ಧರ್ಮರಾಯ ನಾಳೆ ಬನ್ನಿ ಎಂದು ಹೇಳಿ ಕಳಿಸಿದ ರೈತರು ಹೇಳಿದ ಸಮಯಕ್ಕೆ ಬಂದರು. ಧರ್ಮರಾಯ ಏನಾದರೂ ಹೇಳುವ ಮೊದಲೇ ಜಮೀನು ಮಾರಿದ್ದ ರೈತ ಹೇಳುತ್ತಾನೆ: ‘ತಾನು ಜಮೀನು ಮಾರಿದ್ದೇನೆ ನಿಜ, ಅದರಲ್ಲಿ ದೊರೆತ ನಿಧಿಯನ್ನಲ್ಲ. ಕೇಳಿದರೆ ಆತ ಕೊಡುತ್ತಿಲ್ಲ. ಅದನ್ನು ತನಗೇ ಕೊಡಿಸಬೇಕು’.
ಜಮೀನು ಕೊಂಡ ರೈತ ಹೇಳುತ್ತಾನೆ: ‘ಅದು ಹೇಗಾಗುತ್ತದೆ? ಜಮೀನು ಖರೀದಿಸಿದ ಮೇಲೆ ಮುಗಿಯಿತು. ಅದರಲ್ಲಿ ಸಿಗುವ ಎಲ್ಲದೂ ನನ್ನದೇ. ನನಗೇ ನಿಧಿ ಬೇಕು, ಕೊಡಿಸಿ’ ಅಂತ ಅಹವಾಲು ಮಂಡಿಸಿದ. ಇಬ್ಬರೂ ರೈತರ ಮಾತು ಆಲಿಸಿದ ಧರ್ಮರಾಯ ತಲೆ ಮೇಲೆ ಕೈಹೊತ್ತು ಕುಳಿತ.
ನಿನ್ನೆ ಇದೇ ರೈತರು ಆಡಿದ ಮಾತು ಕೇಳಿಸಿಕೊಂಡು ಒಳಗೊಳಗೇ ಹಿಗ್ಗಿದ್ದ. ರಾತ್ರಿ ಬೆಳಗಾಗುವುದರೊಳಗೆ ಅವರ ಮಾತು, ಮನೋಧರ್ಮ ತದ್ವಿರುದ್ಧವಾಗಿದೆ. ಹೇಗೆ ಸಾಧ್ಯ? ಏನಾಗುತ್ತಿದೆ? ಎಂದು ಚಿಂತಿತನಾಗುತ್ತಾನೆ. ಅದೇ ಹೊತ್ತಿಗೆ ಕೃಷ್ಣ ದರ್ಬಾರನ್ನು ಪ್ರವೇಶಿಸುತ್ತಾನೆ. ಧರ್ಮರಾಯನ ಚಿಂತೆಗೆ ಕಾರಣವೇನು ಎಂದು ತಿಳಿದು ಕೃಷ್ಣ ನಸುನಗುತ್ತಾನೆ. ರೈತರ ಮಾತು ಮತ್ತು ಮನೋಧರ್ಮದ ಬದಲಾವಣೆಗೆ ಕಾರಣವೇನು ಎಂಬುದು ಕೃಷ್ಣನಿಗೆ ಮೊದಲೇ ತಿಳಿದಿದೆ. ಆದರೆ ಆತ ಅದನ್ನು ಎಲ್ಲಿಯೂ ಪ್ರಕಟಿಸಿಲ್ಲ. ಪಟ್ಟಾಭಿಷೇಕವಾಗಿ ಹಲವು ದಿನ ಕಳೆದರೂ ಧರ್ಮರಾಯನಿಗೂ ಹೇಳಿಲ್ಲ. ಈಗ ಹೇಳುವ ಸಂದರ್ಭ ಬಂದಿದೆ. ಹೇಳುತ್ತಾನೆ: ‘ಧರ್ಮರಾಯ, ರಾತ್ರಿ ಬೆಳಗಾಗುವುದರೊಳಗೆ ಈ ರೈತರ ಮನೋಧರ್ಮದಲ್ಲಿ ಉಂಟಾದ ವಿಚಿತ್ರ ಬದಲಾವಣೆ ಸಹಜವಾಗಿದೆ. ನಿನ್ನೆ ರಾತ್ರಿಗೆ ನಿನ್ನ ದ್ವಾಪರಯುಗ ಮುಗಿದು ಕಲಿಯುಗ ಕಾಲಿಟ್ಟಿದೆ’.
ನಾವು ಕಾಲ ಬದಲಾಗಿದೆ ಅನ್ನುತ್ತೇವೆ, ಕಾಲ ಕೆಟ್ಟು ಹೋಯಿತು ಅಂತಲೂ ಹಪಹಪಿಸುತ್ತೇವೆ. ವಾಸ್ತವದಲ್ಲಿ ಕಾಲ ಬದಲಾಗುವುದಿಲ್ಲ. ಸಕಲ ಚರಾಚರ ವಸ್ತುಗಳಿಗೆಲ್ಲ ಅದೇ ಹಗಲು ರಾತ್ರಿಗಳು. ಬಡವನಿಗೂ ಧನಿಕನಿಗೂ ಇಪ್ಪತ್ನಾಲ್ಕು ಗಂಟೆಗಳೇ. ಹಕ್ಕಿಗಳ ಇಂಚರದಲ್ಲಿ, ನದಿಗಳ ಕಲರವದಲ್ಲಿ, ಬೆಟ್ಟ ಗುಡ್ಡಗಳ ಅಗಾಧತೆಯಲ್ಲಿ, ಕಡಲ ಸೌಂದರ್ಯದಲ್ಲಿ ನಿನ್ನೆಯತನ ಇಂದೂ ಉಳಿದಿದೆ, ಎಂದೆಂದೂ ಮುಂದುವರಿಯುತ್ತದೆ.
ನಿನ್ನೆ ಎನ್ನುವುದು ಎಷ್ಟು ಹಿಂದಕ್ಕೆ ಬೇಕಾದರೂ ಎಳೆದೊಯ್ಯುವ ಗತಕಾಲದ ಚರಿತ್ರೆಯೂ ಹೌದು, ಕೆಲವೇ ಕ್ಷಣಗಳ ಹಿಂದೆ ಸರಿದು ಹೋದ ಗಳಿಗೆಯೂ ಹೌದು. ಇನ್ನೆಂದೂ ಸಿಗದ ನಿನ್ನೆಯನ್ನು ಹಿಂತಿರುಗಿ ನೋಡಿದರೆ ಅದು ಸತ್ಯ, ನ್ಯಾಯ, ಪ್ರಾಮಾಣಿಕತೆ, ನಿರ್ಮೋಹದಿಂದ ಕೂಡಿತ್ತು ಅಂತ ಅನಿಸುತ್ತದೆ. ಇವತ್ತು ಅನ್ನುವ ವರ್ತಮಾನಕ್ಕೆ ನಿನ್ನೆಯನ್ನು ಒಳಗೊಳ್ಳುವ ಹಂಬಲವಿರಬೇಕು. ಅಂದರೆ ನಿನ್ನೆಯನ್ನು ಯಾವ ಮೌಲ್ಯಗಳು ನೈತಿಕ ಸದೃಢತೆಯಿಂದ ಚರಿತ್ರೆಯನ್ನಾಗಿ ರೂಪಿಸಿದವೋ ಅವೇ ಮೌಲ್ಯಗಳು ಇವತ್ತನ್ನೂ ಅಷ್ಟೇ ಅಥವಾ ಅದಕ್ಕಿಂತ ಗಟ್ಟಿಯಾಗಿ ಕಟ್ಟಲಾರವೇ ಎಂಬುದು ನಮ್ಮ ಚಿಂತನೆಯ ಮೂಲವಾಗಬೇಕು.
ಯುಗದ ಹೆಸರು ಬದಲಾದರೇನಂತೆ? ಯುಗಮನೋಧರ್ಮ ಬದಲಾಗಬೇಕಿಲ್ಲ. ಸತ್ಯ, ನ್ಯಾಯ, ಪ್ರಾಮಾಣಿಕತೆ, ನಿರ್ಮೋಹ ಇವು ಎಲ್ಲ ಕಾಲದ ಮೌಲ್ಯಗಳು. ಸತ್ಯ ಒಂದು ಯುಗಕ್ಕೆ ಮುಗಿಯಬೇಕಿಲ್ಲ. ಸುಳ್ಳು ಇನ್ನೊಂದು ಯುಗವನ್ನು ಆಳಬೇಕಿಲ್ಲ. ಆಳುವವನು ಸತ್ಯ ಅಹಿಂಸೆಗಳಂತಹ ಆಚಾರಕ್ಕೆ ಅರಸನಾಗಬೇಕೆಂತಲೇ ಕೃಷ್ಣ ದ್ವಾಪರ ಮುಗಿದು ಕಲಿ ಕಾಲಿಟ್ಟಿದ್ದಾನೆ ಎಂದು ಸೂಚಿಸುತ್ತಾನೆ. ಸತ್ಯವೇ ಕಲಿತನ ಎಂದು ಕಲಿಗೆ ಕಲಿಸುವ ಆಚಾರ್ಯಬುದ್ಧಿ ರಾಜನಿಗೂ ಪ್ರಜೆಗೂ ಸಮನಾಗಿರಬೇಕು. ಎಲ್ಲರ ಬದುಕಿಗೂ ಅದೇ ಶ್ರೇಯಸ್ಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.