ADVERTISEMENT

ನುಡಿ ಬೆಳಗು: ಕಣ್ಣೀರು ಕರಗುವ ಮುನ್ನ

ನುಡಿ ಬೆಳಗು

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2024, 18:45 IST
Last Updated 20 ಫೆಬ್ರುವರಿ 2024, 18:45 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಆ ಹುಡುಗ ಓಡಿಸುತ್ತಿದ್ದ ಬೈಕಿನ ಹಿಂದೆ ದಢೂತಿ ಗೆಳೆಯನೊಬ್ಬ ಕೂತಿದ್ದ. ಗಾಡಿ ಓಡಿಸುತ್ತಿದ್ದವನು ಸಣಕಲ. ಒಮ್ಮೆಗೆ ಸಿಗ್ನಲ್‌ನಲ್ಲಿ ಗಕ್ಕನೆ ನಿಂತ ಕಾರಿಗೆ ಹಿಂದಿನಿಂದ ಬಂದ ಬೈಕು ಗುದ್ದಿತು. ಇಬ್ಬರೂ ಗೆಣೆಕಾರರು ಹಾರಿ ಬಿದ್ದರು. ಮೊದಲು ಬಿದ್ದ ಸಣಕಲನ ಮೇಲೆ ದಢೂತಿ ಹುಡುಗನ ಭಾರದ ದೇಹ ಅಪ್ಪಳಿಸಿತ್ತು. ದಢೂತಿ ಗೆಳೆಯನಿಗೆ ಸದ್ಯ ಏನೂ ಆಗಲಿಲ್ಲ. ಆದರೆ ಮೊದಲು ಬಿದ್ದ ಸಣಕಲನ ಬೆನ್ನ ಹುರಿ ತುಂಡಾಯಿತು. ಆಸ್ಪತ್ರೆ, ಶಸ್ತ್ರಚಿಕಿತ್ಸೆ, ಹಲವಾರು ವೈದ್ಯರ ತಪಾಸಣೆ, ನಿರಂತರ ಆರೈಕೆಗಳ ನಂತರವೂ ಸುಂದರ ಸಣಕಲ ಚೇತರಿಸಿಕೊಳ್ಳಲಿಲ್ಲ. ದೇಹದ ಸ್ವಾಧೀನ ಶಾಶ್ವತವಾಗಿ ಕಳೆದುಕೊಂಡ.

ಆ ನೋವಿನಲ್ಲೂ ಸಣಕಲ ಹುಡುಗ ತನ್ನ ಅಪ್ಪನಿಗೆ ‘ನನ್ನ ಗೆಳೆಯನ ತಪ್ಪಿಲ್ಲ. ಅವನಿಗೆ ಏನೂ ತೊಂದರೆ ಆಗಕೂಡದು. ಅವನ ಜೀವನ ಹಾಳಾಗಬಾರದು. ಯಾರೂ ಅವನಿಗೆ ಬಯ್ಯಬಾರದು. ಗಾಡಿ ಓಡಿಸುತ್ತಿದ್ದ ನಾನೇ ಎಲ್ಲಕ್ಕೂ ಜವಾಬುದಾರ’ ಎಂದ. ಈ ಮಾತು ಕೇಳಿ ಅವ್ವ ಅಪ್ಪ ಬಿಕ್ಕಿ ಬಿಕ್ಕಿ ಅತ್ತರು. ತನಗೆ ತೊಂದರೆಯಾದರೂ ಸರಿ. ಗೆಳೆಯನಿಗೆ ಕಿಂಚಿತ್ತೂ ಬಾಧೆಯಾಗಬಾರದು ಎಂಬ ಆ ಹುಡುಗನ ಮನಸ್ಸು ಅದೆಷ್ಟು ವಿಶಾಲ.

ADVERTISEMENT

ಬೆಳೆದ ಮಗನನ್ನು ತಾಯಿ ತಂದೆ ಮತ್ತೆ ಎಳೆ ಮಗುವಿನಂತೆ ಸಾಕುವ ದುಃಸ್ಥಿತಿ ಊಹೆಗೂ ಮೀರಿದ್ದು. ದಿನದಿನವೂ ಕತ್ತಲಾಗಿಬಾಧಿಸುತ್ತವೆ. ಯಾರ ಸಾಂತ್ವನಗಳು ಎದೆಯ ಭಾರವನ್ನು ಕರಗಿಸುವುದಿಲ್ಲ. ಗೆಳೆಯರ, ನೆಂಟರ, ಪರಿಚಿತರ ಸಮಾಧಾನಗಳು ವಾರತಿಂಗಳಿಗೆ ಮುಗಿಯುತ್ತವೆ. ದೃತಿಗೆಡೆದೆ ಜೀವನವನ್ನು ಯಥಾವತ್ತೆಂದು ಸ್ವೀಕರಿಸಲು ಗಟ್ಟಿ ಮನಸ್ಸು ಬೇಕು. ಕಣ್ಣೀರು ಸಿಡಿದು
ಚಲಿಸುವುದನ್ನು ನಿಲ್ಲಿಸಬೇಕು.

ನನಗೆ ಸಿಕ್ಕ ಆ ಹುಡುಗನ ತಂದೆ ತಮ್ಮ ಮಗನ ವಿಷಯ ಹೇಳುತ್ತಾರೆಂದು ಭಾವಿಸಿದ್ದೆ. ಆದರೆ ಅವರು ಮತ್ತೊಂದು ರೀತಿಪರಿವರ್ತನೆಯಾಗಿದ್ದರು. ತಮ್ಮ ಮಗನಂತೆಯೇ ವ್ಯಥೆ ಪಡುವ ಅನೇಕ ಮಕ್ಕಳ ಕಥೆ ಹೇಳಿದರು. ಅವರ ಚಿತ್ರಗಳ ತೋರಿದರು. ಅನೇಕತಿಂಗಳು ಮಗನೊಟ್ಟಿಗೆ ಆಸ್ಪತ್ರೆಯಲ್ಲಿ ಕಳೆದ ಅವರ ಮಾತು, ಮನಸ್ಸು, ಚಿಂತನೆ ಎಲ್ಲವೂ ಬದಲಾಗಿತ್ತು. ತಮ್ಮ ಮಗನಂತೆಯೇಸ್ವಾಧೀನ ಕಳಕೊಂಡ ಬಡ ರೈತಾಪಿ ಹುಡುಗನೊಬ್ಬನ ವಿಡಿಯೋ ತೋರಿಸಿ ಇವನಿಗೆ ಸಹಾಯ ಮಾಡಿ ಎಂದು ದನಿ ಮೃದುಗೊಳಿಸಿದರು. ಆತನ ಚಿಕಿತ್ಸೆಗೆ ಈಗ ಹಣ ಹೊಂದಿಸುತ್ತಿದ್ದೇನೆ ಎಂದು ವಿಶ್ವಾಸ ತೋರಿದರು. ಅವರ ಬಗ್ಗೆ ಒಮ್ಮೆಲೇ ಗೌರವ ಉಕ್ಕಿ ಬಂತು.

‘ಆಗಿ ಹೋಗಿದ್ದನ್ನು ನೆನೆದರೆ ಚಿಂತೆ. ಮುಂದೆ ಆಗುವ ಒಳಿತನ್ನು ನಂಬಿದರೆ ನೆಮ್ಮದಿ. ಇತರರ ದುಃಖಕ್ಕೆ ನೆರವಾದರೆ ಅದು ನನ್ನ ಮಗನಿಗೆ ಸಲ್ಲುವ ಆಶೀರ್ವಾದ. ಬದುಕು ಬಂದಂತೆ ಸ್ವೀಕರಿಸುವುದು ಜಾಣತನ. ಆಗುವುದನ್ನು ನಿಲ್ಲಿಸಲು, ಬದಲಾಯಿಸಲು ಸಾಧ್ಯವಿಲ್ಲ. ನಮ್ಮಂತೆಯೇ ಸಮಾನ ದುಃಖಿತರಾದವರಿಗೆ ನೆರವಾಗಿ, ಪ್ರೀತಿದೋರಿ, ದೈರ್ಯತುಂಬಿ, ಮನುಷ್ಯತ್ವಕ್ಕೆ ಹಂಬಲಿಸುವುದೇ ನಿಜವಾದ ಜೀವನ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.