ADVERTISEMENT

ಕಾಣೆಯಾದ ಮಕ್ಕಳು ಎಲ್ಲಿದ್ದಾರೆ?

ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ, ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಉತ್ಸಾಹ ಮತ್ತು ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ

ಕೆ.ನರಸಿಂಹ ಮೂರ್ತಿ
Published 17 ಜನವರಿ 2019, 20:00 IST
Last Updated 17 ಜನವರಿ 2019, 20:00 IST
.
.   

ಕಾಣೆಯಾಗುವ ಪ್ರತಿ ಮಗುವೂ ಅಮೂಲ್ಯವಾದದ್ದು. ಬೇರೆ ಬೇರೆ ಕಾರಣಗಳಿಗಾಗಿ ಕಾಣೆಯಾಗುವ ಮಕ್ಕಳನ್ನು ಹುಡುಕುವ ಹೊಣೆ ಹೊತ್ತ ಸಂಸ್ಥೆಗಳು ಹಾಗೂ ಇಲಾಖೆಗಳ ನಡುವೆ ಸಮನ್ವಯದ ಕೊರತೆಯ ಕಾರಣದಿಂದ, ಎಲ್ಲ ಮಕ್ಕಳೂ ಕತ್ತಲ ಲೋಕದಿಂದ ಈಚೆಗೆ ಬರಲು ಆಗುತ್ತಿಲ್ಲ ಎಂಬುದು ಸದ್ಯದ ವಿಪರ್ಯಾಸ.

‘ಕಾಣೆಯಾದವರ ಪೈಕಿ ಪತ್ತೆಯಾದ ಮಕ್ಕಳೆಲ್ಲರೂ ನಮ್ಮ ಸಾಧನೆ, ಪರಿಶ್ರಮದ ಫಲ’ ಎನ್ನುವ ಅಧಿಕಾರಿಗಳು, ಪತ್ತೆಯಾಗದ ಮಕ್ಕಳ ಹುಡುಕಾಟದಲ್ಲಿ ತೋರಬೇಕಾದಷ್ಟು ಉತ್ಸಾಹ ಮತ್ತು ಬದ್ಧತೆಯನ್ನು ತೋರಲು ಮರೆಯುತ್ತಾರೆ.

ಬಳ್ಳಾರಿ ಜಿಲ್ಲೆಯಲ್ಲಿ 2018ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕಾಣೆಯಾದ 27 ಮಕ್ಕಳ ಪೈಕಿ, ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾದವರು 18. ಉಳಿದ ಒಂಬತ್ತರ ಪೈಕಿ ಐವರು ಪತ್ತೆಯಾಗಿಲ್ಲ ಏಕೆ ಎಂಬ ಪ್ರಶ್ನೆಗೆ, ಮಕ್ಕಳ ಸಹಾಯವಾಣಿ 1098 ಸಲಹಾ ಸಮಿತಿಯ ಸಭೆಯಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾಣೆಯಾದ ಮಕ್ಕಳ ಬ್ಯೂರೊ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಲ್ಲಿ ಸ್ಪಷ್ಟ ಉತ್ತರ ಇರಲಿಲ್ಲ.

ADVERTISEMENT

ಮಕ್ಕಳ ಪತ್ತೆಗಾಗಿ ಏನು ಕಾರ್ಯಾಚರಣೆ ನಡೆದಿದೆ ಎಂಬ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶ್ನೆಗೂ ಉತ್ತರ ದೊರಕಲಿಲ್ಲ. ಇಂಥ ಅಸ್ಪಷ್ಟ ಮಾಹಿತಿಯೊಂದಿಗೆ ಸಭೆ ನಡೆಸುವುದಾದರೂ ಹೇಗೆ ಎಂದು ಅವರು ಸಭೆಯನ್ನು ಮುಂದೂಡಿದರು. ಈ ಸಭೆಗೂ ಮುನ್ನ, ಸಂಬಂಧಿಸಿದ ಇಲಾಖೆ, ಘಟಕಗಳ ಸಭೆಯೂ ನಡೆದಿರಲಿಲ್ಲ ಎಂಬುದು ಗೊತ್ತಾಗಿ ಅವರು ಇನ್ನಷ್ಟು ಬೇಸರ ವ್ಯಕ್ತಪಡಿಸಿದರು.

ಬಾಲಕರ ಬಾಲಮಂದಿರದಿಂದಲೇ ಕಾಣೆಯಾದ ಏಳು ಮಕ್ಕಳ ಕುರಿತು ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಬಳಿಕ, ಅವರ ಪತ್ತೆಗಾಗಿ ಯಾವ ಅಧಿಕಾರಿ ಏನು ಮಾಡಿದರು ಎಂಬುದಕ್ಕೂ ಉತ್ತರವಿರಲಿಲ್ಲ.

ದೂರು ಕೊಟ್ಟರೆ ಸಾಕೆ? ಮಕ್ಕಳು ಕಾಣೆಯಾದ ಬಳಿಕ ದೂರು ಕೊಡುವುದು ಮತ್ತು ದೂರು ದಾಖಲಿಸುವುದು ಪ್ರಮುಖ ಜವಾಬ್ದಾರಿ. ಆ ಕೆಲಸವೇನೋ ಆಗುತ್ತದೆ. ಆದರೆ, ದೂರನ್ನು ಆಧರಿಸಿ ಮಕ್ಕಳ ಪತ್ತೆಗೆ ಜಂಟಿ ಕಾರ್ಯಾಚರಣೆ ರೂಪಿಸಬೇಕು. ಅದಕ್ಕೆ ಇಲಾಖೆಗಳ ನಡುವೆ ಸಮನ್ವಯ ಇರಲೇಬೇಕು. ಅದನ್ನು ಸಾಧಿಸಬೇಕಾದವರು ಯಾರು ಎಂಬುದನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿಟ್ಟುಕೊಂಡೇ ಎಲ್ಲರೂ ಕೆಲಸ ಮಾಡುತ್ತಿರುವುದರಿಂದ ಪತ್ತೆ ಹಚ್ಚುವುದು ದೂರವೇ ಉಳಿಯುತ್ತದೆ.

ಮಕ್ಕಳ ಪತ್ತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ನೇತೃತ್ವ ವಹಿಸಬೇಕು. ಆದರೆ, ಆ ಇಲಾಖೆ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಿದರೆ ಜವಾಬ್ದಾರಿ ಮುಗಿಯಿತು ಎಂಬ ಭಾವನೆಯಲ್ಲೇ ಕೆಲಸ ಮಾಡುತ್ತಿದೆಯೇ? ಕಾಣೆಯಾದ ಮಕ್ಕಳ ಕುರಿತು ಲಭ್ಯ ಮಾಹಿತಿಯನ್ನು ಕ್ರೋಡೀಕರಿಸಿದ ಕಡತಗಳನ್ನು ರೂಪಿಸುವುದು, ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳು ನಿರಂತರವಾಗಿ ನಿರ್ವಹಿಸಬೇಕಾದ ಕೆಲಸಗಳೂ ನಡೆಯುತ್ತಿಲ್ಲ.

ಸಭೆಯಲ್ಲಿ ಇನ್ನೊಂದು ಘಟನೆ ನಡೆಯಿತು. ಕಾಣೆಯಾದ ಮಕ್ಕಳ ದೂರುಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಮಾಹಿತಿ ಇಲ್ಲ, ಏಕೆಂದರೆ ಕೆಲವೇ ದಿನಗಳ ಹಿಂದಷ್ಟೇ ತಾವು ಅಧಿಕಾರ ಸ್ವೀಕರಿಸಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಸಭೆಗೆ ಬರುವಾಗ ಠಾಣೆಯಲ್ಲಿ ಲಭ್ಯವಿರುವ, ಕಾಣೆಯಾದ ಮಕ್ಕಳ ಕಡತಗಳ ಪರಿಶೀಲನೆಯನ್ನು ಅವರು ಮಾಡಿರಲಿಲ್ಲವೇ ಅಥವಾ ಅಂಥ ಕಡತಗಳನ್ನು ಅಲ್ಲಿ ನಿರ್ವಹಿಸುತ್ತಿಲ್ಲವೇ? ಕಡತಗಳನ್ನು ನಿರ್ವಹಿಸುತ್ತಿಲ್ಲ ಎಂದಾದರೆ, ಕಾಣೆಯಾದ ಮಕ್ಕಳ ಬಗ್ಗೆ ಪೊಲೀಸ್‌ ಇಲಾಖೆ ತನ್ನ ಹೊಣೆಯನ್ನು ಮರೆತಿದೆ ಮತ್ತು ಅದನ್ನು ನೆನಪಿಸಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬ್ಯೂರೊ ಕಣ್ಮುಚ್ಚಿ ಕುಳಿತಿವೆ ಎಂದಾಗುತ್ತದೆ.

ಪ್ರತಿ ಜಿಲ್ಲೆಯಲ್ಲೂ ಕಾರ್ಯ ನಿರ್ವಹಿಸುತ್ತಿರುವ ‘ಕಾಣೆಯಾದ ಮಕ್ಕಳ ಬ್ಯೂರೊ’ ಕಚೇರಿ ಎಲ್ಲಿರುತ್ತದೆ ಎಂಬುದು ಸಾರ್ವಜನಿಕರಿಗೆ ಗೊತ್ತೇ ಆಗುವುದಿಲ್ಲ. ಕಾಣೆಯಾದ ಮಕ್ಕಳ ಪೋಷಕರು ಕೂಡ ಪೊಲೀಸ್‌ ಠಾಣೆಗೇ ಹೋಗಬೇಕು. ಇದು ಪ್ರಾಥಮಿಕ ಕೆಲಸ. ನಂತರ ಪೋಷಕರ ನೆರವಿಗೆ ಬ್ಯೂರೊ ಹೇಗೆ ಬರುತ್ತದೆ? ಪೋಷಕರಿಗೆ ಬ್ಯೂರೊ ಬಗ್ಗೆ ತಿಳಿಹೇಳುವವರು ಯಾರು?

ಶಾಲೆ–ಕಾಲೇಜುಗಳು, ವಸತಿ ನಿಲಯಗಳು, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ಯುವಕ ಸಂಘಗಳು, ಮಹಿಳಾ ಸ್ವಯಸಹಾಯ ಸಂಘಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿಯ 1098 ಫಲಕಗಳು ಹೊಳೆಯುತ್ತವೆ. ಕೆಲವು ಸಂಖ್ಯೆಗಳು ಮಕ್ಕಳ ಜೀವನವನ್ನೇ ಬದಲಾಯಿಸುತ್ತವೆ ಎಂಬುದು ಅಂಥ ಫಲಕಗಳಲ್ಲಿ ಕಾಣುವ ಮಾತು.

ಕಣ್ಣ ಮುಂದೆ ಇರುವ ಬಾಲಕಾರ್ಮಿಕರು, ಬಾಲ್ಯವಿವಾಹಕ್ಕೆ ಒಳಗಾಗುವವರು, ನಿರ್ಗತಿಕರು, ದೌರ್ಜನ್ಯಕ್ಕೆ ಒಳಗಾಗುವವರು, ಭಿಕ್ಷೆ ಬೇಡುವವರು, ಅಂಗವಿಕಲರು, ಪರಿತ್ಯಕ್ತರು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳೊಂದಿಗೆ, ಕಾಣೆಯಾದ ಮಕ್ಕಳ ಜೀವನವನ್ನೂ ಸಹಾಯವಾಣಿ ಬದಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.