ADVERTISEMENT

ದೀಪಾವಳಿ ಆಚರಣೆ ಪರಿಸರ ಸ್ನೇಹಿ ಆಗಬಾರದೆ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

`ಅಯ್ಯ್ ಬಂತಲ್ಲಪ್ಪ ದೀಪಾವಳಿ.. ನಾನು ಎಲ್ಲಾದ್ರೂ ಗುಳೆ ಹೋಗ್ತೀನಪ್ಪ~ ಎಂದರು ನಿನ್ನೆ ಗಾಂಧಿಬಜಾರಿನಲ್ಲಿ ಸಿಕ್ಕ ಹಿರಿಯ ಮಿತ್ರರು. ಬೆಳಕಿನ ಹಬ್ಬ ಹೀಗೆ ಅವರನ್ನು ಕಂಗೆಡಿಸುವುದರಲ್ಲಿ ಅತಿಶಯವೇನಿಲ್ಲ.
 
ಬರುಬರುತ್ತ ಹಬ್ಬಗಳ ಆಶಯಗಳು ಅಯೋಮಯವಾಗುತ್ತಿವೆ. ಆಡಂಬರ, ಅಬ್ಬರ, ಗೌಜು, ಶ್ರೀಮಂತಿಕೆ ತೋರಿಕೆ, ದುಂದುಗಾರಿಕೆಗಳ ಮೆರವಣಿಗೆಯೇ ಹಬ್ಬವೆನ್ನಿಸಿದೆ. ನಮ್ಮ ಲಂಗುಲಗಾಮಿಲ್ಲದ ಸಡಗರಗಳು ವ್ಯಾಪಾರಿಗಳಲ್ಲಿ ಲಾಭಕೋರತನವನ್ನು ಸೃಷ್ಟಿಸದೆ ಇನ್ನೇನು. ಅಗತ್ಯ ವಸ್ತುಗಳು ಗಗನಮುಖಿ.

ಮದುವೆ ಮಾಡಿದ ಮನೆಯಲ್ಲಿ ಆರು ತಿಂಗಳು ಬರಗಾಲವಂತೆ! ಈ ನಡುವೆ ಮೌಢ್ಯಕ್ಕೂ ನಾವು ಬೆಲೆ ತೆರುತ್ತೇವೆ. ಸ್ವಾದಿಷ್ಟ ಕುಂಬಳಕಾಯಿ, ನಿಂಬೆ, ತೆಂಗಿನಕಾಯಿ ನಿವಾಳಿಸಿ ಅಕ್ಷರಶಃ ಒಗೆಯುತ್ತೇವೆ.

ಸಾಂಕೇತಿಕವಾಗಿ ಒಂದು ತುಣಕನ್ನು ನಿವಾಳಿಸಿ ಮಿಕ್ಕಿದ್ದನ್ನು ಸೇವಿಸಬಹುದಲ್ಲ? ಬಡಬಗ್ಗರಿಗೆ ನೀಡಿದರೆ ಮತ್ತೂ ಚಲೋ. ದುಬಾರಿ ಬೆಲೆ ತೆತ್ತು ತಂದ ಹಣ್ಣು ಹಂಪಲು ಮರುದಿನ ಕಸವಾಗುವುದು ಸರಿಯೆ? ಇದು ದಿಟವಾಗಿ ರಾಷ್ಟ್ರೀಯ ನಷ್ಟ.

ಇನ್ನು ದೀಪಾವಳಿಯೋ.. ಅದು ಜ್ಞಾನದ ಸಂಕೇತವೆನ್ನುವುದು ಮೂಲೆಗುಂಪಾಗಿ ಕಿವಿಗಡಚಿಕ್ಕುವ ಅಸಹನೀಯ ಸದ್ದಿನ, ಆಘಾತಕಾರಿ ಸ್ಫೋಟ ಮತ್ತು ಹೊಗೆಯ ಚೆಲ್ಲಾಟವಾಗಿದೆ.

ಒಂದರ್ಥದಲ್ಲಿ ಕತ್ತಲೆಯನ್ನು ನಾವೇ ಕೈಯಾರೆ ಆಹ್ವಾನಿಸಿಕೊಂಡಂತಾಗಿದೆ. ದೀಪಾವಳಿ ಹಾವಳಿ ಘೋರವಾಗುತ್ತಿದೆ. ವರ್ಷೇ ವರ್ಷ ಪಟಾಕಿಯಿಂದ ಕಣ್ಣು ಕಳೆದುಕೊಳ್ಳುತ್ತಿರುವವರ, ಸುಟ್ಟಗಾಯಗಳಿಂದ ಪರಿತಪಿಸುವವರ ಸಂಖ್ಯೆ ಏರುತ್ತಲೇ ಇದೆ.

ಪಟಾಕಿ ಹಚ್ಚುವವರಿಗಿಂತಲೂ ಇತರರಿಗೇ ಅಪಾಯವೊದಗುವ ಸಾಧ್ಯತೆ ಹೆಚ್ಚು. ಅದರಲ್ಲೂ ರಸ್ತೆಯಲ್ಲಿ ಓಡಾಡುವವರು, ವಾಹನ ಸವಾರರು ಅವಘಡಕ್ಕೆ ಗುರಿಯಾಗುತ್ತಾರೆ. ಪ್ರಾಣಿ, ಪಕ್ಷಿಗಳು ದಿಕ್ಕೆಡುತ್ತವೆ. ಎಳೆ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ವೃದ್ಧರು ತೀವ್ರತರ ಯಾತನೆ ಪಡುತ್ತಾರೆ.
 
ರೋಗಿಗಳ ಪಾಡನ್ನು ಬಣ್ಣಿಸಲು ಪದಗಳಿಲ್ಲ. ಹಿಂದಿದ್ದ   ಪರಿಸ್ಥಿತಿಯೇ ಬೇರೆ. ಇಂದಿನದೇ ಬೇರೆ. ಇಂದು ಒತ್ತೊತ್ತಾದ ಮನೆಗಳು. ಗಗನಕ್ಕೆ ಚಿಮ್ಮಿರುವ ಕಟ್ಟಡಗಳು. ಜನದಟ್ಟಣೆ, ವಾಹನ ದಟ್ಟಣೆ. ಸೂಕ್ತವಾಗಿ ನಾವು ಆಚರಣೆ ಪರಿಷ್ಕರಿಸಿಕೊಳ್ಳದಿದ್ದರೆ ಅನರ್ಥ ಕಟ್ಟಿಟ್ಟ ಬುತ್ತಿ. 

ಯಾವುದೇ ಬಗೆಯ ಪಟಾಕಿ ಸಿಡಿಸಿದ ಹಲವು ವಾರಗಳ ನಂತರವೂ ವಾತಾವರಣದಲ್ಲಿ ಮೆಗ್ನೀಶಿಯಂ, ಗಂಧಕದ ನೈಟ್ರೇಟ್, ಸಾರಜನಕದ ಡೈ ಆಕ್ಸೈಡ್ ಮುಂತಾದ ನಂಜಿನ ವಸ್ತುಗಳು ಕ್ಷೀಣಿಸಿರುವುದಿಲ್ಲ. ಉಸಿರಾಟ ತೊಂದರೆ, ಕಣ್ಣುರಿ, ಗಂಟಲು ಬೇನೆಗೆ ಅವು ಕಾರಣವಾಗುತ್ತವೆ.

ದೀಪಾವಳಿ ಮರುದಿನ ರಾಶಿ ರಾಶಿ ಕಸದ್ದೆೀ ಕಾರುಬಾರು. ಕಾಗದ ಚಿಂದಿ, ಅರೆಸುಟ್ಟ ರಾಸಾಯನಿಕಗಳು, ಕುಡಿಕೆ ಚೂರು, ಲೋಹದ ಕಡ್ಡಿಗಳು, ತಂತಿಗಳು ವಗೈರೆ ಟನ್ನುಗಟ್ಟಲೆ. ಇದರ ವಿಲೇವಾರಿ ಆಡಳಿತಕ್ಕೆ ಸವಾಲು. ಪರಿಸರದ ಮೇಲೆ ಪ್ರಹಾರ.

 `ಆಟಂ ಬಾಂಬ್~, `ರಾಕೆಟ್~ ಪ್ರಯೋಗಿಸಿ ಅದರ (ಕರ್ಣ ಕಠೋರ) ಶಬ್ದಕ್ಕೆ ಕುಣಿದು ಕುಪ್ಪಳಿಸುವವರಿಗೆ ಅದು ನಮ್ಮದೇ ಏಕೈಕ ಪರಿಸರವೆಂಬ ಅರಿವಿರಬೇಕಲ್ಲವೇ? ಕೆಲವು ವರ್ಷಗಳ ಹಿಂದೆ ಸುರಕ್ಷತೆ ದೃಷ್ಟಿಯಿಂದ ವಿಶಾಲ ಮೈದಾನಗಳಲ್ಲಿ ಮಾತ್ರವೆ ಪಟಾಕಿ ಮಾರಾಟ ಜಾರಿಗೆ ಬಂದಿತು.

ಈಗ ಇನ್ನೊಂದು ಹೆಜ್ಜೆ ಮುಂದಿಟ್ಟರಾಯಿತು. ಆಯಾ ಬಡಾವಣೆಗಳಲ್ಲಿನ ಮೈದಾನಗಳಲ್ಲೇ ಸಾರ್ವತ್ರಿಕವಾಗಿ ಪಟಾಕಿ ಸಿಡಿಸುವುದು. ಗಾಳಿಪಟ ಹಾರಿಸಿ ಸಂಭ್ರಮಿಸುವ ಹಾಗೆ. ಕೆರೆಯಂಗಳವಾದರೆ ಇನ್ನೂ ಚೆಂದ. ಇದರಿಂದ ಎಲ್ಲರೂ ಒಟ್ಟಾಗಿ ಬಾಣ, ಬಿರಸು, ಮತಾಪು ಹಚ್ಚುವ ಉಲ್ಲಾಸ. ಅಷ್ಟರಮಟ್ಟಿಗೆ ಪಟಾಕಿ ಸಿಡಿತದ ಅಪಾಯ ಕಡಿಮೆ.

ಅಮೆರಿಕ, ಸಿಂಗಪುರದಲ್ಲಿ ಈ ಏರ್ಪಾಡು ಉಂಟು. ತ್ಯಾಜ್ಯವೆಲ್ಲ ಒಂದೇ ಕಡೆ ಬೀಳುವುದರಿಂದ ಅದರ ವಿಲೇವಾರಿಯೂ ಸರಾಗ. ಗಮನಿಸಲೇ ಬೇಕಾದ್ದೆಂದರೆ ವಿವಿಧ ಪಟಾಕಿಗಳ ತಯಾರಿಕಾ ಘಟಕಗಳಲ್ಲಿ ಬಾಲಕಾರ್ಮಿಕರೆ ಬಹಳ. ಜೀವದ ಹಂಗು ತೊರೆದು ಅವರ ದುಡಿಮೆ.
 
ಮನೆ ಮನೆಗಳ ಮುಂದೆ ಪಟಾಕಿ ಹಚ್ಚಿದರೇನೆ ದೀಪಾವಳಿ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಹಣತೆಗಳ ಸಾಲಿಟ್ಟು ಪಡುವ ಸಂಭ್ರಮಕ್ಕೆ ಸಾಟಿಯಿಲ್ಲ. ಮೋಂಬತ್ತಿ ಬೆಳಗಿ ಹಬ್ಬದ ಅರ್ಥವನ್ನು ಸಾಕಾರಗೊಳಿಸಬಹುದು. ಬೆಳಕೇ ಮೌಲಿಕ. ಸದ್ದಲ್ಲ. 

ಮನಸ್ಸಿದ್ದರೆ ಮಾರ್ಗ. ನಾವು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿಸಿದ್ದೇವೆ. ರಾಸಾಯನಿಕಯುಕ್ತ ಬಣ್ಣ ಲೇಪಿತ ಮೂರ್ತಿಗಳನ್ನು ಕೆರೆ, ಸರೋವರ, ನದಿ, ಸಮುದ್ರಗಳಲ್ಲಿ ವಿಸರ್ಜಿಸಿದರೆ ಜಲ ಮಲಿನಗೊಳ್ಳುವುದೆಂಬ ಅರಿವು ಮೂಡಿದೆ. ಅದಕ್ಕಾಗಿ ಟ್ಯಾಂಕರ್, ಬಕೆಟ್ ಬಳಸುವಷ್ಟು ಜಾಗೃತಿ ನಮ್ಮದಾಗಿದೆ.

ಜಲಸಂಪನ್ಮೂಲಗಳಲ್ಲಿ ಹೂಳು, ಕಸ ಕಡ್ಡಿ ಬೀಳದ ಹಾಗೆ ಎಚ್ಚರ ವಹಿಸಿದ್ದೆೀವೆ. ಕರ್ಕಶ ಢಂ... ಢಮಾರ್ ಸದ್ದಿಲ್ಲದ, ಹೊಗೆರಹಿತ, ಹಣತೆಯ ತಂಪು ಬೆಳಕಿನ ಪರಿಸರ ಸ್ನೇಹಿ ದೀಪಾವಳಿಗೆ ಅಣಿಯಾಗೋಣ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.