ADVERTISEMENT

ಬದುಕು ರೂಪಿಸುವ ಕನಸು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 6:11 IST
Last Updated 8 ಏಪ್ರಿಲ್ 2014, 6:11 IST

ತುಮಕೂರು: ಲೋಕಸಭಾ ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿ ನೀಲುಫರ್‌ ಜಮಾನಿ. ಹುಟ್ಟಿ ಬೆಳೆದದ್ದು ಇಲ್ಲೇ ಆದರೂ ಜೀವನ ರೂಪಿಸಿಕೊಂಡಿದ್ದು ದುಬೈನಲ್ಲಿ. ಕೋಟ್ಯಂತರ ರೂಪಾಯಿ ವಹಿವಾಟಿರುವ ಕಟ್ಟಡ ನಿರ್ಮಾಣ ಕಂಪೆನಿ­ಯೊಂದರ ಒಡತಿ. ಈಗ ಬಿಎಸ್‌ಪಿ ಅಭ್ಯರ್ಥಿ. ಚುನಾವಣೆ ಗೆದ್ದರೂ, ಸೋತರೂ ಸಮಾಜಸೇವೆ ಮಾಡುವುದೇ ನನ್ನ ಮುಂದಿರುವ ಗುರಿ ಎಂಬುದು ಅವರ ಮಾತು.

*ದುಬೈನಲ್ಲಿದ್ದವರು, ನಿಮಗೆ ತುಮ­ಕೂರು ಜಿಲ್ಲೆ ಹೇಗೆ ಕಾಣಿಸುತ್ತದೆ?
ದುಬೈ ಜೀವನ ಶೈಲಿ ವಿಭಿನ್ನ. ದುಡಿಮೆಗೆ ಮೋಸ ಇಲ್ಲ. ಪ್ರತಿ ಹೆಣ್ಣು ಮಗುವಿಗೂ ಅಲ್ಲಿನ ಸರ್ಕಾರ ಮಾಸಿಕ ₨ 3 ಸಾವಿರ ಸಹಾಯಧನ, ಉಚಿತ ಶಿಕ್ಷಣ, ಉದ್ಯೋಗ ನೀಡುತ್ತದೆ. ಭ್ರಷ್ಟಾ­ಚಾರಕ್ಕೆ ಅವಕಾಶವಿಲ್ಲ.

ಆದರೆ ಭಾರತ­ದಲ್ಲಿ ಎಲ್ಲವೂ ತದ್ವಿರುದ್ಧ. ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿದೆ. ಸರ್ಕಾರದ ಯೋಜನೆಯ ಹಣ ರಾಜಕಾರಣಿಗಳ ಕುಟುಂಬ ಸೇರುತ್ತಿದೆ. ಸರ್ಕಾರದ ಹಲವಾರು ಯೋಜನೆ­ಗಳು ಅನುಷ್ಠಾನಗೊಂಡರೂ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ.

*ನಿಮಗೆ ಏಕೆ ಮತ ನೀಡಬೇಕು?
ನಾನು ಪ್ರಮಾಣಿಕಳು. ನನ್ನ ಆಸ್ತಿಯಲ್ಲಿ ಒಂದಷ್ಟು ಟ್ರಸ್ಟ್‌ಗೆ ಮೀಸ­ಲಿಟ್ಟು, ಸಮಾಜಸೇವೆ ಮಾಡು­ತ್ತಿದ್ದೇನೆ. ಮಹಿಳೆಯರಿಗೆ ಮೀಸ­ಲಾತಿ ಕೊಡಿಸಲು ಪ್ರಯತ್ನಿ­ಸು­ತ್ತೇನೆ. ಕ್ಷೇತ್ರದಲ್ಲೇ ಉಳಿದು, ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಹಾಗಾಗಿ ಮತ ಕೇಳುತ್ತೇನೆ.

*ಮಹಿಳೆ ಅಡುಗೆ ಮನೆಗಷ್ಟೇ ಸೀಮಿತ ಎಂಬ ಮಾತು?
ಮಹಿಳೆ ಏನು ಬೇಕಾದರೂ ಸಾಧಿಸ­ಬಹುದು. ದೇಶ ಆಳುತ್ತಿರುವುದು ಒಬ್ಬ ಮಹಿಳೆ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು.

*ಈ ಕ್ಷಣಕ್ಕೆ ಜಿಲ್ಲೆಯಲ್ಲಿ ಕಂಡ ಒಂದೆರಡು ಸಮಸ್ಯೆ ಹೇಳ್ತೀರಾ?
ತುಮಕೂರು ತಾಲ್ಲೂಕಿನ ಬೆಳ್ಳಾವಿ, ಕುಂಕುಮನಹಳ್ಳಿ, ಉಪ್ಪಾರಹಳ್ಳಿ, ಬಡೇಶೇಖ್‌ ಪಾಳ್ಯದಲ್ಲಿ ಜನರಿಗೆ ವಾಸ­ಯೋಗ್ಯ ಮನೆ ಇಲ್ಲ. ಬೀದಿ ದೀಪ ಇಲ್ಲ. ಸ್ವಚ್ಛತೆ ಬಗ್ಗೆ ಹೇಳಬೇಕಿಲ್ಲ.

ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಜಾಸ್ತಿಯಿದೆ. ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯ ಇಲ್ಲ.
ಹೋದ ಕಡೆಯಲ್ಲೆಲ್ಲ ಬರಿ ಸುಳ್ಳು ಭರವಸೆಗಳನ್ನು ಕೊಡುತ್ತೀರಾ ಅಂತ ನನ್ನ ಮೇಲೂ ಮಹಿಳೆಯರು ದಬಾಯಿಸು­ತ್ತಿದ್ದಾರೆ.

*ನಿಮಗೆ ಇಷ್ಟವಾದ ರಾಜಕಾರಣಿ?
ಇಂದಿರಾಗಾಂಧಿ ಹಾಗೂ ಮಾಯಾವತಿ ನೆಚ್ಚಿನ ರಾಜಕಾರಣಿಗಳು.

*ರಾಜ್ಯದಲ್ಲಿ, ಜಿಲ್ಲೆಯಲ್ಲಿ ಅಸ್ತಿತ್ವವೇ ಇಲ್ಲದ ಪಕ್ಷದಿಂದ ಸ್ಪರ್ಧಿಸುತ್ತಿದ್ದೀರಿ ಅನ್ನಿಸುತ್ತಿಲ್ಲವೆ?
ಮನಸ್ಸು ಮಾಡಿದ್ದರೆ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪಡೆಯ­ಬಹುದಾಗಿತ್ತು. ಕೊನೆ ಕ್ಷಣದಲ್ಲಿ ಬಿಎಸ್‌ಪಿ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರಿದೆ.

*ಸಮಾಜ ಸೇವೆಗೆ ರಾಜಕಾರಣ ಅನಿವಾರ್ಯವೇ?
ಅನಿವಾರ್ಯವಲ್ಲ. ನಮ್ಮ ಆಕ್ಟೀವ್‌ ಇಂಡಿಯಾ ಟ್ರಸ್ಟ್ ಮೂಲಕ ಸಮಾಜ­ಸೇವೆ ಮಾಡುತ್ತಿದ್ದೇನೆ. ಅಧಿಕಾರ ಸಿಕ್ಕರೆ ಹೆಚ್ಚು ಕ್ರಿಯಾಶೀಲವಾಗಿ ಜನಸೇವೆ ಮಾಡಬಹುದು ಎಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದೆ.

*ಯಾವ ವಿಷಯ ಮುಂದಿಟ್ಟು ಮತ ಕೇಳ್ತಿದ್ದೀರಿ?
ಜಿಲ್ಲೆಯ ಅಭಿವೃದ್ಧಿ, ನೀರಿನ ಸಮಸ್ಯೆ, ಸ್ತ್ರೀ ರಕ್ಷಣೆ, ಬಡವರ ಹಕ್ಕುಗಳ ರಕ್ಷಣೆ ಮಹಿಳೆಯರಿಗೆ ಉದ್ಯೋಗಾವಕಾಶ, ಭ್ರಷ್ಟಾಚಾರ ನಿರ್ಮೂಲನೆ.

*ನಿಮ್ಮ ಎದುರಾಳಿಗಳ ಬಗ್ಗೆ ಏನು ಹೇಳ್ತೀರಾ?
ಎಲ್ಲರಂತೆ ಟೀಕೆ ಮಾಡುವುದು ನನಗೆ ಇಷ್ಟವಿಲ್ಲ.

ನೀಲುಫರ್‌ ಜಮಾನಿ (41)

ಪಕ್ಷ              : ಬಿಎಸ್‌ಪಿ
ವಿದ್ಯಾರ್ಹತೆ    : ಬಿಬಿಎ(ಎಚ್‌ಆರ್)
ವಾಸ            :ಹೆಗ್ಗೆರೆ
ವೃತ್ತಿ            :ಉದ್ಯಮಿ, ಸಮಾಜಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT