ADVERTISEMENT

ನುಡಿ ಬೆಳಗು ‌| ಜೀವನ ಪಾಠಶಾಲೆ

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 2 ಮೇ 2025, 0:21 IST
Last Updated 2 ಮೇ 2025, 0:21 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಜೀವನ ಒಂದು ಪಾಠಶಾಲೆ. ಅದು ಕಲಿಸುತ್ತದೆ. ಜೀವನದಲ್ಲಿ ಸೋಲು ಬರುತ್ತದೆ. ಬಡತನ ಬರುತ್ತದೆ. ನೋವುಗಳು ಬರುತ್ತವೆ. ನಿರಾಸೆ ಬರುತ್ತದೆ. ನಿಂದೆಗಳು, ವೈರಿಗಳ ಚುಚ್ಚುಮಾತುಗಳೂ ಬರುತ್ತವೆ. ಇದೆಲ್ಲವನ್ನೂ ಮೀರಿ ಬದುಕುವುದನ್ನು ಪುಸ್ತಕ ಓದಿ ಕಲಿಯಲು ಸಾಧ್ಯವಿಲ್ಲ. ಜಗತ್ತು ನೋಡಿ ಕಲಿಯಬೇಕಾಗುತ್ತದೆ. ನಾವು ಆಗಾಗ ‘ನಮ್ಮ ಕಷ್ಟದ ಕಾಲಕ್ಕೆ ಯಾರೂ ಆಗಲಿಲ್ಲ. ನಾವು ಎಷ್ಟು ಮಂದಿಗೆ ಸಹಾಯ ಮಾಡಿದ್ದೆವು’ ಎಂದು ಬಹಳ ತಾಪ ಮಾಡಿಕೊಳ್ಳುತ್ತೇವೆ. ‘ನಮಗೆ ಇದ್ದಾಗ ಎಲ್ಲರೂ ಬಂದರು. ಕಷ್ಟದ ಕಾಲಕ್ಕೆ ಯಾರೂ ಬರಲಿಲ್ಲ’ ಎಂದು ಬೇಸರ ಮಾಡಿಕೊಳ್ಳುತ್ತೇವೆ. ಆದರೆ, ‘ನಾನು ಸಂತೋಷವಾಗಿದ್ದಾಗ ನನ್ನ ಹತ್ತೂ ಬೆರಳುಗಳು ಒಟ್ಟು ಸೇರಿ ಚಪ್ಪಾಳೆ ಹೊಡೆಯುತ್ತವೆ. ನಾನು ದುಃಖದಲ್ಲಿದ್ದಾಗ ಕಣ್ಣೀರು ಒರೆಸಲು ಒಂದೇ ಬೆರಳು ಬರುತ್ತದೆ ಎಂದ ಮೇಲೆ ನನ್ನ ಕಷ್ಟಗಳನ್ನು ಬಗೆಹರಿಸಲು ಮಂದಿ ಯಾಕೆ ಬರುತ್ತಾರೆ’ ಎಂಬ ಸತ್ಯ ನಮಗೆ ಅರ್ಥವಾಗಬೇಕು. ಮಂದಿಯನ್ನು ನಿರೀಕ್ಷೆ ಮಾಡಬಾರದು.

ಬಡತನ ಬಂದರೆ ಬಡತನವನ್ನು ಕಲಿಯುವುದು. ತುಂಬಿದ ಜೇಬು ನೂರು ಆಟ ಕಲಿಸಿದರೆ ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ವೈರಿಗಳು ಇರುತ್ತಾರೆ. ನಮ್ಮ ಮಗ್ಗುಲಲ್ಲೇ ಇರುತ್ತಾರೆ. ನಮಗೆ ನೂರು ಮಂದಿ
ವೈರಿಗಳು ಇದ್ದಾರೆ ಎಂದು ಅವರ ತಲೆ ತೆಗೆಯಲು ಆಗುತ್ತದೇನು? ಅದಕ್ಕೆ ನಾವೇನು ಮಾಡಬೇಕು ಎಂದರೆ ನಮ್ಮ  ತಲೆಯಿಂದ ವೈರಿಗಳನ್ನು ತೆಗೆದುಬಿಡಬೇಕು. ಆಗ ಜೀವನ ಸಾರ್ಥಕ ಆಗುತ್ತದೆ. ಬಹಳ ಮಂದಿ,  ‘ನಮಗ ನಿಂದೆ ಮಾಡುತ್ತಾರೆ’ ಎನ್ನುತ್ತೀರಿ. ಊರ ಮುಂದಿನ ಬಾವಿ ಮುಚ್ಚಬಹುದು. ಊರ ಮಂದಿಯ ಬಾಯಿ ಮುಚ್ಚಲು ಸಾಧ್ಯವಿಲ್ಲ. ನಮ್ಮ ಇಚ್ಛೆಯಂತೆ ಜಗತ್ತು ನಡೆಯುವುದಿಲ್ಲ. ಜಗದ ಇಚ್ಛೆಗೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು ಮನುಷ್ಯ. ಇರುವುದನ್ನು ಇರುವಂತೆಯೇ ಸ್ವೀಕರಿಸುವುದಕ್ಕೆ ಬುದ್ಧ ಎಂದು ಕರೆಯುತ್ತಾರೆ. ವಯಸ್ಸಾತು ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮುಪ್ಪು ಬಂದ ಮೇಲೆ ಗಪ್ಪು ಇರಬೇಕು ಎನ್ನುವುದನ್ನು ಕಲಿಯಬೇಕು. ನಾನು ಇರುವುದು ವರ್ತಮಾನದಲ್ಲಿ. ನನ್ನ ಬಯಕೆಗಳು ಇರುವುದು ಭವಿಷ್ಯದಲ್ಲಿ. ಅಂದರೆ ವರ್ತಮಾಕ್ಕೂ ಭವಿಷ್ಯಕ್ಕೂ ಬಹಳ ಅಂತರ ಇದೆ. ವರ್ತಮಾನದಲ್ಲಿ ಸಂತೋಷ ಪಡೋದನ್ನು ಕಲಿಯಬೇಕು.

ADVERTISEMENT

ಒಬ್ಬ ಗುರು ಇದ್ದರು. ಅವರಿಗೆ ಮೂವರು ಶಿಷ್ಯರಿದ್ದರು. ಒಂದು ದಿನ ಮೂವರಿಗೂ ಊಟಕ್ಕೆ ಹಾಕಿದರು. ಒಬ್ಬನಿಗೆ ಬಂಗಾರದ ತಟ್ಟೆ, ಇನ್ನೊಬ್ಬನಿಗೆ ಬೆಳ್ಳಿತಟ್ಟೆ ಮತ್ತು ಮತ್ತೊಬ್ಬನಿಗೆ ಮಣ್ಣಿನ ತಟ್ಟೆಯಲ್ಲಿ ರೊಟ್ಟಿ ಹಾಕಿದರು. ಊಟವಾದ ಮೇಲೆ ಮಣ್ಣಿನ ತಟ್ಟೆಯಲ್ಲಿ ಊಟ ಮಾಡಿದವನು ಗುರುಗಳಿಗೆ, ‘ನೀವು ನಮಗೆ ತಾರತಮ್ಯ ಮಾಡಿದಿರಿ. ಒಬ್ಬನಿಗೆ ಬಂಗಾರ, ಒಬ್ಬನಿಗೆ ಬೆಳ್ಳಿ ತಟ್ಟೆ, ನನಗೆ ಮಣ್ಣಿನ ತಟ್ಟೆಯಲ್ಲಿ ಊಟ ಹಾಕಿದಿರಿ. ಇದು ಸರಿಯಲ್ಲ’ ಎಂದ. ಅದಕ್ಕೆ ಗುರುಗಳು, ‘ನೀನು ತಟ್ಟೆಯನ್ನು ಯಾಕೆ ನೋಡಿದೆ. ತಟ್ಟೆಯೊಳಗೆ ಇರುವ ರೊಟ್ಟಿ ಎಲ್ಲರಿಗೂ ಒಂದೇ ಇತ್ತಲ್ಲ’ ಎಂದು ಉತ್ತರಿಸಿದರು. ನಾವು ಹಾಗೆಯೇ ಒಬ್ಬ ಶ್ರೀಮಂತ ಇರಬಹುದು, ಒಬ್ಬ ಬಡವ ಇರಬಹುದು. ಆದರೆ ನಮಗೆ ಸಿಕ್ಕ ಬದುಕು ಒಂದೇ ಎನ್ನುವುದನ್ನು ತಿಳಿದು ಬದುಕಬೇಕು. ಹೀಗೆ ಸುಂದರವಾಗಿ ಬದುಕಿ ಹೋಗುವುದೇ ಸರಿಯಾದ ಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.