ADVERTISEMENT

ನುಡಿ ಬೆಳಗು: ಕಡಲ ದಂಡೆಯ ಬಾಳು..

ಎನ್ ವಾಸುದೇವ್
Published 25 ನವೆಂಬರ್ 2025, 18:37 IST
Last Updated 25 ನವೆಂಬರ್ 2025, 18:37 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದೈನಂದಿನ ಅನೇಕ ಚಿತ್ರಗಳು ಮತ್ತು ಪ್ರಕ್ರಿಯೆಗಳು ಅದೆಷ್ಟೋ ಅನುಭವಗಳಿಗೆ ದೃಷ್ಟಾಂತವಾಗಬಲ್ಲವು. ಕಾಣುವ ಕಣ್ಣು ಮತ್ತು ಅದರ ಮೂಲಕ ಮಿದುಳನ್ನು ಪ್ರವೇಶಿಸಿ ಹೃದಯಕ್ಕೆ ಸಂದೇಶ ಕೊಡಬೇಕಷ್ಟೆ. ಈ ಸಂದೇಶಗಳೇ ವಿಚಾರಗಳಾಗಿ ನಮ್ಮ ಬದುಕನ್ನು ರೂಪಿಸುತ್ತವೆ. ಅನೇಕ ಸಂತರು ಶರಣರು ಕವಿ ಮುನಿಗಳು ಎಂತಹ ಉದಾಹರಣೆಗಳ ಮೂಲಕವೇ ಅನುಭವವೊಂದನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ. ಅದರಲ್ಲೂ ಕಡಲನ್ನು ಉದಾಹರಿಸುವ ಮಾತುಗಳಂತೂ ಅಗಾಧವಾಗಿವೆ. ಬಾಳಿನ ವೈಶಾಲ್ಯ ಮತ್ತು ನಶ್ವರತೆ ಎರಡಕ್ಕೂ ಹತ್ತು ಹಲವು ಉದಾಹರಣೆಗಳನ್ನು ನೀಡಬಲ್ಲ ಕಡಲು ಹೀಗೂ ಅಗಾಧವೇ.

ಒಬ್ಬ ಮಹಿಳೆ ದಂಡೆಯಲ್ಲಿ ಕುಳಿತಿರುವಾಗಲೇ ಅವಳ ಪತಿ ಈಜಾಡಲು ಕಡಲಿಗೆ ಇಳಿದು ಒಂದು ಅಚಾನಕ ಅಬ್ಬರಕ್ಕೆ ಬಲಿಯಾಗಿ ಮೇಲೆ ಬಾರದೇ ಹೋಗಿಬಿಡುತ್ತಾನೆ. ರೋದಿಸುತ್ತ ಅವಳು ಕಡಲನ್ನು ದೂರಿ ‘ಕಡಲು ವಿನಾಶಕಾರಿ’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆದು ಹೋದಳು. ಪಕ್ಕದ ಮತ್ತೊಂದು ಬದಿಗೆ ಒಬ್ಬ ಬಲೆಯನ್ನು ಬೀಸಿ ಮೀನುಗಳನ್ನು ಹಿಡಿದಾಗ ಅವನು ಕೂಡಾ ಖುಷಿಯಿಂದ ‘ಕಡಲು ರಕ್ಷಕ’ ಎಂದು ಬರೆದು ಹೋದನು. ಅಲ್ಲೇ ತುಸು ದೂರದಲ್ಲಿ ಇಬ್ಬರು ಮಕ್ಕಳು ಮರಳಿನಲ್ಲಿ ಮನೆ ಕಟ್ಟಿ ಆಟವಾಡುವಾಗ ದಂಡೆಯಲ್ಲಿ ಬಿಟ್ಟಿದ್ದ ಒಬ್ಬ ಹುಡುಗನ ಶೂಗಳು ಅಲೆಯಲ್ಲಿ ತೇಲಿಹೋಗುತ್ತವೆ. ಆ ಹುಡುಗ ಜೋರಾಗಿ ಸಿಟ್ಟಿನಿಂದ ಕೂಗುತ್ತ ‘ಕಡಲು ಒಬ್ಬ ದೊಡ್ಡ ಕಳ್ಳ’ ಎಂದು ಬರೆಯುತ್ತಾನೆ. ಮತ್ತೊಂದು ಬದಿಯಲ್ಲಿ ನಡೆದು ಬರುತ್ತಿದ್ದ ವೃದ್ಧ ಬಿಕ್ಷುಕನಿಗೆ ಅರೆತೆರೆದ ಒಂದು ಕಪ್ಪೆ ಚಿಪ್ಪು ಕಾಣುತ್ತದೆ. ತೆರೆದು ನೋಡಿದಾಗ ಅದರ ಒಳಗೆ ಫಳ ಫಳ ಹೊಳೆವ ಮುತ್ತುಗಳು ಕಾಣಿಸುತ್ತವೆ. ಅತ್ಯಂತ ಖುಷಿಯಿಂದ ಆ ವೃದ್ಧ ಮರಳಿನ ಮೇಲೆ ‘ಕಡಲು ಒಂದು ಅಗಾಧ ನಿಧಿ’ ಎಂದು ಬರೆಯುತ್ತಾನೆ. ಕಡಲು ಕೊಟ್ಟ ಅನುಭವವನ್ನು ಗ್ರಹಿಸುತ್ತ ನಾಲ್ಕು ಮನಸ್ಸುಗಳು ನಾಲ್ಕು ಬಗೆಯಲ್ಲಿ ಮರಳಿನ ಮೇಲೆ ಬರೆಯುವುದರ ಮೂಲಕ ತಮ್ಮ ಭಾವವನ್ನು ವ್ಯಕ್ತಪಡಿಸುತ್ತವೆ. ಎಲ್ಲ ಮುಗಿದು ಕತ್ತಲಾದ ಬಳಿಕ ಅವರವರು ಅವರ ಮನೆಯ ದಾರಿ ಹಿಡಿದಾಗ ಅಗಾಧವಾದ ಅಲೆಯೊಂದು ನುಗ್ಗಿ ಆ ನಾಲ್ವರ ಸಾಲುಗಳನ್ನು ಅಳಿಸಿ ಬಿಡುತ್ತದೆ.

ADVERTISEMENT

ಬಾಳಿನ ಸಾರವನ್ನೇ ಸಾರುವ ಈ ದೃಷ್ಟಾಂತ ಬಹುವಾಗಿ ಕಾಡಬಲ್ಲದು. ಇರುವ ಮತ್ತು ಇಲ್ಲವಾಗುವ ಗಳಿಗೆಗಳ ಮಧ್ಯೆ ನಾವು ನಮ್ಮ ಬಾಳನ್ನು ಹಸನುಗೊಳಿಸಿಕೊಳ್ಳುವ ಮತ್ತು ಮಾಗುವ ಬಗೆಯನ್ನು ಚೊಕ್ಕವಾಗಿ ಹೇಳಿಬಿಡುತ್ತದೆ. ಜೀವನ ಎಂದರೆ ನಾವು ಘಟನೆಗಳಿಗೆ ಕೊಡುವ ಪ್ರತಿಕ್ರಿಯೆ ಅಷ್ಟೇ. ನಮ್ಮ ಮುಗ್ಧತೆ, ಜಾಣತನ, ಹುಂಬತನ, ಭಾವನಾತ್ಮಕ ಗಟ್ಟಿತನ, ಮಾನಸಿಕ ದೌರ್ಬಲ್ಯ ಇತ್ಯಾದಿಗಳ ಮೂಲಕವೇ ಬಾಳಿಗೆ ಉತ್ತರ ಕೊಡುತ್ತ ಹೋಗುತ್ತೇವೆ. ಆದರೆ ಕಡಲಿನ ಮರಳಿನ ಮೇಲೆ ಬರೆದ ಸಾಲುಗಳು ಉಳಿಯುವುದಿಲ್ಲ. ‘ಬದುಕಿನ ಸತ್ಯ ಇದು ಅಲ್ಲವೇ ಅಲ್ಲ’ ಎಂಬ ಪಾಠವೇ ನಾಳೆ ಮತ್ತೆ ಬಾಳಲು ಪ್ರೇರಣೆ ನೀಡುತ್ತದೆ. ಇಳಿಸಂಜೆ ಖಾಲಿಯಾದ ಕಡಲ ದಂಡೆ ಮತ್ತು ಕಾಣದಾದ ಅಲ್ಲಿನ ಗೆರೆಕೊರೆಗಳು ಕೂಡಾ ಮತ್ತೆ ನಾಳಿನ ಹುಡುಕಾಟಕ್ಕೆ ಪ್ರೇರಣೆಯಾದೀತು. ಜೀವನಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.