ADVERTISEMENT

ಖುದಾಪುರ ಫಾರಂಗೆ ಎಲ್ಲಾ ಬರಲಿ, `ಬೆಲ್ಲ' ವೇ ಇರಲಿ

ಎಸ್.ಶಿವಣ್ಣ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ನನ್ನ ಹುಟ್ಟೂರು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮ. ನನ್ನ ವಿದ್ಯಾಭ್ಯಾಸವೆಲ್ಲ ನನ್ನ ಹುಟ್ಟೂರಿನಲ್ಲೆ. ನನ್ನ ಪ್ರಾಥಮಿಕ ಮಟ್ಟದ ಶೈಕ್ಷಣಿಕ ಪ್ರವಾಸವೆಲ್ಲ ಏ.11 ರ ಸಂಚಿಕೆಯಲ್ಲಿ ನಾಗೇಶ್ ಹೆಗಡೆ ಅವರ ಅಂಕಣದಲ್ಲಿ  ಪ್ರಸ್ತಾಪವಾದ ಖುದಾಪುರ ಫಾರಂನಲ್ಲಿ. (ಇದರ ಮೂಲ ಹೆಸರು ಕುರಿ ಫಾರಂ.)  ಹೀಗೆ ಹೆಸರು ಬರಲು ಕಾರಣ ಈ ಹಿಂದೆ ಇಲ್ಲಿ ಆಸ್ಟ್ರೇಲಿಯಾ ದೇಶದಿಂದ ಸುಮಾರು 10 ಸಾವಿರದಷ್ಟು ಕುರಿಗಳನ್ನು ಸರ್ಕಾರದ ವತಿಯಿಂದ ಖರೀದಿಸಿ ಇಲ್ಲಿನ ಅತ್ಯುತ್ತಮವಾದ ಮೆದು ಹುಲ್ಲನ್ನು ಮೇಯಿಸಿ ಅದರಿಂದ ಬರುವ ಉತ್ತಮ ಗುಣಮಟ್ಟದ ಉಣ್ಣೆಯಿಂದ ತುಂಬಾ ಮೃದುವಾದ ಕಂಬಳಿಗಳನ್ನು ತಯಾರಿಸಬಹುದಾದ ಯೋಜನೆಯಾಗಿತ್ತು. ಹಿಂದಿನ ಸರ್ಕಾರ ಕುರಿಗಳನ್ನು ಮೇಯಿಸಲು ಸುಮಾರು 10 ಸಾವಿರ ಎಕರೆ ಪ್ರದೇಶಕ್ಕೆ ಬೇಲಿಯನ್ನು ನಿರ್ಮಿಸಿ ಈ ಕುರಿಗಳನ್ನು ಸಾಕಲೆಂದೇ ನಿರ್ಮಿಸಿದ ಫಾರಂ ಕುರಿ ಫಾರಂ ಎಂದಾಗಿತ್ತು. ಈ ಕುರಿ ಫಾರಂ ನಮ್ಮ ಊರಿನ ಸುತ್ತಮುತ್ತಲ ಗ್ರಾಮದ ಎಲ್ಲಾ ಮಕ್ಕಳಿಗೂ ಉತ್ತಮವಾದ ಪ್ರವಾಸೀ ತಾಣವಾಗಿತ್ತು.

1978 ರಲ್ಲಿ ಪ್ರಪ್ರಥಮವಾಗಿ ಕೊಳವೆ ಬಾವಿಯ ಮೂಲಕ ನೀರನ್ನು ಎತ್ತುವುದನ್ನು ಇಲ್ಲಿಯೇ ಬಳಸಿದ್ದು ಎನ್ನುವುದು ನನ್ನ ಅನಿಸಿಕೆ. ಇದಕ್ಕೆ ಮೊದಲು ನಮ್ಮ ನೀರಿನ ಮೂಲ, ಬಾವಿಗಳು, ಕೆರೆಗಳು ಹಾಗೂ ಹಳ್ಳ ಮಾತ್ರವಾಗಿತ್ತು. ಇಲ್ಲಿ ಕೇವಲ ಕುರಿಗಳಿಗೆ ಮಾತ್ರ ಹುಲ್ಲನ್ನು ಬೆಳಸಲಾಗುತ್ತಿತ್ತು. ಆದರೆ ಈ ಹತ್ತುಸಾವಿರ ಎಕರೆ ಹುಲ್ಲಿನ ಪ್ರದೇಶವು ಖುದಾಪುರ ಗ್ರಾಮದಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ ಸುಮಾರು 8-10 ಕಿ.ಮೀ. ದೂರದ ನನ್ನಿವಾಳ ಎಂಬ ಗ್ರಾಮಕ್ಕೆ ಹೊಂದಿರುವ ಬೆಟ್ಟದವರೆಗೂ ಹಬ್ಬಿದೆ. ಇದು ಕುರುಚಲು ಸಸ್ಯಗಳಿಂದ ಕೂಡಿದ ಚಿಕ್ಕ ಪುಟ್ಟ ಮರಗಳು ಹಾಗೂ ಕಾಡು ಜಾತಿಯ ಸಸ್ಯಗಳನ್ನು ಹೊಂದಿರುವ ಚಿಕ್ಕ ಕಾಡು ಪ್ರದೇಶವಾಗಿರುವುದರಿಂದ ಕಾಡು ಪ್ರದೇಶವನ್ನು ತೋರಿಸಲು ನಮ್ಮ ಶಾಲೆಯಿಂದ ಶೈಕ್ಷಣಿಕ ಪ್ರವಾಸ ಎಂದು ಕರೆದುಕೊಂಡು ಹೋಗುವುದಾದರೆ ಇದೇ ಪ್ರದೇಶಕ್ಕೆ ಮಾತ್ರ ಕರೆದುಕೊಂಡು ಹೋಗುತ್ತಿದ್ದರು. ಈ ಕಾಡು ಪ್ರದೇಶ ಪ್ರವೇಶಿಸಿದರೆ ನಮಗೆ ಕಾಣಿಸುತ್ತಿದ್ದ ಕಾಡುಪ್ರಾಣಿಗಳೆಂದರೆ ಮೊಲ, ಜಿಂಕೆ, ನರಿ, ತೋಳ, ಇತರೇ ಚಿಕ್ಕ ಪುಟ್ಟ ಹಾವು ಮುಂಗಸಿ, ಹಂದಿ ಇವುಗಳು ಮಾತ್ರ.

ಆದರೆ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಕಾಣಿಸುತ್ತಿದ್ದ ಪ್ರಾಣಿಯೆಂದರೆ ಜಿಂಕೆ, ಕಾರಣ ಫಾರಂನ ಪ್ರವೇಶ ದ್ವಾರದಿಂದ ಸುಮಾರು 2 ಕಿ.ಮೀ. ದೂರದ ಮಧ್ಯದ ಕಾಡಿನಲ್ಲಿ ಕುರಿಗಾಗಿ ಸೀಮೆಹುಲ್ಲನ್ನು ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆಸಲಾಗಿತ್ತು. ಈ ಹುಲ್ಲು ನೀರನ್ನು ಚಿಮುಕಿಸುವಂತಹ ಸ್ಪ್ರಿಂಕ್ಲರ್‌ಗಳ ಮೂಲಕ ಆಸ್ಟ್ರೇಲಿಯಾ ಪ್ರದೇಶದಿಂದ ತಂದು ಬೆಳಸಿದಂತ ತಳಿಯಾಗಿದ್ದರಿಂದ ನೋಡಲು ತುಂಬಾ ಸುಂದರವಾಗಿ ಕಾಣುವುದರೊಂದಿಗೆ ಕುರಿಗಳಿಗೆ ಮೇಯಲು ಉತ್ತಮ ಮೇವಾಗಿತ್ತು. ನೋಡಲೂ ಸುಂದರವಾಗಿತ್ತು.

ಈ ಹುಲ್ಲನ್ನು ತಿನ್ನಲು ಕುರಿಗಳಲ್ಲದೇ ಹಿಂಡು ಹಿಂಡಾಗಿ ಜಿಂಕೆಗಳು ಬರುತ್ತಿದ್ದವು. ಇವು ಕಾಡಿನ ತುಂಬಾ ಅಲೆದಾಡಿಕೊಂಡು ಮೇಯುವುದು ಸಹಜವಾಗಿತ್ತು. ಇದು 1985 ರಿಂದ 1986 ರವರೆಗೆ ಮಾತ್ರ. ಕಾರಣ ಈ ವೇಳೆ ಇಡೀ ಚಿತ್ರದುರ್ಗ ಜಿಲ್ಲೆ ಬರಗಾಲಕ್ಕೆ ತುತ್ತಾಯಿತು. ಮಳೆಗಾಲ ಎನ್ನುವುದು ನೆನಪಿಗೆ ಮಾತ್ರ ಉಳಿಯುವಂತಹ ಕಾಲವಾಗಿ ಪರಿಣಮಿಸಿತು. ಇಡೀ ಜಿಲ್ಲೆಯೇ ಬರಗಾಲದಿಂದ ತತ್ತರಿಸಿತು. ಸರಿಯಾದ ಮಳೆ ಇಲ್ಲದ ಕಾರಣ ದನ, ಕರುಗಳಿಗೆ ಮೇಯಲು ಹುಲ್ಲೇ ಇಲ್ಲದಂತಾಯಿತು. ಫಾರಂನಲ್ಲಿ ಬೆಳೆಯುತ್ತಿದ್ದ ಹುಲ್ಲು ಸಹ ಮಳೆಯ ಅಭಾವದಿಂದ ಪೂರಾ ಒಣಗಿ ಹೋಯಿತು. ಕೊಳವೇ ಬಾವಿಗಳು ಬತ್ತಿದ್ದವು. ಕುಡಿಯುವ ನೀರಿಗೂ ತತ್ತರಿಸುವಂತಹ ಭೀಕರ ಬರಗಾಲ ಈ ಪ್ರದೇಶಕ್ಕೆ ಬಂದೊದಗಿತ್ತು. ಇಲ್ಲಿಯ ಕುರಿಗಳು ಸರಿಯಾದ ಮೇವಿಲ್ಲದೇ ಕಾಯಿಲೆಗೆ ತುತ್ತಾಗಿ ಸಾಯಲು ಪ್ರಾರಂಭಿಸಿದವು.

ಅಂದಿನಿಂದ ಇಲ್ಲಿಯ ಜೀವಸಂಕುಲವಾದ ಜಿಂಕೆಗಳು ಮೇವು ನೀರನ್ನು ಹರಸಿ ಗುಳೆ ಹೊರಡಲು ಮುಖ್ಯ ಕಾರಣವಾಯಿತು. ಹಾಗೂ ಭೀಕರ ಬರಗಾಲದಿಂದ ಬೇಸತ್ತ ಜನರು ಬೇಟೆಯಾಡುವುದನ್ನು ವೃತ್ತಿಯನ್ನಾಗಿಸಿಕೊಂಡು ಪ್ರತಿನಿತ್ಯ ಕಾಡಿನಲ್ಲಿ ಜಿಂಕೆ, ಮೊಲ, ಹಂದಿ, ನರಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಹಾದಿ ಹಿಡಿದರು. ಈ ಕಾರಣದಿಂದ ಇಡೀ ಕುರಿ ಫಾರಂ ಎನ್ನುವ ಕಾಡು ಪ್ರದೇಶವು ಜೀವಸಂಕುಲಗಳಿಲ್ಲದೆ ಬರಿದಾಯಿತು. ಅಳಿದುಳಿದ ಜಿಂಕೆಗಳು ಅಲ್ಲಿಂದ ನೀರು ಮೇವು ಹುಡುಕುತ್ತ, ಗುಳೆ ಹೊರಟದ್ದಕ್ಕೆ ಮತ್ತೊಂದು ಕಾರಣ ಮೇವಿನ ಕೊರತೆಯಿಂದ ಸುತ್ತಮುತ್ತಲ ಎಲ್ಲಾ ಗ್ರಾಮದ ಜನರು ದನ ಕರುಗಳನ್ನು ಕುರಿ ಫಾರಂಗೆ ಹೊಡೆದುಕೊಂಡು ಬಂದು ಮೇಯಿಸಿಕೊಂಡು ಹೋಗುವುದು ಅನಿವಾರ್ಯವಾಯಿತು. ಇದನ್ನು ನೋಡಿಕೊಳ್ಳಲು ನೇಮಕ ಮಾಡಿಕೊಂಡಿದ್ದ ದಿನಗೂಲಿ ನೌಕರರು ಸರಿಯಾದ ಸಂಬಳವಿಲ್ಲದ ಕಾರಣ ಕುರಿಗಳನ್ನು ಮಾರಿಕೊಂಡರು.

ಇಂತಹ ಪರಿಸ್ಥಿತಿಯಿಂದ ಇಡೀ ಕುರಿ ಫಾರಂ ಎನ್ನುವುದು ನಾಶವಾಯಿತು. ಅಳಿದುಳಿದ ಕುರಿಗಳನ್ನು ಸರ್ಕಾರದವರು ಹರಾಜಿನ ಮೂಲಕ ಮಾರಾಟ ಮಾಡಿದ್ದರು. ಅಲ್ಲಿನ ದಿನಗೂಲಿ ನೌಕರರನ್ನು ಕಾಯಂ ಮಾಡಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಡಿ ದರ್ಜೆ ನೌಕರರಾಗಿ ವರ್ಗಾವಣೆ ಮಾಡಿದರು. ಇದು 1997-98ರ ಹೊತ್ತಿಗೆ ಪೂರ್ಣ ಖಾಲಿಯಾಗುವ ಸ್ಥಿತಿಗೆ ಮರಳಿತು.

ಸರ್ಕಾರವು ಇಲ್ಲಿನ ಯಂತ್ರ ಸಾಮಗ್ರಿಗಳನ್ನು, ಟ್ರ್ಯಾಕ್ಟರ್‌ಗಳನ್ನು ಹರಾಜು ಮಾಡಿತು. ಇನ್ನು ಉಳಿದದ್ದು ಕೇವಲ ಕಟ್ಟಡಗಳು ಮಾತ್ರ.
ಕೊನೆಗೆ ಸರ್ಕಾರವು ಖಾಲಿ ಕಟ್ಟಡಗಳನ್ನು ಬಿಡುವುದು ಸೂಕ್ತವಲ್ಲವೆಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರುಗಳಿಗೆ ತರಬೇತಿ ಕೇಂದ್ರವಾಗಿ ಮಾರ್ಪಡಿಸಿದ್ದು ಈಗ ಅದು ಶಿಕ್ಷಕರ ತರಬೇತಿ ಕೇಂದ್ರವಾಗಿದೆ. ಇದಾದ ಹತ್ತು ವರ್ಷಗಳ ನಂತರ ನಾನು ನನ್ನ ಪತ್ನಿ ಮತ್ತು ಸ್ನೇಹಿತನೊಂದಿಗೆ ಆ ಸ್ಥಳಕ್ಕೆ ಹೋದಾಗ, ಅಲ್ಲಿ ನನಗೆ ಕಂಡದ್ದು ಕೇವಲ ಹಾವು ಮಾತ್ರ. ಅದನ್ನು ಬಿಟ್ಟರೆ ಬೇರೆ ಯಾವುದೇ ಪ್ರಾಣಿ ಸಂಕುಲವು ಇಲ್ಲ ಎನ್ನುವುದು ಅಂದೇ ತಿಳಿದದ್ದು. ಆ ಬರಿದಾದ ಕಾಡನ್ನು ನೋಡಿ ಮನಸ್ಸು ಭಾರವಾಯಿತು.  ನಾನು ಬಾಲ್ಯದಲ್ಲಿ ಕಾಡಿನ ನಡುವೆ ನೋಡಿದ ಒಂದು ದೇವಸ್ಥಾನವಿತ್ತು. ಅದು ರಸ್ತೆಯಿಂದ ಸುಮಾರು 3 ಕಿ.ಮೀ. ಇರಬಹುದು. ಅಲ್ಲಿಯವರೆವಿಗೂ ನಡೆದುಕೊಂಡೇ ಹೋದರೂ ಒಂದೂ ಪ್ರಾಣಿ ಕಾಣಿಸಲಿಲ್ಲ. ಕಾಣಿಸಿದ್ದು ನಮ್ಮ ಊರಲ್ಲಿ ದಿನನಿತ್ಯ ನೋಡಬಹುದಾದಂತಹ ಹಾವು ಮತ್ತು ಹಂದಿಗಳು ಮಾತ್ರ. ಇದನ್ನು ಕಂಡು ತುಂಬಾ ಬೇಸರಗೊಂಡು ಕುಡಿಯುವುದಕ್ಕೆ ನೀರೂ ಸಹ ಸಿಗದೇ ಬಾಯಾರಿಕೆಯಿಂದ ಹಿಂದಿರುಗಿದೆ. ಇಂದಿನವರೆಗೂ ಅತ್ತ ಹೋಗುವುದಕ್ಕೆ ಮನಸ್ಸಾಗಿಲ್ಲ.

ಇಂತಹ ಸ್ಥಿತಿ ಇರುವ ಈ ಪ್ರದೇಶವನ್ನು ಈಗ ಕೇಂದ್ರ ಸರ್ಕಾರ ಅನೇಕ ಕಂಪೆನಿಗಳಿಗೆ ನೀಡಿದೆ. ಕೆಲಸಕ್ಕೆ ಬಾರದೆ ಹಾಳು ಕೊಂಪೆಯಂತಿದ್ದ ಈ ಕಾಡು ಹಲವು ಯೋಜನೆಗಳ ಬೀಡಾಗುತ್ತಿರುವುದು ನನಗೊಬ್ಬನಿಗೆ ಮಾತ್ರವಲ್ಲದೇ ಇಡೀ ಈ ಪ್ರದೇಶದ ಜನರಿಗಾದ ಸಂತೋಷವೆಂದು ನನ್ನ ಭಾವನೆ.
ಏಕೆಂದರೆ ಹಾಳು ಕೊಂಪೆಯಂತಿದ್ದ ಈ ಪ್ರದೇಶ ಈ ರೀತಿಯಲ್ಲಾದರೂ ಅಭಿವೃದ್ಧಿಯಾಗುತ್ತಿದೆಯಲ್ಲಾ ಎನ್ನುವುದೊಂದೇ ಸಂತಸದ ವಿಷಯ. ಹೀಗಿರುವಾಗ ಪರಿಸರ ಇಲಾಖೆಯಾಗಲೀ ಮತ್ಯಾವುದೇ ಇಲಾಖೆಯಾಗಲೀ ಅಭಿವೃದ್ಧಿ ಹೊಂದುತ್ತಿರುವ ಈ ಪ್ರದೇಶವನ್ನು ಕುರುಡುತನದಿಂದ ಸರಿಯಾದ ಮನವರಿಕೆಯಿಲ್ಲದೇ ಹಾಳು ಮಾಡಲು ಹೊರಟಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ. ಅಳಿದುಳಿದ ಒಂದೋ ಎರಡೋ ಪ್ರಾಣಿಗಳು ಹೆಚ್ಚೋ ಅಥವಾ ಈಗ ಆಗುತ್ತಿರುವ ಅಭಿವೃದ್ಧಿಯಿಂದ ಲಕ್ಷಾಂತರ ಮಂದಿ ಜನರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಅನುಕೂಲವಾಗಿ ಜೀವಿಸುವಂತಾಗುವುದು ಹೆಚ್ಚೋ ಚಿಂತಿಸಿ.
-ಎಸ್. ಶಿವಣ್ಣ
(ಶಿರಸ್ತೇದಾರ್, ಹಿರಿಯ ಸಿವಿಲ್ ನ್ಯಾಯಾಲಯ) ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.