ADVERTISEMENT

ಕ್ಷೇತ್ರದ ಜನರ ಜತೆಗಿನ ಸಂಪರ್ಕ– ಬಾಂಧವ್ಯವೇ ಶ್ರೀರಕ್ಷೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 6:58 IST
Last Updated 3 ಏಪ್ರಿಲ್ 2014, 6:58 IST

ತುಮಕೂರು: ಲೋಕಸಭೆ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ ಕಂಡುಬರುತ್ತಿದೆ. ಮತದಾನಕ್ಕೆ ಸಮಯ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲೆಡೆ ಪ್ರಚಾರ ಜೋರಾಗಿದೆ. ಟೀಕೆ, ವೈಯಕ್ತಿಕ ನಿಂದನೆಗಳು ಮುಂದುವರಿದಿವೆ.

ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಸ್.ಬಸವರಾಜ್ ಸ್ಪರ್ಧಾ ಕಣದಲ್ಲಿ ಇದ್ದು, ಚುನಾವಣೆ ರಂಗೇರುವಂತೆ ಮಾಡಿದೆ. ಏಳು ಬಾರಿ ಲೋಕಸಭೆಗೆ ಸ್ಪರ್ಧಿಸಿ ಎರಡು ಬಾರಿ ಸೋಲುಕಂಡು, ನಾಲ್ಕು ಬಾರಿ ಸಂಸತ್ ಸದಸ್ಯರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1984, 1989ರ ಚುನಾವಣೆಯಲ್ಲಿ ಸತತವಾಗಿ ಎರಡು ಬಾರಿ ಸಂಸದರಾಗಿದ್ದರು. ನಂತರ ರಾಜಕೀಯವಾಗಿ ಹಿನ್ನಡೆ ಕಂಡು, ಮತ್ತೆ ರಾಜಕೀಯವಾಗಿ ನೆಲೆ ಕಂಡುಕೊಂಡವರು. 1999ರಲ್ಲಿ ಮೂರನೇ ಬಾರಿಗೆ, 2009ರ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದರು. ಒಮ್ಮೆ ಮಾತ್ರ ಸತತವಾಗಿ (1984, 1989) ಎರಡು ಅವಧಿಗೆ ಆಯ್ಕೆಯಾದವರು. ಈಗ ಮತ್ತೊಮ್ಮೆ ಅಂತಹ ಪ್ರಯತ್ನದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ ಜಿ.ಎಸ್.ಬಸವರಾಜ್, ಆ ಪಕ್ಷದ ನೆಲೆಯಲ್ಲೇ ರಾಜಕೀಯವಾಗಿ ಮೇಲೆ ಬಂದು ಅಧಿಕಾರ ಅನುಭವಿಸಿದವರು. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದರು. ನಂತರ ಕೆಜೆಪಿ ಜತೆಗೆ ಗುರುತಿಸಿಕೊಂಡರು. ಬಿಜೆಪಿಯಲ್ಲಿ ಕೆಜೆಪಿ ವಿಲೀನವಾಯಿತು. ಬಿಜೆಪಿಯಲ್ಲಿ ಟಿಕೆಟ್ ನೀಡಲು ವಿರೋಧ ವ್ಯಕ್ತವಾಯಿತು. ಈ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತು ಮತ್ತೊಮ್ಮೆ ಬಿಜೆಪಿಯಿಂದಲೇ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಬಿಡುವಿಲ್ಲದ ಪ್ರಚಾರದ ನಡುವೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶದ ವಿವರ ಇಲ್ಲಿದೆ.

* ಪ್ರಚಾರ ಹೇಗೆ ನಡೆದಿದೆ?
ಸಭೆ, ಪಾದಯಾತ್ರೆ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರ ಜತೆಗಿನ ಹಳೆ ಬಾಂಧವ್ಯ ಸಹಕಾರಿಯಾಗುತ್ತಿದೆ.

* ಗೆಲುವಿಗೆ ಸಹಕಾರಿ ಆಗುವ ಅಂಶಗಳು?
ಕ್ಷೇತ್ರದ ಜನರ ಜತೆಗಿನ ಸಂಪರ್ಕ– ಬಾಂಧವ್ಯ ಕೈಹಿಡಿಯುತ್ತದೆ. ನಾನು ಜನರ ಜತೆಗೆ ಇದ್ದೇನೆ, ಜನರು ನನ್ನ ಜತೆಗೆ ಇದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ ವರೆಗೂ ಜನರೊಂದಿಗೆ ಬೆರೆತಿದ್ದೇನೆ. ಯಾವುದೇ ಗ್ರಾಮ ಪಂಚಾಯತಿಗೆ ಹೋದರೂ ಕನಿಷ್ಠ ಹತ್ತಾರು ಜನರ ಹೆಸರಿಡಿದು ಕರೆಯುವ ಶಕ್ತಿ ಇದೆ. ಅಷ್ಟು ಸಂಪರ್ಕ ಹೊಂದಿದ್ದೇನೆ. ಯುವಕರ ಜತೆಗೆ ಪ್ರೀತಿ, ವಾತ್ಸಲ್ಯ ಇಟ್ಟುಕೊಂಡಿದ್ದೇನೆ.

* ಅಭಿವೃದ್ಧಿ ಕಾರ್ಯಗಳು ಪ್ರಗತಿ ಕಾಣಲಿಲ್ಲ ಎಂಬ   ಆರೋಪ?
ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಹಲವು ಯೋಜನೆಗಳನ್ನು ತಂದಿದ್ದೇನೆ. ಸಾವಿರಾರು ಕೋಟಿ ಹಣ ಹರಿದು ಬಂದಿದೆ. ತುಮಕೂರು– ರಾಯದುರ್ಗ, ತುಮಕೂರು– ದಾವಣಗೆರೆ ರೈಲು ಮಾರ್ಗ ಪ್ರಗತಿ ಕಾಣದಿರುವುದಕ್ಕೆ ಜಿಲ್ಲಾ ಆಡಳಿತದ ವೈಫಲ್ಯ, ಜಿಲ್ಲಾಧಿಕಾರಿಗಳ ಹುಚ್ಚಾಟ ಕಾರಣವಾಗಿದೆ. ರೈತರಿಂದ ವಶಪಡಿಸಿಕೊಳ್ಳುವ ಜಮೀನಿಗೆ ಸರಿಯಾದ ಪರಿಹಾರ ನೀಡದೆ ಯೋಜನೆ ನಿಧಾನವಾಗಿದೆ. ಅದನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.

* ಯಾವ ವಿಚಾರ ಮುಂದಿಟ್ಟು ಮತ ಕೇಳುತ್ತೀರಿ?
ಬಿಜೆಪಿ ಪ್ರಣಾಳಿಕೆ, ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ, ನನ್ನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಅವಕಾಶ ಕೇಳುತ್ತಿದ್ದೇನೆ.

ಎತ್ತಿನಹೊಳೆ ನೀರಾವರಿ ಯೋಜನೆ ಜಾರಿ, ಎಚ್ಎಎಲ್ ಘಟಕ ಆರಂಭ, ರೈಲ್ವೆ ಯೋಜನೆ ಮುಂದುವರಿಸುವುದು, ಕೈಗಾರಿಕೆ ತರುವುದು ಮತ್ತಿತರ ಅಭಿವೃದ್ಧಿ ಸಲುವಾಗಿ ಹೊರಾಟ ಮುಂದುವರಿಯಲಿದೆ.

* ನರೇಂದ್ರ ಮೋದಿ ಮೇಲಿನ ಆರೋಪ?
ಗೋದ್ರಾ ನರಮೇದಕ್ಕೂ, ಮೋದಿಗೂ ಸಂಬಂಧವಿಲ್ಲ. ಮೋದಿ ನರ ಹಂತಕ ಅಲ್ಲ. ವೀರಪ್ಪನ್ ನರಹಂತಕ. ದೇಶಾಭಿಮಾನ ಇಲ್ಲದವರು ಓಟಿಗಾಗಿ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ತನವನ್ನು ಕಳೆದುಕೊಂಡು ನಾವೆಲ್ಲಿಗೆ ಹೋಗುವುದು. ಅಲ್ಪ ಸಂಖ್ಯಾತರಲ್ಲೂ ನನ್ನನ್ನು ಪ್ರೀತಿ ಮಾಡುವ ಜನರಿದ್ದಾರೆ.

ಮೋದಿ ಅಲೆ ಇದೆ. ಯುವಕರನ್ನು ಆಕರ್ಷಿಸುತ್ತಿದ್ದಾರೆ. ಹಿಂದೆ ಅಭ್ಯರ್ಥಿ ನೋಡದೆ ಇಂದ್ರಮ್ಮಗೆ (ಇಂದಿರಾ ಗಾಂಧಿ) ಓಟು ಹಾಕಿದೆವು ಎಂದು ಹೇಳುತ್ತಿದ್ದರು. ಈ ಬಾರಿ ಮೋದಿ ಹೆಸರು ಯುವಕರ ಮನಸ್ಸಿನಲ್ಲಿ ಬಂದಿದೆ.

* ಭಿನ್ನಮತ ಮುಂದುವರಿದಿದೆಯೆ?
ಭಿನ್ನಮತ ಈಗ ಸರಿಹೋಗಿದೆ. ಯಾವ ಭಿನ್ನಮತವೂ ಇಲ್ಲ. ಮಾಜಿ ಸಚಿವ ಎಸ್.ಶಿವಣ್ಣ ನನ್ನ ಜತೆಗೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಮಾಧುಸ್ವಾಮಿ ನನ್ನ ಜತೆಗೆ ಇದ್ದಾರೆ. ಎಂ.ಡಿ.ಲಕ್ಷ್ಮೀನಾರಾಯಣ್ ಪಕ್ಷ ತೊರೆದಿದ್ದರೂ ಪರಿಣಾಮ ಬೀರುವುದಿಲ್ಲ.
ಲಕ್ಷ್ಮೀನಾರಾಯಣ್ ಪಕ್ಷ ತೊರೆದಿದ್ದರಿಂದ ಅವರ ವಿರೋಧಿಗಳು ಪಕ್ಷದ ಒಳಕ್ಕೆ ಬಂದಿದ್ದಾರೆ. ಅಲ್ಲಿಗೆ ಸಮವಾಗಿದೆ. ಹಿಂದಿದ್ದ ಓಟಿನಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

* ನಿಮ್ಮ ಪ್ರತಿಸ್ಪರ್ಧಿ ಯಾರು?
ಪ್ರತಿ ಸ್ಪರ್ಧಿ ಇನ್ನೂ ನಿರ್ಧಾರ ಆಗಬೇಕಿದೆ. ನನ್ನ ಓಟ್ ಬ್ಯಾಂಕ್‌ನಲ್ಲಿ ಬದಲಾವಣೆ ಇಲ್ಲ. ಎಲ್ಲಾ ಸಮುದಾಯದವರು ಜತೆಗಿದ್ದಾರೆ.

* ವ್ಯಕ್ತಿ ನಿಂದನೆ ಬೇಕೆ?
ಏಕೆ ಬೇಕು? ಹುಚ್ಚುಚ್ಚಾಗಿ ಬೈಕೊಂಡು ತಿರುಗುವುದು ಸರಿಯಲ್ಲ. ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಅವರಿಗೆ ಜಿಲ್ಲೆ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ನನ್ನನ್ನು ಟೀಕಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ. ಅಸಹಾಯಕರಾಗಿ ಇಬ್ಬರೂ ಟೀಕೆ ಮಾಡುತ್ತಿದ್ದಾರೆ. ಹಾವು ತನ್ನಪಾಡಿಗೆ ತಾನು ಹೋಗುತ್ತಿರುತ್ತದೆ. ಅದಕ್ಕೆ ಅಡ್ಡಿಪಡಿಸಿದರೆ ಪ್ರತಿರೋಧ ತೋರುತ್ತದೆ. ಈಗಲೂ ಹಾಗೆ ಆಗಿದೆ. ಪ್ರತಿಸ್ಪರ್ಧಿಗಳಿಗೆ ಜನರ ಬಳಿ ಹೇಳಲು ವಿಚಾರಗಳಿಲ್ಲದೆ ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ.

* ಮುಂದಿನ ನಿಲುವು?
ಪರಮಶಿವಯ್ಯ ನೀರಾವರಿ ಯೋಜನೆ ಜಾರಿಗೆ ಹೋರಾಟ ರೂಪಿಸಿ, 9 ಜಿಲ್ಲೆಗಳಿಗೆ 495 ಟಿಎಂಟಿ ನೀರು ಹರಿಯುವಂತೆ ಮಾಡುವುದು. ಶರಾವತಿ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಜತೆಗೆ ನೀರಾವರಿ ಯೋಜನೆಗೂ ಬಳಸಿಕೊಳ್ಳುವ ಹೊಸ ಯೋಜನೆಗೆ ಚಾಲನೆ.

ಬೆಂಗಳೂರು ಪೀಣ್ಯ ದಾಸರಹಳ್ಳಿ 8ನೇ ಮೈಲಿ ವರೆಗೆ ಬಂದಿರುವ ಮೆಟ್ರೋ ರೈಲನ್ನು ವಸಂತ ನರಸಾಪುರದ ವರೆಗೆ ತರುವ ಪ್ರಯತ್ನ ನಡೆಸಲಾಗುವುದು. ಕಮ್ಯೂಟರ್ ರೈಲು ಯೋಜನೆ ಚುರುಕುಗೊಳಿಸಲು ಹೋರಾಟ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.