ADVERTISEMENT

ಬಡವರನ್ನು ಶಾಶ್ವತವಾಗಿ ಬಡವರನ್ನಾಗಿ ಉಳಿಸುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ನಾಡಿನ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾದ ದೇವನೂರ ಮಹಾದೇವ ಅವರು  (ಪ್ರ.ವಾ.  ಜುಲೈ 11) ಬರೆದಿರುವ `ಉಳ್ಳವರ ಕ್ರೂರ ವ್ಯಂಗ್ಯದ ನಡುವೆ...' ಎಂಬ ಲೇಖನಕ್ಕೆ ಈ ಪ್ರತಿಕ್ರಿಯೆ.

ಸರ್ಕಾರಗಳು ಬಡವರಿಗಾಗಿ ಸುರಿಯುತ್ತಿರುವ ಲಕ್ಷ ಲಕ್ಷ ಕೋಟಿ ರೂಪಾಯಿಗಳು ಆಕಾಶದಿಂದ ಉದುರಲಿಲ್ಲ. ಅದೆಲ್ಲ ಉಳ್ಳವರು ನೀಡಿದ ತೆರಿಗೆ ಹಣ. ತಮ್ಮ ಕಷ್ಟಾರ್ಜಿತ ಹಣವನ್ನು ಸರ್ಕಾರ ಸದ್ವಿನಿಯೋಗ ಮಾಡಬೇಕು, ವೋಟ್ ಬ್ಯಾಂಕ್ ರಾಜಕೀಯಕ್ಕೆ ಸುರಿಯಬಾರದು ಎಂದು ಒತ್ತಾಯಿಸುವ ಹಕ್ಕು ಉಳ್ಳವರಿಗೆ ಇದೆ. ಇಷ್ಟಕ್ಕೂ ಬಡವರ ಬಡತನಕ್ಕೆ ಈ ದೇಶವನ್ನು 65 ವರ್ಷ ಆಳಿರುವ ರಾಜಕಾರಣಿಗಳು ಕಾರಣವೇ ಹೊರತು ಉಳ್ಳವರಲ್ಲ.

ಸಂಪತ್ತಿನ ವಿತರಣೆ ಆಗಬೇಕಾದರೆ ಮೊದಲು ಸಂಪತ್ತಿನ ಸೃಷ್ಟಿಯಾಗಬೇಕು. ಅದನ್ನು ಅರಿತುಕೊಂಡದ್ದರಿಂದಲೇ ಕಟ್ಟಾ ಕಮ್ಯುನಿಸ್ಟ್ ಆಗಿದ್ದ ತಾವು ಉದ್ಯಮಿ ಆಗಿದ್ದಾಗಿ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ. ಅವರ ಸಂಸ್ಥೆಯಿಂದ ಇಂದು ನೂರಾರು ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಬರುತ್ತಿದೆ.

ತಮ್ಮ ದೈನೇಸಿ ಸ್ಥಿತಿಗೆ ಬಡವರು ತಾವೇ ಕಾರಣ. ವೋಟ್ ಬ್ಯಾಂಕ್ ರಾಜಕಾರಣದ ಅಗ್ಗದ ಅಕ್ಕಿ, ಪುಕ್ಕಟೆ ಸೀರೆ, ಮತಕ್ಕಾಗಿ ಲಂಚ, ಹೆಂಡ ಇತ್ಯಾದಿಗಳಿಗೆ ಬಲಿಯಾಗಿ ಅದೇ ಅದೇ ಅದಕ್ಷ ರಾಜಕಾರಣಿಗಳನ್ನೇ ಆರಿಸಿ ತರುತ್ತಿರುವವರು ಬಡವರೇ ಹೊರತು ಉಳ್ಳವರಲ್ಲ. ತಮ್ಮ ಮತಕ್ಕೆ ಬೆಲೆಯೇ ಇಲ್ಲವೆಂದು ಉಳ್ಳವರು ಮತ ಹಾಕುವುದೇ ಇಲ್ಲ. ಆದ್ದರಿಂದಲೇ ಸರ್ಕಾರ ಬಡವರಿಗಾಗಿ ವೆಚ್ಚ ಮಾಡುವ ಒಂದು ರೂಪಾಯಿಯಲ್ಲಿ ತೊಂಬತ್ತು ಪೈಸೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾಲಾಗುತ್ತಿದೆ. ಇನ್ನು ಬಡವರ ಉದ್ಧಾರ ಹೇಗೆ ಸಾಧ್ಯ? ಆದ್ದರಿಂದಲೇ ರೂಪಾಯಿ ಅಕ್ಕಿಗೆ ಕೈಚಾಚುವ ದೈನೇಸಿ ಸ್ಥಿತಿ ಬಂದಿದೆ. ತನ್ನ ಭ್ರಷ್ಟತೆ ಮುಚ್ಚಿಕೊಳ್ಳಲು ಸರ್ಕಾರ ಇಂತಹ ಪುಕ್ಕಟೆ ಯೋಜನೆಗಳನ್ನು ಜಾರಿಗೆ ತಂದು ಮೂಗಿಗೆ ತುಪ್ಪ ಸವರುತ್ತದೆ. ಬಡವರನ್ನು ಶಾಶ್ವತವಾಗಿ ಬಡವರನ್ನಾಗಿ ಉಳಿಸುವ ಹುನ್ನಾರವಿದು.

ಬಡವರಿಗೆ ಬೇಕಾಗಿರುವುದು ಉತ್ತಮ ಶಿಕ್ಷಣ ಮತ್ತು ವೃತ್ತಿ ತರಬೇತಿಯೇ ಹೊರತು ಅವರ ಸ್ವಾಭಿಮಾನ, ಸ್ವಾವಲಂಬನೆ ನಾಶಮಾಡುವ ಉಡುಗೊರೆಗಳಲ್ಲ. ಇವತ್ತಿನ ಬಡವರು ನಾಳಿನ ಉಳ್ಳವರಾಗಬೇಕೆಂದು ಬಯಸುವ ದೇವನೂರರು ಇದನ್ನು ಅರಿಯಬೇಕು.

ಸಮಾಜವಾದಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳು ಈ ದೇಶದ ಬಡತನಕ್ಕೆ ಮತ್ತೊಂದು ಮುಖ್ಯ ಕಾರಣ. ನೆಹರೂ ಮತ್ತು ಇಂದಿರಾ ಗಾಂಧಿ ದಶಕಗಳ ಕಾಲ ಅನುಸರಿಸಿದ ಸಮಾಜವಾದಿ ನೀತಿಗಳಿಂದಾಗಿ ಸಂಪತ್ತು ಸೃಷ್ಟಿಯಾಗಲಿಲ್ಲ. ಬಡತನ, ಅಪೌಷ್ಟಿಕತೆ, ರೋಗರುಜಿನಗಳಿಂದ ಲಕ್ಷ ಲಕ್ಷ ಬಡವರು ಮತ್ತವರ ಮಕ್ಕಳು ಸತ್ತರು. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂಬುದೇ ಆಶ್ಚರ್ಯ. ಪಶ್ಚಿಮ ಬಂಗಾಳವನ್ನು ಸುದೀರ್ಘವಾಗಿ ಆಳಿದ ಕಮ್ಯುನಿಸ್ಟರು ಆ ರಾಜ್ಯವನ್ನು ಹೇಗೆ ಹಾಳುಗೆಡವಿದ್ದಾರೆ ಎಂಬುದು ಕಣ್ಣ ಮುಂದೆಯೇ ಇಲ್ಲವೆ? ಬಂಡವಾಳಶಾಹಿ ತತ್ವಗಳನ್ನು ತನ್ನದಾಗಿಸಿಕೊಂಡ ಕಮ್ಯುನಿಸ್ಟ್ ಚೀನಾ ದೇಶ ಇವತ್ತು ಜಗತ್ತಿನಲ್ಲಿ ಯಾವ ಸ್ಥಾನದಲ್ಲಿದೆ ಎಂಬುದನ್ನೂ ಅರಿತರೆ ಒಳ್ಳೆಯದು.

ಅಪಾರ ಸ್ವಾಭಿಮಾನಿ ಆಗಿದ್ದ ಡಾ. ಅಂಬೇಡ್ಕರ್ ಅವರು ದಲಿತರಿಗೆ ಮೀಸಲಾತಿ ಬೇಡವೇ ಬೇಡ ಎಂದಿದ್ದರು. ಹತ್ತು ವರ್ಷವಾದರೂ ಮೀಸಲಾತಿ ಇರಲಿ ಎಂದು ಅವರನ್ನು ಒಪ್ಪಿಸಬೇಕಾಯಿತು. ಆದರೆ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಇನ್ನೂ ನೂರು ವರ್ಷವಾದರೂ ಮೀಸಲಾತಿ ಮುಗಿಯುವುದಿಲ್ಲ. ಈ ದೇಶದಲ್ಲಿ `ಸಮಾನತೆ' ಇಲ್ಲ ಎಂಬುದನ್ನು ಅರಿತ ಜಾಣರು ದೇಶ ಬಿಟ್ಟು ಹೋಗುತ್ತಿದ್ದಾರೆ.
-ಜಿ.ವಿ. ಆನಂದ್, ಬಾಗೇಪಲ್ಲಿ

ಉಳ್ಳವರ ವ್ಯಂಗ್ಯ
ದೇವನೂರ ಮಹಾದೇವ ಅವರು `ಅಭಿಮತ' ವ್ಯಕ್ತಪಡಿಸುತ್ತಾ ಇಲ್ಲದವರು `ಯಾಕಾಗಿ ದುಡಿಯುತ್ತಾರೆ, ಯಾರಿಗಾಗಿ ದುಡಿಯುತ್ತಾರೆ' ಎಂದು ಪ್ರಶ್ನೆ ಮಾಡಬೇಕಾಗಿತ್ತು ಎನ್ನುತ್ತಾರೆ. ಇವು ಅತ್ಯಂತ ಸಮಯೋಚಿತವಾದ ಪ್ರಶ್ನೆಗಳು. ಬರಿದಾಗುತ್ತಿರುವ ಅನ್ನದ ಬಟ್ಟಲು (ಪಾಳು ಬೀಳುತ್ತಿರುವ ಹೊಲಗಳ) ಕಡೆ ಬೊಟ್ಟುಮಾಡಿ ತೋರಿಸುತ್ತಾ ಇದಕ್ಕೆ ಕಾರಣಗಳು ಏನೇನೆಲ್ಲಾ ಇದ್ದರೂ, ಕೃಷಿ ಕಾರ್ಮಿಕರು ಕೂಲಿಗೆ ಬರಲು ನಿರುತ್ಸಾಹ ತೋರಿಸುತ್ತಿರುವುದೇ ಕಾರಣ ಎಂಬ ಸಬೂಬನ್ನು, ಅದಕ್ಕೆ ಸರ್ಕಾರಗಳು ಕೊಡಮಾಡುತ್ತಿರುವ ಸವಲತ್ತುಗಳು ಕಾರಣ ಎಂದು ಜನಪ್ರತಿನಿಧಿಗಳೂ ಸೇರಿದಂತೆ ಉಳ್ಳವರು ಮಾತಾಡಿಕೊಳ್ಳುವುದೂ ನಡೆದಿವೆ.

ಕೃಷಿಗೇ ಪ್ರಾಧಾನ್ಯವಿದ್ದ, ಮಾಡಲು ಕೈತುಂಬಾ ಕೆಲಸ ದೊರಕುತ್ತಿದ್ದ ಬ್ರಿಟಿಷರ ಕಾಲದಲ್ಲೇ ಮನೆ ಮಾರುಗಳನ್ನು ತೊರೆದು ಬಡವರು, ಕೃಷಿ ಕಾರ್ಮಿಕರು ಮಾರಿಷಸ್, ಶ್ರೀಲಂಕಾ, ಬರ್ಮಾ ಮೊದಲಾದ ಕಡೆ `ಗುಳೆ' ಹೋಗುವಂತಹ ಪರಿಸ್ಥಿತಿಗೆ ಉಳ್ಳವರು ದೂಡಿದ್ದರು. ಈಗ ಕೂಲಿಗಳ ಬದಲಿಗೆ ಜೆಸಿಬಿ, ಟ್ರ್ಯಾಕ್ಟರ್, ಟಿಲ್ಲರ್ ಮೊದಲಾದ ಯಂತ್ರೋಪಕರಣಗಳು ಬಂದಿವೆ. ಬಡವರನ್ನು, ಕೃಷಿ ಕಾರ್ಮಿಕರನ್ನು ಯಾವ ಮಟ್ಟಕ್ಕೆ ಇಳಿಸಿರಬಹುದು ಎಂದು ಊಹಿಸಿಕೊಂಡರೇ ಮೈ ನಡುಗುತ್ತದೆ.

ಹಾಗಿರುವಾಗ ಸವಲತ್ತುಗಳನ್ನು ಕೊಡದೇ `ಅವರನ್ನು ಮಾತ್ರ ದುಡಿಯುವ ಅನಿವಾರ್ಯತೆಗೆ ಯಾಕೆ ತಳ್ಳಬೇಕು ಮತ್ತು ಅವರಾದರೂ ಯಾಕಾಗಿ ದುಡಿಯಬೇಕು' ಎಂದು ಪ್ರಶ್ನಿಸಿಕೊಳ್ಳುತ್ತಾ ಉಳ್ಳವರು ವ್ಯಂಗ್ಯ ಮಾಡುವುದನ್ನು ಬಿಟ್ಟು `ಆಶ್ರಯ', `ಅನ್ನಭಾಗ್ಯ' ಮುಂತಾದ ಯೋಜನೆಗಳನ್ನು ಪ್ರೋತ್ಸಾಹಿಸಬೇಕು.
-ಸಿರಿಮನೆ ಮಹಾಬಲ, ಶೃಂಗೇರಿ

ವಾಸ್ತವ ಸ್ಥಿತಿ

ದೇವನೂರರು, ಚಿತ್ರಿಸಿರುವ ಬಡತನ, 1960-70ರ ದಶಕದ್ದು. ನಾನೂ ಸಹ ಗ್ರಾಮ ಮತ್ತು ಪಟ್ಟಣ ಎರಡರ್ಲ್ಲಲೂ ವಾಸಿಸುವವನು, ಊರಿನಲ್ಲಿರುವ ಸ್ವಲ್ಪ ಜಮೀನು ನೋಡಿಕೊಳ್ಳುತ್ತಾ ನಗರದಲ್ಲಿ ವಾಸ ಮಾಡಿಕೊಂಡಿದ್ದೇನೆ. ಅಲ್ಲಿ ಪ್ರಸ್ತುತ ಪರಿಸ್ಥಿತಿ ಹೀಗಿದೆ. ನನ್ನೂರು 250-300 ಮನೆಗಳ ಗ್ರಾಮ. ಯುವಕರೆಲ್ಲಾ ಹತ್ತಿರದ ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಾರೆ.

ಟ್ಯಾಕ್ಸಿ ಡ್ರೈವರ್‌ಗಳಾಗಿದ್ದಾರೆ. ಉಳಿದವರು ಅಲ್ಪಸ್ವಲ್ಪ ಜಮೀನು ಇಟ್ಟುಕೊಂಡ ಕೃಷಿ ಕಾರ್ಮಿಕರು. ಎಲ್ಲರಲ್ಲೂ ರೇಷನ್ ಕಾರ್ಡಿದೆ. ಹೆಚ್ಚೂಕಮ್ಮಿ ಮನೆಯಲ್ಲಿ ಒಬ್ಬರಿಗೆ (60 ವರ್ಷ ಮೀರಿದವರಿಗೆ) ವೃದ್ಧಾಪ್ಯವೇತನ ಬರುತ್ತಿದೆ. ಸ್ವಲ್ಪ ಸದೃಢಕಾಯದ ವ್ಯಕ್ತಿಗಳು ಕೂಲಿ ಮಾಡುತ್ತಾರೆ. ನನ್ನ ಹೊಲ ತೋಟದ ಕೆಲಸಕ್ಕೆ ಕರೆಯಹೋದರೆ ಬಡಪೆಟ್ಟಿಗೆ ಬರುವುದಿಲ್ಲ.

ಹತ್ತಾರು ಬಾರಿ ಅಲೆದು ದಮ್ಮಯ್ಯ ಗುಡ್ಡೆ ಹಾಕಿದರೆ, ಕಾಫಿ ತಿಂಡಿ ಖರ್ಚು, ಬೀಡಿ ಖರ್ಚು ಸಾಯಂಕಾಲ ಖರ್ಚು ಕೊಟ್ಟು ರೂ 250 ಕೊಟ್ಟರೆ ಮಾತ್ರ ಕೆಲಸಕ್ಕೆ ಬರುತ್ತೇವೆ ಎನ್ನುತ್ತಾರೆ. ಬಂದರೆ ಸಾಕೆಂದು ಒಪ್ಪುತ್ತೇನೆ. ಹೇಗೊ ಜಮೀನಿನ ಕೆಲಸ ಮಾಡಿಸಿಕೊಂಡು ಅವರ ಜೊತೆ ನಾನೂ ದುಡಿದು ಜಮೀನು ಉಳಿಸಿಕೊಂಡಿದ್ದೇನೆ. ಇದೊಂದು ಮುಖ.

ಇನ್ನೊಂದು ಮುಖ ನಗರದ್ದು. ನಾನು ಬೆಂಗಳೂರಿನ ಹೊಸ ಬಡಾವಣೆಯಲ್ಲಿ ವಾಸ ಇದ್ದೇನೆ. ಮೊನ್ನೆ ಮನೆಯ ಡ್ರೈನೇಜ್ ಕಟ್ಟಿಕೊಂಡು ನೀರು ಹೋಗದೆ ವಾಸನೆ ಹತ್ತಿತ್ತು. ನಾನೆ ದಬ್ಬೆಹಾಕಿ ಪೈಪಿನ ನೀರು ಹೊರಹೋಗಿಸಲು ಬಹಳ ಪ್ರಯತ್ನ ಮಾಡಿ ಸಾಧ್ಯವಾಗದೆ, ಪೌರಕಾರ್ಮಿಕರನ್ನು ಹುಡುಕಿ, ಕೂಲಿ ಮಾತನಾಡಿದೆ. ಉದ್ದನೆಯ ದಬ್ಬೆ ಹಿಡಿದು ಬಂದ ಇಬ್ಬರು ವ್ಯಕ್ತಿಗಳು `ಏನು ಸ್ವಾಮೀ ಕೆಲಸ ನೀವೆ ಮಾಡ್ಕಂಡಂಗಿದೆ, ನೀರು ಹೋಗಲಿಲ್ವ' ಎಂದು ವ್ಯಂಗ್ಯವಾಡಿದರು.

`ಇಲ್ಲಾ ಮಾರಾಯ, ನನ್ನ ಹತ್ರ ಉದ್ದನೆ ದಬ್ಬೆ ಇಲ್ಲಾ ಏನು ಮಾಡೋದು? ನಿನ್ನ ಹತ್ರ ದಬ್ಬೆ ಇದೆಯಲ್ಲ ಸ್ವಲ್ಪ ತಳ್ಳಿ, ಕಸ ಹೋಗಿಸು, ಎಷ್ಟು ಕೊಡಬೇಕು' ಎಂದೆ. `ಬುದ್ಧಿ ನೀವ್ಯಾರೊ ಕೆಲಸ ಬಲ್ಲೋರು, ನಾವಿಬ್ಬರು ಇರೋದು, ಬೇರೆ ಕೆಲ್ಸ ಬಿಟ್ಟು ಬಂದಿದೀವಿ, ಒಂದು ಸಾವಿರ ಕೊಟ್ಟುಬಿಡಿ, ನೀರು ಸರಾಗವಾಗಿ ಹರಿದು ಹೋಗಂಗೆ ಮಾಡ್ತೀವಿ' ಅಂದ. `ಏನಯ್ಯ ಬರೀ ದಬ್ಬೆಹಾಕಿ ನೂಕಕ್ಕೆ ಇಷ್ಟೊಂದೆ?' ಎಂದೆ. `ಜಲ್ದಿ ಹೇಳಿ ನಾವು ಬೇರೆ ಕೆಲಸಕ್ಕೆ ಹೋಗಬೇಕು', ಅಂತ ಟಿವಿಎಸ್‌ನಲ್ಲಿ ದಬ್ಬೆಹಿಡಿದು ಹೊರಟೇಬಿಟ್ಟರು. ನಾನು, `ಏ ಇರಪ್ಪ, ಸ್ವಲ್ಪ ಕಡಿಮೆ ಮಾಡ್ಕೊ ಎಂಟುನೂರು ತಗೊ... ಮಾಡು' ಎಂದೆ.

`ಆಗಲ್ರ ಸಾಯಂಕಾಲದ ಖರ್ಚಿಗೆ ನೂರು ರೂಪಾಯಿ ಸೇರಿಸಿ ಕೊಟ್ಟುಬಿಡಿ' ಎಂದು ಇಬ್ಬರೂ ಸೇರಿ ಹತ್ತು ನಿಮಿಷದಲ್ಲಿ ದಬ್ಬೆಹಾಕಿ ನೀರು ಹರಿವಂತೆ ಮಾಡಿ, ಒಂಬೈನೂರು ಪಡೆದು ಹೊರಟರು, ನಾನು ಅವಾಕ್ಕಾಗಿ `ದಿನಾ ಎಷ್ಟು ಕಡೆ ದಬ್ಬೆಹಾಕ್ತಿರಾ' ಎಂದೆ. `ದುಗ್ಗಮ್ಮನ ದಯ ಇದ್ದರೆ, ದಿನಕ್ಕೆ ಎರಡು ಮೂರು ಮನೆ ಸಿಕ್ತವೆ ಬುದ್ಧಿ' ಎಂದ. ಹೇಗಿದೆ ವಾಸ್ತವದ ಪರಿಸ್ಥಿತಿ?
-ಬಿ.ಎನ್. ಚಂದ್ರಶೇಖರಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.