ADVERTISEMENT

ಆನೆಗಳ ಸಾವನ್ನು ತಡೆಯಲು ಸಾಧ್ಯವಿಲ್ಲವೇ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ಹಾಸನ ಜಿಲ್ಲೆಯ ಹೇಮಾವತಿ ನದಿ ತಟದಲ್ಲಿ ಕಳೆದ ವಾರ ಮೂರು ಆನೆ ಮರಿಗಳು ಬಲಿಯಾದವು. ಅವುಗಳ ಸಾವಿನ ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಹೆತ್ತ ತಾಯಿ ಆನೆ ಘೀಳಿಟ್ಟಿತು. ಇಡೀ ದಿನ ಯಾರಿಗೂ ಹತ್ತಿರ ಬರಲು ಬಿಡಲಿಲ್ಲ. ನೆರೆದಿದ್ದ ನೂರಾರು ಜನ ಅನುಕಂಪದಿಂದ ಮರುಗಿದರು. ಕೆಲವರು ಕಣ್ಣೀರಿಟ್ಟರು. ಅಷ್ಟಕ್ಕೆ ಮುಗಿಯಿತು. ಸತ್ತ ಆನೆ ಮರಿಗಳನ್ನು ಜೆಸಿಬಿ ಯಂತ್ರದಿಂದ ಹೊರತಂದು ಹೂಳಿದರು.

ಮೂಕಪ್ರಾಣಿಗಳ ವೇದನೆ, ನೋವು, ಸಂಕಟ ಮೌನವಾಗಿಯೇ ಉಳಿಯಿತು. ಹೊತ್ತು ಹೊತ್ತಿಗೆ ಹೊಟ್ಟೆಗಿಲ್ಲ. ಒಂದೆಡೆ ನಿಂತು ನೆಮ್ಮದಿಯಾಗಿ ಜೀವಿಸಲು ನೆಲೆ ಇಲ್ಲ. ಕಾಡು ನಾಡಾಯಿತು. ಭೂಮಿ ಒತ್ತುವರಿಯಾಯಿತು. ಗಿಡಮರಗಳೆಲ್ಲ ಧರೆಗುರುಳಿದವು. ನೀರು, ಜಲಾಶಯದ ಹಿನ್ನೀರು, ಹೆದ್ದಾರಿ, ಕಾಡಿನೊಳಗೆ ನಿರ್ಮಿತ ಕಾಲುವೆಗಳಿಂದ ಸಂಚಾರಕ್ಕೆ ಅಡ್ಡಿಯಾಯಿತು. ನಿರಾತಂಕವಾಗಿ ಬದುಕಿನ ಜೀವಗಳಿಗೆ ಬೆಲೆ ಇಲ್ಲದಾಯಿತು. ಹಸಿವು ತಣಿಸಿಕೊಳ್ಳಲು ದಾರಿ ಬದಲಾಯಿತು. ಆ ದಾರಿಯೇ ಜೀವಕ್ಕೆ ಮುಳುವಾಯಿತು.

ಇದು ಮೊದಲ ಘಟನೆ ಅಲ್ಲ. 24 ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ. ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಜೀವ ಹಾನಿಯ ಅಂತ್ಯ ಕಾಣುತ್ತಿದೆ. ಇದು ಹಾಸನಕ್ಕಷ್ಟೆ ಸೀಮಿತವಾಗಿಲ್ಲ. ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಇಂಥದೇ ಸಮಸ್ಯೆ. ಅತ್ತ ತಮಿಳುನಾಡು, ಕೇರಳದ ಆನೆಗಳಿಗೂ ಅತಂತ್ರ ಸ್ಥಿತಿ. ಮನುಷ್ಯನ ಒಂದು ಜೀವಕ್ಕೆ ಆರು ಆನೆಗಳ ಬಲಿಯಾಗುತ್ತಿವೆ. ಈ ಲೆಕ್ಕದ ಪ್ರಕಾರ 1987ರಿಂದ ಶುರುವಾದ ಸಾವಿನ ಸಂಚಿಗೆ ಹತ್ತೆಂಟು ಮುಖಗಳು ಬದಲಾಗಿವೆ. ಸದ್ಯ ಅಪಾಯಕಾರಿಯಾದ ವಿದ್ಯುತ್ ಬೇಲಿಯ ಮನುಷ್ಯನ ಹೈಟೆಕ್ ತಂತ್ರ ಜಾರಿಯಲ್ಲಿದೆ. ಈ ಕುತಂತ್ರಗಳಿಗೆ ಇದುವರೆಗೆ ಒಟ್ಟು 43 ಆನೆಗಳು ಜೀವ ತೆತ್ತಿವೆ.

ಮಲೆನಾಡಿನ ಭಾಗದಲ್ಲಿ ಆನೆ ಹಾವಳಿ ತಡೆಗೆ ವಿದ್ಯುತ್ ತಂತಿ ಬಳಸಬಾರದಂತೆ ಕಾನೂನು ಇದೆ. ವನ್ಯ ಜೀವಿ ರಕ್ಷಣೆ ನಿಯಮಗಳಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆದೇಶವಿದೆ. ಅಲ್ಲದೆ ಆರೋಪಿಗಳಿಗೆ ಕಠಿಣ ಶಿಕ್ಷೆಯೂ ಇದೆ. ಆದರೆ ಇಷ್ಟೆಲ್ಲ ಆನೆಗಳು ಸತ್ತರೂ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆಯಾದ ಉದಾಹರಣೆ ಇಲ್ಲ.

ಪ್ರತಿ ಬಾರಿ ಆನೆ ಸತ್ತಾಗಲೂ ಅರಣ್ಯ ಇಲಾಖೆ ಅಧಿಕಾರಿಗಳು ‘ಆರೋಪಿಗಳ ಪತ್ತೆಗೆ ತನಿಖಾ ತಂಡ ರಚಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದೇ ಹೇಳುತ್ತಾರೆ. ಆನೆ ಮಣ್ಣಾದ ಮೇಲೆ ತನಿಖೆಯೂ ಇಲ್ಲ; ತಂಡವೂ ಇಲ್ಲ. ಆರೋಪಿಗಳನ್ನು ಹುಡುಕುವುದು ಇನ್ನೆಲ್ಲಿ?

ಆನೆ ಸಾವಿಗೆ ಕಾರಣ ಯಾರು? ತಪ್ಪು ಹೇಗಾಗಿದೆ? ಅನಾಹುತಕ್ಕೆ ಕಾರಣಗಳೇನು? ಎಂಬಿತ್ಯಾದಿ ಎಲ್ಲ ತನಿಖಾ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಳಿಯೇ ಉತ್ತರವಿದೆ. ಎಲ್ಲವೂ ಅವರೆದುರೇ ನಡೆಯುವ ಘಟನೆಗಳು.

ವರ್ಷದ ಹಿಂದೆ ಈಗ ಮೂರು ಆನೆ ಮರಿಗಳು ಸತ್ತಿರುವ ಜಾಗದ ಸಮೀಪದಲ್ಲಿಯೇ ವಿದ್ಯುತ್ ತಂತಿ ತಗುಲಿ ಗಂಡಾನೆಯೊಂದು ಸತ್ತಿತ್ತು. ಅರಣ್ಯ ಇಲಾಖೆಗೆ ಆನೆಯ ದಂತದ ಮೇಲಷ್ಟೇ ಕಣ್ಣಿತ್ತು. ಸುತ್ತಲಿನ ಹಳ್ಳಿಗಳ ಮಹಿಳೆಯರು ಪೂಜೆ ಸಲ್ಲಿಸಿ ವಾಪಸ್ಸಾಗುತ್ತಿದ್ದಂತೆ ದಂತ ಕತ್ತರಿಸಿಕೊಂಡು, ತೋಡಿದ ಗುಣಿಯಲ್ಲಿ ಮುಚ್ಚಿದರು. ಮತ್ತೆಂದೂ ಘಟನೆ ಬಗ್ಗೆ ವಿಚಾರಣೆ ನಡೆಸಲಿಲ್ಲ. ಆಗಲೇ ಆರೋಪಿಗಳನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿದ್ದರೆ ಈಗ ಮತ್ತೆ ಮೂರು ಆನೆ ಮರಿಗಳು ಜೀವ ಕಳೆದುಕೊಳ್ಳುವ ಪ್ರಸಂಗ ಎದುರಾಗುತ್ತಿರಲಿಲ್ಲ.

ಪಶ್ಚಿಮಘಟ್ಟದಲ್ಲಿ ಆನೆಗಳ ಸಂತತಿ ಹೆಚ್ಚಾಗಿದೆ. ಹದಿನೈದು ವರ್ಷದ ಹಿಂದೆ 145ರಷ್ಟಿದ್ದ ಆನೆಗಳ ಸಂತತಿ ಈಗ 350ಕ್ಕೆ ಹೆಚ್ಚಿದೆ. ಇದಕ್ಕೆ ವ್ಯತಿರಿಕ್ತವಾಗಿ ಭೂಮಿ, ಕಾಡು ಕಡಿಮೆಯಾಗಿದೆ. ಕಾಡಿನಲ್ಲಿ ಜಲಾಶಯ ನಿರ್ಮಾಣಗೊಂಡಿವೆ.

ಬಹುತೇಕ ಪ್ರದೇಶ ಜಲಾವೃತವಾಗಿದೆ. ಹೀಗಾಗಿ ಆನೆಗಳಿಗೆ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ. ಬಂಡೀಪುರದಿಂದ ದಾಂಡೇಲಿವರೆಗೆ ಇದ್ದ ಆನೆ ಪಥ ತುಂಡಾಗಿದೆ. ಗಣಿಗಾರಿಕೆಯಿಂದ ಆನೆಗಳಿಗೆ ನಿದ್ರೆಯಿಲ್ಲ; ನೆಮ್ಮದಿ ಇಲ್ಲ. ಬಂಡೀಪುರ, ಸಕ್ರೆಬೈಲ್ ಆನೆ ಧಾಮದಲ್ಲಿಯೂ ಸಂತತಿ ಹೆಚ್ಚಾಗಿ, ಆಹಾರದ ಕೊರತೆ ಮತ್ತು ನಿರ್ವಹಣೆ ಸಮಸ್ಯೆಯೂ ತೀವ್ರವಾಗಿದೆ.

ನಾಡಿಗೆ ನುಗ್ಗಿ ಬೆಳೆ ಹಾಳು ಮಾಡುತ್ತವೆ. ಅವುಗಳಿಗೆ ಶಾಶ್ವತ ನೆಮ್ಮದಿ ಕೇಂದ್ರ ಬೇಕು. ಅದಕ್ಕಾಗಿ ಶ್ರೀಲಂಕಾ ಮಾದರಿಯಲ್ಲಿ ಆನೆ ಧಾಮ ಸ್ಥಾಪಿಸಬೇಕು. ಪುಂಡಾನೆಗಳನ್ನು ಸ್ಥಳಾಂತರಿಸಬೇಕು. ಜೀವ ಹಾನಿ, ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂಬುದು ಘಟ್ಟದ ಗಡಿಭಾಗದ ಜನರ ಆಗ್ರಹ. ಅದಕ್ಕಾಗಿ ಹಲವು ಬಾರಿ ಹೋರಾಟವನ್ನೂ ನಡೆಸಿದ್ದಾರೆ.

ಜನಪ್ರತಿನಿಧಿಗಳಿಗೆ ಇಂಥ ಸಮಸ್ಯೆಗಳೇ ರಾಜಕೀಯಕ್ಕೆ ಬಂಡವಾಳ. ಸಿಕ್ಕಿದ್ದೇ ಅವಕಾಶ ಎಂಬಂತೆ ಜನರನ್ನು ಎತ್ತಿ ಕಟ್ಟಿ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುವರು. ಮನುಷ್ಯ ಸತ್ತಾಗ ಎಲ್ಲರಿಗೂ ನೋವಾಗುತ್ತದೆ. ಆದರೆ ಅದೇ ಆನೆ ಸತ್ತಾಗ ಅದಕ್ಕೂ ಜೀವ ಇದೆ ಎಂಬುದು ಅರ್ಥವಾಗುವುದಿಲ್ಲ ಎನ್ನುವುದು ಪ್ರಾಣಿ ದಯಾ ಸಂಘಟನೆಗಳ ಆತಂಕ.

ಪರಿಸರವಾದಿಗಳಿಗೆ ಯಾರ ಪರ ಹೋರಾಟ ನಡೆಸಬೇಕು ಎನ್ನುವುದೇ ಗೊಂದಲ. ಇವುಗಳ ನಡುವೆ ಆನೆಗಳು ನಿರ್ದಯವಾಗಿ ಬಲಿಯಾಗುತ್ತಲೇ ಇವೆ. ಜನರ ದುರಾಸೆ ಕಡಿಮೆಯಾದರೆ ಮಾತ್ರ ಆನೆಗಳ ಸಾವಿಗೆ ಪರಿಹಾರ ಸಾಧ್ಯ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಹಾಗೂ ಪರಿಸರ ಪ್ರಜ್ಞೆ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.