ADVERTISEMENT

ಸಂಪಾದಕೀಯ: ಕೋಮು ದ್ವೇಷ ಹತ್ತಿಕ್ಕಲುಕಠಿಣ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 19:30 IST
Last Updated 28 ಜುಲೈ 2022, 19:30 IST
Sampadakiya 29-07-2022.jpg
Sampadakiya 29-07-2022.jpg   

ರಾಜ್ಯದಲ್ಲಿ ರಾಜಕೀಯ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಬಿಜೆಪಿ ಯುವ ಮೋರ್ಚಾ ಮುಖಂಡ,ದಕ್ಷಿಣ ಕನ್ನಡ ಜಿಲ್ಲೆ ನೆಟ್ಟಾರು ಗ್ರಾಮದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಬೇಕಾಗಿದೆ. ರಾಜ್ಯದಲ್ಲಿ ಈ ರೀತಿಯ ಹತ್ಯೆಗಳುಪದೇ ಪದೇ ಆಗುತ್ತಿರುವುದು ಆತಂಕಕಾರಿ. ಇಂತಹ ಹತ್ಯೆಗಳು ಸರ್ಕಾರದ ವೈಫಲ್ಯವನ್ನು ಬಟಾಬಯಲು ಮಾಡಿವೆ ಎಂದು ಆಡಳಿತಾ ರೂಢ ಬಿಜೆಪಿಯ ಕೆಲವು ಕಾರ್ಯಕರ್ತರೇ ಹೇಳಿರುವುದು ಗಮನಾರ್ಹ. ಈ ಹಿಂದೆ ನಡೆದ ಕೋಮು ಆಧಾರಿತ ಹತ್ಯೆ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಂಡಿದ್ದಿದ್ದರೆ, ಗುಪ್ತಚರ ವ್ಯವಸ್ಥೆಯನ್ನು ಬಿಗಿ ಮಾಡಿ ದ್ದಿದ್ದರೆ ಈ ರೀತಿಯ ಹತ್ಯೆಗಳು ಮರುಕಳಿಸುತ್ತಿರಲಿಲ್ಲ ಎಂಬ ಅವರ ಅನಿಸಿಕೆಯಲ್ಲಿ ಹುರುಳಿಲ್ಲದೇ ಇಲ್ಲ. ಪ್ರವೀಣ್ ಹತ್ಯೆಯನ್ನು ಮತೀಯ ನೆಲೆಯಲ್ಲಿ ನೋಡಬಾರದು. ರಾಜ್ಯದ ಪ್ರಜೆಯೊಬ್ಬನ ಹತ್ಯೆ ಎಂದು ಇಡೀ ಪ್ರಕರಣವನ್ನು ಧರ್ಮನಿರಪೇಕ್ಷವಾಗಿ ನೋಡಬೇಕು. ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ರಾಜ್ಯದಲ್ಲಿ ಇಂತಹ ಹತ್ಯೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಾಗಿರುವುದೂ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಈ ಹತ್ಯೆಗೆ ಕಾರಣಗಳನ್ನು ಪತ್ತೆ ಮಾಡಿ ಅದಕ್ಕೆ ಮದ್ದು ಕಂಡುಕೊಳ್ಳಬೇಕಿದೆ. ಪ್ರವೀಣ್ ಹತ್ಯೆಯಿಂದಾಗಿ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರು ಆಕ್ರೋಶ ಗೊಂಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಸಿಟ್ಟು ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಸರ್ಕಾರವು ದಕ್ಷವಾಗಿ ನಿಭಾಯಿಸಬೇಕಿದೆ. ಕೋಮುದ್ವೇಷ ಹರಡದಂತೆ ನೋಡಿಕೊಳ್ಳಬೇಕಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ವಿಷಯದಲ್ಲಿ ರಾಜಕೀಯವಾಗಲೀ, ಧರ್ಮವಾಗಲೀ ನುಸುಳಬಾರದು. ಹತ್ಯೆಗೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಪ್ರಚೋದನಕಾರಿಯಾಗಿ ಮಾತನಾಡ ಬಾರದು ಎಂದು ಕಟ್ಟಾಜ್ಞೆ ಮಾಡುವ ಧೈರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೋರಿಸ ಬೇಕಾಗಿದೆ. ಇಂತಹ ಕೃತ್ಯಗಳನ್ನು ರಾಜಕೀಯ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವಕಾಶ ನೀಡ ಬಾರದು. ಕಾನೂನು–ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಹೊಣೆ. ಹಾಗಾಗಿ, ಆಡಳಿತ ಪಕ್ಷವು ಈ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವಿರೋಧ ಪಕ್ಷಗಳ ಮುಖಂಡರು ಸಹ ಸಂಯಮವನ್ನು ಕಾಯ್ದುಕೊಳ್ಳಬೇಕಿದೆ. ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಕೋಮು ದ್ವೇಷ ಕೆರಳಿಸಲು ಸ್ವಾರ್ಥಶಕ್ತಿಗಳು ಯತ್ನಿಸಬಹುದು. ಅದಕ್ಕೆ ಆಸ್ಪದ ದೊರೆಯದಂತೆ ಸರ್ಕಾರ ನೋಡಿಕೊಳ್ಳಬೇಕು.ಸಮಾಜದಲ್ಲಿ ಸೌಹಾರ್ದ ಮತ್ತು ಶಾಂತಿಗೆ ಭಂಗ ಬಾರದಂತೆ ಸರ್ಕಾರವು ಎಚ್ಚರ ವಹಿಸಬೇಕು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮತೀಯ ಅಥವಾ ರಾಜಕೀಯ ದ್ವೇಷದ ಕಾರಣಕ್ಕೆ ಹತ್ಯೆಯಾದಾಗ ಸಂತ್ರಸ್ತರ ಕುಟುಂಬಕ್ಕೆ ಒಂದಿಷ್ಟು ಪರಿಹಾರ ನೀಡಿ, ಆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಣಮರೆವು ಪ್ರದರ್ಶಿಸುವುದು ಅಧಿಕಾರಸ್ಥರ ಚಾಳಿ. ಅದು ಇಲ್ಲಿ ಮರುಕಳಿಸಬಾರದು.

ಕೋಮು ಸೌಹಾರ್ದ ಕದಡುವವರನ್ನು ಬಗ್ಗುಬಡಿಯಲು ಉತ್ತರಪ್ರದೇಶ ಸರ್ಕಾರ ಅನುಸರಿಸುತ್ತಿ ರುವ ಮಾದರಿಯನ್ನುಅಗತ್ಯವಾದರೆ ಕರ್ನಾಟಕದಲ್ಲಿಯೂ ಅನುಸರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೀಗೆ ಮಾಡುವುದು ಮೂರ್ಖತನದ ಪರಮಾವಧಿ
ಆದೀತು. ಉತ್ತರಪ್ರದೇಶದ ‘ಬುಲ್ಡೋಜರ್‌ ಅಸ್ತ್ರ’ವು ಕಾನೂನುಬಾಹಿರ. ಅದು ಸಂವಿಧಾನ ವಿರೋಧಿ ನಡೆಯೂ ಹೌದು. ಬುಲ್ಡೋಜರ್‌ಗಳನ್ನು ಅಕ್ರಮ ಕಟ್ಟಡ ನೆಲಸಮಕ್ಕೆ ಬಳಸಬೇಕೇ ವಿನಾ ಸೌಹಾರ್ದ ವನ್ನು ನೆಲಸಮ ಮಾಡಲು ಅಲ್ಲ. ಕರ್ನಾಟಕವು ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾದ ರಾಜ್ಯ. ಅದನ್ನು ಕಾಪಾಡುವ ಕೆಲಸವು ಕಾನೂನಿಗೆ ಅನುಗುಣವಾಗಿ ಆಗಬೇಕು. ಕರ್ನಾಟಕದ ಉಪಕ್ರಮ ಗಳು ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಇದ್ದರೆ ಚೆನ್ನ. ಯಾವುದೇ ಕ್ರಮ ಕೈಗೊಂಡರೂ ಅದು ಸಂವಿಧಾನ ಬದ್ಧವಾಗಿಯೇ ಇರಬೇಕು. ಇಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಭಾವುಕ ನೆಲೆಯಲ್ಲಿ ಪ್ರತಿಕ್ರಿಯಿಸಬಾರದು. ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ಶಮನಗೊಳಿಸಲು ಅವರು ಇಂತಹ ಹೇಳಿಕೆ ನೀಡಿರಬಹುದು. ಆದರೆ, ಇಂತಹ ಹೇಳಿಕೆಗಳುಪರಿಣಾಮದಲ್ಲಿ ಒಂದು ಸಮುದಾಯದ ವಿರುದ್ಧ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟಬಹುದು. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಆಡುವ ಮಾತು ಇದಲ್ಲ. ಚುನಾವಣೆ ಹತ್ತಿರವಾಗುತ್ತಿದೆ. ಇಂತಹ ಹೊತ್ತಲ್ಲಿ ರಾಜ್ಯದ ಚಿತ್ತಭಿತ್ತಿಯನ್ನು ಕಲಕುವ ಯಾವ ಕ್ರಿಯೆಗೂ ಯಾವ ಮಾತಿಗೂ ಯಾರೂ ಅವಕಾಶ ಕೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT