ADVERTISEMENT

ಫಟಾಫಟ್| ಹೊರಾಂಗಣದಲ್ಲಿ ಅಭ್ಯಾಸ ಒಳಾಂಗಣದಲ್ಲಿ ಜಯಭೇರಿ

ಗಿರೀಶದೊಡ್ಡಮನಿ
Published 28 ಫೆಬ್ರುವರಿ 2020, 20:07 IST
Last Updated 28 ಫೆಬ್ರುವರಿ 2020, 20:07 IST
ವಿನಾಯಕ ರೋಖಡೆ
ವಿನಾಯಕ ರೋಖಡೆ   

ಕರ್ನಾಟಕ ವಾಲಿಬಾಲ್ ತಂಡದ ನಾಯಕವಿನಾಯಕ ರೋಖಡೆ ಸಂದರ್ಶನ

ಫೆಡರೇಷನ್ ಕಪ್ ಗೆಲುವಿನ ಹಿಂದಿನ ಸಿದ್ಧತೆ ಹೇಗಿತ್ತು?

ರಾಜಸ್ಥಾನದ ಚಿತ್ತೋರ್‌ಗಡದಲ್ಲಿ ಟೂರ್ನಿ ನಡೆಯಿತು. ಇದು ಎರಡನೇ ಸಲ ನಾವು ಚಾಂಪಿಯನ್ ಆಗಿದ್ದೇವೆ. 2015ರಲ್ಲಿ ಮೊದಲ ಬಾರಿ ನಮ್ಮ ರಾಜ್ಯ ತಂಡ ಜಯಿಸಿತ್ತು. ಈ ಸಲ ನಮ್ಮ ತಂಡದಲ್ಲಿ ಹೊಸ ಆಟಗಾರರ ಜೊತೆಗೆ ಅನುಭವಿಗಳೂ ಇದ್ದರು. ಉದಯೋನ್ಮುಖರಾದ ಸಂಪ್ರೀತ್, ಸುನಿಲ್ ಮತ್ತು ಅನೂಷ್ ಚೆನ್ನಾಗಿ ಆಡಿದರು. ಅನುಭವಿಗಳಾದ ಕಾರ್ತಿಕ್, ರವಿ, ರೈಸನ್, ಹರಿಪ್ರಸಾದ್, ನಯನ್, ಗಣೇಶ್ ಮತ್ತು ನಕುಲ್ ಅವರ ಆಟವೂ ಉಪಯುಕ್ತವಾಗಿತ್ತು. ಫೈನಲ್‌ನಲ್ಲಿ ತಮಿಳುನಾಡು ತಂಡದ ವಿರುದ್ಧ ನಮ್ಮೆಲ್ಲರ ಸಂಘಟಿತ ಹೋರಾಟಕ್ಕೆ ಜಯ ಸಂದಿತು.

ADVERTISEMENT

ರಾಜ್ಯದಲ್ಲಿ ವಾಲಿಬಾಲ್ ಕ್ರೀಡೆಗೆ ಅಗತ್ಯವಾದ ಸೌಲಭ್ಯಗಳು ತೃಪ್ತಿಕರವಾಗಿವೆಯೇ?

ಪರವಾಗಿಲ್ಲ. ಲಭ್ಯವಿರುವ ಸೌಲಭ್ಯಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ. ಕಳೆದ ಐದು ವರ್ಷಗಳಲ್ಲಿ ನಾಲ್ಕು ಪದಕ ಗೆದ್ದಿದ್ದೇವೆ. ಕಂಠೀರವ ಕ್ರೀಡಾಂಗಣದ ಹೊರಾಂಗಣದಲ್ಲಿ ಅಭ್ಯಾಸ ಮಾಡುತ್ತೇವೆ. ಯಾವುದೇ ಟೂರ್ನಿಗೆ ಹೋದರೂ ಒಳಾಂಗಣದಲ್ಲಿ ಆಡಬೇಕು. ಹೋದ ವರ್ಷ ಸೀನಿಯರ್ ರಾಷ್ಟ್ರೀಯ ಟೂರ್ನಿಗೆ ಹೋದಾಗ ಒಂದು ದಿನ ಮಾತ್ರ ಒಳಾಂಗಣ ಅಭ್ಯಾಸ ಮಾಡಿದ್ದೆವು. ಆದರೆ, ಆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದೆವು. ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮಾತ್ರ ಒಳಾಂಗಣ ತರಬೇತಿ ವ್ಯವಸ್ಥೆ ಇದೆ.

ಕರ್ನಾಟಕದಲ್ಲಿ ವಾಲಿಬಾಲ್ ಕ್ರೀಡೆಯ ಸ್ಥಿತಿ–ಗತಿ ಹೇಗಿದೆ?

ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಇರುವ ಪ್ರತಿಭಾವಂತ ಆಟಗಾರರನ್ನು ಪ್ರತಿಭಾಶೋಧದ ಮೂಲಕ ಬೆಂಗಳೂರಿಗೆ ಕರೆತರುವ ಕಾರ್ಯ ಚುರುಕಾಗಬೇಕಾಗಿದೆ. ಬೆಳಗಾವಿ ಜಿಲ್ಲೆಯವನಾದ ನಾನು, ಇಂದು ರಾಜ್ಯ ತಂಡದ ನಾಯಕನಾಗಿದ್ದೇನೆ. ಅಂಚೆ ಇಲಾಖೆಯಲ್ಲಿ ಉದ್ಯೋಗಿಯೂ ಆಗಿದ್ದೇನೆ.

ಯಾವ ಟೂರ್ನಿಗಾಗಿ ಸಿದ್ಧತೆ ನಡೆಸಿದ್ದೀರಿ?

ನವೆಂಬರ್‌ನಲ್ಲಿ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ. ಅದಕ್ಕಾಗಿ ಅಭ್ಯಾಸ ಮಾಡುತ್ತಿದ್ದೇವೆ. ಅಲ್ಲಿಯೂ ಪದಕ ಜಯಿಸುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.