ADVERTISEMENT

ಅನರ್ಥಕಾರಿ ಅಷ್ಟಮಂಗಳ ಯಾಗ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

`ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ~ ಎನ್ನುವುದು ಬಸವಣ್ಣನವರ ವಾಣಿ. ಅಂದರೆ ಜ್ಞಾನವಿದ್ದಲ್ಲಿ ಅಜ್ಞಾನಕ್ಕೆ ಅವಕಾಶ ಇರುವುದಿಲ್ಲ. ಬೆಳಕು ಇದ್ದಲ್ಲಿ ಕತ್ತಲೆ ಸಹಜವಾಗಿಯೇ ದೂರ ಸರಿಯುವುದು. ಆದರೆ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಇದಕ್ಕೆ ವಿರುದ್ಧವಾದ ಆಚರಣೆಗಳೇ ವಿಜೃಂಭಿಸುತ್ತಲಿವೆ. ಅಜ್ಞಾನದಿಂದ ಜ್ಞಾನದ ಕೇಡಾಗುತ್ತಿದ್ದರೂ ಅಜ್ಞಾನವನ್ನೇ ಜ್ಞಾನವೆಂದು, ಕತ್ತಲೆಯನ್ನೇ ಬೆಳಕೆಂದು ಪೂಜಾರಿ ಪುರೋಹಿತರು, ರಾಜಕಾರಣಿಗಳು ವೈಭವೀಕರಿಸುತ್ತಿರುವುದು ವಿಷಾದನೀಯ. ಅವರು ಬೆಳಕಿನಿಂದ ಕತ್ತಲೆಯ ಕಡೆಗೆ ಧಾವಿಸುವಲ್ಲಿ ಉತ್ಸುಕರಾಗಿರುವುದರ ಜೊತೆಗೆ ಸಮಾಜವನ್ನೂ ದಿಕ್ಕುತಪ್ಪಿಸುತ್ತಿರುವುದು ಅವರ ವರ್ತನೆಯಿಂದ ವ್ಯಕ್ತವಾಗುವುದು. ನಮ್ಮ ಈ ಅನಿಸಿಕೆಗೆ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಮಂತ್ರಿ-ಮಹೋದಯರು ಮಾಡಿಸುತ್ತಿರುವ ಪೂಜೆ, ಯಜ್ಞ-ಯಾಗಗಳು, ವಿವಿಧ ಮಠ, ದೇವಸ್ಥಾನಗಳಿಗೆ ಎಡತಾಗುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಪ್ರಸ್ತುತ ಚಾಮರಾಜನಗರದ ಘಟನೆಯನ್ನೇ ತೆಗೆದುಕೊಳ್ಳಿ.

ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವರು ಎನ್ನುವ ಕುರುಡು ನಂಬಿಕೆ ಅದು ಹೇಗೋ ಬಹುಕಾಲದಿಂದ ಜನಜನಿತವಾಗಿದೆ. ಇದನ್ನೇ ಸತ್ಯವೆಂದು ಭಾವಿಸಿದ ಮುಖ್ಯಮಂತ್ರಿಯಾದವರೆಲ್ಲ ತಮ್ಮ ಅಧಿಕಾರ ಉಳಿಸಿಕೊಳ್ಳುವ ದೂ(ದು)ರಾಲೋಚನೆಯಿಂದ ಅಪ್ಪಿತಪ್ಪಿಯೂ ಚಾಮರಾಜನಗರದತ್ತ ಹೆಜ್ಜೆ ಹಾಕುವ ಸಾಹಸ  ಮಾಡುತ್ತಿಲ್ಲ. ಇದೊಂದು ಮೌಢ್ಯದ ಪರಮಾವಧಿ ಎನ್ನುವ ವಿವೇಕ ನಮ್ಮ ರಾಜಕಾರಣಿಗಳಿಗೆ ಬಾರದಿರುವುದು ಈ ನಾಡಿನ ದೌರ್ಭಾಗ್ಯ. `ಶಿರ ಹೊನ್ನ ಕಳಸ~ ಎನ್ನುವ ಬಸವಣ್ಣನವರ ವಿಚಾರಗಳನ್ನು ಮನವರಿಕೆ ಮಾಡಿಕೊಂಡಿದ್ದರೆ `ಅದೇನು ಆಗುತ್ತದೆಯೋ ನೋಡೋಣ~ ಎಂದು ಧೈರ್ಯವಾಗಿ ಚಾಮರಾಜನಗರಕ್ಕೆ ಹೋಗಿಬರುತ್ತಿದ್ದರು. ಹುರುಳಿಲ್ಲದ ಮೂಢನಂಬಿಕೆಗಳಿಗೆ ಮನ್ನಣೆ ಕೊಡುತ್ತಿರಲಿಲ್ಲ. ಆದರೆ ಈ ಮಂತ್ರಿ-ಮಹೋದಯರು ತಮ್ಮ ತಲೆಯನ್ನು ಹೊನ್ನ ಕಳಸ ಮಾಡಿಕೊಳ್ಳಲು ಇಚ್ಛಿಸುತ್ತಿಲ್ಲ.

ಚಾಮರಾಜನಗರಕ್ಕೆ ಅಂಟಿರುವ ದೋಷವನ್ನು ನಿವಾರಿಸಲು ಸೆಪ್ಟೆಂಬರ್ 4 ರಿಂದ  `ಅಷ್ಟಮಂಗಳ ಯಾಗ~ವನ್ನು ಕೇರಳದ 35 ಜನ ಪುರೋಹಿತರಿಂದ ಮಾಡಿಸಿದ್ದು ನಿಜಕ್ಕೂ ಖಂಡನೀಯ. ಯಜ್ಞ, ಯಾಗ, ಹೋಮ, ಹವನ ಮಾಡಿದ ಮಾತ್ರಕ್ಕೆ ದೋಷಗಳು ನಿವಾರಣೆ ಆಗುವುದೆನ್ನುವುದು ಅಜ್ಞಾನ, ಅವಿವೇಕದ ಪ್ರತೀಕ.

ಅದಕ್ಕಾಗಿಯೇ ಬಸವಣ್ಣನವರು `ಗಿಳಿಯೋದಿ ಫಲವೇನು? ಬೆಕ್ಕು ಬಹುದ ಹೇಳಲರಿಯದು?~ ಎಂದಿದ್ದಾರೆ. ಗಿಳಿಶಾಸ್ತ್ರ ನಂಬಿ ಹಲವರು ತಮ್ಮ ಭವಿಷ್ಯ ಕೇಳಲು ಹೋಗುವರು. ಗಿಳಿ ಭವಿಷ್ಯ ಹೇಳಲು ಸಾಧ್ಯವೇ? ಅದು ತನ್ನ ಯಜಮಾನ ಕಲಿಸಿದಂತೆ ಮಾಡಬಹುದೇ ಹೊರತು ತನ್ನನ್ನೇ ಬೆಕ್ಕು ಯಾವಾಗ ತನ್ನನ್ನು ನುಂಗಲು ಬರುತ್ತದೆಂದು ತಿಳಿಯಲಾರದು. ತಿಳಿಯುವ ವಿವೇಕವೂ ಗಿಳಿಗೆ ಇರುವುದಿಲ್ಲ. ಅದೇ ರೀತಿ ನಮ್ಮ ಪುರೋಹಿತರಿಗೆ ತಮ್ಮ ಭವಿಷ್ಯವೇ ಗೊತ್ತಿರುವುದಿಲ್ಲ. ಆದರೂ ಶಾಸ್ತ್ರ, ಪಂಚಾಂಗ, ಹೋಮದ ನೆಪದಲ್ಲಿ ಮನೋದೌರ್ಬಲ್ಯವುಳ್ಳ ಜನರ ಮೇಲೆ ಸವಾರಿ ಮಾಡಿ ತಮ್ಮ ಉದರಪೋಷಣೆ ಮಾಡಿಕೊಳ್ಳುವಲ್ಲಿ ಅವರು ತುಂಬಾ ಬುದ್ಧಿವಂತರು.

ಹೋಮ, ಹವನ, ಯಜ್ಞ, ಯಾಗಗಳಿಂದಲೇ ಎಲ್ಲ ವಿಪತ್ತು, ದೋಷಗಳನ್ನು ನಿವಾರಿಸಿ ಒಳಿತು ಮಾಡಲು ಸಾಧ್ಯವಾಗಿದ್ದರೆ ವಿಜ್ಞಾನ ಇಷ್ಟೊಂದು ಬೆಳೆಯಬೇಕಿರಲಿಲ್ಲ. ವಿವಿಧ ಕಾಯಿಲೆಗಳನ್ನು ವಾಸಿ ಮಾಡಲು ದೊಡ್ಡ ದೊಡ್ಡ ಆಸ್ಪತ್ರೆ, ವೈದ್ಯರು, ಮೆಡಿಕಲ್ ಕಾಲೇಜುಗಳ ಅವಶ್ಯಕತೆ ಇರಲಿಲ್ಲ. ಅದಕ್ಕಾಗಿ ಕೋಟಿ ಕೋಟಿ ಹಣವನ್ನು ವ್ಯಯಿಸಬೇಕಾಗಿರಲಿಲ್ಲ. ಈ ಪೂಜಾರಿ ಪುರೋಹಿತರನ್ನು ಕರೆಸಿ ಅವರು ಹೇಳಿದ ಯಜ್ಞ, ಯಾಗ ಮತ್ತಿತರ ಪೂಜಾವಿಧಿಗಳನ್ನು ಮಾಡಿಸಬಹುದಿತ್ತಲ್ಲವೇ?

`ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ~ ಎನ್ನುವ ಹಾಗೆ ಈ ಜನರ ಅಂತರಂಗದಲ್ಲಿ ಪರಮಾತ್ಮ ನೆಲೆಗೊಂಡಿದ್ದರೆ ಇಂಥ ಅರ್ಥಹೀನ ಆಚರಣೆಗಳ ಮೂಲಕ ಜನರನ್ನು ಕುರಿಗಳನ್ನಾಗಿ ಮಾಡುತ್ತಿರಲಿಲ್ಲ. ಅದಕ್ಕಿಂತ ಮುಖ್ಯ ಸಂಗತಿ ಎಂದರೆ ಆತ್ಮಬಲ, ಮನೋಸ್ಥೈರ್ಯ ಬೆಳೆಸಿಕೊಂಡವರು ಯಾವ ಮೂಢನಂಬಿಕೆಗಳ ದಾಸರೂ ಆಗದೆ ತಮ್ಮ ವಿಚಾರ, ವಿವೇಕ ತೋರಿದ ದಾರಿಯಲ್ಲಿ ನಡೆಯುವರು.

ಇವತ್ತು ವಿಚಾರವಂತ, ವಿವೇಕವಂತ ನೇತಾರರ ಕೊರತೆಯನ್ನು ಧಾರ್ಮಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದೇವೆ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿರುವ ಅನೇಕ ಜನರು ಮನೋದೌರ್ಬಲ್ಯಕ್ಕೆ ಒಳಗಾಗಿ ಪೂಜಾರಿ ಪುರೋಹಿತರ ದಾಸರಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ. `ಮನಸ್ಸಿದ್ದಲ್ಲಿ ಮಾರ್ಗ~ ಎನ್ನುವ ಹಾಗೆ ಧೈರ್ಯದಿಂದ ಚಾಮರಾಜನಗರಕ್ಕೆ ಹೋದರೆ ಯಾರ ಅಧಿಕಾರವೂ ಹೋಗುವುದಿಲ್ಲ. ಅಧಿಕಾರ ಹೋಗುವುದು ಅವರ ಅನಾಚಾರ, ಭ್ರಷ್ಟತೆ, ದುರಾಸೆ, ಜನವಿರೋಧಿ ನಿಲವುಗಳಿಂದ. ಪ್ರಾಮಾಣಿಕರಾಗಿ, ಜನಪರ ಒಲವುಳ್ಳವರಾಗಿ, ನ್ಯಾಯನಿಷ್ಠುರರಾಗಿ, ದಕ್ಷ ಆಡಳಿತ ನೀಡುವವರು ಅಧಿಕಾರದ ಖುರ್ಚಿಗೆ ಅಂಟಿಕೊಳ್ಳುವುದಿಲ್ಲ. ಅವರಿಗೆ ಅಧಿಕಾರಕ್ಕಿಂತ ಆದರ್ಶ ಮುಖ್ಯವಾಗುವುದು.

ಅಧಿಕಾರ ನಮಗೆ ಅಂಟಿಕೊಳ್ಳಬೇಕೇ ಹೊರತು ನಾವು ಅಧಿಕಾರಕ್ಕೆ ಅಂಟಿಕೊಳ್ಳಬಾರದು. ದುರ್ದೈವವೆಂದರೆ ಅಧಿಕಾರಕ್ಕೆ ಅಂಟಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ಮಂತ್ರಿಗಳಾಗುತ್ತಲೇ ಹೋಮ, ಹವನಗಳ ಬೆನ್ನು ಹತ್ತುವರು. ಕಂಡ ಕಂಡ ದೇವಾಲಯ, ಮಠಗಳನ್ನು ಸುತ್ತುವರು. ಮಾಡಬೇಕಾಗಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಾವ ದೇವಾಲಯ, ಮಠಗಳಿಗೂ ಮಂತ್ರಿಗಳು ಹೋಗಬೇಕಾಗಿಲ್ಲ. ಯಜ್ಞ-ಯಾಗಗಳನ್ನು ಮಾಡಿಸಬೇಕಿಲ್ಲ. ಹಾಗೆಂದಾಕ್ಷಣ ಮಠ, ದೇವಾಲಯಗಳಿಗೆ ಹೋಗಲೇಬಾರದು ಎಂದು ನಮ್ಮ ಅಭಿಪ್ರಾಯವಲ್ಲ. ಮಠದ ಇಲ್ಲವೇ ದೇವಸ್ಥಾನದ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗ ಹೋದರೆ ಯಾರೂ ತಪ್ಪಾಗಿ ಭಾವಿಸುವುದಿಲ್ಲ. ಆದರೆ, ನಮ್ಮ ರಾಜಕಾರಣಿಗಳು ತಾವಾಗಿಯೇ ದೇವಸ್ಥಾನ, ಮಠಗಳಿಗೆ ಸುತ್ತುವುದನ್ನು ಕಂಡಾಗ ಇವರಿಗೆ ತಮ್ಮ ಜವಾಬ್ದಾರಿಗಿಂತ ಸ್ವಾಮಿಗಳ, ದೇವರ ದರ್ಶನ ಪಡೆಯುವುದೇ ಮಹತ್ವದಾಗಿ ತೋರುತ್ತಿರುವುದು ಅವರ ಹೊಣೆಗೇಡಿತನದ ಪ್ರತೀಕವಾಗಿದೆ.

ಇನ್ನಾದರೂ ನಮ್ಮ ನೇತಾರರು ಅಜ್ಞಾನ, ಮೂಢನಂಬಿಕೆಗಳನ್ನು ಮನದಿಂದ ಹೊರ ಹಾಕಿ ಯಜ್ಞ, ಯಾಗ, ಹೋಮ, ಹವನ ಮುಂತಾದ ಅವೈಜ್ಞಾನಿಕ, ಅವೈಚಾರಿಕ ಕೃತ್ಯಗಳನ್ನು ತ್ಯಜಿಸಿ, ಪೂಜಾರಿ ಪುರೋಹಿತರನ್ನು ದೂರವಿಟ್ಟು, ಹೊತ್ತಿಗೆ, ಶಾಸ್ತ್ರದ ಹಂಗಿನಿಂದ ಹೊರಬಂದು ತಾವು ಮಾಡಬೇಕಾಗಿರುವ ಜನಪರ ಕಾರ್ಯಗಳತ್ತ ಮುಖಮಾಡುವ ವಿವೇಕ ಬೆಳಸಿಕೊಳ್ಳಲಿ. ಒಂದು ವೇಳೆ, ಅವರು ತಮ್ಮ ದಿಕ್ಕನ್ನು ಬದಲಾಯಿಸಿಕೊಳ್ಳದಿದ್ದರೆ ಜನರಾದರೂ ಪ್ರಜ್ಞಾವಂತರಾಗಿ ದಿಕ್ಕುತಪ್ಪಿ ದಿಂಡುರುಳುತ್ತಿರುವ ನೇತಾರರಿಗೆ ದಿಕ್ಕು ತೋರಿಸುವ ಜ್ಯೋತಿಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.