ADVERTISEMENT

ತ್ರಿವಳಿ ತಲಾಖ್ ಮಸೂದೆ ಮರು ಅವಲೋಕನ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:00 IST
Last Updated 28 ಡಿಸೆಂಬರ್ 2018, 20:00 IST
   

ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆಗೆ ಲೋಕಸಭೆಯಲ್ಲಿ ಮತ್ತೊಮ್ಮೆ ಅಂಗೀಕಾರ ದೊರೆತಿದೆ. ಕಳೆದ ವರ್ಷವೂ ಡಿಸೆಂಬರ್ ತಿಂಗಳಲ್ಲಿಯೇ ಲೋಕಸಭೆಯಲ್ಲಿ ಈ ಮಸೂದೆ ಅನುಮೋದನೆಗೊಂಡಿತ್ತು. ಆದರೆ ಆಡಳಿತ ಪಕ್ಷಕ್ಕೆ ಸಂಖ್ಯಾಬಲವಿಲ್ಲದ ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗಲಿಲ್ಲ. ಹೀಗಾಗಿ ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತ್ರಿವಳಿ ತಲಾಖ್ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಕೆಲವು ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗಗಳ ನಡುವೆಯೇ ಈ ಅನುಮೋದನೆ ಸಿಕ್ಕಿದೆ. ಯಥಾಪ್ರಕಾರ ರಾಜ್ಯಸಭೆಯಲ್ಲಿ ಮತ್ತೊಮ್ಮೆ ಈ ಮಸೂದೆ ಅಂಗೀಕಾರಕ್ಕೆ ಅಡ್ಡಿ ಒದಗಲಿದೆ ಎಂಬುದು ನಿರೀಕ್ಷಿತ. 2019ರ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇದೆ. ರಾಜಕೀಯ ಪಕ್ಷಗಳಿಗೆ ಚರ್ಚಾವಿಷಯವಾಗಿ ಇದು ಮುಂದುವರಿಯಲಿದೆ. ಈ ಮಸೂದೆ ಕುರಿತಂತೆ ಲೋಕಸಭೆಯಲ್ಲಿ ಸುಮಾರು ಐದು ತಾಸುಗಳ ಕಾವೇರಿದ ಚರ್ಚೆ ನಡೆದಿದ್ದು ವಿಶೇಷ. ಮಹಿಳೆಗೆ ನ್ಯಾಯ, ಘನತೆ ಹಾಗೂ ಗೌರವಕ್ಕೆ ಸಂಬಂಧಿಸಿದೆ ಈ ಮಸೂದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಪಾದಿಸಿದ್ದಾರೆ. ಆದರೆ, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ವಿವಾಹ ಎನ್ನುವುದು ಸಿವಿಲ್ ಒಪ್ಪಂದ. ಸಿವಿಲ್ ಒಪ್ಪಂದದ ಉಲ್ಲಂಘನೆಯನ್ನು ಕ್ರಿಮಿನಲ್ ಕೃತ್ಯವಾಗಿ ನೋಡುವುದು ಎಷ್ಟು ಸರಿ? ಹೀಗಾಗಿ ಸಿವಿಲ್ ಕಾನೂನಿನ ಅಡಿ ಬರುವ ವಿಚ್ಛೇದನ ವ್ಯಾಜ್ಯವನ್ನು ಕ್ರಿಮಿನಲ್ ಅಪರಾಧವಾಗಿಸಿರುವುದು ವಿಪರ್ಯಾಸ. ತ್ರಿವಳಿ ತಲಾಖ್ ಪದ್ಧತಿ ಅಮಾನವೀಯವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ನಿಷೇಧ ಹೇರಬೇಕು ಎಂಬುದೂ ಸರಿಯಾದದ್ದು. ಆದರೆ ಈ ನಿಷೇಧ ಉಲ್ಲಂಘನೆಗಾಗಿ ಮುಸ್ಲಿಂ ಪತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕು ಎಂಬುದು ಸರಿಯಲ್ಲ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂಬುದಂತೂ ಅವಾಸ್ತವಿಕ. ಮುಸ್ಲಿಂ ಸಮುದಾಯದ ಪುರುಷರಿಗೆ ಶಿಕ್ಷೆ ನೀಡುವ ತಂತ್ರ ಈ ಮಸೂದೆ ಹಿಂದಿದೆ ಎಂಬಂಥ ವಾದಗಳನ್ನು ನಿರ್ಲಕ್ಷಿಸಲಾಗದು.

ಪತ್ನಿಯ ಪರಿತ್ಯಾಗದ ವಿಚಾರ, ಈ ಚರ್ಚೆಯಲ್ಲಿ ಮುಖ್ಯವಾದುದು. ಪತ್ನಿಯನ್ನು ಪರಿತ್ಯಜಿಸುವ ವಿಚಾರ ಈ ಮಸೂದೆಯ ಪ್ರಕಾರ ಕ್ರಿಮಿನಲ್ ಅಪರಾಧ ಆದರೆ ಇದು ಮುಸ್ಲಿಂ ಪುರುಷರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದೂ ಮತ್ತೊಂದು ವಿಪರ್ಯಾಸ. ಪತ್ನಿಯನ್ನು ಪರಿತ್ಯಜಿಸುವ ಇತರ ಸಮುದಾಯಗಳ ಪುರುಷರನ್ನೂ ಇದೇ ರೀತಿಯ ವ್ಯಾಖ್ಯೆಯಡಿ ತರಲಾಗಿಲ್ಲ ಏಕೆ ಎಂಬಂಥ ಪ್ರಶ್ನೆ ಸಹಜ. 2011ರ ಜನಗಣತಿಯ ಪ್ರಕಾರ 20 ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರು ಗಂಡಂದಿರಿಂದ ದೂರವಿದ್ದಾರೆ. ವಿವಿಧ ಧಾರ್ಮಿಕ ಸಮುದಾಯಗಳಿಗೆ ಸೇರಿದವರು ಇವರು. ಅನೇಕ ಮಹಿಳೆಯರು ಪತಿಯಿಂದ ಪರಿತ್ಯಕ್ತೆಯರು ಎಂಬುದನ್ನೂ ಗಮನಿಸಬೇಕು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿಯೇ ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡಂತೆ ಐವರು ನ್ಯಾಯಮೂರ್ತಿಗಳ ಪೀಠ 3ಃ2 ಅನುಪಾತದಲ್ಲಿ ಬಹುಮತದೊಂದಿಗೆ ರದ್ದುಪಡಿಸಿತ್ತು. ಆ ನಂತರ, ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯೂ ಜಾರಿಯಲ್ಲಿದೆ. ಇಷ್ಟೆಲ್ಲಾ ಆದರೂ ಕೆಲವು ಮುಸ್ಲಿಂ ಪುರುಷರು ತ್ರಿವಳಿ ತಲಾಖ್ ಆಚರಣೆ ಮುಂದುವರಿಸಿದ್ದಾರೆ ಎಂದು ಹೇಳುತ್ತಾ ಇದನ್ನು ಅಪರಾಧ ವ್ಯಾಖ್ಯೆ ಅಡಿ ತರುವುದಕ್ಕೆ ಸಮರ್ಥನೆಯನ್ನು ನೀಡಲಾಗಿದೆ. ಆದರೆ, ಕ್ರಿಮಿನಲ್ ಅಪರಾಧ ವ್ಯಾಖ್ಯೆ ಅಡಿ ತಂದು ಬಿಟ್ಟರೆ ಅಪರಾಧಗಳು ಘಟಿಸುವುದು ನಿಂತು ಹೋಗುತ್ತವೆ ಎಂಬುದು ಸರ್ಕಾರದ ವಾದವೇ? ಎಂಬುದು ಇಲ್ಲಿ ಪ್ರಶ್ನೆ. ಹಾಗಿದ್ದಲ್ಲಿ ಕೊಲೆ, ಅತ್ಯಾಚಾರದಂತಹ ಅಪರಾಧಗಳು ಎಂದೋ ನಿಂತು ಹೋಗಬೇಕಿತ್ತಲ್ಲವೇ? ‘ವರದಕ್ಷಿಣೆ ಕ್ರಿಮಿನಲ್ ಅಪರಾಧವಾಗುವುದಾದರೆ ತಲಾಖ್ ಏಕೆ ಆಗಬಾರದು’ ಎಂದೂ ಸಚಿವ ರವಿಶಂಕರ ಪ್ರಸಾದ್ ಕೇಳಿದ್ದಾರೆ. ಮತ್ತೊಬ್ಬ ಸಚಿವ ಮುಖ್ತಾರ್‌ ಅಬ್ಬಾಸ್ ನಕ್ವಿ ಅವರು, ತಲಾಖ್ ಅನ್ನು ಅತ್ಯಾಚಾರ, ಕೊಲೆಗೆ ಹೋಲಿಕೆ ಮಾಡಿದ್ದಾರೆ. ಆದರೆ ಇಂತಹ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳು ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನ್ವಯಿಸುತ್ತವೆ ಎಂಬುದನ್ನು ನಮ್ಮ ನೇತಾರರು ಮರೆಯಬಾರದು. ಮಸೂದೆಯ ಕೂಲಂಕಷ ಪರಿಶೀಲನೆಗೆ ಸಂಸದೀಯ ಸಮಿತಿ ರಚಿಸಿ ಇನ್ನಷ್ಟು ಚರ್ಚೆಗಳಿಗೆ ಒಳಪಡಿಸಬೇಕೆಂಬ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT