ADVERTISEMENT

ಪವರ್‌ಲೆಸ್ ವಿ.ಸಿ- ಪವರ್‌ಫುಲ್ ಡಿ.ಸಿ

ಪ್ರೊ.ರವೀಂದ್ರ ರೇಷ್ಮೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಪವರ್‌ಲೆಸ್ ವಿ.ಸಿ- ಪವರ್‌ಫುಲ್ ಡಿ.ಸಿ
ಪವರ್‌ಲೆಸ್ ವಿ.ಸಿ- ಪವರ್‌ಫುಲ್ ಡಿ.ಸಿ   

ಅನುಭವಿ ರಾಜಕಾರಣಿಯೊಬ್ಬರು ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವಾಗ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ– 2017’ ಅಂತಹ ಸಂವೇದನಾಶೂನ್ಯ ಮತ್ತು ದೂರದೃಷ್ಟಿರಹಿತ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿರುವುದು ದುರದೃಷ್ಟಕರ. ಈ ಮಸೂದೆಗೆ ನಿರ್ದಿಷ್ಟ ಶೈಕ್ಷಣಿಕ ಸಿದ್ಧಾಂತವಿಲ್ಲ. 

ಮಂತ್ರಿಗಳ ವಿಶ್ವಾಸಕ್ಕೆ ಪಾತ್ರರಾದ ಹಲವು ವಿಶಿಷ್ಟ ಹಿತಾಸಕ್ತಿಯ ತಜ್ಞರು ತರಾತುರಿಯಲ್ಲಿ ಸಿದ್ಧಪಡಿಸಿಕೊಟ್ಟ ಒಂದು ಕೆಟ್ಟ ಸರ್ಕಾರಿ ಟಿಪ್ಪಣಿಯಂತಿರುವುದನ್ನು ಮಸೂದೆಯ ಆರಂಭಿಕ ಪುಟಗಳಲ್ಲಿಯೇ ಗಮನಿಸಬಹುದು. ಮಸೂದೆಯ ಒಕ್ಕಣೆಯಲ್ಲಿನ ಭಾಷೆ, ಮಾಹಿತಿ ನಿರೂಪಣೆ ಮತ್ತು ವಾಕ್ಯರಚನೆಯಲ್ಲೂ ತಪ್ಪುಗಳು ನುಸುಳಿವೆ.

ಅಧಿನಿಯಮದ ಖಂಡ-4ರಲ್ಲಿ ‘ಕ್ಲಸ್ಟರ್ ಮತ್ತು ಏಕಾತ್ಮಕ ಸ್ವರೂಪದ ಮತ್ತು ನಿಗಮಿತ ವಿಶ್ವವಿದ್ಯಾಲಯಗಳ ಸ್ಥಾಪನೆ’ ಎಂಬ ಶಿರೋನಾಮೆಯಡಿಯಲ್ಲಿ ‘ರೂಸಾ’ (Rashtriya Uchchatar Shiksha Abhiyan) ಅನುದಾನದಿಂದ ಸ್ಥಾಪನೆಯಾಗಲಿರುವ ಎರಡು ಹೊಸ ಮಾದರಿ ವಿ.ವಿ.ಗಳ ಪ್ರಸ್ತಾಪವಿದೆ.

ADVERTISEMENT

ಇಡೀ ರಾಷ್ಟ್ರದಲ್ಲಿಯೇ ಮಂಜೂರಾಗಿರುವ ಪ್ರಥಮ ತಲೆಮಾರಿನ ಮೊದಲ 8 ವಿನೂತನ ಮಾದರಿಯ ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿ ಮಂಜೂರಾಗಿರುವ ಹಾಗೂ ‘ರೂಸಾ’ ಅನುದಾನದಿಂದ ಸ್ಥಾಪನೆಗೊಳ್ಳುತ್ತಿರುವ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕವಾದ ಅಸ್ತಿತ್ವವನ್ನು ಕಲ್ಪಿಸುವ ಸಬ್‌ ಸೆಕ್ಷನ್ 4ಡಿ ಉದ್ದೇಶಗಳಿಗೆ ತದ್ವಿರುದ್ಧವಾದ ವ್ಯವಸ್ಥೆಯನ್ನು ಸಬ್‌ ಸೆಕ್ಷನ್‌ 4ಸಿ ನಲ್ಲಿ ಅಳವಡಿಸಲಾಗಿದೆ.

ಇದು ಈ ನೂತನ ವಿಶ್ವವಿದ್ಯಾಲಯಕ್ಕೆ ತನ್ನದೇ ಕುಲಪತಿಯನ್ನು ಹೊಂದುವ ಅವಕಾಶ ನಿರಾಕರಿಸುತ್ತದೆ. ಈ ಮೊದಲು ಅದು ಸಂಯೋಜನೆ ಹೊಂದಿದ್ದ ಬೆಂಗಳೂರು ಕೇಂದ್ರೀಯ ವಿ.ವಿ.ಯ ಕುಲಪತಿಯ ಸಹವರ್ತಿ ಪ್ರಭಾರಕ್ಕೆ (Concurrent Charge) ಒಪ್ಪಿಸಿ, ಅವರನ್ನೇ ಪದನಿಮಿತ್ತ ಕುಲಪತಿಯನ್ನಾಗಿ ನೇಮಕ ಮಾಡತಕ್ಕದ್ದು ಎಂಬ ವಿಚಿತ್ರ ನಿಯಮ ಅಳವಡಿಸಲಾಗಿದೆ.

ಇದೇ ರೀತಿಯಲ್ಲಿ ‘ರೂಸಾ’ ಅನುದಾನದಿಂದ ಮಂಡ್ಯದಲ್ಲಿ ಸ್ಥಾಪನೆಗೊಳ್ಳುತ್ತಿರುವ ಮಂಡ್ಯ ಏಕೀಕೃತ ವಿಶ್ವವಿದ್ಯಾಲಯಕ್ಕೂ ತನ್ನದೇ  ಪ್ರತ್ಯೇಕ ಕುಲಪತಿ ನೇಮಿಸಿಕೊಳ್ಳುವ ಅಧಿಕಾರವನ್ನೇ ನಿರಾಕರಿಸಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುಸೂಚಿ- IIIಇ ಮಂಡ್ಯ ಏಕೀಕೃತ (ಯೂನಿಟರಿ) ಸ್ವರೂಪದ ವಿಶ್ವವಿದ್ಯಾಲಯ, ಮಂಡ್ಯ (ಪುಟ 64) ಹಾಗೂ ಅನುಸೂಚಿ- IIIಎಫ್ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಬೆಂಗಳೂರು, ಇವೆರಡೂ ಪ್ಯಾರಾಗಳ ಕ್ರಮ ಸಂಖ್ಯೆ ಎ ನಲ್ಲಿ ವಿ.ವಿ. ಮುಖ್ಯಸ್ಥರು ಯಾರಿರಬೇಕೆಂಬ ಬಗ್ಗೆಯೇ ಈ ಮಸೂದೆಯಲ್ಲಿ ದ್ವಂದ್ವವಿದೆ. ಕುಲಪತಿ/ ನಿರ್ದೇಶಕರು ಎಂದು ಎರಡು ಪದನಾಮಗಳನ್ನು ನಮೂದಿಸಲಾಗಿದೆ.

‘ಪ್ರತಿಯೊಂದು ವಿಶ್ವವಿದ್ಯಾಲಯಕ್ಕೂ ತನ್ನದೇ ಆದ ಪೂರ್ಣಕಾಲಿಕ ಮತ್ತು ವೇತನ ಪಡೆಯುವ ಕುಲಪತಿ ಇರತಕ್ಕದ್ದು ಮತ್ತು ಅವರೇ ಆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಭಾಗಗಳ ಮುಖ್ಯಸ್ಥರಾಗಿರತಕ್ಕದ್ದು’ ಎಂಬುದು ಸ್ವಾತಂತ್ರ್ಯೋತ್ತರ ಭಾರತದ ವಿಶ್ವವಿದ್ಯಾಲಯ ವ್ಯವಸ್ಥೆಗೆ ನೀಲನಕ್ಷೆ ರೂಪಿಸಿದ ಡಾ. ಎಸ್. ರಾಧಾಕೃಷ್ಣನ್ ಅಧ್ಯಕ್ಷತೆಯ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ (1948) ಮುಖ್ಯ ನಿರ್ದೇಶನ. ಈ ಮಸೂದೆಯನ್ನು ರೂಪಿಸಿದವರು ಈ ಮಾತು ಮರೆತಂತಿದೆ. ಈ ಮಸೂದೆಯ ಶಿಕ್ಷಣ ವಿರೋಧಿ ಅಂಶಗಳಲ್ಲಿ ಮೂರು ಸಂಗತಿಗಳು ಪ್ರಮುಖವಾಗಿವೆ.

ಅವು: 1) ನೇಮಕಾತಿ ಅಧಿಕಾರ: ಜೂನ್‌ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮೂಲ ಮಸೂದೆಯ ಜೊತೆಗೇ ಅನುಬಂಧದ ರೂಪದಲ್ಲಿ ಮಂಡಿಸಲಾದ ತಿದ್ದುಪಡಿ ಸೆಕ್ಷನ್‌-56ರ ಪ್ರಕಾರ ಇನ್ನು ಮುಂದೆ ವಿಶ್ವವಿದ್ಯಾಲಯದ ಕುಲಪತಿಗೆ ವಿ.ವಿ.ಯ ಅಧ್ಯಾಪಕ ಸಿಬ್ಬಂದಿಯ ನೇಮಕಾತಿ ಸಮಿತಿಯ ಅಧ್ಯಕ್ಷತೆ ಲಭ್ಯವಿರುವುದಿಲ್ಲ.

ಈ ಹೊಸ ನಿಯಮಾನುಸಾರ ನೇಮಕಾತಿ ಸಮಿತಿಯಲ್ಲಿ ವಿ.ವಿ.ಯ ಕುಲಪತಿಯ ಜೊತೆಗೆ ಓರ್ವ ವಿಶ್ರಾಂತ ಕುಲಪತಿಯೂ ಸದಸ್ಯರಾಗಿರತಕ್ಕದ್ದು ಮತ್ತು ಅವರಲ್ಲಿ ಒಬ್ಬರನ್ನು ರಾಜ್ಯ ಸರ್ಕಾರವು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡತಕ್ಕದ್ದು. ಅಂದರೆ, ಇದುವರೆಗಿನ ಭಾರತೀಯ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಒಬ್ಬ ಕುಲಪತಿಗಿದ್ದ ಪರಮಾಧಿಕಾರವನ್ನೇ ಕಸಿದುಕೊಂಡು ನೇಮಕಾತಿ ಸಮಿತಿಯ ಅಧ್ಯಕ್ಷತೆಗೋಸ್ಕರ ಹಾಲಿ ಕುಲಪತಿಯು ಒಬ್ಬ ವಿಶ್ರಾಂತ ಕುಲಪತಿಯ ಜೊತೆಗೆ ಪೈಪೋಟಿ ನಡೆಸಬೇಕಾದ ದಯನೀಯ ಸನ್ನಿವೇಶವನ್ನು ಸೃಷ್ಟಿಸಲಾಗಿದೆ.

2) ಕಟ್ಟಡ ನಿರ್ಮಾಣ 3) ಧನ ವಿನಿಯೋಗದ ಅಧಿಕಾರ: ‘ಉನ್ನತ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ’ ಎಂಬ ಕೇಂದ್ರೀಕೃತ ವ್ಯವಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಂದರೆ, ಇನ್ನು ಮುಂದೆ ರಾಜ್ಯದ ಯಾವುದೇ ವಿ.ವಿ. ₹ 1 ಕೋಟಿ ಮೀರಿದ ಕಾಮಗಾರಿ ಕೈಗೊಳ್ಳುವ ಅಧಿಕಾರ ಕಳೆದುಕೊಳ್ಳಲಿದೆ. ಅಂತಹ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಪ್ರಸ್ತಾವಕ್ಕೆ ಸ್ವತಃ ಉನ್ನತ ಶಿಕ್ಷಣ ಮಂತ್ರಿಗಳೇ ಅಧ್ಯಕ್ಷರಾಗಿರುವ ರಾಜ್ಯಮಟ್ಟದ ಅಭಿವೃದ್ಧಿ ಮಂಡಳಿಯಿಂದ ಅನುಮತಿ ಪಡೆಯಬೇಕಾಗುತ್ತದೆ.

ಈ ‘ಮಂಡಳಿಯು ಪ್ರಧಾನ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿರತಕ್ಕದ್ದು’ ಎಂದು ಹೇಳುವ ಮೂಲಕ ಕಟ್ಟಡ ಕಟ್ಟುವ ಮತ್ತು ಅದಕ್ಕೋಸ್ಕರ ಹಣ ಖರ್ಚು ಮಾಡುವ ಅಧಿಕಾರವನ್ನು ವಿ.ವಿ.ಯಿಂದ ಅಂದರೆ ಇದುವರೆಗೂ ಕುಲಪತಿಗಳೇ ಅಧ್ಯಕ್ಷರಾಗಿರುತ್ತಿದ್ದ ವರ್ಕ್ಸ್‌ ಸಮಿತಿ ಮತ್ತು ಫೈನಾನ್ಸ್ ಸಮಿತಿಗಳಿಂದ ಕಿತ್ತುಕೊಂಡು ಮಂತ್ರಿಗಳೇ ಅಧ್ಯಕ್ಷರಾಗಿರುವ ಮಂಡಳಿಗೆ ವರ್ಗಾಯಿಸಲಾಗಿದೆ.

ಓರ್ವ ಗ್ರಾಮ ಪಂಚಾಯ್ತಿ ಅಧ್ಯಕ್ಷನಿಗೆ ನೀಡಿರುವಷ್ಟು ಅಧಿಕಾರವನ್ನು ಸಹ ಉನ್ನತ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾದ ಒಂದು ವಿಶ್ವವಿದ್ಯಾಲಯದ ಕುಲಪತಿಯಿಂದ ಕಿತ್ತುಕೊಳ್ಳುವ ಮೂಲಕ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯನ್ನೇ ವಿರೂಪಗೊಳಿಸಲು ಹೊರಟಿದೆ. ವಿ.ವಿ.ಗಳು ಮತ್ತು ಕಾಲೇಜುಗಳ ಅಧ್ಯಾಪಕ ಸಮುದಾಯವನ್ನು ಅಪನಂಬಿಕೆ, ಅವಿಶ್ವಾಸ ಮತ್ತು ಅನುಮಾನದಿಂದ ನಡೆಸಿಕೊಳ್ಳುವ ಒಂದು ವಿಕ್ಷಿಪ್ತ ಮನಃಸ್ಥಿತಿ ಈ ಮಸೂದೆಯುದ್ದಕ್ಕೂ ಬಿಂಬಿತವಾಗಿದೆ.

ಇನ್ನು ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಯನ್ನು ಈ ಹಿಂದಿನ ಅಧಿನಿಯಮದಲ್ಲಿದ್ದಂತೆಯೇ (ಕರ್ನಾಟಕ ವಿ.ವಿ. ಅಧಿನಿಯಮ, 2000) ಕೇವಲ ಐಎಎಸ್‌ ಅಥವಾ ಹಿರಿಯ ವೇತನ ಶ್ರೇಣಿ ಕೆಎಎಸ್‌ ಅಧಿಕಾರಿಗಳಿಗೇ ನೀಡತಕ್ಕದ್ದೆಂದು ಹೇಳಲಾಗಿದೆ. ಕುಲಪತಿಯ ಹೊರತು, ವಿ.ವಿ.ಯ 2ನೇ ಅತ್ಯುನ್ನತ ಹುದ್ದೆಯಾದ ಕುಲಸಚಿವ ಪದವಿಯನ್ನು ಯುಜಿಸಿ ನಿಯಮಾನುಸಾರ ಒಬ್ಬ ಹಿರಿಯ ಪ್ರಾಧ್ಯಾಪಕ ಅಥವಾ ಸಂಯೋಜಿತ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡುವುದರಿಂದ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ತರಬೇತಿಗೆ ಹಾಗೂ ಶೈಕ್ಷಣಿಕ ನಾಯಕತ್ವ ನಿರ್ಮಾಣಕ್ಕೆ ಒಂದು ಅಪೂರ್ವ ಅವಕಾಶವಿರುತ್ತಿತ್ತು.

ಇನ್ನು ಅಧಿನಿಯಮದ ಸೆಕ್ಷನ್‌– 20ರಲ್ಲಿ ಪರೀಕ್ಷಾ ನಿಯಂತ್ರಕ (ಕಂಟ್ರೋಲರ್ ಆಫ್ ಎಕ್ಸಾಮಿನೇಷನ್) ಹುದ್ದೆಯನ್ನು ಸುದೈವವಶಾತ್ ಅನುಭವಿ ಪ್ರಾಧ್ಯಾಪಕ ಅಥವಾ ಕಾಲೇಜು ಪ್ರಾಂಶುಪಾಲರಿಗೆ ದಯಪಾಲಿಸಲಾಗಿದೆ! ಆದರೆ, ಇಲ್ಲೂ ಯಾವುದೇ ಕ್ಷಣದಲ್ಲೂ  ಹಿರಿಯ ವೇತನ ಶ್ರೇಣಿ ಕೆಎಎಸ್‌ ಅಧಿಕಾರಿಯ ನೇಮಕದ ಸಾಧ್ಯತೆಯನ್ನೂ ಮುಕ್ತವಾಗಿಡಲಾಗಿದೆ.

ಇಂತಹ ಅಧಿನಿಯಮವನ್ನು ಸದನಕ್ಕೆ ತರುವುದಕ್ಕೆ ಮೊದಲು ಅದರ ಕರಡನ್ನು ಉನ್ನತ ಶಿಕ್ಷಣ ಇಲಾಖೆಯ ವೈಬ್‌ಸೈಟ್‌ನಲ್ಲಾದರೂ ಪ್ರಕಟಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಆಸಕ್ತ ಶಿಕ್ಷಣ ತಜ್ಞರು, ಶೈಕ್ಷಣಿಕ ಚಿಂತಕರು, ಅಧ್ಯಾಪಕ ಸಂಘಟನೆಗಳು ಮತ್ತು ವಿಧಾನ ಪರಿಷತ್‌ನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಶಾಸಕರ ಅಭಿಪ್ರಾಯಗಳನ್ನು ಆಹ್ವಾನಿಸಬಹುದಾಗಿತ್ತು. ಅಲ್ಲದೆ, ಈ ಅಧಿನಿಯಮದ ಕರಡನ್ನು ತಯಾರಿಸಲು ನೇಮಕಗೊಂಡ ತಜ್ಞ ಸಮಿತಿಯ ಹಿರಿಯ ವಿಶ್ರಾಂತ ಕುಲಪತಿಗಳು ರಾಜ್ಯದಾದ್ಯಂತ ಸಂಚರಿಸಿ ಅಥವಾ ಒಂದು ಕೇಂದ್ರ ಸ್ಥಾನದಲ್ಲಿಯೇ ಮುಕ್ತ ಸಂವಾದವನ್ನು ಏರ್ಪಡಿಸಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅತ್ಯಂತ ಪ್ರಗತಿಪರ ಶಾಸನವನ್ನು ರೂಪಿಸಬಹುದಾಗಿತ್ತು. ಆದರೆ, ಇಂತಹ ಯಾವುದೇ ಸೌಜನ್ಯ ತೋರದೆಯೇ ಬರೀ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ರಹಸ್ಯ ಸಭೆಗಳನ್ನು ನಡೆಸಿ, ಏಕಾಏಕಿ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದೆ.

ಜಾಗತೀಕರಣದ ಯುಗದಲ್ಲಿ ಭಾರತವನ್ನು ಪ್ರಪಂಚದ 3ನೇ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಮತ್ತು ಜ್ಞಾನಾಧಾರಿತ ಶಕ್ತಿ ಕೇಂದ್ರವನ್ನಾಗಿ ರೂಪಿಸಿದ ಇಂದಿನ ಜ್ಞಾನಾಧಾರಿತ ಅರ್ಥ ವ್ಯವಸ್ಥೆಯ ಹೊಸ ತಲೆಮಾರಿನ ಯುವಜನರ ಕನಸುಗಳನ್ನೇ ಭಗ್ನಗೊಳಿಸುವಂತಿರುವ ಈ ಮಸೂದೆಯನ್ನು ರಾಜ್ಯ ಸರ್ಕಾರ ವಾಪಸು ಪಡೆದು, ಮತ್ತೊಮ್ಮೆ ಎಲ್ಲ ಪ್ರಜ್ಞಾವಂತ ವಲಯಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಪುನರ್‌ರೂಪಿಸಬೇಕು.

ಲೇಖಕ: ವಿಶೇಷಾಧಿಕಾರಿ, ಮಹಾರಾಣಿ ಕ್ಲಸ್ಟರ್ ವಿ.ವಿ. ಹಾಗೂ ಮಂಡ್ಯ ಏಕೀಕೃತ ವಿ.ವಿ.(ಅಭಿಪ್ರಾಯಗಳು ವೈಯಕ್ತಿಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.