ADVERTISEMENT

ಚೀನಾ ಸವಾಲಿಗೆ ಒಬಾಮ ಪ್ರತಿರೋಧ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ವರ್ಷದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾಷಣಗಳಲ್ಲಿ ಚೀನಾ ಪ್ರಸ್ತಾಪ ಇರುತ್ತಿತ್ತು. ಮೂಲ ಸೌಕರ್ಯ, ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಹೂಡಿಕೆ ಮಾಡಿದರೆ ದೇಶವೊಂದು ಎಂಥ ಸಾಧನೆ ಮಾಡಬಹುದು ಎಂಬುದಕ್ಕೆ ಆ ದೇಶ ಸಾಕ್ಷಿಯಾಗಿದೆ ಎಂದು ಚೀನಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅವರು ಮಾತು ಮುಗಿಸುತ್ತಿದ್ದರು.

ಆದರೆ ಅಧ್ಯಕ್ಷೀಯ ಚುನಾವಣೆಯ ವರ್ಷಕ್ಕೆ ಕಾಲಿಡುತ್ತಿದ್ದಂತೆ ಒಬಾಮ ವರಸೆ ಬದಲಾಗಿದೆ. ಇತ್ತೀಚೆಗೆ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಒಬಾಮ, ಚೀನಾವನ್ನು ಖಳನಾಯಕನಂತೆ ಚಿತ್ರಿಸಿದರು. ಚೀನಾ ಅಂದರೆ ನಿಯಮಗಳನ್ನು ಉಲ್ಲಂಘಿಸುವ, ಕಳ್ಳಾಟ ಆಡುವ, ಬೌದ್ಧಿಕ ಆಸ್ತಿ (ಜ್ಞಾನವನ್ನು) ಕದಿಯುವ ದೇಶ ಎಂಬಂತೆ ಅವರು ಬಿಂಬಿಸಿದರು. `ಅಮೆರಿಕ ಇದನ್ನೆಲ್ಲ ಸುಮ್ಮನೆ ನೋಡುತ್ತ ಕೈಕಟ್ಟಿ ಕೂರುವುದಿಲ್ಲ. ಅದಕ್ಕೆ ಪ್ರತಿಯಾಗಿ ಕ್ರಮ ಜರುಗಿಸುತ್ತದೆ~ ಎಂದೂ ಅವರು ಭರವಸೆ ನೀಡಿದರು.

ಚುನಾವಣಾ ಲೆಕ್ಕಾಚಾರದಂತೆ ಒಬಾಮ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಹೇಳಬೇಕೆನಿಸುತ್ತದೆ. ಆದರೆ ಇಷ್ಟು ವರ್ಷಗಳ ಕಾಲ ಜಗತ್ತಿನ ಸೂಪರ್ ಪವರ್ ಆಗಿದ್ದ ಅಮೆರಿಕಕ್ಕೆ ಚೀನಾದ ಅಗಾಧ ಬೆಳವಣಿಗೆ ಗಾಬರಿ ಹುಟ್ಟಿಸುತ್ತಿದೆ. ಆರ್ಥಿಕ ಅಭಿವೃದ್ಧಿ, ಮಾನವ ಸಂಪನ್ಮೂಲ, ಬೌದ್ಧಿಕ ಸಂಪನ್ಮೂಲಗಳನ್ನು ಪರಿಗಣಿಸಿದಾಗ ಜಗತ್ತಿನ ನಕ್ಷೆಯಲ್ಲಿ ಅಮೆರಿಕದ ಸ್ಥಾನ ಕುಸಿಯುತ್ತಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಚೀನಾದ ಪ್ರಭಾವಳಿ ದಿನೇ ದಿನೇ ಪ್ರಕಾಶಿಸುತ್ತಿದೆ. ಚೀನಾದ ವರ್ಚಸ್ಸನ್ನು ಕುಗ್ಗಿಸಲು ಅಮೆರಿಕ ಮಾಡುತ್ತಿರುವ ಕಸರತ್ತು ಎಂದು ಅನ್ನಿಸುತ್ತದೆ.

ಒಬಾಮ 2011ಹಾಗೂ 2012ರಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾಡಿದ ಎರಡು ಭಾಷಣಗಳಲ್ಲೂ ಚೀನಾ ಪ್ರಾಮುಖ್ಯತೆ ಗಳಿಸಿತ್ತು. ಈ ವರ್ಷ ಎಲ್ಲ ತಿರುವುಮುರುವು.
`ನಮ್ಮ ಸ್ಪರ್ಧಿಗಳು ನಿಯಮಗಳನ್ನು ಉಲ್ಲಂಘಿಸಿದರೆ ನಾನು ಸುಮ್ಮನೆ ಇರುವುದಿಲ್ಲ.

ಚೀನಾ ಅಂತರರಾಷ್ಟ್ರೀಯ ವಾಣಿಜ್ಯ ವ್ಯವಹಾರದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ನಾವು ಸಾಕಷ್ಟು ಮೊಕದ್ದಮೆ ಹೂಡಿದ್ದೇವೆ. ನಮ್ಮ ಅವಧಿಯಲ್ಲಿ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಪ್ರಕರಣಗಳು ಆ ದೇಶದ ವಿರುದ್ಧ ದಾಖಲಾಗಿವೆ~ ಎಂದು ಒಬಾಮ ಹೇಳುವಾಗ ಸಭಾಂಗಣ ಪ್ರತಿ ಧ್ವನಿಸುವಷ್ಟು ಚಪ್ಪಾಳೆ ಕೇಳಿಬಂತು.

`ಚೀನಾದಲ್ಲಿ ಟೈರ್ ಉತ್ಪಾದನೆ ಹೆಚ್ಚಿದೆ ಎಂಬ ಕಾರಣಕ್ಕೆ 1000ಕ್ಕೂ ಹೆಚ್ಚು ಅಮೆರಿಕನ್ನರು ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ನಮ್ಮ ಚಲನಚಿತ್ರಗಳು, ಸಂಗೀತ ಹಾಗೂ ಸಾಫ್ಟ್‌ವೇರ್ ಎಲ್ಲವನ್ನೂ ನಕಲು ಮಾಡುವುದು ಸರಿಯಲ್ಲ. ವಿದೇಶಿ ಉತ್ಪಾದಕರಿಗೆ ಅತಿಯಾದ ಸಬ್ಸಿಡಿ ದೊರೆಯುತ್ತದೆ ಎಂಬ ಒಂದೇ ಕಾರಣಕ್ಕೆ ಅವರು ನಮ್ಮ ಮೇಲೆ ಮೇಲುಗೈ ಸಾಧಿಸುವುದು ತಪ್ಪಲ್ಲವೇ?~ ಎಂದೂ ಒಬಾಮ ಕೇಳಿದ್ದರು.

ಚೀನಾ ಮತ್ತು ಅದರ ವ್ಯಾಪಾರ ನೀತಿಯನ್ನು ಅಧ್ಯಕ್ಷರ ರಿಪಬ್ಲಿಕನ್ ಎದುರಾಳಿಗಳು ಖಂಡಿಸುತ್ತಿದ್ದರು. ಈಗ ಒಬಾಮ ಅವರ ಮಾತಿಗೆ ದನಿಯಾಗುತ್ತಿದ್ದಾರೆ.  ಒಬಾಮ ಭಾಷಣದಲ್ಲಿ ಚೀನಾವನ್ನು ಖಂಡಿಸಿದ್ದಷ್ಟೇ ಅಲ್ಲ. ಅದರ ಮೇಲೆ  ಕ್ರಮ ಜರುಗಿಸುವ ಇಂಗಿತ ನೀಡಿದರು. ಅಂತರರಾಷ್ಟ್ರೀಯ ವಾಣಿಜ್ಯ, ವ್ಯವಹಾರದಲ್ಲಿ ವಾಮ ಮಾರ್ಗ ಅನುಸರಿಸುವ ಸ್ಪರ್ಧಿ ದೇಶಗಳ ಮೇಲೆ ನಿಗಾ ಇಡಲು ಹೊಸ ಸಮಿತಿ ನೇಮಿಸುವುದಾಗಿ ಪ್ರಕಟಿಸಿದರು.

ಅಮೆರಿಕದ ಈ ನಡೆಗೆ ಚೀನಾ ಮುಖ ದಪ್ಪಗಾಗಿದೆ. `ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಇದನ್ನೆಲ್ಲ ಮಾಡಲಾಗುತ್ತಿದೆ. `ಅನಿಷ್ಟಕ್ಕೆಲ್ಲ ಶನೇಶ್ವರ~ ಕಾರಣ ಎಂಬಂತೆ ಅಮೆರಿಕದ ಆಂತರಿಕ ಸಂಕಷ್ಟಗಳಿಗೆ ಚೀನಾ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಚೀನಾದೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಇಲ್ಲದೇ ಇದನ್ನೆಲ್ಲ ಮಾಡಲಾಗುತ್ತಿದೆ~ ಎಂದು ಚೀನಾ ಅರ್ಥೈಸಿಕೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದೊಂದಿಗೆ ಸಮಬಲದ ಸ್ಪರ್ಧೆ ನಡೆಸಬೇಕಾದರೆ ಅಮೆರಿಕ ತನ್ನ ಆಂತರಿಕ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಬೇಕು ಎಂಬುದು ಬಹುತೇಕರ ಅಭಿಪ್ರಾಯ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಚೀನಾ ಮೇಲೆ ವಾಗ್ದಾಳಿ ನಡೆಸುವ, ಖಂಡಿಸುವ ಲಕ್ಷಣಗಳಿವೆ.

ವಿಭಿನ್ನ ಕಾರ್ಯತಂತ್ರ: ಕಳೆದ ವರ್ಷ ಒಬಾಮ `ಚೀನಾ ಭಾರಿ ವೇಗದ ರೈಲುಗಳು, ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ನಮ್ಮದೇ ಎಂಜಿನಿಯರ್‌ಗಳು ನಮ್ಮ ದೇಶದ ಮೂಲಸೌಕರ್ಯಕ್ಕೆ `ಡಿ~ ದರ್ಜೆ ನೀಡಿದ್ದಾರೆ. ಇದು ಆಶ್ಚರ್ಯ ಅಲ್ಲವೇ~ ಎಂಬ ಧಾಟಿಯಲ್ಲಿ ಮಾತನಾಡುತ್ತಿದ್ದರು.

`ಚೀನಾ ಮತ್ತು ಭಾರತದಂತಹ ದೇಶಗಳಿಗೆ ಈಗ ಸತ್ಯ ಅರ್ಥವಾಗಿದೆ. ತಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೆ ಹೊಸ ಜಗತ್ತಿನಲ್ಲಿ ಸ್ಪರ್ಧಿಸಬಹುದು ಎಂಬ ಹೊಳಹು ಹುಟ್ಟಿದೆ. ಹಾಗಾಗಿ ಗಣಿತ ಹಾಗೂ ವಿಜ್ಞಾನದಂತಹ ವಿಷಯಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸುತ್ತಿದ್ದಾರೆ. ಹೆಚ್ಚು ವರ್ಷ ಓದಿಸುತ್ತಿದ್ದಾರೆ.

ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳಿಗಾಗಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದಾರೆ. ಸೌರಶಕ್ತಿ ಹಾಗೂ ಅತಿ ವೇಗದ ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಚೀನಾದಲ್ಲಿ ವಿಶ್ವದ ಅತಿದೊಡ್ಡ ಖಾಸಗಿ ಪ್ರಯೋಗಾಲಯಗಳು ತಲೆ ಎತ್ತಿವೆ~ ಎಂದು ಕಳೆದ ವರ್ಷದ ಭಾಷಣದಲ್ಲಿ ಒಬಾಮ ಹೇಳಿದ್ದರು.

ಅವರು ಹಾಗೆ ಹೇಳುವಾಗ ಅಮೆರಿಕದ ಸಾಮರ್ಥ್ಯ ಕಡೆಗಣಿಸಿ, ಸ್ಪರ್ಧಿಯನ್ನು ಹೊಗಳುತ್ತಿದ್ದಾರೆ ಎಂದು ಭಾಸವಾಗುತ್ತಿತ್ತು. ಶ್ವೇತಭವನ ಈಗ ಏಷ್ಯಾ ಮತ್ತು ಜಾಗತಿಕ ಮಟ್ಟದಲ್ಲಿ ಅಮೆರಿಕದ ಪ್ರಭಾವ ಹಾಗೂ ವರ್ಚಸ್ಸನ್ನು ಮರು ಸ್ಥಾಪಿಸಿಕೊಳ್ಳಲು ಯತ್ನ ಮಾಡಿದಂತಿದೆ.

2011ರ ವರ್ಷಾಂತ್ಯದ ವೇಳೆಗೆ ಒಬಾಮ ಏಷ್ಯಾ ಕುರಿತು ಅಮೆರಿಕದ ಬದಲಾದ ನೀತಿಯತ್ತ ಒತ್ತು ನೀಡಲು ಆರಂಭಿಸಿದ್ದರು. ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅದನ್ನೇ ಪುನರುಚ್ಚರಿಸಿದ್ದಾರೆ. 

 ಅಮೆರಿಕ ಕೆಳಗಿಳಿಯುತ್ತಿದೆ ಎಂಬ ಭಾವನೆಯ ಜತೆ ಚೀನಾ ಜಾಗತಿಕವಾಗಿ ಪ್ರಬಲವಾಗುತ್ತಿದೆ ಎಂಬ ಭಾವನೆಯೂ ತಳಕು ಹಾಕಿಕೊಂಡಿದೆ. ಚೀನಾ, ಅಮೆರಿಕ ಹಾಗೂ ಜಗತ್ತಿನ ಹಲವೆಡೆ ಈ ಪರಿಕಲ್ಪನೆಯನ್ನು  ಮುಂಬರುವ ಶತಮಾನದ ಅನಿವಾರ್ಯತೆ ಎಂಬಂತೆ ಭಾವಿಸಿದ್ದಾರೆ. ಒಬಾಮ ಈ ಚರ್ಚೆಗೆ ಹೊಸ ರೂಪ ನೀಡಲು ನಿರ್ಧರಿಸಿದಂತಿದೆ.

ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭವಿಷ್ಯವನ್ನು ಹೊಸದಾಗಿ ಬರೆಯುವಂತೆ ಅಮೆರಿಕಕ್ಕೆ ಒಂದು ಹೊಸ ಕನಸು ನೀಡಲು ಹೊರಟಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.