ADVERTISEMENT

ಕಾವೇರಿ ನದಿಯ ವಿಶೇಷ ಹರಿವು

ಕ.ವೆಂ.ರಾಜಗೋಪಾಲ, ಬೆಂಗಳೂರು
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಕಾವೇರಿಯನ್ನು ಜೀವನದಿ ಎಂದವರು ಕೊಂಚ ವಿಚಾರ ಮಾಡಬೇಕಾಗಿದೆ. ಇದು ಕಾವೇರಿಯ ಉಗಮದಲ್ಲಿ ಉತ್ತರ ಭಾರತದ ನದಿಗಳಂತೆ ಅಲ್ಲ. ಅವುಗಳಿಗೆ ಹಿಮಾಲಯದ ಅಭಯವಿದ್ದರೆ ಕಾವೇರಿಗೆ ಮಳೆಯೇ ಆಧಾರ. ವರ್ಷದಲ್ಲಿ ಎರಡು ಬಾರಿ ಮಾತ್ರ ಪ್ರವಾಹದಿಂದ ತುಂಬಿ ಹರಿಯುತ್ತದೆ.

ಮೊದಲ ಬಾರಿಗೆ ಭರಣಿ ಮಳೆಯಿಂದ. ಆದರೆ ಎರಡನೆಯದು ದೀಪಾವಳಿಯ ಸಮೀಪದ್ದು. ಈ ಎರಡನೆಯ ಬಾರಿಯು ಮೊದಲಿನಂತಲ್ಲ. ಕೇವಲ ಒಂದು ವಾರದ್ದು. ಇವುಗಳಲ್ಲಿ ಯಾವುದು ತಪ್ಪಿದರೂ ರೈತನಿಗೆ ಆತಂಕವೇ. ಆದುದರಿಂದಲೇ ಆತನು ರಾಗಿಯನ್ನು ನಂಬಿದವನು. ಉತ್ತರ ಭಾರತದವರಿಗೆ ಇಂಥ ಅನುಭವವು ಅಸಾಧ್ಯ! ರಾಗಿಯ ಬೆಳೆಗೆ ಕೇವಲ ಮೂರು ತಿಂಗಳು ಸಾಕು.

ಬಿತ್ತನೆಯ ಫಲ ಮನೆಯ ಬಾಗಿಲಿಗೆ ಖಂಡಿತ. ಆದುದರಿಂದ ರಾಗಿಯ ಬೆಳೆಯಲ್ಲಿ ಹಾಸನ ಜಿಲ್ಲೆಯ ರೈತನು ಸಂತುಷ್ಟ ಜೀವಿಯಾಗಬಲ್ಲ. ದೊಡ್ಡ ರಾಗಿ, ಗಿಡ್ಡ ರಾಗಿ ಮತ್ತು ಎಡ್ಡ ರಾಗಿಯೆಂದು ಮಳೆಯನ್ನು ಅನುಸರಿಸಿ ಪಂಚಾಂಗವನ್ನು ನಂಬಿಕೊಂಡೇ ಬದುಕುವ ರೈತ, ಈತ!

ಈಗ ಮಂಡ್ಯದವರು ನಂಬಿಕೊಂಡು ಬದುಕುವ ಕಾವೇರಿ ನದಿಯು ಒಂದು ವಿಶೇಷವೇ ಆಗಿದೆ. ಕಬ್ಬಿನ ಬೆಳೆಯಿಂದ ಮತ್ತು ಭತ್ತದ ಬೆಳೆಯಿಂದ ಬದುಕುವ ಈ ರೈತ ನಿಜಕ್ಕೂ ಹಣವಂತ. ತನ್ನದೇ ಆದ ಕನ್ನಡವನ್ನು ಸಾಂಸ್ಕೃತಿಕವಾಗಿಯೂ ವೃದ್ಧಿಪಡಿಸಿಕೊಂಡವನು.

ಕನ್ನಂಬಾಡಿಯ ಕಟ್ಟೆಯನ್ನು ಕುರಿತಾಗಿ ಪ್ರತಿ ದಿನ ಅದಕ್ಕೆ ಎರಡು ಸಾವಿರ ಕ್ಯೂಸೆಕ್ಸ್ ಹೆಚ್ಚಿನ ಹರಹನ್ನು ಕಾಣುತ್ತಿರುವ ನಮ್ಮ ಸುಪ್ರೀಂಕೋರ್ಟಿಗೆ ಇದೇ ಒಂದು ಕಾರಣವಾಗಿರುವುದೂ, ತಮಿಳುನಾಡು ಇದನ್ನೇ ಅನುಕೂಲಸಿಂಧುವಾಗಿಸಿಕೊಂಡು ತನ್ನ ರೈತನಿಗೆ ನೆರವಾಗುತ್ತಿರುವುದು ಬಹುಮುಖ್ಯ ವಿಚಾರವೇ ಆಗಿದೆ.

ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ಉತ್ತರದವರಿಗೆ (ದೆಹಲಿಯ ಜನಕ್ಕೆ) ರಾಗಿ ಮುದ್ದೆಯನ್ನು ತೋರಿಸಿಕೊಟ್ಟರೂ ತಮ್ಮ (ಹಾಸನ ಜಿಲ್ಲೆ) ಬಂಧುಗಳ ಬದುಕಿನ ಹೋರಾಟವನ್ನು ಕಾಣದೇ ಹೋದುದು ನನಗಂತೂ ಅಚ್ಚರಿಯನ್ನೇ ತಂದಿದೆ.

ಕನ್ನಂಬಾಡಿಯ ಎರಡು ಸಾವಿರ ಕ್ಯೂಸೆಕ್ಸ್ ವಿಶೇಷ ಹರಿವನ್ನು ಸರಿಯಾಗಿ ಅರ್ಥೈಸಬೇಕಾಗಿದೆ. ಇದರ ಜೀವಾಳವನ್ನು ಕುರಿತಂತೆ ಹೇಳುವುದಾದರೆ, ಕಾವೇರಿಯ ಜೀವವಿರುವುದು ಅದರ ಹುಟ್ಟು ಸ್ಥಾನದಲ್ಲಿ ಬೀಳುವ ಮಳೆಯದು - ಎಂಬುದೇ ಮುಖ್ಯ. ಮಳೆಯೇನಾದರೂ (ಭರಣಿ ಮಳೆ) ಕೈಕೊಟ್ಟರೆ ರಾಗಿಯ ಬೆಳೆಯಲ್ಲಿ ಅತ್ಯುತ್ತಮವೆನ್ನುವ  `ದೊಡ್ಡರಾಗಿ'ಯು ಕೈತಪ್ಪುತ್ತದೆ.

ADVERTISEMENT

ಕಟ್ಟೇಪರದಲ್ಲಿ (ಅರಕಲಗೂಡು ಕೊಣನೂರು ಹೋಬಳಿಗೆ ಸೇರಿದ) ಮೊದಲ ಕಟ್ಟೆಗೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಜೂನ್ ತಿಂಗಳ ಹನ್ನೆರಡಕ್ಕೆ ಇದರ ನಾಲೆಗೆ ನೀರು ಹರಿಯಬೇಕು. ಅದರಿಂದ  ಬರುವ ಬೆಳೆಯು ಭತ್ತವಾಗಿದೆ. ಸುಮಾರು ಮೂವತ್ತು ಮೈಲಿಯವರೆಗೆ  ಅದು ರೈತನ ಆಸರೆಯಾಗಿದೆ.

ಭತ್ತದಿಂದ ಆತನು ತನ್ನ ಆರ್ಥಿಕತೆಯನ್ನು ಸುಧಾರಿಸಿಕೊಳ್ಳುತ್ತಾನೆ. ಅಲ್ಲದೆ ತನ್ನ ಸುಗ್ಗಿಯನ್ನು ಆಚರಿಸುತ್ತಾನೆ. ಕೇವಲ ಮಳೆಯನ್ನು ಆಧರಿಸಿದ ಕಾವೇರಿಯ ಜೀವಕ್ಕೆ ಅಸ್ತಿತ್ವವನ್ನು ನೀಡಿದಂತೆ ವರ್ತಿಸಿರುವ ನಮ್ಮ ಸುಪ್ರೀಂ ನ್ಯಾಯಾಲಯವು ಈ ನದಿಯನ್ನು ನಂಬಿದ ರೈತನ ಪರಿಸ್ಥಿತಿಯನ್ನು ಅರಿತರೆ ಮಾತ್ರ ಈ ಹರಿವು ಅರ್ಥವಾಗುತ್ತದೆ.

ಈಗ ಒಂದು ವಿಶೇಷ ವಿಚಾರವನ್ನು ಗಮನಿಸಬಹುದು, ತಮಿಳುನಾಡು ಇಂದಿಗೂ ಮಳೆಯನ್ನು ನಂಬಿದಂತಿಲ್ಲ (ಸಮುದ್ರದ ಆಸರೆಯಿದ್ದರೂ ಅಷ್ಟೆ). ಅದರ `ಸಾಂಬ' ಬೆಳೆಗೆ ಕಾವೇರಿಯ ಆಶ್ರಯವು ಮುಖ್ಯವೆಂದು ಕಾಣುವಲ್ಲಿ ನಮ್ಮ ಸರ್ಕಾರವೂ ಹೊಣೆಗಾರನಾದಂತಿದೆಯಷ್ಟೆ.

ಸುಪ್ರೀಂ ನ್ಯಾಯಾಲಯಕ್ಕೆ ಈ ವಿಚಾರವನ್ನು ಮನದಟ್ಟು ಮಾಡಿಸದಿದ್ದಲ್ಲಿ ನಮ್ಮ ನಾಡಿನ ರೈತನಿಗೆ ಎರಡು ಬಗೆಯುವುದೇ ಪರಿಪಾಠವಾಗುವುದರಲ್ಲಿ ಆಶ್ಚರ್ಯವಿರಲಾರದು. ಈಗಲಾದರೂ ದಕ್ಷಿಣ ಭಾರತದ ನದಿಗಳಿಗೆ ಒಂದೇ ಬಗೆಯ ಆಸರೆಯಿರಲಾರದು. ಅಂದರೆ ನಮ್ಮ ನ್ಯಾಯಮೂರ್ತಿಗಳ ನ್ಯಾಯದ ಲಕ್ಷಣವನ್ನು ಬದಲಿಸಬೇಕೆಂದು ಪ್ರಾರ್ಥಿಸುವುದೊಂದೇ ಸಾಧ್ಯವಾಗುತ್ತದೆ.

ಕೊನೆಯದಾಗಿ ಕಾವೇರಿಯ ಜಲಾನಯನ ಪ್ರದೇಶದ ರೈತನು ಕನ್ನಂಬಾಡಿಯ ನೀರಿನ ಸಂಗ್ರಹವನ್ನು ನಂಬಲು ಸಾಧ್ಯವಾಗಲಾರದು. ಅದಕ್ಕೆ ಪ್ರತಿದಿನದ ವಿಶೇಷ ಹರಿವು (ಎರಡು ಸಾವಿರ ಕ್ಯೂಸೆಕ್ಸ್) ಹಾಸನ ಜಿಲ್ಲೆಯ (ಮೊದಲು) ರೈತನಿಗೆ ಹೊಟ್ಟೆಯ ಮೇಲೆ ಹೊಡೆಯದೇ ಸಾಧ್ಯವಾಗುವಂಥದಲ್ಲ! ಮಂಡ್ಯ ಮತ್ತು ಮೈಸೂರು ಜಿಲ್ಲೆಯ ರೈತರು ಕಾವೇರಿಯನ್ನು ನಂಬಿದವರನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.