ADVERTISEMENT

ಸಂಪಾದಕೀಯ: ಲೋಕಾಯುಕ್ತಕ್ಕೆ ಶಕ್ತಿ ತುಂಬಲು ಸರ್ಕಾರ ಬದ್ಧತೆ ಪ್ರದರ್ಶಿಸಲಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:31 IST
Last Updated 28 ಜನವರಿ 2022, 19:31 IST
ಸಂಪಾದಕೀಯ
ಸಂಪಾದಕೀಯ   

ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಜನರಿಗೆ ಉತ್ತಮ ಆಡಳಿತದ ಭರವಸೆಯನ್ನುಖಾತರಿಪಡಿಸುವುದಕ್ಕಾಗಿಯೇ ಮೂರೂವರೆ ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಈಗ ಹಲ್ಲಿಲ್ಲದ ಹಾವಿನಂತಾಗಿದೆ. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿ, ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಎಸಿಬಿಗೆ ನೀಡಿತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತದಿಂದ ತೆಗೆದುಹಾಕಲಾಯಿತು. ಈಗ ಲೋಕಾಯುಕ್ತವು ದುರಾಡಳಿತ ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ನಡೆಸಿ, ವರದಿ ಸಲ್ಲಿಸುವುದಕ್ಕೆ ಸೀಮಿತವಾದ ಅಧಿಕಾರವನ್ನು ಹೊಂದಿದೆ. 2015ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವವರೆಗೂ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಮನೆಮಾತಾಗಿತ್ತು. ಭ್ರಷ್ಟಾಚಾರ ಅಥವಾ ದುರಾಡಳಿತಕ್ಕೆ ಸಂಬಂಧಿಸಿದ ದೂರು ಹೊತ್ತು ಲೋಕಾಯುಕ್ತ ಕಚೇರಿ ಪ್ರವೇಶಿಸಿದರೆ ನ್ಯಾಯ ದೊರಕಬಹುದು ಎಂಬ ವಿಶ್ವಾಸ ಮೂಡಿತ್ತು. ಆದರೆ, ಕಾಯ್ದೆ ಬದಲಾದ ಬಳಿಕ ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣಾ ಸ್ವರೂಪವೇ ಬದಲಾಯಿತು. ಈಗ ಇರುವ ಸೀಮಿತ ಅಧಿಕಾರದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಿ ಕಳುಹಿಸುವ ವರದಿಗಳನ್ನೂ ರಾಜ್ಯ ಸರ್ಕಾರ ಗೌರವಿಸುತ್ತಿಲ್ಲ ಎಂದು ಲೋಕಾಯುಕ್ತ ಹುದ್ದೆಯಿಂದ ಗುರುವಾರವಷ್ಟೇ ನಿವೃತ್ತರಾದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಬಹಿರಂಗವಾಗಿಯೇ ಹೇಳಿದ್ದಾರೆ. ಎಸಿಬಿಯನ್ನೂ ಲೋಕಾಯುಕ್ತದ ಅಧೀನಕ್ಕೆ ತಂದು, ಹಿಂದಿನಂತೆಯೇ ಈ ತನಿಖಾ ಸಂಸ್ಥೆಗೆ ಬಲ ನೀಡಬೇಕು ಎಂದು ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸುವ ಮುನ್ನ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಿ, ಶಕ್ತಿ ತುಂಬಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ದೀರ್ಘ ಕಾಲದಿಂದಲೂ ಇದೆ. ಈಗ ಲೋಕಾಯುಕ್ತರಾಗಿದ್ದವರೇ ಸ್ವತಃ ಈ ರೀತಿ ಒತ್ತಾಯ ಮಾಡಿರುವುದು ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಸಮರ ನಡೆಸಲು ಲೋಕಾಯುಕ್ತ ಸಶಕ್ತವಾಗಿ ಉಳಿದಿಲ್ಲ ಎಂಬ ಅಭಿಪ್ರಾಯವನ್ನು ಪುಷ್ಟೀಕರಿಸುವಂತಿದೆ. 1986ರಲ್ಲಿ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ಸಂಸ್ಥೆಯು ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ನಿರತರಾಗಿದ್ದ ಹಾಲಿ ಸಚಿವರನ್ನೂ ಬಂಧಿಸಿ, ಜೈಲಿಗೆ ಕಳುಹಿಸಿದ ಕೀರ್ತಿ ರಾಜ್ಯದ ಲೋಕಾಯುಕ್ತಕ್ಕೆ ಇತ್ತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಿಂದಿನ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ನೇತೃತ್ವದ ತಂಡ ನಡೆಸಿದ್ದ ತನಿಖೆಯು ನೈಸರ್ಗಿಕ ಸಂಪತ್ತಿನ ಲೂಟಿಗೆ ಕಡಿವಾಣ ಹಾಕಲು ಕಾರಣವಾಗಿದ್ದು ಕೂಡ ಇತಿಹಾಸ. ಆದರೆ, 2015ರ ನಂತರ ಲೋಕಾಯುಕ್ತ ಕೇವಲ ದೂರುಗಳ ವಿಚಾರಣೆಗೆ ಸೀಮಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಲೋಕಾಯುಕ್ತವು ದೂರುಗಳ ವಿಚಾರಣೆಗೆ ಸೀಮಿತವಾದ ಒಂದು ಸಾಮಾನ್ಯ ಪ್ರಾಧಿಕಾರದಂತೆ ಭಾಸವಾಗುತ್ತಿದೆ. ಅತ್ತ ಲೋಕಾಯುಕ್ತದ ಪೊಲೀಸ್‌ ವಿಭಾಗದ ಅಧಿಕಾರವನ್ನು ಪ್ರತ್ಯೇಕಿಸಿ ಸೃಜಿಸಲಾದ ಭ್ರಷ್ಟಾಚಾರ ನಿಗ್ರಹ ದಳದಿಂದಲೂ ಗಣನೀಯ ಕೆಲಸ ಆಗುತ್ತಿಲ್ಲ. ಪ್ರಾಥಮಿಕ ತನಿಖೆಗೆ ಸೀಮಿತವಾಗಿ ಎಸಿಬಿಗೆ ಮುಕ್ತ ಅಧಿಕಾರವಿದೆ. ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಗಳು ಲಭ್ಯವಿದ್ದರೂ ನೇರವಾಗಿ ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಲು ಎಸಿಬಿಗೂ ಅಧಿಕಾರವಿಲ್ಲ.

ಪ್ರತಿಬಾರಿಯೂ ಎಫ್ಐಆರ್‌ ದಾಖಲಿಸಲು ಸರ್ಕಾರದಿಂದ ಅನುಮತಿ ಪಡೆಯಬೇಕಿದೆ. ಇನ್ನೊಂದೆಡೆ, ತನಿಖೆ ಮುಗಿಸಿ ಆರೋಪಪಟ್ಟಿ ಸಲ್ಲಿಕೆಗೂ ಅನುಮತಿ ಬೇಕು. ಎಫ್‌ಐಆರ್‌ ದಾಖಲಿಸಲು ಹಾಗೂ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ನೂರಾರು ಪ್ರಸ್ತಾವಗಳನ್ನು ತನ್ನ ಬಳಿಯೇ ಇರಿಸಿಕೊಂಡು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಎಸಿಬಿ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹದ ಕೆಲಸವೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ತನಿಖಾ ಸಂಸ್ಥೆ ಇತ್ತೀಚೆಗೆ ಬಹಿರಂಗಪಡಿಸಿರುವ ಅಂಕಿಅಂಶಗಳೇ ಇದನ್ನು ಹೇಳುತ್ತಿವೆ.

ADVERTISEMENT

ಲೋಕಾಯುಕ್ತಕ್ಕೆ ಬಲ ತುಂಬುವುದು ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಯ ಅಧಿಕಾರವನ್ನು ಮರಳಿ ನೀಡುವುದು 2018ರ ವಿಧಾನಸಭಾ ಚುನಾವಣೆಯಲ್ಲಿ ಚರ್ಚೆಯ ವಿಷಯವೂ ಆಗಿತ್ತು. ‘ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತಕ್ಕೆ ಮರಳಿ ಅಧಿಕಾರ ನೀಡಲಾಗುವುದು’ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಜೆಡಿಎಸ್‌ ಕೂಡ ಚುನಾವಣಾ ಪ್ರಚಾರದಲ್ಲಿ ಇದೇ ಭರವಸೆ ನೀಡಿತ್ತು. 2018ರ ಚುನಾವಣೆ ಬಳಿಕ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ನಂತರ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ಬಿ.ಎಸ್‌. ಯಡಿಯೂರಪ್ಪ ಅವರು ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೆ, ಬಸವರಾಜ ಬೊಮ್ಮಾಯಿ ಈ ಹುದ್ದೆಗೇರಿ ಆರು ತಿಂಗಳು ಪೂರೈಸಿದ್ದಾರೆ. ಈ ಅವಧಿಯಲ್ಲಿ ಲೋಕಾಯುಕ್ತದ ಬಲವರ್ಧನೆ ವಿಚಾರದಲ್ಲಿ ಕಿಂಚಿತ್ತೂ ಯೋಚಿಸಿಲ್ಲ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನಡೆಯುವ ತನಿಖೆಯನ್ನೂ ಸ್ವತಂತ್ರ ತನಿಖಾ ಸಂಸ್ಥೆಯಾದ ಲೋಕಾಯುಕ್ತದ ಅಧೀನಕ್ಕೆ ತರಬೇಕಾದ ಅಗತ್ಯವಿದೆ ಎಂಬ ಬೇಡಿಕೆ ನ್ಯಾಯಯುತವಾದುದು ಎಂಬುದನ್ನು ಅಂಕಿಅಂಶಗಳೇ ರುಜುವಾತುಪಡಿಸುತ್ತಿವೆ. ಈ ವಿಚಾರದಲ್ಲಿ ಇನ್ನೂ ವಿಳಂಬ ಧೋರಣೆ ಅನುಸರಿಸುವುದು ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ಖಾತರಿಪಡಿಸುವ ನಾಗರಿಕ ಸರ್ಕಾರದ ಲಕ್ಷಣ ಆಗಲಾರದು. ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವುದಕ್ಕೆ ಪೂರಕವಾಗಿ ಲೋಕಾಯುಕ್ತವನ್ನು ಬಲವರ್ಧನೆ ಮಾಡಿ, ಸಂಸ್ಥೆಯ ಕುರಿತು ಮತ್ತೆ ಜನರಲ್ಲಿ ವಿಶ್ವಾಸ ಮೂಡಿಸುವ ಬದ್ಧತೆಯನ್ನು ಸರ್ಕಾರ ತಡಮಾಡದೇ ಪ್ರದರ್ಶಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.