ADVERTISEMENT

ಅಪೌಷ್ಟಿಕ ಮಕ್ಕಳ ಅರಣ್ಯರೋದನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಹಣ, ಬಂಗಾರ, ಬೆಳ್ಳಿ ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿರುವ ವರದಿ ಓದಿ ಆಘಾತವಾದರೂ ಆಶ್ಚರ್ಯವೆನಿಸಲಿಲ್ಲ.

ರಾಜ್ಯದಲ್ಲಿ ಆರು ವರ್ಷದೊಳಗಿನ ಪುಟ್ಟಮಕ್ಕಳ ಅಂಗನವಾಡಿ ಆಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ರಾಜ್ಯದ ಖಾಸಗಿ ಕಂಪೆನಿಯೊಂದಕ್ಕೆ ಸಿದ್ಧ ಆಹಾರ ತಯಾರಿಸಲು ಗುತ್ತಿಗೆ ನೀಡಿದವರು ಈ ಅಧಿಕಾರಿಗಳು. ಅಂಗನವಾಡಿಯಲ್ಲಿ ಸ್ಥಳೀಯವಾಗಿ ಬಿಸಿ ಬಿಸಿಯಾಗಿ ಶಿಕ್ಷಕಿಯರು ತಯಾರಿಸುತ್ತಿದ್ದ ಆಹಾರದ ಬದಲಿಗೆ ಇಡೀ ರಾಜ್ಯಕ್ಕೆ ಸಿದ್ಧ ಆಹಾರ ತಯಾರಿಸಿ ಕೊಡಲು ಒಂದೇ ಕಂಪೆನಿಗೆ ಗುತ್ತಿಗೆ ನೀಡುವುದೆಂದರೆ ಅದು ಅಪಾರ ಪ್ರಮಾಣದ ಲಂಚ, ಭ್ರಷ್ಟಾಚಾರವಿಲ್ಲದೆ ಆಗಿರುವುದು ಸಾಧ್ಯವೇ ಇಲ್ಲ. ವರ್ಷಗಳಿಂದಲೂ ಈ ದಂಧೆ ನಡೆದುಕೊಂಡೇ ಬಂದಿದೆ. ಈ ವಿಚಾರವನ್ನು ಬೆಳಕಿಗೆ ತಂದು ಅದನ್ನು ವಿರೋಧಿಸಿ ರಾಜ್ಯದ `ಆಹಾರ ಹಕ್ಕಿಗಾಗಿ ಆಂದೋಲನ~ವು ಎರಡು ವರ್ಷಗಳಿಂದ ಹೋರಾಟವನ್ನು ಮಾಡುತ್ತಲೇ ಇದೆ. ಸಿದ್ಧಪಡಿಸಿದ ಆ ಆಹಾರವನ್ನು ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿ ಅದರಲ್ಲಿ ಪೌಷ್ಟಿಕಾಂಶಗಳ ಕೊರತೆ ಇರುವ ಬಗ್ಗೆಯೂ ತಜ್ಞರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 2010ರ ಡಿಸೆಂಬರ್ 14 ರಂದು ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ತಾಯಂದಿರು ತಮ್ಮ ಕೂಸುಗಳನ್ನೆತ್ತಿಕೊಂಡು ರಾಜಧಾನಿಗೆ ಬಂದು `ನಮ್ಮ ಮಕ್ಕಳಿಗೆ ಈ ಆಹಾರ ಕೊಡಬೇಡಿ~ ಎಂದು ಬೇಡಿಕೊಂಡಿದ್ದರು. ಆದರೆ ಅದು ಹಣ ಸಂಗ್ರಹಣೆಯಲ್ಲಿ ತಲ್ಲೆನರಾಗಿದ್ದ ಈ ಅಧಿಕಾರಿಗಳ ಕಿವಿಯ ಮೇಲೆ ಬೀಳಲಿಲ್ಲ. ಮಕ್ಕಳ ಹಕ್ಕುಗಳ ಆಯೋಗ, `ಸುಪ್ರೀಂ ಕೋರ್ಟಿಗೆ ಆಹಾರದ ಹಕ್ಕುಗಳ ಸಲಹೆಗಾರರು~ ನೀಡಿದ ಸಲಹೆಗಳು ಕೂಡ ಇವರಿಗೆ ರುಚಿಸಲೇ ಇಲ್ಲ.

ಅಂಗನವಾಡಿಗಳಲ್ಲಿ  ಮಕ್ಕಳಿಗೆ ಸ್ಥಳೀಯ, ಬೇಯಿಸಿದ ಬಿಸಿ ಊಟವನ್ನೇ ನೀಡಬೇಕೆಂದು ಸುಪ್ರೀಂ ಕೋರ್ಟು ಆದೇಶ ಮಾಡಿ ಹತ್ತು ವರ್ಷಗಳೇ ಕಳೆದಿವೆ. ಕರ್ನಾಟಕ ಸರ್ಕಾರದ ಈ ಉನ್ನತ ಅಧಿಕಾರಿಗಳು ಆ ಆದೇಶದ ಉಲ್ಲಂಘನೆ ಮಾಡಿ ಅಪರಾಧವೆಸಗಿದ್ದಾರೆ. ಹಿಂದೆ ಬಿಸಿ ಊಟವನ್ನು ನೀಡುತ್ತಿದ್ದ ಕಾಲದಲ್ಲಿ ಮಕ್ಕಳಿಗಾಗಿ ತಂದಿಟ್ಟ ಕಾಳು, ಬೇಳೆಗಳನ್ನು ಶಿಕ್ಷಕಿಯರು ಮನೆಗೆ ಒಯ್ಯುತ್ತಿದ್ದರೆಂಬ ಆಪಾದನೆ ಕೇಳಿಬರುತ್ತಿತ್ತು.

ADVERTISEMENT

ಆದರೆ ಕಡಿಮೆ ಸಂಬಳದ ಸ್ಥಳೀಯ ಶಿಕ್ಷಕಿಯ ಸಣ್ಣಪುಟ್ಟ ಕಳ್ಳತನವನ್ನು ತಪ್ಪಿಸಿ ದೊಡ್ಡ ಸಂಬಳದ ದೊಡ್ಡ ಅಧಿಕಾರಿಗಳು ದರೋಡೆಯನ್ನೇ ಮಾಡಲು ದಾರಿ ಮಾಡಿ ಕೊಡಲಾಯಿತು. ಬೇಯಿಸಿದ್ದೂ ಅಲ್ಲದ, ಸ್ಥಳೀಯವೂ ಅಲ್ಲದ ಆಹಾರದ ಪಾಕೀಟುಗಳನ್ನು ಕೊಡುವ ಗುತ್ತಿಗೆ ಮಕ್ಕಳ ಆಹಾರವನ್ನು ಕದಿಯುವ ಅಕ್ಷಮ್ಯ ಅಪರಾಧವೆಂದು ಎಲ್ಲರಿಗೂ ಗೊತ್ತು. ಈ ಕುಕೃತ್ಯವನ್ನು ಯಾರೂ ಪ್ರಶ್ನಿಸಬಾರದೆಂದು ಮೇಲಿಂದ ಕೆಳಗಿನವರೆಗೆ ಹಣದ ಕೆಂಪು ಕಾರ್ಪೆಟ್ಟನ್ನು ಹಾಕಿ ಮುಚ್ಚಲಾಯಿತು.

ಆರು ತಿಂಗಳ ಹಿಂದೆ ರಾಜ್ಯದ `ಸಾಮಾಜಿಕ ಪರಿವರ್ತನಾ ಆಂದೋಲನ~ವು ರಾಜ್ಯದಲ್ಲಿ  ಅಪೌಷ್ಟಿಕ ಮಕ್ಕಳ ಅಗಾಧ ಸಂಖ್ಯೆಯನ್ನು ಹೊರಗೆಡವಿದಾಗ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಕರ್ನಾಟಕದಲ್ಲಿ 70,000ದಷ್ಟು ಸಂಖ್ಯೆಯ ತೀವ್ರ ಅಪೌಷ್ಟಿಕ ಮಕ್ಕಳೇ? ದೃಶ್ಯ ಮಾಧ್ಯಮಗಳಲ್ಲಿ ಕಂಡ ರಾಯಚೂರಿನ ಆ ಮಕ್ಕಳ ಚಿತ್ರಗಳು ಸೊಮಾಲಿಯಾ, ಸೂಡಾನ್‌ಗಳ ಮಕ್ಕಳನ್ನು ನೆನಪಿಗೆ ತಂದವು. ರಾಜ್ಯದ ನಾಗರಿಕರು ತಲೆ ತಗ್ಗಿಸುವಂತಾಯ್ತು. ಆದರೆ ತಮ್ಮ ಕರ್ತವ್ಯ ಲೋಪವನ್ನು ಮುಚ್ಚಿಕೊಳ್ಳಲು ಇದೇ ಅಧಿಕಾರಿಗಳು ಆ ಮಟ್ಟದಲ್ಲಿ ಅಪೌಷ್ಟಿಕ ಮಕ್ಕಳು ಇಲ್ಲವೆಂದು ಅಲ್ಲಗಳೆದಿದ್ದರು.

ಅಧಿಕಾರಿಗಳು ಒಪ್ಪಿಕೊಳ್ಳಲಿ, ಇಲ್ಲವೆ ಅಲ್ಲಗಳೆಯಲಿ, ಕರ್ನಾಟಕದಲ್ಲಿ ಮಕ್ಕಳ ಮತ್ತು ಮಹಿಳೆಯರ ಸ್ಥಿತಿಗತಿ ಸೊಮಾಲಿಯಕ್ಕೆ ಹೋಲಿಸುವಂತೆ ಇರುವುದಂತೂ ಸತ್ಯ. ಬಾಂಗ್ಲಾದೇಶವನ್ನು ಬಿಟ್ಟರೆ ದಕ್ಷಿಣ ಏಶಿಯಾದಲ್ಲೇ ಅತಿಕೆಟ್ಟ ಪರಿಸ್ಥಿತಿ ಭಾರತದ್ದು. ದಕ್ಷಿಣ ಭಾರತದಲ್ಲೇ ಅತಿ ಹೀನ ಪರಿಸ್ಥಿತಿ ಕರ್ನಾಟಕದ್ದು. ತಮಿಳುನಾಡಿನಲ್ಲಿ ನೂರಕ್ಕೆ 0.02, ಕೇರಳದಲ್ಲಿ 0.06, ಆಂಧ್ರ ಪ್ರದೇಶದಲ್ಲಿ 0.09 ಮಕ್ಕಳು ಅತಿ ಅಪೌಷ್ಟಿಕತೆಯಿದ್ದರೆ, ಕರ್ನಾಟಕದಲ್ಲಿ ನೂರಕ್ಕೆ 0.2 ಮಕ್ಕಳು ಅತಿ ಅಪೌಷ್ಟಿಕತೆಯಿಂದ ನರಳುತ್ತಿವೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಜಂಟಿ ನಿರ್ದೇಶಕರೇ ಮಾಹಿತಿ ಹಕ್ಕಿನಡಿಯಲ್ಲಿ ಕೊಟ್ಟ ಮಾಹಿತಿಯ ಪ್ರಕಾರ 2009-10 ರಿಂದ 11 ಲಕ್ಷ 35 ಸಾವಿರ ಮಕ್ಕಳು ಸಾವಿನೆಡೆಗೆ ಹೆಜ್ಜೆ ಹಾಕುತ್ತಿವೆ.

ರಾಯಚೂರು ಜಿಲ್ಲೆಯಲ್ಲಿ ಮಾತ್ರವೇ 78,366 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಅಲ್ಲಿನ 599 ಮಕ್ಕಳು ಸಾವಿನ ದವಡೆಯಲ್ಲಿದ್ದಾರೆ. ಇದಕ್ಕಿಂತ ಗಂಭೀರ ಪರಿಸ್ಥಿತಿ ಬಾಗಲಕೋಟೆಯ್ದ್ದದು. ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಕೊಪ್ಪಳದ್ದು.

ಇಲಾಖೆಯ ಮಂತ್ರಿಗಳೇ ಬ್ಲೂ ಫಿಲ್ಮ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಮನೆಗೆ ಹೋಗಿಯಾಯಿತು. ಖಾತೆ ವಹಿಸಿಕೊಂಡ ಮುಖ್ಯಮಂತ್ರಿಗಳು `ಕ್ರಿಸ್ಟ್ ಫ್ರೈಡ್~ ಜೊತೆಗೆ ಒಪ್ಪಂದವಾಗಿದ್ದುದು ತಮಗೆ ಗೊತ್ತೇ ಇಲ್ಲ ಎಂದು   ನುಣುಚಿಕೊಳ್ಳುತ್ತಿದ್ದಾರೆ.

ಲೋಕಾಯುಕ್ತದಿಂದ ಹಿಡಿಯಲ್ಪಟ್ಟ ಅಧಿಕಾರಿಗಳು ಮತ್ತೆ ಬಡ್ತಿ ಪಡೆದು ಮೇಲಿನ ಸ್ಥಾನಕ್ಕೇರಿದ ಎಷ್ಟೋ ಉದಾಹರಣೆಗಳು ನಮ್ಮಮುಂದೆ ಇರುವಾಗ ಇವರೆಲ್ಲ ಕರ್ತವ್ಯಲೋಪಕ್ಕಾಗಿ ಕೆಲಸದಿಂದ ವಜಾ ಆದಾರೆಂಬ ಆಶೆ ಮಾಡೋಣವೇ? ಒಂದು ದೇಶದ, ಒಂದು ಸಮಾಜದ ಮಹಿಳೆ ಮತ್ತು ಮಕ್ಕಳ ಆರೋಗ್ಯ ಎಷ್ಟು ಚೆನ್ನಾಗಿದೆ ಎಂಬುದು ಇಡೀ ದೇಶದ, ಸಮಾಜದ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಆಯಾ ಸಮಾಜ ತನ್ನ ಮಕ್ಕಳಿಗೆ, ಮಹಿಳೆಯರಿಗೆ, ವಿಶೇಷ ಮಕ್ಕಳಿಗೆ, ವೃದ್ಧರಿಗೆ ಹೇಗೆ ನೋಡಿಕೊಳ್ಳುತ್ತಿದೆ ಎಂಬುದು ಆಯಾ ಸಮಾಜದ ಆರೋಗ್ಯವನ್ನು ತೋರಿಸಿಕೊಡುತ್ತದೆ.

ಇದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗವಿಕಲರ ಮತ್ತು ವೃದ್ಧರ ಹಿತಚಿಂತನೆಯನ್ನೂ ಮಾಡಬೇಕು. ಅಂಗವಿಕಲ. ವಿಧವೆ, ವಿಶೇಷ ಮಕ್ಕಳ, ವೃದ್ಧರ ಪಿಂಚಣಿ ಪಡೆಯುವವರಲ್ಲಿ ವಂಚಕರು ಇದ್ದಾರೆಂಬ ಕಾರಣಕ್ಕೆ ನಿಜವಾದ ಫಲಾನುಭವಿಗಳಿಗೂ ಆರು ತಿಂಗಳ ಕಾಲ ಪಿಂಚಣಿ ಬಂದ್ ಮಾಡಲಾಯಿತು.

ಆದರೆ, ಆ ತಪ್ಪಿಗೆ ಕಾರಣರಾದ ಅಧಿಕಾರಿಗಳ ಸಂಬಳವೇನೂ ನಿಲ್ಲಲಿಲ್ಲ. ಇಂಥ ಸರ್ಕಾರ ರಾಜ್ಯದಲ್ಲಿರುವಾಗ ಇಲ್ಲಿನ ಮಕ್ಕಳ ಅಪೌಷ್ಟಿಕತೆ ನೂರಕ್ಕೆ 0.2 ಇರದೆ ಇನ್ನೆಷ್ಟು ಇರಲು ಸಾಧ್ಯ?

ಮಕ್ಕಳ ಆಹಾರವನ್ನು ಕಸಿದುಕೊಂಡು ತಮ್ಮ ಜೇಬು ತುಂಬಿಸಿಕೊಂಡ ಈ ಜನಕ್ಕೆ ಕಿಂಚಿತ್ತಾದರೂ ನಾಚಿಕೆ, ಪಶ್ಚಾತ್ತಾಪ ಆಗದಿದ್ದರೆ ಅವರಲ್ಲಿ ಮನುಷ್ಯತ್ವ ಉಳಿದಿದೆ ಎನ್ನಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.