ADVERTISEMENT

ಸಂಪಾದಕೀಯ | ಯೆಸ್‌ ಬ್ಯಾಂಕ್‌ ಬಿಕ್ಕಟ್ಟು ತ್ವರಿತವಾಗಿ ಬಗೆಹರಿಯಲಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:29 IST
Last Updated 6 ಮಾರ್ಚ್ 2020, 20:29 IST
.
.   

ತೀವ್ರ ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್‌ ಬ್ಯಾಂಕ್‌ನ ಕಾರ್ಯನಿರ್ವಹಣೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ ದಿಢೀರನೆ ನಿರ್ಬಂಧ ವಿಧಿಸಿರುವುದು ಬ್ಯಾಂಕಿಂಗ್‌ ವಲಯದಲ್ಲಿ ಕಂಪನ ಮೂಡಿಸಿದೆ. ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ರದ್ದುಪಡಿಸಿರುವ ಆರ್‌ಬಿಐ, ಬ್ಯಾಂಕಿಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಈ ಬೆಳವಣಿಗೆಯಿಂದ ದೇಶದಾದ್ಯಂತ ಯೆಸ್‌ ಬ್ಯಾಂಕ್‌ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೂ ಠೇವಣಿದಾರರು ಗರಿಷ್ಠ ₹50 ಸಾವಿರದಷ್ಟು ಹಣವನ್ನು ಮಾತ್ರ ಹಿಂದಕ್ಕೆ ಪಡೆಯಬಹುದು ಎಂದು ನಿರ್ಬಂಧ ವಿಧಿಸಲಾಗಿದೆ. ಆದರೆ, ವೈದ್ಯಕೀಯ ವೆಚ್ಚ, ಉನ್ನತ ಶಿಕ್ಷಣ, ಮದುವೆ ಉದ್ದೇಶಕ್ಕೆ ₹ 5 ಲಕ್ಷದವರೆಗೂ ಹಿಂಪಡೆಯಲು ಅನುಮತಿ ನೀಡಲಾಗಿದೆ.

ಯೆಸ್‌ ಬ್ಯಾಂಕ್‌ ಜತೆಗಿನ ಪಾಲುದಾರಿಕೆಯಡಿ ಡಿಜಿಟಲ್‌ ಪಾವತಿ ಸೇವೆ ನಿರ್ವಹಿಸುತ್ತಿರುವ ಅತಿದೊಡ್ಡ ಮೊಬೈಲ್‌ ವಾಲೆಟ್‌ ಕಂಪನಿ ‘ಫೋನ್‌ಪೇ’ ವಹಿವಾಟಿಗೂ ಇದರಿಂದ ಧಕ್ಕೆ ಒದಗಿದೆ. ಸಹಕಾರ ವಲಯದ ಸಣ್ಣ ಪುಟ್ಟ ಬ್ಯಾಂಕ್‌ಗಳು ಇತ್ತೀಚೆಗೆ ಹೀಗೆ ನಿರ್ಬಂಧಕ್ಕೆ ಒಳಗಾಗಿದ್ದು ಉಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಬ್ಯಾಂಕ್‌ವೊಂದಕ್ಕೆ ನಿರ್ಬಂಧ ವಿಧಿಸಿದ ದೇಶದ ಮೊದಲ ಪ್ರಕರಣ ಇದಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಖಾಸಗಿ ವಲಯದ ಬ್ಯಾಂಕ್‌ಗಳ ಕಾರ್ಯವೈಖರಿ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆಗೂ ಈ ವಿದ್ಯಮಾನ ಆಸ್ಪದ ಮಾಡಿಕೊಡುವ ಸಾಧ್ಯತೆ ಇದೆ.

ಬ್ಯಾಂಕರ್‌ ರಾಣಾ ಕಪೂರ್‌ 2003ರಲ್ಲಿ ಸ್ಥಾಪಿಸಿದ ಈ ಬ್ಯಾಂಕ್‌, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿತ್ತು. ‘ಭಾರತದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಖಾಸಗಿ ಬ್ಯಾಂಕ್‌’ ಎಂಬ ಹಿರಿಮೆ ಹೊಂದಿತ್ತು. ಕಾರ್ಪೊರೇಟ್‌ ವಲಯಕ್ಕೆ ಬೇಕಾಬಿಟ್ಟಿ ಸಾಲ ವಿತರಣೆ ಮಾಡಿದ್ದು ಈಗಿನ ಸಂಕಷ್ಟಕ್ಕೆ ಮುಖ್ಯ ಕಾರಣ ಎಂದು ತಜ್ಞರು ಗುರುತಿಸಿದ್ದಾರೆ. ಸಾಲ ನೀಡಿಕೆ ಮತ್ತು ವಸೂಲಿಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದುದರಿಂದ ವಸೂಲಾಗದ ಸಾಲದ (ಎನ್‌ಪಿಎ) ಮೊತ್ತದಲ್ಲಿ ತೀವ್ರ ಏರಿಕೆ ಉಂಟಾಗಿದೆ.

ADVERTISEMENT

ಬ್ಯಾಂಕ್‌ನ ಆರ್ಥಿಕ ಮುಗ್ಗಟ್ಟು 2017ರಲ್ಲಿಯೇ ಆರ್‌ಬಿಐ ಗಮನಕ್ಕೆ ಬಂದಿತ್ತು. ಬಿಕ್ಕಟ್ಟಿನಿಂದ ಪಾರಾಗಲು ಬೇಕಾದ ಕ್ರಮ ಕೈಗೊಳ್ಳಲು ಆರ್‌ಬಿಐ ಕಾಲಾವಕಾಶವನ್ನೂ ಕೊಟ್ಟಿತ್ತು.ದೊಡ್ಡ ಮೊತ್ತದ ಸಾಲ ಪಡೆದ ಕಂಪನಿಗಳು ಮರುಪಾವತಿ ಮಾಡದ ಕಾರಣ ಬ್ಯಾಂಕ್‌ಗೆ ಈ ದುರ್ಗತಿ ಬಂದಿದೆ. ಹೀಗೆ ಮರುಪಾವತಿಯಾಗದ ಸಾಲದ ಮೊತ್ತವೇ ಸುಮಾರು ₹10 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಹೊಸ ಬಂಡವಾಳ ಸಂಗ್ರಹಿಸಿ ಬ್ಯಾಂಕನ್ನು ಪುನಶ್ಚೇತನಗೊಳಿಸಲು ಆಡಳಿತ ಮಂಡಳಿಗೆ ಆರ್‌ಬಿಐ ಸೂಚಿಸಿತ್ತು. ಆದರೆ, ಹೂಡಿಕೆದಾರರಿಂದ ₹14 ಸಾವಿರ ಕೋಟಿ ಸಂಗ್ರಹಿಸಿ ಬಿಕ್ಕಟ್ಟಿನಿಂದ ಪಾರಾಗಲು ಆಡಳಿತ ಮಂಡಳಿ ನಡೆಸಿದ ಯತ್ನಗಳು ಫಲ ನೀಡಿಲ್ಲ. ಈಗ ಆರ್‌ಬಿಐ, ನಿರ್ಬಂಧದ ಅಸ್ತ್ರ ಪ್ರಯೋಗಿಸಿದೆ.

ಬ್ಯಾಂಕ್‌ ಠೇವಣಿದಾರರು ಮತ್ತು ಸಾರ್ವಜನಿಕರ ಹಿತಾಸಕ್ತಿ ರಕ್ಷಿಸಲು ಈ ಕ್ರಮ ಅನಿವಾರ್ಯವೇ ಆಗಿತ್ತು.ಬ್ಯಾಂಕ್‌ನ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ಎಸ್‌ಬಿಐ ನೇತೃತ್ವದ ಬ್ಯಾಂಕಿಂಗ್‌ ಒಕ್ಕೂಟವು ಪ್ರಯತ್ನ ಆರಂಭಿಸಿರುವುದು ಸ್ವಾಗತಾರ್ಹ.ತಿಂಗಳ ಒಳಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಆರ್‌ಬಿಐ ಭರವಸೆ ನೀಡಿದೆ. ಈ ವಾಗ್ದಾನವು ಕಾಲಮಿತಿ ಒಳಗೆ ಕಾರ್ಯರೂಪಕ್ಕೆ ಬಂದರೆ ಠೇವಣಿದಾರರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ ನಷ್ಟಕ್ಕೆ ಗುರಿಯಾಗಿರುವ ಖಾಸಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಪುನಶ್ಚೇತನಕ್ಕೆ ಸಾರ್ವಜನಿಕರ ಹಣ ಬಳಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ. ಯೆಸ್‌ ಬ್ಯಾಂಕ್‌ನ ಈ ಬಿಕ್ಕಟ್ಟು, ಇತರ ಖಾಸಗಿ ಬ್ಯಾಂಕ್‌ಗಳ ಗ್ರಾಹಕರಲ್ಲೂ ಅಪನಂಬಿಕೆ ಮೂಡಿಸಿದರೆ, ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಬಹುದು. ಹಾಗಾಗದಂತೆ ಆರ್‌ಬಿಐ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.