಪರಿಷ್ಕರಣೆಯಿಂದ ಸರಕು ಹಾಗೂ ಸೇವಾ ತೆರಿಗೆಯ ಭಾರ ಕೊಂಚ ಹಗುರವಾಗುವ ನಿರೀಕ್ಷೆಯಿದೆ.
ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲಿ ಆರ್‌ಎಸ್‌ಎಸ್ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರಲ್ಲಿ ಅಚ್ಚರಿಯೇನೂ ಅಲ್ಲ. ಒಳನುಸುಳುವಿಕೆ ಮತ್ತು ಅಕ್ರಮ ವಲಸೆಯಿಂದಾಗಿ ದೇಶದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳ ಜನಸಂಖ್ಯೆಯ ಸ್ವರೂಪದಲ್ಲಿ ಅಸಮತೋಲನ ಕಂಡುಬಂದಿರುವುದು ಕಳವಳಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಈ ಸವಾಲು ಎದುರಿಸಲು ಉನ್ನತ ಮಟ್ಟದ ‘ಜನಸಂಖ್ಯಾ ಮಿಷನ್’ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಆದರೆ, ಒಳನುಸುಳುವಿಕೆಯ ಕುರಿತ ಆತಂಕಕ್ಕೆ ಅವರು ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ. ಹಿಂದುತ್ವ ಸಂಘಟನೆಗಳು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವ್ಯಕ್ತಪಡಿಸುವ ಅಭಿಪ್ರಾಯದ ಧಾಟಿಯಲ್ಲೇ ಪ್ರಧಾನಿ ಅವರ ಹೇಳಿಕೆಯೂ ಇದೆ. ಒಳ ನುಸುಳುವಿಕೆಯ ವಿಚಾರವನ್ನು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ರಾಜಕೀಯವಾಗಿ ಬಳಸಲಾಗಿತ್ತು. ಮುಂದಿನ ದಿನಗಳಲ್ಲಿ ಅದು ಮತ್ತೆ ಮುನ್ನೆಲೆಗೆ ಬರಲಿದೆ ಎನ್ನುವುದರ ಸೂಚನೆ ಅವರ ಮಾತಿನಲ್ಲಿ ಇರುವಂತಿದೆ. ಅಕ್ರಮ ವಲಸೆಯ ಬಗೆಗಿನ ಅವರ ಮಾತು ಆತಂಕಕ್ಕಷ್ಟೇ ಸೀಮಿತವಾಗಿರದೆ, ಸಮಾಜದ ನಿರ್ದಿಷ್ಟ ಸಮುದಾಯಗಳ ವಿರುದ್ಧದ ಸಂಕಥನವೊಂದನ್ನು ಧ್ರುವೀಕರಣ ಮಾಡುವ ಗುರಿಯನ್ನೂ ಹೊಂದಿರುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.