ನುಡಿ ಬೆಳಗು
ಕೇರಂ ಕಾಯಿನ್‌ಗಳಿಗೂ ಲಗೋರಿ ಬಿಲ್ಲೆಗಳಿಗೂ ವ್ಯತ್ಯಾಸವಿದೆ. ಅವುಗಳದ್ದೇ ಆದ ನಡೆ, ಗುರಿ ಇವೆ. ಹಾಗಂತ ಲಗೋರಿ ಬಿಲ್ಲೆಗಳನ್ನು ಕೇರಂ ಬೋರ್ಡ್‌ಗೆ ಸುರಿಯಲಾಗದು.
ಇದು ಹೀಗೇ. ಇಲ್ಲಿ ಎರಡು ಬಣಗಳ ನಡುವೆ ಜಗಳ. ‘ಲಗೋರಿ ಬಿಲ್ಲೆಗಳನ್ನು ನಾವೇ ತರ್ತೀವಿ’ ಅಂತ ಅವರು. ‘ಇಲ್ಲ ನಾವು’ ಅಂತ ಇವರು. ಎರಡು ಬಣದವರಿಗೂ ಚೊಕ್ಕವಾದ ಬಿಲ್ಲೆಗಳನ್ನು ತಂದು ಜೋಡಿಸುವ ಹಂಬಲ. ಅಸಮವಾದ ಬಿಲ್ಲೆಗಳನ್ನು ಜೋಡಿಸಲು ಯಾರಿಗೂ ತಾಕತ್ತಿಲ್ವ ಎಂಬ ಸವಾಲು ಬೇರೆ. ಒಬ್ಬ ಹೇಳಿದ: ‘ಅದು ಹಾಗಲ್ಲ. ಆಡುವ ಮುನ್ನ ಬಿಲ್ಲೆಗಳನ್ನು ಅಲ್ಲೇ ಹುಡುಕಬೇಕು. ಸಿಕ್ಕಿದ್ದನ್ನು ಪೇರಿಸಿಡಬೇಕು’. ಅವನ ಮಾತು ಯಾರ ಗಮನಕ್ಕೆ ಬಾರದಷ್ಟು ಕ್ಯಾತೆಯಲ್ಲಿ ಎಲ್ಲರೂ ಮುಳುಗಿದ್ದರು.
ಕೊನೆಗೂ ಅಸಮ ಆಕಾರದ ಬಿಲ್ಲೆಗಳ ಜೊತೆಗೆ ಆಡಲು ನಿಂತರು. ಬಿಲ್ಲೆ ಜೋಡಿಸುವವನ ಬೆನ್ನಿಗೆ ಎದುರಾಳಿಯ ಯಾರಾದರೂ ಚೆಂಡಿನಿಂದ ಹೊಡೆದರೆ ಮತ್ತೆ ಸೋಲು. ಆಟ ಶುರು. ಅಸಮ ಆಕಾರದ ಬಿಲ್ಲೆಗಳು ಎಷ್ಟು ಜೋಡಿಸಿದರೂ ವಾಲಿ ವಾಲಿ ಮತ್ತೆ ಬೀಳುತ್ತಿದ್ದವು. ಇನ್ನೇನು ಕೊನೇ ಬಿಲ್ಲೆಯನ್ನು ಜೋಡಿಸಬೇಕು, ಅಷ್ಟರಲ್ಲಿ ಚೆಂಡು ಬಂದು ಬೆನ್ನಿಗೆ ತಾಕಿದರೆ ಮುಗೀತು, ಮತ್ತೆ ಸೋಲು ಮತ್ತೆ ಜೋಡಿಸು. ಇದೇ ಬಾಳು, ಇದೇ ಆಟ. ಸೋಲನ್ನು ಒಪ್ಪಿಕೊಳ್ಳದ ಹಟ ಮತ್ತು ಸೋಲಿಸಲೇಬೇಕು ಎನ್ನುವ ಸವಾಲುಗಳು ಎದುರಾಳಿ. ಎಲ್ಲ ಸುಸೂತ್ರ ಎನ್ನುವಷ್ಟರಲ್ಲಿ ಮತ್ತೊಂದು ಧುತ್ತನೆ ತಲೆ ಎತ್ತುತ್ತದೆ.
ಹಾಗೆ ನೋಡಿದರೆ ಕೇರಂ ಹಾಸು ಮತ್ತು ಕಾಯಿನ್ ಸಲೀಸು ಅಂತ ಅನಿಸಬಹುದು. ಇನ್ನು ಬಿಲ್ಲೆ ಗುಣಿಯಲಿ ಬೀಳಬೇಕು ಅನ್ನುವಷ್ಟರಲ್ಲಿ ಅಂಚನ್ನು ಮುಟ್ಟಿ ಹಿಂದಕ್ಕೋ ಆಥವಾ ಬೋರ್ಡ್ ಆಚೆಗೋ ಬೀಳುತ್ತದೆ. ಅಲ್ಲೂ ಅಸಮವಾದ ವ್ಯವಸ್ಥೆಯೇ. ಗೆಲ್ಲಬೇಕು ಅನ್ನುವ ಛಲ ಇದ್ದಾಗ ಕೇರಂನ ಗುಣಿ ಮತ್ತು ಕಾಯಿನ್‌ಗಳ ಅಳತೆಗಳು ಲೆಕ್ಕಕ್ಕೇ ಬಾರದು. ಆಟಕ್ಕೆ ಕೂತರೆ ಮುಗಿಯಿತು. ಬಾಳಿಗೆ ಬಂದಿದ್ದೇವೆ, ದಾಟಬೇಕು. ಅಸಮಗಳದ್ದೇ ಗೊಣಗಾಟವಾದರೆ ಗುರಿ ದೂರವಾಗುತ್ತಲೇ ಹೋಗುತ್ತದೆ.
ಕ್ರಮಿಸುವ ದಾರಿ ನಯವಾಗೇ ಇರಲಿ, ಒರಟೇ ಇರಲಿ ಸವಾಲುಗಳಂತೂ ತಪ್ಪಿದ್ದಲ್ಲ. ಲಗೋರಿಯ ಒರಟು ಬಿಲ್ಲೆ ಕೇರಂ ಆಗದು. ಕೇರಂನ ನಯವಾದ ಕಾಯಿನ್ ಲಗೋರಿಗೆ ಒಗ್ಗದು. ಒಗ್ಗದವುಗಳನ್ನು ಮಣಿಸಿ ದಕ್ಕಿಸಿಕೊಂಡಾಗಲೇ ಬಾಳು ಸೊಗಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.