
ನುಡಿ ಬೆಳಗು...
ತನುವರಿಯದ ನೋವಿಲ್ಲ, ಮನವರಿಯದ ಪಾಪವಿಲ್ಲ ಎಂಬ ಮಾತಿದೆ. ಮನುಷ್ಯನ ದೇಹವನ್ನು ಮೂಳೆ ಮಾಂಸದ ತಡಿಕೆ ಎಂದು ಕರೆಯಲಾಗಿದೆ. ಜೀವವನ್ನು ಹೊತ್ತು ನಡೆಯುವ ಈ ದೇಹವನ್ನು ನಾನಾ ಬಗೆಯಲ್ಲಿ ದಂಡಿಸುವವರಿದ್ದಾರೆ. ಯೋಗದಿಂದ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು ಎಂದು ಹೇಳುತ್ತಾರೆ. ಯೋಗದ ಎಂಟು ಅವಯವಗಳಲ್ಲಿ ಮೊದಲ ಎರಡರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಮೂರನೆಯದಾದ ಆಸನದ ಬಗ್ಗೆಯೇ ಹೆಚ್ಚು ಆಸಕ್ತಿ, ಪ್ರಚಾರ ಕಂಡು ಬರುತ್ತಿದೆ. ಜಾಗತಿಕವಾಗಿ ಯೋಗ ದಿನಾಚರಣೆ ಶುರುವಾದ ಮೇಲಂತೂ ಅದು ರಾಜಕೀಯ ಹಿತಾಸಕ್ತಿ ರಕ್ಷಣೆಯ ಸಾಧನವಾಗಿಯೂ ಬಳಕೆಯಾಗುತ್ತಿದೆ. ಸಿಕ್ಸ್ ಪ್ಯಾಕ್, ಎಯ್ಟ್ ಪ್ಯಾಕ್ ಎಂದು ಜಿಮ್‌ನಲ್ಲಿ ಬೆವರು ಸುರಿಸುವವರಿಂದ ಹಿಡಿದು ವಿವಿಧ ಭಂಗಿಗಳಲ್ಲಿ ಆಸನ ಮಾಡುವವರಿಗೆ ದೇಹದ ನಾದ ಮತ್ತು ಲಯಗಳು ಅರ್ಥವಾಗಿರಬಹುದೇ? ಕಷ್ಟ ನಿಜ.
ಒಂದು ನಿರ್ದಿಷ್ಟ ಹಂತದವರೆಗೆ ದೇಹವು ಮನುಷ್ಯ ಹೇಳಿದಂತೆ ಕೇಳಬಹುದೇನೋ! ಆದರೆ ಆ ಹಂತ ದಾಟಿತೆಂದರೆ ದೇಹ ಹೇಳಿದಂತೆ ಮನುಷ್ಯ ಕೇಳಲೇ ಬೇಕು. ಕಾಲ ಕಳೆದ ಹಾಗೆ ದೇಹದ ಬೇರೆ ಬೇರೆ ಅಂಗಗಳು ಮಾತಾಡಲಾರಂಭಿಸುತ್ತವೆ. ಅವುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು. ನಲವತ್ತರ ನಂತರ ಓಡೋಡಿ ಹೋಗಿ ಬಸ್ ಹತ್ತಲಾಗುವುದಿಲ್ಲ. ನಿಂತು ಪ್ರಯಾಣಿಸಲು ದೇಹ ಸಹಕರಿಸುವುದಿಲ್ಲ. ಮುಂದಿನ ಬಸ್ಸಿಗೆ ಹೋದರಾಯಿತು ಅನಿಸುತ್ತದೆ. ಮಹಡಿ ಮೆಟ್ಟಿಲನು ಹತ್ತುವಾಗ ಯಾಕೋ ಏನೋ ಎಂದಿಲ್ಲದ ಸುಸ್ತು. ಇದು ದೇಹ ಲಯವರಿತು ನಡೆಯುವ ವಿಧಾನ. ಬರುಬರುತ್ತಾ ಅಂಗಾಲು ಉರಿಯುತ್ತವೆ. ಮಂಡಿಗಳು ಸಡಿಲವಾದ ಅನುಭವ. ಸ್ವಲ್ಪ ಹೆಚ್ಚು ಕಡಿಮೆ ತಿಂದರೂ ಹೊಟ್ಟೆಯಲ್ಲಿ ಅಸಹಕಾರ ಶುರು. ಎದೆಯಲ್ಲಿ ಎಂಥದೋ ನೋವು. ನೀರಿನಲ್ಲಿ ಚೂರು ವ್ಯತ್ಯಾಸವಾದರೆ ಗಂಟಲು ಕೈಕೊಟ್ಟು ಮೂಗು ಮುನಿಸಿಕೊಳ್ಳುತ್ತದೆ. ಕಣ್ಣುಗಳಲ್ಲಿ ಸುಮ್ಮನೇ ನೀರು ತುಂಬಿಕೊಂಡು ದೃಷ್ಟಿ ಮಂದವಾಗುತ್ತದೆ. ಊಟ ಮಾಡಿದ್ದೂ ಮರೆತು ಹೋಗುತ್ತದೆ. ಹೀಗೆ ಪ್ರತಿ ಅಂಗವೂ ಏನನ್ನೋ ಕೇಳುತ್ತದೆ, ಆಲಿಸಬೇಕು. ಮತ್ತೇನನ್ನೋ ಸೂಚಿಸುತ್ತದೆ, ಅದನ್ನು ಪೂರೈಸಬೇಕು. ದೇಹದ ನಾದ ಲಯಗಳನ್ನು ಅರಿತುಕೊಳ್ಳುವ ಹೊತ್ತು ಇದೇ. ಉಪೇಕ್ಷಿಸಿದರೆ ಆಗುವ ಅನಾಹುತ ದೊಡ್ಡದು. ಮನುಷ್ಯನ ದೇಹ ಸ್ಟ್ರಾಂಗ್ ಅಲ್ಲವೇ ಅಲ್ಲ. ಅದನ್ನು ಇಲ್ಲವಾಗಿಸಲು ಹುಲಿಸಿಂಹಗಳೇ ಎರಗಬೇಕೆಂದಿಲ್ಲ. ಒಂದು ಸೊಳ್ಳೆ ಸಾಕು. ಬರಿಗಣ್ಣಿಗೆ ಕಾಣದ ಕೊರೊನಾ ವೈರಸ್ ಸಾವಿರಾರು ಜೀವಗಳನ್ನು ಬಲಿ ಪಡೆದದ್ದು ಗೊತ್ತೇ ಇದೆ.
ದೇಹವನ್ನು ದಂಡಿಸಿಕೊಂಡು ವಜ್ರಕಾಯನಾದ ಗೋರಕ್ಷನಿಗೆ ಅಲ್ಲಮನ ಸವಾಲು ದಿಗಿಲು ಹುಟ್ಟಿಸುತ್ತದೆ. ತನ್ನ ದೇಹಕ್ಕೆ ಹರಿತವಾದ ಕತ್ತಿ ಬೀಸಿದರೆ ಉಕ್ಕಿನಂತೆ ಸದ್ದಾಗಿ ಪುಟಿದು ಬರುತ್ತದೆ. ಅದೇ ಅಲ್ಲಮನ ದೇಹಕ್ಕೆ ಕತ್ತಿ ತಾಗುವುದೇ ಇಲ್ಲ. ಗಾಳಿಯಲ್ಲಿ ಬೀಸಿದಂತಾಗುತ್ತದೆ. ಯೋಗದ ಅಲ್ಪ ಸಾಧನೆಗಿಂತ ಆತ್ಮದ ಅಹಂಕಾರವನ್ನು ಜಯಿಸುವುದು ಮುಖ್ಯ ಎಂದು ಗೋರಕ್ಷನಿಗೆ ಅರಿವಾಗುತ್ತದೆ. ಯೋಗದ ಆಸನಗಳನ್ನು ಸಾಧನೆ ಎಂದುಡವರು ಮೊದಲೆರಡು ಅಂಗಗಳನ್ನು ಪ್ರಜ್ಞಾಪೂರ್ವಕವಾಗಿ ಉಪೇಕ್ಷಿಸುತ್ತಾರೆಯೇ? ಹೌದೆನ್ನುತ್ತದೆ ಮನಃಶಾಸ್ತ್ರ. ಯಾಕೆಂದರೆ ಯೋಗದ ಮೊದಲೆರಡು ಅಂಗಗಳಾದ ಯಮ, ನಿಯಮಗಳನ್ನು ಸಾಧಿಸುವುದು ಕಷ್ಟಸಾಧ್ಯ. ಕೊಲ್ಲದ, ಕದಿಯದ, ಹುಸಿಯಾಡದ, ಪರವಧು, ಪರಧನವನ್ನು ಬಯಸದ, ಸರ್ವೇಂದ್ರಿಯ ನಿಗ್ರಹ ಸಾಮರ್ಥ್ಯವೇ ಯಮ. ತನ್ನನ್ನು ತಾನರಿಯುತ್ತಾ ಆತ್ಮವನ್ನು ಶುದ್ಧೀಕರಿಸಿಕೊಳ್ಳುವುದು ನಿಯಮ. ಇದು ಕಷ್ಟವೆಂದೇ ಆಸನ ಭಂಗಿಗಳನ್ನು ಸಾಧನೆಗಳೆಂದು ಭ್ರಮಿಸಲಾಗಿದೆ. ನಾಲ್ಕನೆಯ ಅಂಗವಾದ ಪ್ರಾಣಾಯಾಮವನ್ನು ಕೂಡ ಸರಳೀಕರಿಸಲಾಗಿದೆ. ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳು ಬಹುಪಾಲು ನಿರ್ಲಕ್ಷ್ಯಕ್ಕೊಳಗಾಗಿವೆ. ಕೆಲವರಿಗಂತೂ ಯೋಗಾಸನವು ಸಾಂಸಾರಿಕ ಹೊಣೆಗಾರಿಕೆಗಳನ್ನು ಮರೆಸುವುದಕ್ಕೆ ಅಗತ್ಯವಾದ ಭೂಮಿಕೆಯಾಗಿದೆ. ಆದ ಕಾರಣ ಯೋಗವು ಯಮನಿಯಮಗಳ ಮೂಲಕವೇ ಲೋಕೋಪಯೋಗಿಯಾಗುವ ಎತ್ತರದ ನೈತಿಕತೆಯ ದ್ಯೋತಕವಾಗಿ ಪ್ರಚುರಗೊಳ್ಳಬೇಕು. ಯಮನಿಯಮಗಳೇ ಯೋಗದ ಸಮಾಜನಿಷ್ಠೆಯ ತಾತ್ವಿಕ ಕ್ರಿಯಾಕೇಂದ್ರವಾಗಬೇಕು.
–––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.