ADVERTISEMENT

ನುಡಿ ಬೆಳಗು– 137: ಕಳೆ ತಗೀಬೇಕು, ಬೆಳೆ ಉಳೀಬೇಕು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 21 ಫೆಬ್ರುವರಿ 2025, 0:05 IST
Last Updated 21 ಫೆಬ್ರುವರಿ 2025, 0:05 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸ್ವಾರ್ಥ ಬಹಳ ಕೆಟ್ಟದ್ದು. ಅದು ನಮ್ಮ ಕರುಣೆಯನ್ನೇ ಕಸಿದುಕೊಂಡು ಹೋಗತೈತಿ. ಮನುಷ್ಯ ನಿಸ್ವಾರ್ಥಿಯಾಗೋದನ್ನು ಕಲಿಯಬೇಕು. ಸಣ್ಣ ಸಣ್ಣದಕ್ಕೂ ನಾವು ಆಸೆ ಪಡ್ತೀವಿ. ಇದನ್ನು ಬಿಡಬೇಕು. ಪ್ರೇಮದಿಂದ ಬದುಕಬೇಕು.

ರಾಜಸ್ಥಾನದಲ್ಲಿ ಶ್ಯಾಮಸುಂದರ ಪಾಲೇವಾಲ ಅಂತ ಒಬ್ಬ ಸರಪಂಚ ಇದ್ದ. ಅವನಿಗಿದ್ದ ಒಬ್ಬ ಮಗಳು ತೀರಿಕೊಂಡಳು. ಅವನ ಹೆಂಡತಿ ಹೆಸರು ಅನಿತ. ತೀರಿಕೊಂಡ ಮಗಳ ಹೆಸರಿನಲ್ಲಿ ಒಂದು ಗಿಡ ಹಚ್ಚಿದ. ಅಷ್ಟಕ್ಕೇ ಬಿಡಲಿಲ್ಲ. ಒಂದು ಸಂಕಲ್ಪವನ್ನೂ ಮಾಡಿದ. ತನ್ನ ಊರಲ್ಲಿ ಯಾರ ಮನೆಯಲ್ಲಿಯೇ ಹೆಣ್ಣು ಮಗು ಹುಟ್ಟಿದರೂ ನೂರಾ ಹನ್ನೊಂದು ಗಿಡ ಹಚ್ಚಬೇಕು ಎಂದು ನಿರ್ಧರಿಸಿದ. ಇವತ್ತು ಸುಮಾರು ನಾಲ್ಕು ಲಕ್ಷ ಗಿಡ ಬೆಳೆದಾವು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂತು. ನಮ್ಮಲ್ಲಿ ರಕ್ಷಾಬಂಧನದ ದಿನ ರಾಖಿ ಕಟ್ತಾರೆ. ಆದರೆ ಆ ಊರಲ್ಲಿ ರಕ್ಷಾ ಬಂಧನ ಇಲ್ಲ. ವೃಕ್ಷಾ ಬಂಧನ ಮಾಡ್ತಾರ. ವೃಕ್ಷಕ್ಕೆ ರಾಖಿ ಕಟ್ತಾರ. ನಾವು ದೇವರನ್ನು ಒಲಿಸಿಕೊಳ್ಳಲು ಲಕ್ಷ
ದೀಪೋತ್ಸವ ಮಾಡ್ತೀವಿ. ಆದರೆ ದೇವರು ಒಲಿಯಬೇಕಾದರೆ ಲಕ್ಷ ದೀಪೋತ್ಸವ ಮಾಡಿ ಪ್ರಯೋಜನ ಇಲ್ಲ. ವೃಕ್ಷ ದೀಪೋತ್ಸವ ಮಾಡಬೇಕು. ಆಗ ದೇವರು ಒಲಿತಾನ. ನಿಸರ್ಗವನ್ನು ಪೂಜೆ ಮಾಡೋದನ್ನು ಕಲಿಯಬೇಕು. ವೃಕ್ಷ ದೀಪಗಳು ಬೇಕು.

ADVERTISEMENT

ಇನ್ನೊಬ್ಬರು ನಮ್ಮ ಬಳಿಗೆ ಬರಲಿ ಅಂತ ನಾವು ಬಯಸುತ್ತೀವಿ. ಇನ್ನೊಬ್ಬರ ಪ್ರೇಮವನ್ನು ನಿರೀಕ್ಷಿಸುತ್ತೀವಿ. ಆದರೆ ಒಂದು ತಿಳಕೋಬೇಕು ಮನುಷ್ಯ; ನಮ್ಮ ಹೃದಯ ಇರುವುದೇ ಇನ್ನೊಬ್ಬರನ್ನು ಪ್ರೇಮ ಮಾಡಲು ಎಂದು. ನಿಮ್ಮ ಹೃದಯದಲ್ಲಿ ತುಂಬಿದ ಪ್ರೇಮವನ್ನು ಇನ್ನೊಬ್ಬರಿಗೆ ಹಂಚಿದರೆ ಅದು ಖಾಲಿಯಾಗೋದಿಲ್ಲ. ಅಷ್ಟು ಪ್ರೇಮವನ್ನು ನಮ್ಮ ಹೃದಯದಲ್ಲಿ ದೇವರು ತುಂಬಿಟ್ಟಿದ್ದಾನ. ನಮ್ಮತ್ರ ಏನು ಐತಿ ಅದನ್ನು ದಾನ ಮಾಡಬೇಕು. ನೇತ್ರದಾನ, ಅಂಗಾಂಗ ದಾನ, ರಕ್ತದಾನ, ಶ್ರಮದಾನ ಮಾಡಬೇಕು. ದೇಶಕ್ಕಾಗಿ ಮತದಾನ ಮಾಡಬೇಕು. ಇಷ್ಟೆಲ್ಲಾ ದಾನ ಯಾಕ ಮಾಡಬೇಕು ಅಂದ್ರ ಸಮಾಧಾನಕ್ಕಾಗಿ ಸಮಾಧಾನವೇ ಯೋಗ.ದೇವನೇ ಸಣ್ಣ ಸಣ್ಣ ವಿಷಯಗಳಿಗೆ ನನ್ನ ಮನಸ್ಸು ಸೋಲತೈತಿ. ಸೋಲದಂತೆ ಶಕ್ತಿ ಕೊಡು ಅಂತ ಬೇಡಿಕೋಬೇಕು.

ನಮ್ಮ ದೀಪಾವಳಿ ಹ್ಯಾಗೆ ಐತಿ ನೋಡಿ. ಬೆಳಿಗ್ಗೆ ಗೂಟಕ್ಕೆ ಮಾವಿನ ಎಲೆ, ಮಧ್ಯಾಹ್ನ ಊಟಕ್ಕೆ ಬಾಳೆ ಎಲೆ, ರಾತ್ರಿ ಆಟಕ್ಕೆ ಇಸ್ಪೀಟ್ ಎಲೆ! ಲಕ್ಷ್ಮಿ ಮುಂದೆ ನಮ್ಮದು ಆಟ. ಅದಕ್ಕೆ ಲಕ್ಷ್ಮಿ ಅಂತಾಳ, ‘ಇವತ್ತು ಒಂದು ದಿನ ಆಟ ಆಡು ಪರವಾಗಿಲ್ಲ. ಆದರೆ ದಿನಾ ಆಡಿದರೆ ದೀಪಾವಳಿ ಹೋಗಿ ದಿವಾಳಿ ಆಗತೈತಿ’ ಅಂತ. ಆಡೋದನ್ನು ಬಿಟ್ಟುಬಿಟ್ಟರೆ ಪ್ರತಿ ದಿನ ದೀಪಾವಳಿ ಆಗತೈತಿ ಎಂದೂ ಅವಳು ಹೇಳುತ್ತಾಳೆ. ಲಕ್ಷ್ಮಿ ಮುಂದೆ ದೀಪ ಹಚ್ಚಬೇಕು ಅಂತಾರ. ಆದರೆ ಒಂದು ತಿಳಕೋಬೇಕು ಇಸ್ಪೀಟ್ ಆಟದಂತಹ ದುರಭ್ಯಾಸಗಳನ್ನು ಬಿಟ್ಟು ಬಿಟ್ಟರೆ ದೀಪ ಹಚ್ಚೋದು ಬೇಡ. ಲಕ್ಷ್ಮಿ ನಮ್ಮ ಮನೆಯ ಜಗಲಿಯಲ್ಲಿಯೇ ಇರ್ತಾಳೆ. ನಮ್ಮ ಮನಸ್ಸು ಕೂಡ ರೈತನ ಭೂಮಿಯಂತೆ. ರೈತ ಬೀಜವನ್ನೇ ಬಿತ್ತಿದರೂ ಬೆಳೆಯ ಜೊತೆಗೆ ಕಳೆಯೂ ಬರತೈತಿ. ಜಾಣ ರೈತ ಕಳೆಯನ್ನು ತೆಗೆದು ಬೆಳೆಯನ್ನು ಮಾತ್ರ ಉಳಿಸಿಕೊಳ್ತಾನ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಇರುವ ಕೆಟ್ಟ ಕಳೆಯನ್ನು ತೆಗೆದು ಒಳ್ಳೆಯದನ್ನು ಮಾತ್ರ ಉಳಿಸಿಕೊಂಡರೆ ಬದುಕು ಹಸನಾಗತೈತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.