ನುಡಿ ಬೆಳಗು
ಆಳರಸರ ಅಸೂಯೆಯಿಂದ ಕೂಡಿದ ದಾಕ್ಷಿಣ್ಯವನ್ನು ಮೀರಲಾಗದ ದ್ರೋಣಾಚಾರ್ಯರು ಕಾಡಿನಲ್ಲಿರುವ ಏಕಲವ್ಯನನ್ನು ಹುಡುಕಿಕೊಂಡು ಬರುತ್ತಾರೆ. ಉಭಯಸಂಕಟದಲ್ಲಿರುವ ಅವರಿಗೆ ಅದೊಂದು ಬಗೆಯ ಕಠೋರ ಪರೀಕ್ಷೆ. ತಾನು ನೇರವಾಗಿ ಕಲಿಸದಿದ್ದರೂ ತನ್ನನ್ನು ಗುರು ಎಂದು ಕರೆದು ಒಲಿದ ಏಕಲವ್ಯ ಗುರುವಿನ ಮಹಿಮೆಯನ್ನು ಲೋಕಕ್ಕೆ ಸಾರಿದ ಬಗ್ಗೆ, ಗುರುಪದವಿ ಎನ್ನುವುದು ಯೋಗ್ಯರಾದ ಶಿಷ್ಯರು ದಯಪಾಲಿಸಬೇಕಾದದ್ದೇ ಹೊರತು ಪಡೆಯುವಂತಹದ್ದಲ್ಲ ಎನ್ನುವುದರ ಬಗ್ಗೆ ದ್ರೋಣರಿಗೆ ಹೆಮ್ಮೆಯಿದೆ. ಏಕಲವ್ಯನನ್ನು ಪರೀಕ್ಷೆಗೆ ಗುರಿಮಾಡಿ ಅವನಿಂದ ಅಸಾಮಾನ್ಯವಾದ ಗುರುದಕ್ಷಿಣೆ ಪಡೆಯಲು ಬಂದವರು ತಾವೇ ಪಾಠ ಕಲಿತು ಕಠಿಣ ಪರೀಕ್ಷೆಗೆ ಒಳಗಾಗಬೇಕಾದ ಸನ್ನಿವೇಶ ಬಂದೀತೆಂಬ ನಿರೀಕ್ಷೆ ಅವರಿಗಿರಲಿಲ್ಲ.
ಇತ್ತ ಗುರುಗಳು ತನ್ನ ಬಳಿಗೆ ಬರುತ್ತಿರುವ ವಿಷಯ ತಿಳಿದ ಏಕಲವ್ಯ ವಿಪರೀತ ಸಂಭ್ರಮದಲ್ಲಿ ಕಾಡಿನಲ್ಲಿ ತಾಜಾ ಹಣ್ಣುಹಂಪಲುಗಳನ್ನು ಕೂಡಿಸಿಟ್ಟು ಕಾಯುತ್ತಾನೆ. ಅವನ ಕಾತರ ಇಮ್ಮಡಿಯಾಗಿ ತನ್ನ ಸ್ನೇಹಿತರನ್ನೆಲ್ಲಾ ಕೂಗಿ ಕರೆದು ಗುರುಗಳ ವನಪ್ರವೇಶದ ಹಾದಿಯ ತುಂಬ ಹೆಜ್ಜೆ ಹೆಜ್ಜೆಗೂ ಕಾವಲಿರಿಸಿ ಗಿರಿವನ ಗಗನಕ್ಕೆಲ್ಲ ಸಾರುವವನಂತೆ ಬಂಡೆ ಬಂಡೆಗಳನ್ನು ಹತ್ತಿಳಿದು ಮುಗಿಲಿಗೆ ಮುಖವಿಟ್ಟು ಕುಪ್ಪಳಿಸಿ ಕುಣಿದಾಡುತ್ತಾನೆ. ಹಾಗೆ ಬಂದ ದ್ರೋಣಾಚಾರ್ಯರನ್ನು ಆದರಾತಿಥ್ಯಗಳಿಂದ ಸತ್ಕರಿಸಿದ ಏಕಲವ್ಯ ಅವರ ಆಗಮನದ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತಾನೆ. ಏಕಲವ್ಯನ ಮುಗ್ದತೆ, ಉತ್ಸಾಹ ಮತ್ತು ಕಪಟವರಿಯದ ನಡತೆ ದ್ರೋಣರನ್ನು ಮಾತು ಬರದಂತೆ ತಡೆದಿದೆ. ಅವನ ಬಿಲ್ಜಾಣ್ಮೆಯ, ಅದರಲ್ಲೂ ಶಬ್ದವೇದಿ ವಿದ್ಯೆಯನ್ನು ಪರೀಕ್ಷಿಸುವುದಾಗಿ ಹೇಳಿ ಗಗನದಲ್ಲಿ ಹಾರಾಡುತ್ತಿದ್ದ ಹಕ್ಕಿಯೊಂದನ್ನು ತೋರಿಸಿ ಬಾಣದಿಂದ ಹೊಡೆಯಲು ಸೂಚಿಸುತ್ತಾರೆ. ಏಕಲವ್ಯ ತಲೆಯೆತ್ತಿ ಮೇಲೆ ನೋಡುತ್ತಿದ್ದಂತೆ ಮೋಡಗಳ ನಡುವೆ ಹಕ್ಕಿ ಮರೆಯಾಗುತ್ತದೆ. ಮರೆಯಾದರೇನಂತೆ? ಹಕ್ಕಿಯುಲಿ ಕೇಳಿಸುತ್ತಿದೆಯಲ್ಲಾ ಬಾಣ ಹೂಡಿ ಹೊಡಿ ಎನ್ನುತ್ತಾರೆ. ‘ಆಗದಾಗದು ಗುರುವರ್ಯ’ ಎಂದು ಹಕ್ಕಿಯನ್ನು ಕೊಲ್ಲಲು ಏಕಲವ್ಯ ನಿರಾಕರಿಸುತ್ತಾನೆ. ‘ನಿನಗೆ ಆ ಸಾಮರ್ಥ್ಯ ಇಲ್ಲವೇ’ ಎಂದು ಕೇಳಿದಾಗ, ‘ನಿಮ್ಮಿಂದ ಕಲಿತ ವಿದ್ಯೆಯನ್ನು ಅಪರಾಧವಿಲ್ಲದ ಆ ಸಾಧುವನ್ನು ಕೊಲ್ಲಲು ಬಳಸುವುದೇ? ಹಾಗೆ ಮಾಡಿದರೆ ನಿಮಗೂ ನೀವು ಕಲಿಸಿದ ವಿದ್ಯೆಗೂ ಅಪಚಾರ ಮಾಡಿದಂತಾಗುತ್ತದೆ, ಸತ್ಯಕ್ಕೆ ಕಳಂಕ ಹಚ್ಚಿದ ಹಾಗಾಗುತ್ತದೆ’ ಎನ್ನುತ್ತಾನೆ. ಕಾಡಿನಲ್ಲಿ ಗೆಡ್ಡೆ ಗೆಣಸು ಸಿಗದೇ ಹಸಿವಾದಾಗ ಪ್ರಾಣಿಯನ್ನು ಕೊಂದು ತಿನ್ನುವ ಏಕಲವ್ಯನ ಬಾಯಿಂದ ಬಂದ ಈ ಮಾತನ್ನು ಕೇಳಿ ದ್ರೋಣರು ಒಂದರೆಕ್ಷಣ ಬೆಚ್ಚುತ್ತಾರೆ. ಗುರುವಿಗೆ ಶಿಷ್ಯನಿಂದ ಅಹಿಂಸೆಯ ನೀತಿಪಾಠ. ಏಕಲವ್ಯನ ನೈತಿಕ ಪ್ರಜ್ಞೆಯ ಎತ್ತರವನ್ನು, ಅರ್ಜುನನ ಅಸೂಯೆಯನ್ನು ಒಟ್ಟಿಗೆ ನೆನೆದು ನಿಡುಸುಯ್ಯುತ್ತಾರೆ. ಒಬ್ಬ ಕಾಡಿನವ ಮತ್ತೊಬ್ಬ ನಾಡಿನವ. ಒಬ್ಬನದು ಬೌದ್ಧಿಕ ವೈಶಾಲ್ಯ ಇನ್ನೊಬ್ಬನದು ನಿರ್ದಯ ಅಸೂಯೆ. ಒಬ್ಬರ ಏಳ್ಗೆಯನ್ನು ಕಂಡು ಕರುಬಬಾರದು. ಅರ್ಜುನ ತನ್ನ ಏಳ್ಗೆಯನ್ನು ಮಾತ್ರ ಬಯಸುತ್ತಾನೆ. ಏಕಲವ್ಯ ಮತ್ತೊಬ್ಬರ ಏಳ್ಗೆಯನ್ನು ತನ್ನದೇ ಎಂದು ಭಾವಿಸಿ ಸಂಭ್ರಮಿಸುತ್ತಾನೆ.
ಗುರುವಾದವನು ತನ್ನ ವಿದ್ಯಾರ್ಥಿಗಳು ಹೇಗೆ ಬೆಳೆಯಬೇಕೆಂದು ಬಯಸುತ್ತಾನೆ? ಒಳ್ಳೆಯ ಉದ್ಯೋಗ, ದೊಡ್ಡ ಸಂಬಳ, ಬಂಗಲೆ, ಕಾರು ಹೀಗೆ ಭೌತಿಕ ವೈಭವ ಅಥವಾ ಈ ಪುಟ್ಟ ಬದುಕಿನಲ್ಲಿ ಕರುಬಿಲ್ಲದೆ, ಹಿಂಸೆಯಿಲ್ಲದೆ ಎಲ್ಲರೊಂದಿಗೆ ಬೆರೆತು ಬಾಳುವ ಸಂಭ್ರಮ. ಯಾವುದು ಮಹತ್ವದ್ದು? ಶಿಷ್ಯನ ಎತ್ತರದ ಆಲೋಚನೆಗಳಿಂದಲೇ ಗುರುವಿನ ಮನಸ್ಸು ಆರ್ದ್ರಗೊಳ್ಳುತ್ತದೆ. ಅತ್ಯುತ್ತಮ ಪ್ರತಿಭೆ ನಡೆನುಡಿಯಲ್ಲಿ ಉತ್ತಮೋತ್ತಮ ವಿನಯವನ್ನೂ ಮನೋವೈಶಾಲ್ಯವನ್ನೂ ಪ್ರಕಟಿಸುತ್ತದೆ. ಏಕಲವ್ಯನ ಪ್ರತಿಭೆಯ ಕನ್ನಡಿಯಲ್ಲಿ ಗುರುವಿನ ಗತಿಬಿಂಬ ಮತ್ತು ಪ್ರತಿಬಿಂಬಗಳು ಒಟ್ಟಿಗೇ ಹೊಳೆಯುತ್ತವೆ. ಶಿಷ್ಯನ ಬೌದ್ಧಿಕ ನಿಲುವು ಗುರುವಿನ ಘನತೆಯನ್ನು ಹೆಚ್ಚಿಸುತ್ತದೆ. ಅಸೂಯೆ ಹಿಂಸೆಯ ಮೂಲ. ಹಾಗೆ ಬಂದು ಹೀಗೆ ಹೋಗುವ ಏಕಲವ್ಯ ತನ್ನ ಅನಸೂಯಾಪರ ನಡೆಯಿಂದ ಎತ್ತರದ ಘನತೆ ಗೌರವವನ್ನು ಪಡೆಯುತ್ತಾನೆ. ಈ ಪುಟ್ಟ ಜೀವನದಲ್ಲಿ ನಮ್ಮೆಲ್ಲರ ಪಾತ್ರಗಳೂ ಹೀಗೆ ಬಂದಿವೆ. ಹೇಗೆ ಯಾವಾಗ ಮುಗಿಯುತ್ತವೆಯೋ ಯಾರಿಗೂ ಗೊತ್ತಿಲ್ಲ. ಆದರೆ ಬದುಕಿರುವಷ್ಟು ಸಮಯವನ್ನು ಪ್ರೀತಿಯಿಂದ ನಲಿವಿನಿಂದ ಕಳೆಯಬೇಕು. ಅಸೂಯೆಯಿಂದ ಅಶಾಂತಿ. ಪ್ರೀತಿಯಿಂದ ನೆಮ್ಮದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.