ADVERTISEMENT

ಈ ವಿವೇಕಾನಂದರತ್ತ ಹೊರಳಲಿ ಭಾರತೀಯರ ಚಿತ್ತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ವಿವೇಕಾನಂದರನ್ನು ಕುರಿತು ದಿನೇಶ್ ಅಮಿನ್‌ಮಟ್ಟು ಜನವರಿ 16ರಂದು ಬರೆದ ಲೇಖನ ಉಂಟು ಮಾಡಿದ ಸಂಚಲನದ ಹಿನ್ನೆಲೆಯಲ್ಲಿ 19 ರಂದು `ಗ್ರಹಿಕೆಗೆ ಪೂರಕವಾಗಿ~ ಎಂಬ ವಿವರಣೆ ನೀಡಿದ್ದಾರೆ.

ಇಂದು, ರಾಷ್ಟ್ರ ವಿವೇಕಾನಂದರ 150ನೇ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ವಿವೇಕಾನಂದರು ಬದುಕಿದ್ದಾಗ ಭಾರತೀಯರು ಅವರನ್ನು ನಡೆಸಿಕೊಂಡ ಹಾಗೂ ಈಗ ಬಳಸಿಕೊಳ್ಳುತ್ತಿರುವ ರೀತಿಯನ್ನು ಕುರಿತು ಕೊಂಚ ವಿವೇಕದ ಕಣ್ತೆರೆದು ನೋಡಬೇಕಾಗಿದೆ.

ಅಮೆರಿಕದ ಪ್ರೊ. ಜಾನ್ ಹೆನ್ರಿರೈಟ್ `ಅಮೆರಿಕದ ಎಲ್ಲ ಪ್ರೊಫೆಸರ್‌ಗಳ ಒಟ್ಟುಗೂಡಿದ ಜ್ಞಾನಕ್ಕಿಂತಲೂ ವಿವೇಕಾನಂದರ ಜ್ಞಾನ ಉಜ್ವಲವಾದುದು~ ಎಂದರೆ `ಈ ವ್ಯಕ್ತಿಯ ಅದ್ಭುತ ಧೀಃಶಕ್ತಿಯ ಎದುರು ನಮ್ಮ ಪ್ರೊಫೆಸರ್‌ಗಳು ಮಕ್ಕಳಿದ್ದ ಹಾಗೆ~ ಎಂದು ಡಾ. ಮಿಲ್ಸ್ ಕೊಂಡಾಡಿದರು.
 
ಆದರೆ ಭಾರತೀಯರು? ವಿವೇಕಾನಂದರು ಬಾಲ್ಯಾರಂಭದಿಂದ ಪಟ್ಟ ಪರಿಪಾಟಲನ್ನು ಅವರ ಮಾತುಗಳಲ್ಲಿಯೆ ಕೇಳಿ (ತಂದೆ ಸತ್ತು ಸಂಸಾರ ಸಂಕಷ್ಟಕ್ಕೆ ಸಿಲುಕಿದ್ದಾಗ)- `ಚಾಕರಿ ಹುಡುಕಿಕೊಂಡು ಬೀದಿ ಬೀದಿ ಅಲೆದೆ. ಹೊಟ್ಟೆಗೆ ಅನ್ನವಿಲ್ಲ, ಕಾಲಿಗೆ ಮೆಟ್ಟಿಲ್ಲ. ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದೆ. ಮೊದಲು ಸಹಾಯ ನೀಡಲು ಇಚ್ಛಿಸುತ್ತಿದ್ದವರೇ ಈಗ ನಿರಾಕರಿಸುತ್ತಿದ್ದರು...~

`ಸನ್ಯಾಸ ಸ್ವೀಕರಿಸಿದ ಮೇಲೆ ಸುತ್ತಮುತ್ತಲೂ ಇರುವ ಜನರಿಂದ ನಮಗೆ ಸಿಕ್ಕಿದ್ದು ಒದೆತ ಮತ್ತು ನಿಂದೆಯಲ್ಲದೆ ಮತ್ತೇನೂ ಅಲ್ಲ. ನಮ್ಮ ಊಟಕ್ಕೆ ಮನೆಯಿಂದ ಮನೆಗೆ ಹೋಗಿ ಭಿಕ್ಷೆ ಬೇಡಬೇಕಾಗಿತ್ತು. ಅಲ್ಲೊಂದು ಚೂರು ಇಲ್ಲೊಂದು ಚೂರು ರೊಟ್ಟಿ ಸಿಕ್ಕುತ್ತಿತ್ತು.
 
ಜನರು ತಿಂದು ಉಳಿದ ತಂಗಳು, ಕಸ ಮುಂತಾದುವು ದೊರಕುತ್ತಿತ್ತು. ನನ್ನ ದೇಹಸ್ಥಿತಿ ಹದಗೆಡುತ್ತಾ ಬಂತು. ಯಾವಾಗಲೂ ಅತಿ ಬಡತನದ ಕನಿಷ್ಠ ಊಟ. ಕೆಲವು ವೇಳೆ ಕಲ್ಲಿನಂತೆ ಗಟ್ಟಿಯಾದ ರೊಟ್ಟಿ ಸಿಕ್ಕುತ್ತಿತ್ತು. ಆ ರೊಟ್ಟಿಯನ್ನು ತಿಂದಾಗ ಬಾಯಲ್ಲಿ ರಕ್ತ ಬರುತ್ತಿತ್ತು. ಹಲವು ತಿಂಗಳು ನಾನು ಇದನ್ನೇ ತಿಂದು ಬದುಕಿದ್ದೆ. ಇದು ನನ್ನ ದೇಹದಾರ್ಢ್ಯವನ್ನೇ ಕ್ಷೀಣಿಸಿತು..~

ಅಮೆರಿಕದಲ್ಲಿ ಕಷ್ಟದಲ್ಲಿದ್ದಾಗ ಹಣಕ್ಕಾಗಿ ತಂತಿ ಕಳಿಸಿದ್ದನ್ನು ತಿಳಿದ ಒಬ್ಬ ಥಿಯಾಸಫಿಕಲ್ ಸೊಸೈಟಿ ಸದಸ್ಯ `ಈಗ ಈ ಪಿಶಾಚಿ ಸಾಯುತ್ತದೆ, ದೇವರು ನಮ್ಮನ್ನು ಆಶೀರ್ವದಿಸಲಿ~ ಎಂದು ಬರೆದ. ಪ್ರತಿನಿಧಿ ಪತ್ರ ಕಳುಹಿಸಲು ವಿವೇಕಾನಂದರು ಭಾರತದ ಸಂಸ್ಥೆಗಳಿಗೆ ಬರೆದರು.

ಯಾರೂ ಕೊಡಲಿಲ್ಲ. ಬದಲಿಗೆ `ಈತ ಶೂದ್ರ, ಸನ್ಯಾಸಿ ಆಗುವ ಹಕ್ಕಿಲ್ಲ~ ಎಂದು ಬರೆದರು. ಅಮೆರಿಕದಲ್ಲಿ ವಿಜಯಿಯಾಗಿ ಹಿಂದಿರುಗಿ ಬಂದ ವಿವೇಕಾನಂದರು `ನನ್ನನ್ನು ಶೂದ್ರನೆಂದು ಕರೆದು ಸನ್ಯಾಸಿಯಾಗಲು ಅಧಿಕಾರವಿಲ್ಲವೆಂದು ಹೇಳಿದ್ದಾರೆ.
 
ಇದನ್ನು ಚರ್ಚಿಸುವವರಿಗೆ ಚರಿತ್ರೆ ಸ್ವಲ್ಪ ಗೊತ್ತಿರಬೇಕಿತ್ತು. ಮೂರು ವರ್ಣಗಳ ವಿಷಯ ಗೊತ್ತಿರಬೇಕಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ತ್ರಿವರ್ಣದವರಿಗೂ ಸನ್ಯಾಸದ ಹಕ್ಕಿದೆ ಎಂಬುದು ಗೊತ್ತಿರಬೇಕಿತ್ತು.

ಹದಿನಾಲ್ಕು ವರ್ಷಗಳಿಂದ ಉಪವಾಸವನ್ನು ಎದುರಿಸಿದವನನ್ನು, ಮಾರನೆಯ ದಿನ ಎಲ್ಲಿ ಊಟ ಸಿಗುವುದು, ಎಲ್ಲಿ ಮಲಗುವುದು ಎಂದು ಗೊತ್ತಿಲ್ಲದವನನ್ನು, ಇಷ್ಟು ಸುಲಭವಾಗಿ ಅಂಜಿಸುವುದಕ್ಕೆ ಆಗುವುದಿಲ್ಲ.

ಶಾಖವಾದ ಬಟ್ಟೆಯಿಲ್ಲದೆ, ಥರ್ಮೋಮೀಟರ್ ಸೊನ್ನೆಯ ಕೆಳಗೆ ಮೂವತ್ತು ಡಿಗ್ರಿ ತೋರಿಸುತ್ತಿದ್ದ ಕಡೆ ಬಾಳಿದವನನ್ನು ಭಾರತದಲ್ಲಿ ಅಷ್ಟು ಸುಲಭವಾಗಿ ಅಂಜಿಸುವುದಕ್ಕೆ ಆಗುವುದಿಲ್ಲ. ನಾನು ಪಶ್ಚಿಮ ದೇಶಗಳಿಂದ ಹಿಂದಿರುಗಿ ಬರುತ್ತಿದ್ದೇನೆ ಎಂದು ರಾಣಿ ರಾಸಮಣಿಯ ತೋಟದ ಮಾಲೀಕರು ನನ್ನನ್ನು ಒಳಕ್ಕೆ ಪ್ರವೇಶಿಸಲು ಬಿಡಲಿಲ್ಲ~ ಎಂದಿದ್ದಾರೆ.

ಭಾರತದ ಸ್ಥಿತಿಗತಿಯನ್ನು ಚೆನ್ನಾಗಿ ಅರಿತಿದ್ದ ವಿವೇಕಾನಂದರು ಆಶ್ರಮದ ಅಧ್ಯಕ್ಷರಾದ ಬ್ರಹ್ಮಾನಂದರಿಗೆ  `ಪೂಜೆಯ ಖರ್ಚನ್ನು ತಿಂಗಳಿಗೆ ಎರಡು ರೂಪಾಯಿಗೆ ಇಳಿಸು. ದೇವರ ಮಕ್ಕಳು ಉಪವಾಸದಿಂದ ನರಳುತ್ತಿದ್ದಾರೆ.
 
ನೀರು ಮತ್ತು ತುಳಸಿದಳದಿಂದ ಮಾತ್ರ ಪೂಜಿಸು. ದೇವರ ನೈವೇದ್ಯಕ್ಕೆ ಕೊಡುವ ಹಣವನ್ನು ದೀನರಲ್ಲಿರುವ ಜೀವಂತ ದೇವರಿಗೆ ಆಹಾರವನ್ನು ನೈವೇದ್ಯ ಮಾಡುವುದರಲ್ಲಿ ವ್ಯಯಿಸಲಿ~ ಎಂದರು. ಆದರೆ ಇಂದು ಇಡೀ ಭಾರತದಲ್ಲಿ ಆಗುತ್ತಿರುವುದೇನು? ದೇವರನ್ನು ಕೊಬ್ಬಿಸುತ್ತಾ ಜನರನ್ನು ಕೊಲ್ಲುತ್ತಿದ್ದೇವೆ.

`ಸತ್ಯ-ನನ್ನ ದೇವರು; ವಿಶ್ವ-ನನ್ನ ರಾಷ್ಟ್ರ~ ಎಂದ ವಿವೇಕಾನಂದರು `ನಾನು ಭಾರತಕ್ಕೆ ಸೇರಿರುವಷ್ಟೇ ವಿಶ್ವಕ್ಕೂ ಸೇರಿದ್ದೇನೆ. ನಾನು ಯಾವುದೇ ದೇಶದ ಗುಲಾಮನೆ? ಮೂಢರೂ ನಿರಭಿಮಾನಿಗಳೂ, ಜಾತಿ ಭ್ರಾಂತರೂ, ವಂಚಕರೂ, ಹೇಡಿಗಳೂ, ಕಟುಕರೂ ಆದ ಹಿಂದೂ ಪುರೋಹಿತರಂತೆ ಬದುಕಿ ಸಾಯಲು ನಾನು ಹುಟ್ಟಿರುವೆನೆಂದು ನೀನು ತಿಳಿದಿರುವೆಯಾ? ನಾನು ಹೇಡಿತನವನ್ನು ದ್ವೇಷಿಸುತ್ತೇನೆ~ ಎಂದಿರುವ ವಿವೇಕಾನಂದರು,
 
`ಹಿಂದೆ ಇದ್ದ ಧರ್ಮಗಳನ್ನೆಲ್ಲಾ ನಾನು ಸ್ವೀಕರಿಸುತ್ತೇನೆ.. ನಾನು ಮಹಮದೀಯರ ಮಸೀದಿಗೆ ಹೋಗುತ್ತೇನೆ, ಕ್ರೈಸ್ತರ ಚರ್ಚ್‌ನಲ್ಲಿ ಶಿಲುಬೆಯ ಎದುರಿಗೆ ಬಾಗುತ್ತೇನೆ. ಬೌದ್ಧರ ವಿಹಾರದಲ್ಲಿ ಬುದ್ಧನಲ್ಲಿ ಮತ್ತು ಅವನ ಧರ್ಮದಲ್ಲಿ ಶರಣಾಗತನಾಗುತ್ತೇನೆ.

ಹಿಂದೂಗಳೊಂದಿಗೆ ಕಾಡಿಗೆ ಹೋಗಿ ಎಲ್ಲರಲ್ಲಿ ಬೆಳಗುತ್ತಿರುವ ಆ ಪರಂಜ್ಯೋತಿಯ ದರ್ಶನಕ್ಕಾಗಿ ಧ್ಯಾನ ಮಾಡುವವರೊಂದಿಗೆ ನಾನೂ ಧ್ಯಾನ ಮಗ್ನನಾಗುತ್ತೇನೆ.... ಪ್ರಪಂಚದ ಆಧ್ಯಾತ್ಮಿಕ ದರ್ಶನಗಳು ಒಂದು ಅಮೋಘಶಾಸ್ತ್ರ, ಬೈಬಲ್, ವೇದ, ಕುರಾನ್ ಮತ್ತು ಇತರ ಧರ್ಮಶಾಸ್ತ್ರಗಳೆಲ್ಲ ಕೆಲವು ಪುಟಗಳು ಮಾತ್ರ.

ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ. ಅವನ್ನೆಲ್ಲಾ ಸ್ವೀಕರಿಸಲು ನಾನು ಸಿದ್ಧನಾಗಿರುವೆನು~ ಎಂದು ತಮ್ಮ ಹೃದಯವನ್ನು ತೆರೆದಿದ್ದಾರೆ.

ಜಾತಿ ಧರ್ಮ ಕುಲಗೋತ್ರಗಳಿಗೆ ಬದ್ಧವಾಗಿ ಮತೀಯಗೊಂಡಿರುವ ಭಾರತೀಯ ಮನಸ್ಸುಗಳು ವಿವೇಕಾನಂದರ ಈ ವಿಶ್ವವೈಶಾಲ್ಯ ಭಾವನೆಯನ್ನು ತಮ್ಮದಾಗಿಸಿಕೊಂಡು ವಿಶ್ವದ ಆದರ್ಶವಾಗಬಲ್ಲರೆ? ಹಾಗಾಗಲು ಮಾನವೀಯ ಹೃದಯದ ವಿವೇಕಾನಂದರತ್ತ ಹೊರಳಲಿ ಭಾರತೀಯರ ಚಿತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.