ದೇಶಕ್ಕೆ ಗಮನಾರ್ಹವಾಗಿ ಒಳಿತನ್ನು ಉಂಟುಮಾಡುವ ದೂರದೃಷ್ಟಿಯ ದಾಖಲೆ ಮಂಡಿಸುವಲ್ಲಿ ಕೇಂದ್ರದ `ಯುಪಿಎ~ ಸರ್ಕಾರ ಅಪೂರ್ವ ಅವಕಾಶಹಾಳು ಮಾಡಿಕೊಂಡಿರುವುದು ನಿಜಕ್ಕೂ ಖೇದಕರ. ಅಭಿವೃದ್ಧಿ ದರ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ, (ಚೀನಾದ ಶೇ 9.2ರಷ್ಟು ಆರ್ಥಿಕ ವೃದ್ಧಿಗೆ ಹೋಲಿಸಿದರೆ, ದೇಶದ `ಜಿಡಿಪಿ~ ದರ ಶೇ 6.9ರಷ್ಟಿದೆ) ಪ್ರಣವ್ ಅವರು ಆರ್ಥಿಕ ವೃದ್ಧಿಗೆ ಅಗತ್ಯವಾದ ಶಕ್ತಿ ತುಂಬುವಂತಹ ದೂರಗಾಮಿ ಪರಿಣಾಮ ಬೀರಬಹುದಾದ ಬಜೆಟ್ ಮಂಡಿಸುವಲ್ಲಿ ವಿಫಲರಾಗಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಮತ್ತು ಕೈಗಾರಿಕಾ ವಲಯದ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಆರ್ಥಿಕ ಸಮೀಕ್ಷೆಯು ಸ್ಪಷ್ಟವಾಗಿ ಹೇಳಿದೆ. ಸೇವಾ ವಲಯದ ಶೇ 9.4ರಷ್ಟು ವೃದ್ಧಿ ದರಕ್ಕೆ ಹೋಲಿಸಿದರೆ, ಕೃಷಿ ಉತ್ಪಾದನೆಯು ಶೇ 4ರ ನಿರೀಕ್ಷೆಗೆ ಬದಲಿಗೆ ಕೇವಲ ಶೇ 2.5ರಷ್ಟಾಗಿದೆ. ಕೈಗಾರಿಕಾ ಉತ್ಪಾದನೆ ಶೇ 4ರಿಂದ ಶೇ 5ರಷ್ಟಿದೆ. ಇದು ಇತ್ತೀಚಿನ ವರ್ಷಗಳಲ್ಲಿಯೇ ಅತಿ ಕಡಿಮೆ ಮಟ್ಟದಲ್ಲಿ ಇದೆ.
ಕೃಷಿ ರಂಗದಲ್ಲಿನ ವೆಚ್ಚಕ್ಕೆ ಬಜೆಟ್‌ನಲ್ಲಿ ಗಮನಾರ್ಹ ಪ್ರಮಾಣದ ಹಣದ ನೆರವು ಒದಗಿಸಲಾಗಿದ್ದರೂ, ಕೃಷಿ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಮುನ್ನೋಟ ಒದಗಿಸುವಲ್ಲಿ ಪ್ರಣವ್ ವಿಫಲರಾಗಿದ್ದಾರೆ. ಇನ್ನೊಂದೆಡೆ ಕೈಗಾರಿಕಾ ಉತ್ಪಾದನೆ ಹೆಚ್ಚಿಸಲು ಕೂಡ ಬಜೆಟ್ ವಿಫಲವಾಗಿದೆ.
ಹೆಚ್ಚಿದ ಅವಲಂಬನೆ: ಬಜೆಟ್‌ನಲ್ಲಿ ಸೇವಾ ವಲಯದ ಮೇಲೆ ಅತಿಯಾಗಿ ಅವಲಂಬಿಸಿರುವುದು ಕಂಡು ಬರುತ್ತದೆ. ಒಟ್ಟು ಆಂತರಿಕ ಉತ್ಪನ್ನದಲ್ಲಿ ಈ ವಲಯದ ಕೊಡುಗೆ ಈಗಾಗಲೇ ಶೇ 59ರಷ್ಟಾಗಿದೆ. ಈ ವಲಯದ ಮೇಲಿನ ಅವಲಂಬನೆಗೆ ಇನ್ನಷ್ಟು ಒತ್ತು ನೀಡಿದರೆ, ಅದರಿಂದ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ದೇಶದ ಅರ್ಥ ವ್ಯವಸ್ಥೆಯು, ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ ನಿರ್ಲಕ್ಷಿಸಿ ಸೇವೆಗಳ ಮೇಲೆ ಅತಿಯಾಗಿ ಅವಲಂಬಿಸುವ ಅಪಾಯಕಾರಿ ಹಂತಕ್ಕೆ ತಲುಪಲಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದಿರುವ ಆರ್ಥಿಕ ಹಿಂಜರಿಕೆಯ ಮತ್ತು ಒಟ್ಟಾರೆ ಅರ್ಥ ವ್ಯವಸ್ಥೆಯು ಮಂಜಿನಂತೆ ಕರಗುತ್ತಿರುವುದಕ್ಕೆ ಸೇವಾ ವಲಯದ ಮೇಲಿನ ಅತಿಯಾದ ಅವಲಂಬನೆಯೇ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ನಾವು ಕೂಡ ಅದೇ ಹಾದಿಯಲ್ಲಿ ಸಾಗುವುದು ವಿವೇಕದ ನಿರ್ಧಾರವಾಗಲಾರದು.
ಭಾರತ ಈಗಲೂ ಗ್ರಾಮ ಪ್ರಧಾನ ಅರ್ಥ ವ್ಯವಸ್ಥೆಯ ದೇಶವಾಗಿದೆ. ಕೃಷಿ ಉತ್ಪಾದನೆಯು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ರೈತ ಸಮುದಾಯಕ್ಕೆ ಸಂಪತ್ತು ತಲುಪದೇ ಹೋಗಬಹುದು. ಇದರ ಫಲವಾಗಿ ಬಡತನವು ದೇಶದ ವರ್ಚಸ್ಸನ್ನು ನಿರಂತರವಾಗಿ ಕುಂದಿಸುತ್ತಲೇ ಇರುತ್ತದೆ.
ವರಮಾನ ವೃದ್ಧಿ ವಿಷಯದಲ್ಲಿಯೂ ಬಜೆಟ್ ವಿಫಲವಾಗಿದೆ ಎನ್ನಬಹುದು. ಆದಾಯ ತೆರಿಗೆಯಲ್ಲಿ ಅಲ್ಪಮಟ್ಟಿಗಿನ ವಿನಾಯ್ತಿ ಮಿತಿ ಹೆಚ್ಚಿಸಿರುವುದೂ ನಿರಾಶಾದಾಯಕವಾಗಿದೆ. ನಮ್ಮಲ್ಲಿ ಆದಾಯ ತೆರಿಗೆ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದರಿಂದ, ಈ ಬಾರಿಯಾದರೂ ಗಮನಾರ್ಹ ಪ್ರಮಾಣದ ರಿಯಾಯ್ತಿ ದೊರೆಯಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಸೇವಾ ತೆರಿಗೆಯನ್ನು ಶೇ 10ರಿಂದ ಶೇ 12ಕ್ಕೆ ಹೆಚ್ಚಿಸಿರುವುದು, ಆದಾಯ ತೆರಿಗೆ ದರಗಳನ್ನು ತಗ್ಗಿಸದಿರುವುದು ಮಧ್ಯಮ ವರ್ಗದವರ ವೆಚ್ಚದ ಸಾಮರ್ಥ್ಯ ಬರಿದಾಗಲಿದೆ.
ವಿಲಾಸಿ ಕಾರುಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ ಅನಿವಾರ್ಯವಾಗಿದ್ದರೂ, ಸೈಕಲ್‌ನಂತಹ ಸರಕುಗಳ ಮೇಲೆಯೂ ತೆರಿಗೆ ಹೆಚ್ಚಿಸಿರುವುದು ಮಾತ್ರ ಅರ್ಥವಾಗದು.
ಮೂಲ ಸೌಕರ್ಯ ರಂಗಕ್ಕೆ ಬಜೆಟ್ ಅನುದಾನ ಹೆಚ್ಚಿಸಿರುವುದು ಪ್ರಶಂಸನೀಯವಾಗಿದೆ. ಆದರೆ, ಬರೀ ಸಂಪನ್ಮೂಲ ಒದಗಿಸುವುದರಿಂದಷ್ಟೇ ಈ ವಲಯವು ನಿರೀಕ್ಷಿತ ಪ್ರಗತಿ ದಾಖಲಿಸಲಾರದು ಎನ್ನುವುದು ಹಲವು ವರ್ಷಗಳ ಅನುಭವ ಕಲಿಸಿಕೊಟ್ಟಿದೆ.
ಮೂಲ ಸೌಕರ್ಯ ಯೋಜನೆಗಳ ಜಾರಿ ಮೇಲೆ ನಿಗಾ ಇಡಲು ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದರಿಂದ ಯೋಜನೆಗಳು ವಿಳಂಬಗೊಳ್ಳುವ ಮತ್ತು ವೆಚ್ಚ ಹೆಚ್ಚುವ ಸಮಸ್ಯೆಗಳು ಉದ್ಭವಗೊಳ್ಳುತ್ತಲೇ ಇರುತ್ತವೆ.
ಷೇರು ವಿಕ್ರಯದ ಬಗ್ಗೆಯೂ ಬಜೆಟ್ ಸ್ಪಷ್ಟವಾದ ಮತ್ತು ವಾಸ್ತವಿನ ಮುನ್ನೋಟ ಹೊಂದಿಲ್ಲ.
ವಿಮಾನ ಯಾನ ಮತ್ತು ವಿದ್ಯುತ್ ಉತ್ಪಾದನೆ ವಲಯದಲ್ಲಿ ವಿದೇಶಿ ಬಾಹ್ಯ ಸಾಲಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ವಿಮಾನ ಇಂಧನ ಮತ್ತಿತರ ಕಚ್ಚಾ ಸರಕುಗಳ ಮೇಲಿನ ತೆರಿಗೆ ದರಗಳ ಸರಳೀಕರಣದಿಂದ ಈ ಎರಡೂ ವಲಯಗಳು ಎದುರಿಸುತ್ತಿರುವ ಬಿಕ್ಕಟ್ಟು ದೂರ ಮಾಡಬಹುದು.
ತಯಾರಿಕೆ ರಂಗದಲ್ಲಿಯೂ ಉತ್ಪಾದನೆ ಹೆಚ್ಚಿಸಲೂ ಸಾಕಷ್ಟು ಕ್ರಮಗಳು ಇಲ್ಲದಿರುವುದೂ ಕಂಡು ಬರುತ್ತದೆ. ಶುದ್ಧ ತಂತ್ರಜ್ಞಾನ, ಪರಿಸರ ಸಂರಕ್ಷಣೆಗೆ ವಿಶ್ವದಾದ್ಯಂತ ಜಾಗೃತಿ ಕಂಡು ಬಂದಿರುವಾಗ, ನಮ್ಮಲ್ಲೂ ಸೌರಶಕ್ತಿ ಮತ್ತಿತರ ಪುನರ್ಬಳಕೆ ಇಂಧನ ಉತ್ಪಾದನೆಗೆ ರಾಷ್ಟ್ರೀಯ ಸೌರಶಕ್ತಿ ಯೋಜನೆಯಡಿ ಹೆಚ್ಚಿನ ಪ್ರಮಾಣದ ಹಣಕಾಸಿನ ನೆರವು ಕಲ್ಪಿಸಬೇಕಾಗಿತ್ತು. ಅಂತಹ ಸಾಧ್ಯತೆಗಳೂ ನಿಜವಾಗಿಲ್ಲ.
ಬಜೆಟ್ ರಾಜಕೀಯ ಮತ್ತು ಆರ್ಥಿಕ ದಾಖಲೆಯೂ ಆಗಿರುತ್ತದೆ. ರಾಜಕೀಯ ದೃಷ್ಟಿಕೋನದಿಂದ ನೋಡಿದರೂ, ಪ್ರಣವ್ ಮುಖರ್ಜಿ ದೂರದೃಷ್ಟಿಯ ಬಜೆಟ್ ಮಂಡಿಸುವಲ್ಲಿ ವಿಫಲವಾಗಿರುವುದು ಅಚ್ಚರಿ ಮೂಡಿಸುತ್ತದೆ.
ಇತ್ತೀಚೆಗೆ ಕೊನೆಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿನ ಕಳಪೆ ಸಾಧನೆ ಹಿನ್ನೆಲೆಯಲ್ಲಿ, `ಯುಪಿಎ~ ಸರ್ಕಾರ ಕ್ರಾಂತಿಕಾರಕ ಸ್ವರೂಪದ ಬಜೆಟ್ ಮಂಡಿಸಲಿದೆ ಎಂದೇ ಎಲ್ಲರೂ ಬಹುವಾಗಿ ನಿರೀಕ್ಷಿಸಿದ್ದರು.
ಈ ಸರ್ಕಾರವು ತನ್ನ ಅಧಿಕಾರ ಪೂರ್ಣಗೊಳಿಸುವ ಕೊನೆಯ ಘಟ್ಟದಲ್ಲಿ ಇದೆ. ಇಂತಹ ಸಂಕ್ರಮಣ ಕಾಲದಲ್ಲಿನ ಬಜೆಟ್, ಭವಿಷ್ಯದ ಮುನ್ನೋಟವೇ ಇರದ ಅತಿ ಸಾಮಾನ್ಯ ವ್ಯಕ್ತಿಯ ಬಡಬಡಿಕೆಯಂತೆ ಭಾಸವಾಗುತ್ತದೆ.
`ಪ್ರಣವ್ ಅವರು ಸದವಕಾಶದ ಬಸ್ಸನ್ನು ಮೈಲಿಗಳಷ್ಟು ದೂರದಿಂದಲೇ ತಪ್ಪಿಸಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ ಎನ್ನದೇ ವಿಧಿಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.