ADVERTISEMENT

ನುಡಿ ಬೆಳಗು: ಸಂಯಮದ ಸಣ್ಣ ಒರತೆ

ವಾಸುದೇವ ನಾಡಿಗ್
Published 26 ಜೂನ್ 2025, 0:45 IST
Last Updated 26 ಜೂನ್ 2025, 0:45 IST
   

ಹಾಲು ಉಕ್ಕಿ ಮೇಲೆ ಹರಿದು ಗ್ಯಾಸ್ ಕಟ್ಟೆ ಎಲ್ಲ ರಂಪವಾದಾಗ ಶುರುವಾದ ತಕರಾರು ಅದು. ಬುಟ್ಟಿ ತುಂಬಾ ತೊಳೆದಿಟ್ಟ ರಾಶಿ ಪಾತ್ರೆಯ ಅಡಿ ಕಾಣದ ಹಾಗೆ ಕೂತಿದ್ದ ಇಕ್ಕಳ ಸಿಗದಿದ್ದುದರಿಂದ ಇಷ್ಟೆಲ್ಲ ರಂಪ ರಾಮಾಯಣ. ಇಕ್ಕಳ ಬೇಗ ಸಿಗದೆ ಬುಳಬುಳ ಹಾಲು ಸುರಿದಾಗ ಆದ ಮನಸ್ತಾಪ. ನಿಜ, ಕೈಗೆ ಸಿಗಬೇಕಾದ ಅಗತ್ಯ ವಸ್ತು ಸಿಗದೇ ಇವೆಲ್ಲ ರಂಪ. ಯಾರು ಹುಡುಕಿಕೊಡಬೇಕು ಎಂಬ ಅಹಂ ತಕರಾರು ಕೂಡ. ಇಬ್ಬರ ಮಧ್ಯೆ ಇಂಥವು ಅನೇಕ. ಕಾಫಿ ಲೋಟಗಳು ಕೈಗೆ ಸಿಗದೆ ಪಾತ್ರೆಗಳ ರಾಶಿ ನಡುವೆ ಒಂದು ಚಮಚ ಒಂದು ಡಬ್ಬಿ ಮುಚ್ಚಳ, ಫಿಲ್ಟರ್‌ನ ಜಾಲರಿ ಸಿಗದೆ ಹೀಗೆ... ಗೊಣಗುತ್ತಲೇ ಇಬ್ಬರೂ ಸಾಫ್ಟ್‌ವೇರ್ ಸಮಸ್ಯೆಗಳನ್ನು ಬಗೆಹರಿಸಲು ಹೊರಡುತ್ತಾರೆ. ಮುಖ ಸಿಂಡರಿಸಿಕೊಂಡೇ ಶುರುವಾಗುವ ದಿನಚರಿ ಪ್ರಯಾಣ ಮತ್ತು ಸಂಜೆ ಮನೆ ತಲುಪಿದಾಗ ಒಗ್ಗರಣೆಗೆ ಯಾರು ಸಾಸಿವೆ,  ಜೀರಿಗೆ ಹಾಕಬೇಕು ಎನ್ನುವ ತನಕ ವಟಗುಟ್ಟೋದೇ.

ಸಣ್ಣ ಹೊಂದಾಣಿಕೆ ಮತ್ತು ಅನಗತ್ಯ ಅಹಂಗಳೇ ಬಾಳನ್ನು ಆಳುತ್ತಿರುವಾಗ ಯಾವ ಮನೆಯ ಕಾಫಿ, ಒಗ್ಗರಣೆ ಮತ್ತು ನಿದ್ದೆ ಸುಂದರಗೊಳ್ಳಬಹುದು? ಲೋಟ, ಪಾತ್ರೆ, ಇಕ್ಕಳ, ಟವೆಲ್, ಸೋಪು, ಖಾಲಿಯಾದ ಟೂತ್ ಪೇಸ್ಟ್‌ನಿಂದ ಶುರುವಾಗುವ ದಿನಚರಿ ಬಯಸುವುದು ಒಂದು ಸಣ್ಣ ಸಂಯಮ ಮತ್ತು ಹೊಂದಾಣಿಕೆ. ಇದರ ತಳ್ಳಾಟದಲ್ಲಿ ದುಬಾರಿ ಆಗುವ ನೆಮ್ಮದಿ. 

ಇಬ್ಬರಿಗೂ ಈ ದಿನ ಕಾರು ಓಡಿಸುವುದಕ್ಕೆ ಮನಸಿರದ ಕಾರಣ ಸ್ವಲ್ಪ ಬೇಗನೆ ಮೆಟ್ರೊ ಹತ್ತಿದರು. ಮೆಟ್ರೊದ ಮೊದಲ ನಿಲ್ದಾಣದಿಂದಲೇ ಪ್ರಯಾಣ ಶುರುವಾದ್ದರಿಂದ ಸೀಟಿನ ಸಮಸ್ಯೆ ಇಲ್ಲ. ಸ್ವಲ್ಪ ದೂರ ಹೋದ ಹಾಗೆ ಕಾಲಿಡಲೂ ಜಾಗವಿರಲ್ಲ. ಹತ್ತುವ ಇಳಿಯುವ ಬಗೆ ಬಗೆ ಮಂದಿ. ಆಗ ತಾನೇ ಅಲ್ಲಿ ಮೆಟ್ರೊ ಹತ್ತಿದ ಆ ವೃದ್ಧ ಜೀವ ಆಸ್ಪತ್ರೆಯಿಂದ ಡಿಸ್‌ಚಾರ್ಟ್‌ ಅದ ಹಾಗೆ ಕಾಣುತ್ತದೆ. ಕೈಯಲ್ಲಿ ಇನ್ನೂ ತೆಗೆಯದ ಕ್ಯಾನುಲ್ಲಾದಲ್ಲಿ ರಕ್ತದ ಜಿನುಗು. ಜೊತೆಗೆ, ಇಷ್ಟಗಲ ಕವರ್ ಜೊತೆಗೆ ಮೆಡಿಸಿನ್, ರಿಪೋರ್ಟ್‌ಗಳನ್ನು ಹಿಡಿದ ವೃದ್ಧೆ. ಆದರೂ ಇಬ್ಬರ ಮುಖದಲ್ಲೂ ಮಾಸದ ಮಂದಹಾಸ. ಕಾರನ್ನು ಯಾರು ಓಡಿಸಬೇಕು ಎಂಬ ತಗಾದೆಯಲ್ಲಿ ಮೆಟ್ರೊ ಹತ್ತಿದ್ದ ಇವರಿಬ್ಬರು, ಆ ವೃದ್ಧ ದಂಪತಿಗಳಿಗೆ ಕೂಡಲು ಎದ್ದು ಜಾಗ ಬಿಟ್ಟುಕೊಟ್ಟರು.

ADVERTISEMENT

ಬದುಕು ಯಾವುದೇ ರೂಪದಲ್ಲಿ ಧುತ್ತನೆ ಬಂದು ಪ್ರೀತಿ ಅನ್ಯೋನ್ಯತೆಯನ್ನು ಬಿತ್ತಬಲ್ಲದು. ನಾವು ಸ್ವೀಕರಿಸಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.