ADVERTISEMENT

ಜನತಂತ್ರದ ಬೆನ್ನು ಇರಿವ ಬೇಹುಗಾರಿಕೆ ಕಣ್ಣುಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:53 IST
Last Updated 24 ಡಿಸೆಂಬರ್ 2018, 19:53 IST
   

ದೇಶದ ಯಾವುದೇ ನಾಗರಿಕನ ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಇನ್ನು ಮುಂದೆ ಸರ್ಕಾರಿ ಬೇಹುಗಾರಿಕೆ- ಭದ್ರತೆ- ವಿಚಕ್ಷಣೆ ಸಂಸ್ಥೆಗಳಿಂದ ಸುರಕ್ಷಿತ ಅಲ್ಲ. ಅವುಗಳಲ್ಲಿ ಶೇಖರಿಸಿರಬಹುದಾದ, ಅವುಗಳಿಂದ ಕಳಿಸಲಾದ ಅಥವಾ ಸ್ವೀಕರಿಸಲಾದ ಯಾವುದೇ ಮಾಹಿತಿಯನ್ನು ಬೇಹುಗಾರಿಕೆಯ ಕಣ್ಣುಗಳು ನೋಡಲಿವೆ. ಅಷ್ಟೇ ಅಲ್ಲ, ನೇರ ಕೈ ಹಾಕಿ ವಶಕ್ಕೆ ತೆಗೆದುಕೊಳ್ಳಲಿವೆ. ಹೀಗೆ ಗೋಪ್ಯವಾಗಿ ನಿಗಾ ಇರಿಸುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರವನ್ನು ಹತ್ತು ಸರ್ಕಾರಿ ಭದ್ರತೆ- ಬೇಹುಗಾರಿಕೆ- ವಿಚಕ್ಷಣೆ ಸಂಸ್ಥೆಗಳಿಗೆ ನೀಡಲಾಗಿದೆ. ಈ ಸಂಬಂಧ ಇದೇ ತಿಂಗಳ 19ರಂದು ಹೊರಬಿದ್ದ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆ ತೀವ್ರ ವಿವಾದ ಎಬ್ಬಿಸಿದೆ. ಸಾಮಾಜಿಕ ಮಾಧ್ಯಮ ಜಾಲತಾಣಗಳ ಮೇಲೆ ಕಣ್ಣಿಡುವ ಇಂತಹುದೇ ಕಸರತ್ತನ್ನು ಕೇಂದ್ರ ಸರ್ಕಾರ ಈ ಹಿಂದೆ ನಡೆಸಿ ಆರು ತಿಂಗಳೂ ಕಳೆದಿಲ್ಲ. ಭಾರತವನ್ನು ಸಾಮೂಹಿಕ ಕಣ್ಗಾವಲು ದೇಶವನ್ನಾಗಿ ಮಾಡಲಾಗುತ್ತಿದೆಯೇ ಎಂಬುದಾಗಿ ಪ್ರತಿಪಕ್ಷಗಳ ವಿರೋಧ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಹಿಂದೆಗೆದಿತ್ತು. ‘ನಾಗರಿಕರ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನೂ ಸರ್ಕಾರ ಕದ್ದು ನೋಡಬಯಸುತ್ತಿದೆ. ಕಣ್ಗಾವಲು ದೇಶವನ್ನು ರೂಪಿಸುವ ಪ್ರಯತ್ನ ನಡೆದಿದೆಯೇ’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಟ್ವಿಟರ್ ಮತ್ತು ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರ ಚಟುವಟಿಕೆಗಳ ಮೇಲೆ ನಿಗಾ ಇಡುವ ಏಳು ಪ್ರಯತ್ನಗಳನ್ನು 2014ರಿಂದ ನಡೆಸಲಾಗಿತ್ತು. ಹಾಲಿ ಸುತ್ತೋಲೆಯು ಈ ಸರಣಿಯ ಎಂಟನೆಯ ಜನತಂತ್ರವಿರೋಧಿ ಕಸರತ್ತು.

ರಾಷ್ಟ್ರೀಯ ಭದ್ರತೆಗಾಗಿ ನಿರ್ದಿಷ್ಟ ವ್ಯಕ್ತಿಗಳ ಚಲನವಲನದ ಮೇಲೆ ಕಣ್ಗಾವಲು ಇಡುವುದಕ್ಕೆ ದೊಡ್ಡ ಆಕ್ಷೇಪಣೆ ಇರಲಾರದು. ಆದರೆ ಇಡೀ ದೇಶದ ಜನಸಮೂಹಗಳನ್ನೇ ಕಣ್ಗಾವಲಿಗೆ ಗುರಿ ಮಾಡುವುದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಒಪ್ಪಿತ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿ ಬದುಕು ಸಾಗಿಸುವ ಜನರ ನಿತ್ಯ ವ್ಯವಹಾರಗಳ ಮೇಲೆ ಪ್ರಭುತ್ವ ಭೂತ ಕನ್ನಡಿ ಇಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಕೋಮುವಾದಿ ಧ್ರುವೀಕರಣವೇ ತಳಪಾಯ ಆಗಿರುವ ಹೊಸ ‘ರಾಷ್ಟ್ರವಾದ’ವನ್ನು ಕಳೆದ ನಾಲ್ಕುವರ್ಷಗಳಲ್ಲಿ ಎತ್ತರಕ್ಕೆ ಎತ್ತಿ ನಿಲ್ಲಿಸಲಾಗಿದೆ. ಹಿಂದೂಗಳು- ಮುಸ್ಲಿಮರು, ದೇಶಭಕ್ತರು- ದೇಶದ್ರೋಹಿಗಳು ಎಂದು ಸಮಾಜವನ್ನು ಒಡೆಯುವ ಸಂವಾದಕ್ಕೆ ಕೇಂದ್ರ ಸರ್ಕಾರ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೀರೆರೆಯುತ್ತ ಬಂದಿದೆ. ಜನರಿಗಿಂತ ದೇಶ ದೊಡ್ಡದು ಎಂಬ ವಾದವನ್ನು ಬೆಳೆಸಲಾಗಿದೆ. ಅರಾಜಕ ಗುಂಪುಗಳು ಹಾದಿ ಬೀದಿಗಳಲ್ಲಿ ನ್ಯಾಯ ನಿರ್ಣಯ ಮಾಡಿ ‘ಅಪರಾಧಿ’ ಯಾರೆಂದು ತೀರ್ಮಾನಿಸಿ ಜಜ್ಜಿ ಕೊಲ್ಲುವ ಪ್ರವೃತ್ತಿ ಆತಂಕಕಾರಿ ಹಂತ ಮುಟ್ಟಿದೆ. ಗೋರಕ್ಷಕರ ಗುಂಪುಗಳು ಹಾಡಹಗಲು ಪೊಲೀಸ್ ಅಧಿಕಾರಿಯನ್ನೇ ಹತ್ಯೆ ಮಾಡುವುದಾದರೆ ಸಾಮಾನ್ಯ ಪ್ರಜೆಯ ಮಾನ-ಪ್ರಾಣಗಳು ಎಷ್ಟು ಸುರಕ್ಷಿತ? ಈ ವಿಷಮ ವಾತಾವರಣದಲ್ಲಿ ‘ರಾಷ್ಟ್ರೀಯ ಭದ್ರತೆ’ಯ ಕಾರಣದ ದುರುಪಯೋಗ ನಡೆಯುವುದಿಲ್ಲ ಎಂಬುದಕ್ಕೆ ಏನು ಖಾತರಿ? ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಬೇಹುಗಾರಿಕೆಯ ಈ ಆದೇಶ ಪ್ರಶ್ನಾರ್ಹ ಎಂಬುದು ಮಾಹಿತಿ ತಂತ್ರಜ್ಞಾನ ಕಾಯ್ದೆ ತಜ್ಞರ ಅಭಿಮತ. ಸರ್ವೋಚ್ಚ ನ್ಯಾಯಾಲಯ ಈ ವರ್ಷ ‘ಆಧಾರ್’ ಯೋಜನೆಯ ರೆಕ್ಕೆಪುಕ್ಕಗಳನ್ನು ಕತ್ತರಿಸಿದ್ದು ಇದೇ ಆಧಾರದ ಮೇಲೆ. ಈಗಿನ ಸುತ್ತೋಲೆಯೂ ನ್ಯಾಯಾಂಗದ ಪರೀಕ್ಷೆಯಲ್ಲಿ ಪಾಸಾಗುವುದು ಅನುಮಾನ. ದಶದಿಕ್ಕುಗಳಿಂದ ಆವರಿಸಿ ಕವಿದಿರುವ ‘ಡಿಜಿಟಲ್ ಆವರಣ’ಈಗಾಗಲೇ ಅದೃಶ್ಯ ಬೇಹುಗಾರಿಕೆಯನ್ನು ಸುಲಿದ ಬಾಳೆಯಷ್ಟು ಸಲೀಸು ಮಾಡಿದೆ.ವ್ಯಕ್ತಿಗತ ಸ್ವಾತಂತ್ರ್ಯಹರಣದ ಈ ಅಪಾಯಕ್ಕೆ ಭಾರತೀಯ ಮಿದುಳು-ಮನಸುಗಳು ಇನ್ನೂ ಎಚ್ಚರಗೊಂಡಿರುವ ಲಕ್ಷಣಗಳಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಅಪರಾಧಿ ಎಂದು ಗುಮಾನಿಯಿಂದ ನೋಡುವ ಸರ್ಕಾರದ ಈ ಪ್ರವೃತ್ತಿ ಖಂಡನೀಯ. 2019ರ ಲೋಕಸಭಾ ಚುನಾವಣೆ ಕದ ಬಡಿದಿರುವ ಹೊತ್ತಿನಲ್ಲಿ ಈ ಬೇಹುಗಾರಿಕೆಗೆ ಮುಂದಾಗಿರುವ ನಡೆ ಸಂಶಯಾಸ್ಪದ. 2009ರಲ್ಲಿ ಅಂದಿನ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಗೆ ತಂದಿದ್ದ ತಿದ್ದುಪಡಿಯ ಪ್ರಕಾರ ಈ ಸುತ್ತೋಲೆ ಹೊರಡಿಸಲಾಗಿದೆ ಎಂಬ ಸಮರ್ಥನೆಯಲ್ಲಿ ಹುರುಳಿಲ್ಲ. ಯುಪಿಎ ಸರ್ಕಾರ ಮಾಡಿದ ತಪ್ಪನ್ನು ಮೋದಿ ನೇತೃತ್ವದ ಸರ್ಕಾರ ತಿದ್ದಬಹುದಿತ್ತು. ಎತ್ತಿ ಹಿಡಿದು ಮುಂದುವರೆಸುವ ಅಗತ್ಯ ಇರಲಿಲ್ಲ. ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿಕ್ರಮಣವು ಆಳುವವರ ಅಂತರಂಗದ ಅಭೀಪ್ಸೆ. ಹಾಲಿ ಸರ್ಕಾರವೂ ಈ ಮಾತಿಗೆ ಹೊರತಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT