ADVERTISEMENT

‘ಮೋದಿ ಅಲೆಯಲ್ಲಿ ತೂರಿಕೊಳ್ಳುತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 8:32 IST
Last Updated 8 ಏಪ್ರಿಲ್ 2014, 8:32 IST

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪರ್ವತಗೌಡ ಚಂದನಗೌಡ (ಪಿ.ಸಿ) ಗದ್ದಿಗೌಡರ ಪ್ರಸ್ತುತ ನಡೆಯುತ್ತಿರುವ ಚುನಾವಣೆ­ಯಲ್ಲಿ ‘ಹ್ಯಾಟ್ರಿಕ್‌’ ಜಯದ ಕನಸು ಕಾಣುತ್ತಿದ್ದಾರೆ.

ಎರಡು ಅವಧಿಗೆ ಸಂಸದರಾಗಿ ಕ್ಷೇತ್ರಕ್ಕೆ ಹೊಸದೇನನ್ನೂ ತಾರದೇ ಕೇವಲ ಸಂಸದರ ನಿಧಿ ಹಂಚಿಕೆಯೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಗೌಡರು, ಮೋದಿ ಅಲೆಯಲ್ಲಿ ತೂರಿಕೊಳ್ಳಲು ಯತ್ನಿಸುತ್ತಿದ್ದಾರೆ.

‘ಸ್ನೇಹಮಹಿ’ ಎಂದೇ ಗುರುತಿಸಿಕೊಂಡಿರುವ ಗದ್ದಿಗೌಡರಲ್ಲಿ ಗೌಡಿಕೆಯ ಗತ್ತು ಇಲ್ಲ. ಸರಳ ಸಜ್ಜನಿಕೆ ಮೂಲಕ ಕ್ಷೇತ್ರದ ಮನೆಮಾತಾಗಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಸಾಧನೆ ಮತ್ತು ಮುನ್ನೋಟ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಎರಡು ಅವಧಿಗೆ ಸಂಸದರಾಗಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?
ನನ್ನ ಶ್ರಮದಿಂದಾಗಿ ಬಾಗಲಕೋಟೆ–ಕುಡಚಿ ರೈಲು ಮಾರ್ಗದ ಕಾಮಗಾರಿ ಆರಂಭಗೊಂಡಿದೆ. ಆಲಮಟ್ಟಿ–ಕೊಪ್ಪಳ ನೂತನ ರೈಲು ಮಾರ್ಗ ಸರ್ವೇಗೂ ನಾನೇ ಕಾರಣ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಅನುದಾನ ತಂದಿದ್ದೇನೆ, ಸಂಸದರ ನಿಧಿಯನ್ನು ಸಂಪೂರ್ಣ ಬಳಕೆ ಮಾಡಿದ್ದೇನೆ. ಇಷ್ಟಾದರೂ ಕಣ್ಣು, ಕಿವಿ ಇಲ್ಲದ ವಿರೋಧಿಗಳು ಜಿಲ್ಲೆಗೆ ಗೌಡರ ಕೊಡುಗೆ ಏನೂ ಇಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ.

* ಮೋದಿ ಅಲೆಯಲ್ಲಿ ತೂರಿಕೊಳ್ಳಲು ಯತ್ನಿಸುತ್ತಿದ್ದೀರಾ?
ಕ್ಷೇತ್ರದಲ್ಲಿ ಮೋದಿ ಅಲೆ ಜತೆಗೆ ನನ್ನ ವರ್ಚಸ್ಸು ಕೆಲಸ ಮಾಡುತ್ತಿದೆ. ಕ್ಷೇತ್ರದಲ್ಲಿ ನನ್ನ ವಿರುದ್ಧ ಅಲೆ ಇಲ್ಲ, ಯಾರೂ ನನ್ನ ವಿರುದ್ಧ ಮಾತನಾಡುತ್ತಿಲ್ಲ, ಸದಾಭಿಪ್ರಾಯ ಇದೆ. ಹಾಗಾಗಿ ತೂರಿಕೊಳ್ಳುವ ಪ್ರಶ್ನೆ ಇಲ್ಲ. ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಅಷ್ಟು ಸೂಕ್ತವಲ್ಲ.

* ಪಕ್ಷದೊಳಗಿನ ಭಿನ್ನಮತ ಚುನಾವಣೆಯಲ್ಲಿ ಮಾರಕವಾಗಲಿದೆಯೇ?
ಪಕ್ಷದೊಳಗೆ ಪ್ರಸ್ತುತ ಯಾವುದೇ ಭಿನ್ನಾಭಿಪ್ರಾಯ, ಅಸಮಾದಾನ ಇಲ್ಲ. ಮಾಜಿ ಶಾಸಕರು, ಸಚಿವರು, ಮುಖಂಡರು ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅಲ್ಪಮಟ್ಟಿಗೆ ಪಕ್ಷದೊಳಗೆ ಭಿನ್ನಾಭಿಪ್ರಾಯವಿತ್ತು ನಿಜ. ಮುಖಂಡರ ನಡುವಿನ ತಪ್ಪಿನಿಂದ ಪಕ್ಷ ಜಿಲ್ಲೆಯಲ್ಲಿ ಸೋಲಬೇಕಾಯಿತು. ಇದೀಗ ತಪ್ಪು ತಿದ್ದಿಕೊಂಡು ಒಟ್ಟಾಗಿ ಸಾಗುತ್ತಿದ್ದೇವೆ.

ರಾಜ್ಯ ಮಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಮರಳಿ ಬಿಜೆಪಿಗೆ ಬಂದಿರುವುದರಿಂದ ಪಕ್ಷದ ಮತಗಳು ಕ್ರೋಡೀಕರಣವಾದಂತಾಗಿದೆ. ಪಕ್ಷಕ್ಕೆ ಶಕ್ತಿ ಬಂದಿದೆ.

* ಜಿಲ್ಲೆಯಲ್ಲಿ ಲಿಂಗಾಯತರು ‘ಕೈ’ ಹಿಡಿಯುವರೇ?
ಜಾತಿ ವಿಷಯದಲ್ಲಿ ನನಗೆ ನಂಬಿಕೆ ಇಲ್ಲ, ಎಲ್ಲ ಸಮಾ­ಜ­ದ­ವರೂ ನನ್ನೊಂದಿಗೆ ಇದ್ದಾರೆ. ಜನತೆ ನನಗೆ ನೀಡಿದ ಜವಾಬ್ದಾರಿಯನ್ನು ಜನಸೇವೆಗೆ ಬಳಸಿಕೊಂಡಿದ್ದೇನೆ. ಎಲ್ಲಿಯೂ ಜಾತಿ ಮಾಡಿಲ್ಲ, ನೋಡಿಲ್ಲ. ಜನಸೇವಕನಾಗಿ ಪ್ರಾಮಾ­ಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಜಿಲ್ಲೆಯ ಮತದಾರರು ‘ಕೈ’ ಹಿಡಿಯುವ ಬದಲು ‘ಕಮಲ’ ಹಿಡಿಯುತ್ತಾರೆ.

* ಜನತೆಗೆ ಯಾವ ಭರವಸೆ ನೀಡುತ್ತೀರಿ?
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ, ಮೋದಿ ಪ್ರಧಾನಿಯಾಗುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಹೊಸ ಯೋಜನೆ ತರುತ್ತೇನೆ. ಕುಡಚಿ–ಬಾಗಲಕೋಟೆ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತೇನೆ, ಮುಳುಗಡೆ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ಕೊಡಸಲು ಯತ್ನಿಸುತ್ತೇನೆ.

* ಜನತೆ ಬಿಜೆಪಿಯನ್ನು ಏಕೆ ಬೆಂಬಲಿಸಬೇಕು?
ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದ ದೇಶದ ಅಭಿವೃದ್ಧಿ ಪಥ ಕುಂಟಿತವಾಗಿದೆ. ಭ್ರಷ್ಟಾಚಾರ, ಹಗರಣದಿಂದ ದೇಶದ ವರ್ಚಸ್ಸಿಗೆ ಯುಪಿಎ ಕುಂದುಂ­ಟುಮಾಡಿದೆ. ಬೆಲೆ ಏರಿಕೆಯಿಂದ ಜನತೆ ಬೇಷತ್ತು ಹೋಗಿ­ದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮತ್ತು ಮೋದಿ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ದೇಶದ ಜನತೆ ಮೋದಿ­ಯನ್ನು ಪ್ರಧಾನಿ ಮಾಡಬೇಕೆಂದು ತೀರ್ಮಾನಿಸಿದ್ದಾರೆ.

* ಕ್ಷೇತ್ರದಲ್ಲಿ ನಿಮ್ಮ ಸಮೀಪದ ಪ್ರತಿಸ್ಪರ್ಧಿ ಯಾರು?
ಕಾಂಗ್ರೆಸ್‌ ಅಭ್ಯರ್ಥಿ ನನ್ನ ಸಮೀಪದ ಪ್ರತಿಸ್ಪರ್ಧಿ­ಯಾ­ಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಂಕರ ಬಿದರಿ ಸ್ಪರ್ಧೆಯಿಂದ ಕ್ಷೇತ್ರದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರು­ವುದಿಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.

* ಬಿಜೆಪಿ ಅಡ್ವಾಣಿಯವರನ್ನು ಕಡೆಗಣಿಸಲು ಕಾರಣ­ವೇನು?
ಅಡ್ವಾಣಿ ಅವರನ್ನು ಪಕ್ಷ ಎಲ್ಲಿಯೂ ಕಡೆಗಣಿಸಿಲ್ಲ. ಪಕ್ಷದ ಕೇಂದ್ರ ಸಮಿತಿಯ ತೀರ್ಮಾನದ ಮೇರೆಗೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಲಾಗಿದೆ. ಇದಕ್ಕೆ ನಾನು ಬದ್ಧನಾಗಿದ್ದೇನೆ. ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.