ಈ ಸಲದ ಮುಂಗಾರು ಮಳೆ ದುರ್ಬಲ ಆಗಿರುವುದರಿಂದ ಮೋಡ ಬಿತ್ತನೆಗೆ ಸರ್ಕಾರ ಯೋಚಿಸಿದೆ. ಮುಖ್ಯಮಂತ್ರಿಗಳು ಈಚೆಗೆ ಈ ಬಗ್ಗೆ ಸಭೆ ನಡೆಸಿ ಸಂಬಂಧಿತರಿಗೆ ಮೋಡ ಬಿತ್ತನೆ ಸಿದ್ಧತೆ ಕೈಗೊಳ್ಳಲು ಸೂಚಿಸಿರುವುದು ಒಳ್ಳೆಯ ನಿರ್ಣಯ.
ಆದರೆ ಇಂಥ ನಿರ್ಣಯಗಳು ಹಿಂದೆಯೂ ಎಷ್ಟೋ ಸಲ ಆಗಿದೆ. 2010 ರಲ್ಲಿಯೂ ಕಂದಾಯ ಸಚಿವರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ರಾಜ್ಯದ ಏಳು ಕಡೆ ರಾಕೆಟ್ ಉಡಾವಣೆ ಮೂಲಕ ಮೋಡ ಬಿತ್ತನೆ ಮಾಡಲಾಗುವುದು. ಇದಕ್ಕಾಗಿ ರೂ. 35 ಕೋಟಿ ವೆಚ್ಚವಾಗಲಿದೆ.
ರಾಕೆಟ್ ಉಡಾವಣೆಗೆ ಟವರ್‌ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದರು. ಮುಂದೆ ಸರಿಯಾದ ಮಳೆ ಬಂದಿದ್ದರಿಂದ ಮೋಡ ಬಿತ್ತನೆ ನಡೆಯಲಿಲ್ಲ. ಆದರೆ ಟವರ್ ನಿರ್ಮಾಣದ ಕೆಲಸ ಎಲ್ಲಿಗೆ ಬಂತು ಎಂಬುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕೆಲ ವರ್ಷಗಳ ಹಿಂದೆ ಕೃತಕ ಮಳೆ ಸುರಿಸುವುದಕ್ಕಾಗಿ ಸರ್ಕಾರ ವಿಮಾನದ ಬಳಕೆ ಸಹ ಮಾಡಿತು.
ಇದರಿಂದ ಕೋಟಿಗಟ್ಟಲೇ ಹಣ ಖರ್ಚಾಯಿತೇ ಹೊರತು ಅಂದುಕೊಂಡಷ್ಟು ಯಶಸ್ಸು ದೊರಕಲಿಲ್ಲ.ಬರ ಬಂದಾಗ, ಮಳೆ ಹೋದಾಗ ಸರ್ಕಾರದ ಮಟ್ಟದಲ್ಲಿ ತುರ್ತುಸಭೆ ನಡೆಸಿ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸುವುದು ಹೊಸದೇನಲ್ಲ. ಇಂಥ ಸಂದರ್ಭದಲ್ಲಿ ಹಣವೂ ಬಿಡುಗಡೆ ಆಗುತ್ತದೆ. ಆದರೆ ಕೆಲಸ ಮಾತ್ರ ತುರ್ತಾಗಿ ಆಗುವುದಿಲ್ಲ.
ಕೆಲವರಿಗೆ ಹಣ ಕೊಳ್ಳೆ ಹೊಡೆಯಲು ಅತಿವೃಷ್ಟಿ ಮತ್ತು ಅನಾವೃಷ್ಟಿ ಒಂದು ನೆಪ ಆಗುತ್ತದೆ. ಸಮಸ್ಯೆ ಇಲ್ಲದಿದ್ದರೂ ನೀರಿನ ಅಭಾವ, ಮೇವಿನ ಕೊರತೆ ಬಗ್ಗೆ ದೊಡ್ಡ ದೊಡ್ಡ ಫೈಲ್‌ಗಳನ್ನು ಸಿದ್ಧಪಡಿಸಿ ಜೇಬು ತುಂಬಿಸಿಕೊಳ್ಳುವ ಹುನ್ನಾರ ನಡೆಸುವುದು ಯಾರಿಗೆ ಗೊತ್ತಿಲ್ಲ. ಒಟ್ಟಾರೆ ಇಂಥ ಸಂದರ್ಭದಲ್ಲಿ ಅನ್ನದಾತನ ಹೆಸರಲ್ಲಿ ಯಾರಿಗೋ ಅನ್ನ ದೊರೆಯುತ್ತದೆ.
ಬೇರೆ ಬೇರೆ ಸವಲತ್ತುಗಳಿಗಾಗಿ ಸರ್ಕಾರ ಹಣದ ಹೊಳೆಯನ್ನೇ ಹರಿಸುತ್ತದೆ. ಕೃತಕ ಮಳೆ ತರಿಸುವುದಕ್ಕಾಗಿ ಖರ್ಚಾಗುವ ಹಣ ಅದಕ್ಕೆ ಹೋಲಿಸಿದರೆ ಕಡಿಮೆಯೇ. ಆದರೆ ಭರವಸೆ ಕೊಟ್ಟಂತೆ ಜನಪ್ರತಿನಿಧಿಗಳು ನಡೆದುಕೊಳ್ಳಬೇಕು. ಜನತೆಯ ಕಷ್ಟ ಅರಿತುಕೊಳ್ಳಬೇಕು. ಕೃಷಿಕರ ಬಗ್ಗೆ ನಿಜವಾದ ಕಾಳಜಿ ತೋರಬೇಕು.
ಇತ್ತೀಚಿನ ವರ್ಷಗಳಲ್ಲಿ ಆಗಾಗ ಮೇಘರಾಜ ನಾಪತ್ತೆ ಆಗುತ್ತಿರುವ ಕಾರಣ ಪ್ರತಿ ವರ್ಷ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಂಡರೆ ತಪ್ಪೇನಿಲ್ಲ. ಜತೆಗೆ ಇದಕ್ಕಾಗಿ ಹೊಸ ಹೊಸ ಪ್ರಯೋಗ ಕೈಗೊಂಡು ಸರಳ ಹಾಗೂ ಸುಲಭ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುವುದು ಒಳಿತು. ಈಚೆಗೆ ಕೆಲವೆಡೆ ಎರಡು ಸಾವಿರ ರೂಪಾಯಿ ವೆಚ್ಚದ `ವರುಣಯಂತ್ರ~ದ ಪ್ರಯೋಗ ಕೈಗೊಳ್ಳಲಾಗಿದೆ. ಅಂಥದಕ್ಕೆ ಉತ್ತೇಜನ ಕೊಡಬೇಕು.
ಮಹಾರಾಷ್ಟ್ರದ ಹಳ್ಳಿಗಳಲ್ಲಿ ನಡೆಸಿದ `ವರುಣಯಂತ್ರ~ ಪ್ರಯೋಗವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲ್ಲೂಕಿನ ಜಳಕೋಟ್ ಮತ್ತು ಲೋಹಾರಾ ತಾಲ್ಲೂಕಿನ ಜೇವಳಿ ಗ್ರಾಮದಲ್ಲಿ ಇದರ ಯಶಸ್ವಿ ಪ್ರಯೋಗವಾಗಿದೆ.
ಜಳಕೋಟ್‌ನ ಗ್ರಾಮ ಪಂಚಾಯಿತಿ ಕಚೇರಿ ಎದುರು ಅದಾಗಲೇ ಎರಡು ಸಲ ಪ್ರಯೋಗ ನಡೆಸಿದಾಗ ಎರಡೂ ಸಲ ಧೋ ಧೋ ಎಂದು ಮಳೆ ಸುರಿದಿದೆ. ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಬಂತು. ಜಿಪಂ ಸದಸ್ಯರಾಗಿದ್ದ ಗಣೇಶ ಸೋನಟಕ್ಕೆ ಅವರೇ ಯಂತ್ರದ ಎಲ್ಲ ಖರ್ಚನ್ನು ಕೊಟ್ಟು ಮಳೆ ಬರುವವರೆಗೆ ಇಲ್ಲಿಯೇ ಠಿಕಾಣಿ ಹೂಡಿದ್ದರು ಎಂದು ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ವೆಂಕಟ ಬೇಡಗೆ, ಸುನಿಲ ಮಾಳಗೆ ಹೇಳುತ್ತಾರೆ.
ನಂತರ ಅವರು ಪಂಚಾಯಿತಿ ಕಚೇರಿ ಎದುರು ನಿರ್ಮಿಸಿದ್ದ ವರುಣಯಂತ್ರ ತೋರಿಸಿದರು. 3 ಅಡಿ ಅಗಲ ಮತ್ತು 4 ಅಡಿ ಎತ್ತರದ ಇಟ್ಟಂಗಿಗಳ ಒಲೆ ಅದಾಗಿತ್ತು. ಅದರಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಸುಮಾರು ಮೂರು ಗಂಟೆಗಳವರೆಗೆ ಹೋಮದಲ್ಲಿ ಹಾಕಿದಂತೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಡಿಗೆ ಉಪ್ಪನ್ನು ಹಾಕಿದ್ದೇವೆ.
ಒಟ್ಟು 6 ಕೆ.ಜಿ.ಯಷ್ಟು ಉಪ್ಪು ಬೆಂಕಿಯಲ್ಲಿ ಸುರಿಯಲಾಯಿತು ಎಂದರು. ನಾನು ಪ್ರಯೋಗವನ್ನು ನೋಡಬೇಕು ಎಂದು ತಿಳಿಸಿದ್ದರಿಂದ ಕೆಲ ದಿನಗಳ ನಂತರ ಮತ್ತೆ ಅದನ್ನು ಮಾಡುವಾಗ ನನ್ನನ್ನು ಕರೆದರು. ಐದಾರು ಗಂಟೆಗಳಲ್ಲಿ ಧಾರಾಕಾರ ಮಳೆ ಸುರಿದಿರುವುದನ್ನು ನಾನೂ ಕಣ್ಣಾರೆ ಕಂಡೆ.
ಇಂಥ ಪವಾಡ ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳಲು ಈ ಬಗ್ಗೆ ಜನರಿಗೆ ಮಾರ್ಗದರ್ಶನ ಮಾಡುವ ಲೋಹಾರಾ ತಾಲ್ಲೂಕಿನ ಜೇವಳಿಯ ಬಸವೇಶ್ವರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಆರ್.ವಿ.ಪಾಟೀಲ ಅವರನ್ನು ಭೇಟಿಯಾದೆ.
ಉಪ್ಪು ಬೆಂಕಿಯಲ್ಲಿ ಹಾಕುವುದರಿಂದ ಅದರಲ್ಲಿನ ಸೋಡಿಯಂ ಕ್ಲೋರಾಯಿಡ್ ಅಂಶ ಮೋಡಗಳಲ್ಲಿ ಹೋಗಿ ಕಾರಕದಂತೆ ಕಾರ್ಯನಿರ್ವಹಿಸುವುದೇ ಮಳೆ ಸುರಿಯಲು ಕಾರಣ ಎಂದು ವಿವರಿಸಿದರು. ವಿಮಾನದ ಮೂಲಕವೂ ಈ ಕಾರ್ಯ ಕೈಗೊಳ್ಳಬಹುದು. ಆದರೆ ಅದು ಇದರಷ್ಟು ಸುಲಭ ಅಲ್ಲ ಎಂದರು.
ಈ ಪ್ರಯೋಗಕ್ಕೆ ಬೆಳಿಗ್ಗೆ ಮತ್ತು ಸಂಜೆ ಸಮಯ ಉತ್ತಮ. ಗಾಳಿ ಜೋರಾಗಿ ಬೀಸದೆ ಹೊಗೆ ನೇರವಾಗಿ ಮೋಡಗಳ ಕಡೆಗೆ ಹೋಗಬೇಕು. ಹೊಗೆ ವೇಗವಾಗಿ ಮೋಡ ತಲುಪಲು ಒಲೆಯ ಕೆಳಭಾಗದಲ್ಲಿ ರಂಧ್ರ ಮಾಡಿ ಪಂಪಿನಿಂದ ಗಾಳಿ ಹಾಕಿದರೂ ನಡೆಯುತ್ತದೆ. ಮುಖ್ಯವೆಂದರೆ ವಾತಾವರಣದಲ್ಲಿ ಶೇ 50 ರಷ್ಟು ಆರ್ದ್ರತೆ ಇರಬೇಕಾದದ್ದು ಅನಿವಾರ್ಯ.
ಈ ರೀತಿ ಅನುಕೂಲ ವಾತಾವರಣವಿದ್ದರೆ 2 ಗಂಟೆಯಿಂದ 72 ಗಂಟೆಗಳ ಒಳಗಾಗಿ ಮಳೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು. ಉಪ್ಪನ್ನು ದಹಿಸಲು ಇಟ್ಟಿಗೆಗಳ ಒಲೆಯೇ ಬೇಕೆಂದೇನಿಲ್ಲ. ಖಾಲಿ ಡ್ರಮ್ಮನ್ನು ಸಹ ಬಳಸಬಹುದು ಎಂದು ಅವರು ತಮ್ಮ ಕಾಲೇಜಿನಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಯನ್ನು ತೋರಿಸಿದರು.
ಎಲ್ಲಿಯೂ, ಯಾರೂ ನಡೆಸಬಹುದಾದ ಸರಳ ಪ್ರಯೋಗ ಇದು. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸುಜಲೇಗಾಂವ ಎಂಬಲ್ಲಿ ಪ್ರಗತಿಪರ ಚಿಂತಕ ಮತ್ತು ತಜ್ಞರಾದ ಡಾ.ರಾಜಾ ಮರಾಠೆ ಎಂಬುವವರ ನೇತೃತ್ವದಲ್ಲಿ 2008 ರಲ್ಲಿ ಇದರ ಪ್ರಥಮ ಪ್ರಯೋಗ ನಡೆಯಿತು. ಈ ಸಂದರ್ಭದಲ್ಲಿ ಕೆಲ ಗಂಟೆಗಳಲ್ಲಿಯೇ ಧಾರಾಕಾರ ಮಳೆ ಸುರಿಯಿತು.
ಮರಾಠೆ ಅವರು ಇಷ್ಟಕ್ಕೇ ತೃಪ್ತರಾಗದೆ ಸತತವಾಗಿ 10 ಸಲ ಈ ವಿಧಾನ ಅನುಸರಿಸಿದರು. 9 ಸಲ ಮಳೆಯಾಯಿತು. ಆಗ ಅವರು ಬೇರೆಯವರಿಗೂ ಈ ಬಗ್ಗೆ ತಿಳಿಹೇಳಿದರು. ನಂತರ ಅನೇಕರು ಅವರ ಮಾರ್ಗ ಅನುಸರಿಸಿದರು.
ಪುಣೆಯಲ್ಲಿ ಸಕಾಳ ಪತ್ರಿಕೆ ಸಹಯೋಗದೊಂದಿಗೆ ವಿಜ್ಞಾನಿ ಡಾ.ವಿಜಯ ಭಟ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ರೀತಿ ಯಶಸ್ವಿ ಪ್ರಯೋಗ ನಡೆಸಿದವರ ಸಮಾವೇಶ ಸಹ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ವರುಣಯಂತ್ರದ ಪ್ರಯೋಗವೆಂದರೆ ಮಳೆಯ `ರಿಮೋಟ್ ಕಂಟ್ರೋಲ್~ ಕೈಯಲ್ಲಿ ಇದ್ದಂತೆ. ಬೇಕೆಂದಾಗ ಮಳೆ ಸುರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ ಇದರ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಹೆಚ್ಚಿನ ಸಂಶೋಧನೆಗೆ ಮುಂದಾಗಬೇಕು. ಇಂಥ ಪ್ರಯೋಗದ ಲಾಭ ಮತ್ತು ಹಾನಿಯ ಬಗ್ಗೆ ಶಾಸ್ತ್ರಬದ್ಧ ಮಾಹಿತಿ ಜನತೆಗೆ ತಲುಪಿಸುವುದು ಅವಶ್ಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.