ADVERTISEMENT

ನುಡಿ ಬೆಳಗು | ರೆಕ್ಕೆ ಇದ್ದರೂ ಸಾಕು

ವಾಸುದೇವ ನಾಡಿಗ್
Published 3 ಜೂನ್ 2025, 23:30 IST
Last Updated 3 ಜೂನ್ 2025, 23:30 IST
   

ಎರಡು ಹಕ್ಕಿಗಳು ಬಾದಾಮಿ ಮರದ ದಟ್ಟವಾದ ಎಲೆಗಳ ಮಧ್ಯದ ರೆಂಬೆಯ ಮೇಲೆ ಗೂಡು ಕಟ್ಟಿದ್ದವು. ತಮ್ಮದೇ ಬಿಂಬದ ಹಾಗೆ ಒಡಲು ಕೂಡಿ ಒಡ ಮೂಡಲಿರುವ ಮರಿಗಳಿಗಾಗಿ ಆ ಮನೆ ಹೆಣಿಗೆ. ತಾಯಿ ಹಕ್ಕಿ ಮೊಟ್ಟೆ ಇಟ್ಟ ಗಳಿಗೆಯಿಂದ ತಂದೆ ಹಕ್ಕಿಗೆ ನಿಮಿಷಕ್ಕೆ ಒಮ್ಮೆ ಬಂದು ಬಂದು ಇಣುಕಿ ನೋಡುವ ಪರಿಪಾಟ. ಪರ‍್ರಂತ ಆಹಾರಕ್ಕಾಗಿ ಎಲ್ಲೇ ಹಾರಿಹೋದರೂ ಕೊಕ್ಕಿನಲ್ಲಿ ಒಂದೆರಡು ಹುಲ್ಲು ಗರಿ ತಂದು ಹೊದಿಸುವ ಸಡಗರ. ತಾಯಿಹಕ್ಕಿ ಅಲ್ಲೇ ಕೂತು ಮುಗುಳ್ನಗು. ಈ ಪರಿಯ ಕಾಳಜಿಯನ್ನು ಕಂಡು ಕಿಸಕ್ಕನೆ ನಗುತ್ತಿತ್ತು.

ಹುಲ್ಲಿನ ಗೂಡಾಗಲಿ ಇಟ್ಟಿಗೆ ಮನೆಯಾಗಲಿ ಬದಲಾವಣೆ ತಪ್ಪಿದ್ದಲ್ಲ ಅಲ್ಲವೆ? ರೂಪಗಳು ಬೇರೆ ಇರಬಹುದು. ತುಡಿತ ಭವ ಭಾವ ಸಂವೇದನೆ ಒಂದೇ. ಕಳ್ಳ ಬೆಕ್ಕಿನಿಂದ ಮೊಟ್ಟೆ ಮರಿಗಳನ್ನು, ಅವಘಡಗಳಿಂದ ಸಂತಾನವನ್ನು ರಕ್ಷಿಸಲೇಬೇಕಿತ್ತು. ಬಾದಾಮಿ ಮರವಿರಲಿ, ಸಂಪಿಗೆ ಮರವಿರಲಿ ಸಂತಾನದ ತೊಟ್ಟಿಲು ಹೇಗಿದ್ದರೂ ಬೆಕ್ಕಿನ ರೂಪದಲ್ಲಿ ಬರುವ ಬೇಟೆಗಾರ ಮತ್ತು ಸಾವಿನ ಭಯ ತಪ್ಪಿದ್ದಲ್ಲ. ಹಾಗಂತ ಹೆದರಿ ಜಾಲಿ ಮುಳ್ಳ ಮೇಲೆ ಗೂಡು ಕಟ್ಟಲಾಗದು. ಸಾವು ನೋವಿಗೆ ಹೆದರಿ ಬಾಳಿನ ನಿರಂತರತೆಯೂ ನಿಲ್ಲಬಾರದು.

ವಾಸ್ತವವೂ ಹೀಗೆಯೇ ಇರುತ್ತದೆ. ಮೊಟ್ಟೆ ಒಡೆದು ಹೊರಬರುವ ತನಕದ ತವಕ ಅನಂತರ ಮೊಟ್ಟೆಯೊಡೆದು ಹೊರಬರುವ ಜೀವ ಧ್ವನಿಗಳ ಪೊರೆಯುವುದು. ಹಾವು ಬೆಕ್ಕು ಗಾಳಿ ಮಳೆ ಬೆಂಕಿ ಏನೇ ಇರಲಿ ಕಾಯುವ ಒಂದು ಹಾಜರಾತಿ ಮತ್ತು ‘ಕುಶಲವೇ’ ಎಂಬ ಒಂದು ಇಣುಕು ನೋಟ. ಅಷ್ಟಕ್ಕೂ ಬೆಕ್ಕು ಮರ ಏರಿ ಬಂದರೆ ಯುದ್ಧ ಹೂಡಿ ಎದುರಿಸುವ ಛಾತಿ ಹಕ್ಕಿಗಳಿಗೆ ಇದೆಯೆ? ಒಂದೊಮ್ಮೆ ಅನಾಹುತ ಸಂಭವಿಸಿದರೆ ಕೂಡಾ ಬಾಳಿನ ಕ್ರಮ ನಿಲ್ಲದಲ್ಲವೆ? ಅಪ್ಪನ ಕಾವಲುಗಾರಿಕೆ ಮತ್ತು ಅಮ್ಮನ ಅಪ್ಪುಗೆಗಳ ಮಧ್ಯೆ ರೆಕ್ಕೆ ಬಲಿತ ಮೇಲೆ ಆಕಾಶಕ್ಕೆ ಚಿಮ್ಮಲೇ ಬೇಕು. ಬೆಕ್ಕಿನ ಭಯ ಇಲ್ಲದಿದ್ದರೆ ಕೂಡಾ ಅಸ್ತಿತ್ವಕ್ಕಾಗಿ ಹೋರಾಡುವ ಬೇರೆ ಬೇರೆ ಮಗ್ಗಲುಗಳನ್ನು ದಾಟಲೇಬೇಕು.

ADVERTISEMENT

ಕನಸುಗಳೂ ಹೀಗೆಯೇ... ಅರಮನೆ, ಗುಡಿಸಲು, ಬೀದಿ, ಬಯಲು... ಯಾವ ಮಿತಿಯೂ ಇಲ್ಲ. ಕನಸುಗಳು ಎಲ್ಲರ ಸ್ವತ್ತು. ಅದನ್ನು ಪೊರೆಯಬೇಕು. ಮೊಟ್ಟೆಯ ಮೈ ಸೀಳಿ ಹೊರಬರಲು ಅನೇಕ ಸವಾಲುಗಳು. ಹೊರಬಂದ ಮೇಲೂ ಹಲವು ಬಗೆಯ ಸಿಕ್ಕುಗಳು. ಭರವಸೆಯನ್ನು ಹೊತ್ತು ಸಾಗುವ ರೆಕ್ಕೆಗಳು ನಿತ್ಯದ ಬೆಳಗಿಗಾಗಿ ಕಾಯುತ್ತವೆ. ಹಕ್ಕಿಗಳೇ ಆಗಲಿ ಮನುಷ್ಯರೇ ಆಗಲಿ ಇಕ್ಕಟ್ಟಿನ ಗೂಡಿನಲ್ಲಿ ಚಿಗುರಿ ಅಂಬರಕ್ಕೆ ಹಾತೊರೆಯುತ್ತಲೇ ಇರುವುದೇ ಬದುಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.