ADVERTISEMENT

ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ

ಚರ್ಚೆ

ಪ್ರೊ.ಸಿ.ಪಿ.ಸಿದ್ಧಾಶ್ರಮ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಬಿ.ವಿ.ವಸಂತಕುಮಾರ್‌ ಅವರು ಒಂದು ತಾತ್ವಿಕ ಚರ್ಚೆಯನ್ನು ವೈಯ­ಕ್ತಿಕ, ವ್ಯಕ್ತಿನಿಂದನೆಯ ನೆಲೆಗೆ ಎಳೆದು ತಂದಿದ್ದಾರೆ (ಪ್ರ.ವಾ. ಅಭಿಮತ ಪುಟದ ಚರ್ಚೆ ಅಂಕಣ, ಮಾ. 11). ಈ ಕಾರಣ­ಕ್ಕಾಗಿ ಅವರ ನಡೆಯೇ ಸಂದೇಹಾಸ್ಪದ. ಹಿ.ಶಿ.ರಾಮ­ಚಂದ್ರೇ­ಗೌಡರ ಬಗ್ಗೆ ಬರೆಯುತ್ತಾ ‘... ತಮ್ಮ ಹೆಸರಿ­ನಲ್ಲಿ­ರುವ ಜಾತಿವಾಚಕವನ್ನೂ ಕಳೆದು­ಕೊಳ್ಳಲು ಸಾಧ್ಯ­­ವಾಗದವರ ವೈಚಾರಿ­ಕತೆಯೂ ಅರ್ಥ­­ವಾಯಿತು’ ಎಂದಿರು­ವುದು ಕುಹುಕದ ಮಾತಲ್ಲದೆ ಬೇರೇನೂ ಅಲ್ಲ.

ನಾನಾಗಲೀ, ಹಿ.ಶಿ.ರಾ ಅವರಾ­ಗಲೀ, ಹೊರೆಯಾಲ ದೊರೆಸ್ವಾಮಿ ಅವರಾಗಲೀ ನಮ್ಮ ಪ್ರತಿಕ್ರಿಯೆಗಳಲ್ಲಿ ಜಾತಿಯ ಪ್ರಸ್ತಾಪವನ್ನು ಮಾಡಿ­ರಲಿಲ್ಲ. ಅದು ನಮಗೆ ಪ್ರಸ್ತುತವೂ ಆಗಿರ­ಲಿಲ್ಲ. ಒಂದು ಪಕ್ಷ, ಸಂಘಟನೆ­ಯನ್ನು ಸಮರ್ಥಿಸಲು ಹೋಗಿ ತಾತ್ವಿಕ ಚರ್ಚೆಯನ್ನು ವ್ಯಕ್ತಿ­ನಿಂದನೆಯ ನೆಲೆಗೆ ತಂದು ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ ಇದು.

ಹಂಪಣ್ಣ ಅವರ ಬಗ್ಗೆ ವಸಂತ­ಕುಮಾರ್ ತೋರಿರುವ ಅಭಿಮಾನ, ಪ್ರೀತಿಯ ಬಗೆಗೂ ನನಗೆ ಸಹಜವಾ­ಗಿಯೇ ಸಂದೇಹ ಮೂಡಿದೆ. ಹಂಪಣ್ಣ­ನವರು  ದಲಿತರು, ಬಡವರು, ಕವಿ­ಗಳು ಎಂದು ಒತ್ತಿ ಹೇಳು­ವಲ್ಲಿಯೇ ಇದು ಗೋಚರಿ­ಸುತ್ತದೆ. ಮಾತ್ರ­ವಲ್ಲ, ಇದು ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಮತ್ತು ಆ ಮೂಲಕ ತಮ್ಮ ಬೇಳೆ ಬೇಯಿಸಿ­ಕೊಳ್ಳುವ ಮೂಲ­ಭೂತವಾದಿಗಳ ಕುತಂತ್ರವೂ ಆಗಿದೆ ಎನ್ನುವುದರಲ್ಲಿ ಅನುಮಾನ­ವಿಲ್ಲ.

ನಾವು ಮೂವರೂ ದಲಿತ ವಿರೋಧಿ­­ಗಳಾಗಿರದೆ ಜೀವನದ ಉದ್ದಕ್ಕೂ ದಲಿತಪರ ಕಾಳಜಿಯನ್ನು ಬದುಕು-–ಬರಹದಲ್ಲಿ ಪ್ರಕಟಪಡಿಸುತ್ತ ಅವ­ರೊಂದಿಗೆ ಸಹ­ಚಿಂತನೆ,- ಸಹಬಾಳ್ವೆ­ಯಲ್ಲಿ ಸಾಗಿಬಂದಿ­ದ್ದೇವೆ. ಹಂಪಣ್ಣ­ನವರು ವೈಯಕ್ತಿಕವಾಗಿ ನನಗೆ ಮೂರು ದಶಕಗಳಿಂದಲೂ ಪರಿ­ಚಿತರು ಮಾತ್ರ­ವಲ್ಲ; ಪ್ರೀತಿಯ ಸ್ನೇಹಿತರೂ ಹೌದು. ಹಂಪಣ್ಣನವರ ಬಗ್ಗೆ ನಮ­ಗ್ಯಾ­ರಿಗೂ ವೈಯಕ್ತಿಕವಾಗಿ ಬೇಸರ, ಭಿನ್ನಮತ­ವಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷ­ರೊಬ್ಬರು ಮಾತ್ರ ಪುಸ್ತಕಗಳನ್ನು ಆಯ್ಕೆ ಮಾಡು­ವುದಿಲ್ಲ, ಸದಸ್ಯರೂ ಇಲ್ಲಿ ಭಾಗಿಗಳಾಗಿ­ರುತ್ತಾರೆಂಬ ಅರಿವೂ ನಮಗಿದೆ. ಆದರೆ ಆಯ್ಕೆ ವಿಧಾ­ನದ ಬಗೆಗೆ ತಾತ್ವಿಕ ವಿರೋಧ­ವಿದೆ. ಅದನ್ನು ನಾವು ವ್ಯಕ್ತಪಡಿಸಿದ್ದೇವೆ.

ವಸಂತಕುಮಾರ್ ತಮ್ಮ ವಾದದ ಸಮರ್ಥನೆಗಾಗಿ ‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ’, ‘ತಂತ್ರಸಾಧನೆ’, ‘ವೇದದ ಬೆಳಕಿನಲ್ಲಿ ಆಧುನಿಕ ಸವಾಲುಗಳ ನಿರ್ವ­ಹಣೆ’, ‘ಭಗವದ್ಗೀತೆ ಬೆಳಕು ನೀಡುವುದೇ?’- ಎಂಬ ನಾಲ್ಕು ಧರ್ಮಸಂಬಂಧಿ ಪುಸ್ತಕ­ಗಳನ್ನು ಮಾತ್ರ ಇಟ್ಟುಕೊಂಡು ಚರ್ಚಿಸಿ­ರುವುದು ಇವರ ಮಿತಿ ಮತ್ತು ಇಬ್ಬಂದಿ­ತನವನ್ನು ತೋರಿಸುತ್ತದೆ. ಸಮಿತಿ ಆಯ್ಕೆ ಮಾಡಿರುವ ೮೪೯ ಪುಸ್ತಕಗಳನ್ನು ವಿಚಾರ­ವಾದಿಗಳು ನೋಡಿದ್ದಾರೆಯೇ ಎಂದು ಪ್ರಶ್ನಿಸಿರುವ ಇವರು, ತಾವಾದರೂ ನೋಡಿ­ದ್ದಾರೆಯೇ ಎಂದು ಮರುಪ್ರಶ್ನೆ ಹಾಕಬೇಕಾಗುತ್ತದೆ.

ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ನೋಡುವ ಚಪಲ ಹೊಂದಿರುವ ಇವರು ಸುಳ್ಳಿನ ತಂತ್ರವನ್ನು ಹೆಣೆದು ಸತ್ಯವನ್ನು ಸಮಾಧಿ ಮಾಡುವ ಹುನ್ನಾರಕ್ಕೆ ಇಳಿದಿರುವುದು ಸ್ಪಷ್ಟ­ವಾ­ಗುತ್ತದೆ. ತಮ್ಮ ವಾದ ಸಮರ್ಥನೆಗೆ ಬಳಸಿ­ಕೊಂಡಿರುವ ಮೇಲಿನ ರೀತಿಯ ಧಾರ್ಮಿಕ ನೆಲೆಯ ಗ್ರಂಥಗಳು ಪ್ರೌಢ­ಶಾಲಾ ವಿದ್ಯಾರ್ಥಿಗಳ ಓದಿಗೆ ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಪ್ರತಿಕ್ರಿಯೆಯ ಕೊನೆಯಲ್ಲಿ ‘ವೈಚಾರಿಕ, ಪ್ರಗತಿಪರ, ಸುಸಂಸ್ಕೃತ ಪುಸ್ತಕಗಳನ್ನು ಆಯ್ಕೆ ಮಾಡಿಯೂ...’ ಎಂಬಂಥ ಮಾತನ್ನು ಆಡಿರುವ ಇವರು ಆಯ್ಕೆ­ಯಾದ ಒಟ್ಟು ೮೪೯ ಪುಸ್ತಕಗಳಲ್ಲಿ ವೈಚಾ­ರಿಕವಾದವು ಎಷ್ಟು? ಅವೈಚಾರಿಕ­ವಾ­ದವು ಎಷ್ಟು? ಸುಸಂಸ್ಕೃತವಾದವು ಎಷ್ಟು? ಸುಸಂಸ್ಕೃತ­ವಲ್ಲದವು ಎಷ್ಟು? ಎಂಬುದನ್ನು ತಿಳಿಸುವರೇ?

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ್ರಂತೆ ಎಂಬ ಗಾದೆ­ಯನ್ನು ನೆನಪಿಸುತ್ತದೆ ವಸಂತಕುಮಾರ್ ಪ್ರತಿಕ್ರಿಯೆ. ಎಳೆಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಬೇಕಾಗುವ ಭೇದಭಾವ ರಹಿತ ಸರ್ವಸಮಾನತೆಯ ಆಶಯವುಳ್ಳ ಉತ್ತಮ ಅಭಿರುಚಿಯ ಪುಸ್ತಕಗಳನ್ನು ಅವರ ಓದಿಗೆ ನೀಡುವುದು ಇಂದಿನ ತುರ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.