ADVERTISEMENT

ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರೇಕೆ ಸಿಗುತ್ತಿಲ್ಲ?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಈಚೆಗೆ ವಿಧಾನ ಮಂಡಲದಲ್ಲಿ ಮುಖ್ಯಮಂತ್ರಿಗಳು `70 ಸಾವಿರ ಸಂಬಳ ನೀಡಿದರೂ ಸರ್ಕಾರಿ ಸೇವೆಗೆ ವೈದ್ಯರು ಸಿಗುತ್ತಿಲ್ಲ. 600 ವೈದ್ಯರಿಗೆ ಅರ್ಜಿ ಕರೆದರೆ ಕೇವಲ 252 ವೈದ್ಯರು ಅರ್ಜಿ ಹಾಕಿದ್ದಾರೆ~ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಆದರೆ ಇಂತಹ ಸ್ಥಿತಿ ನಿರ್ಮಾಣವಾಗಲು ಕಾರಣಗಳಿವೆ:

ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ಸೇವೆ ಸಲ್ಲಿಸಬೇಕೆಂದು ಹೇಳುವ ಸರ್ಕಾರಗಳು ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಗಮನಹರಿಸುವುದೇ ಇಲ್ಲ. ಅಲ್ಲಿ ವೈದ್ಯರಿಗಾಗಿ ಇರುವ ವಸತಿಗಳು ಗ್ರೂಪ್-ಡಿ ನೌಕರರಿಗೆ ಕಟ್ಟಿದ ಮನೆಗಳಾಗಿರುತ್ತವೆ, ಸುಣ್ಣ ಬಣ್ಣಗಳಿಲ್ಲದೆ ಶಿಥಿಲ ಸ್ಥಿತಿಯಲ್ಲಿ.
 
ಗ್ರಾಮೀಣ ಭಾಗದಲ್ಲಿ ಬೇರೆ ಬಾಡಿಗೆ ಮನೆಗಳೂ ಸಿಗುವುದಿಲ್ಲ. ಆಸ್ಪತ್ರೆ ಸುತ್ತಲಿನ ಪರಿಸರ ಸ್ವಚ್ಛವಾಗಿರುವುದಿಲ್ಲ. ಔಷಧಿ, ಸ್ವಚ್ಛತಾ ಸಾಮಗ್ರಿಗಳು, ಸಿಬ್ಬಂದಿಗಳ ಕೊರತೆ ಸದಾ ಇರುತ್ತದೆ. ಬೇಡಿಕೆ ಸಲ್ಲಿಸಿದರೂ ಅಧಿಕಾರಿಗಳು ಒಬ್ಬರು ಇನ್ನೊಬ್ಬರತ್ತ ಬೆರಳು ಮಾಡುತ್ತಾ, `ಇದ್ದುದರಲ್ಲಿಯೇ ಸುಧಾರಿಸಿಕೊಂಡು ಹೋಗಿ..~

ಎನ್ನುವ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಬಂದ ರೋಗಿಗಳಿಗೆ ಸರಿಯಾದ ಔಷಧಿ ಕೊಡದಿದ್ದರೆ ಸ್ಥಳೀಯ ಪುಢಾರಿಗಳು, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರಿಂದ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಸರ್ಕಾರದ ಹೊಣೆಗೇಡಿತನಕ್ಕೆ ವೈದ್ಯರು ತಲೆ ತಗ್ಗಿಸಬೇಕಾಗುತ್ತದೆ.

ಶವ ಪರೀಕ್ಷೆಗಳನ್ನು ನಡೆಸಿದಾಗ ಸ್ಥಳೀಯ ಪ್ರಭಾವಿಗಳು ಅಥವಾ ರಾಜಕಾರಣಿಗಳು ಹೇಳುವಂತೆ ವಾಸ್ತವ ಸತ್ಯವನ್ನು ತಿರುಚಿ ವರದಿ ನೀಡಬೇಕಾದ ಸಂದಿಗ್ಧತೆಗೆ ಪ್ರಾಮಾಣಿಕ ವೈದ್ಯರು ಗುರಿಯಾಗುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ.

ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರಗಳು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಸಿಬ್ಬಂದಿ, ಸಲಕರಣೆ, ಪರಿಸರವನ್ನು ನೀಡುವುದಿಲ್ಲ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನಂತಹ ಯೋಜನೆಗಳು ಬಂದ ನಂತರವಂತೂ ಸರ್ಕಾರಿ ವೈದ್ಯರಿಗೆ ವಿಶ್ರಾಂತಿಯೇ ಇಲ್ಲ.
 
`ಜನನಿ~ `ಸುರಕ್ಷಾ ಪ್ರಸೂತಿ~, `ಆರೈಕೆ~, `ಮಡಿಲು ಕಿಟ್~ ಹೀಗೆ ಹೊಸ ಹೊಸ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಲು ಹೆಚ್ಚುವರಿ ಸಿಬ್ಬಂದಿಗಳ ಕೊರತೆ ವೈದ್ಯರನ್ನು ಹೈರಾಣಗೊಳಿಸುತ್ತಿದೆ.
 
ಏಕೆಂದರೆ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ನೋಡುವ ಪ್ರಧಾನ ಕೆಲಸದ ಜೊತೆಗೆ ಬ್ಯಾಂಕ್ ಕೆಲಸ, ಆಡಳಿತ ಕೆಲಸ, ಪ್ರತಿ ತಿಂಗಳ ವರದಿ ಕೆಲಸ, ಕ್ಯಾಂಪ್ ಡ್ಯಾಡಿ, ಶಾಲೆ, ಅಂಗನವಾಡಿ, ಭಾಗ್ಯಲಕ್ಷ್ಮಿ ಯೋಜನೆಗಳ ಆರೋಗ್ಯ ತಪಾಸಣೆ ಕೆಲಸ, ನಿತ್ಯ ಖರ್ಚಾದ ವೆಚ್ಚಗಳ ಲೆಕ್ಕ ಇಡುವ ಕೆಲಸ, ಪ್ರತಿ ತಿಂಗಳು ಲೆಕ್ಕದ ವರದಿ ಕಳಿಸುವ ಕೆಲಸ ಇತ್ಯಾದಿ ಇತ್ಯಾದಿ ಹೆಚ್ಚುವರಿ ಜವಾಬ್ದಾರಿಗಳು ವೈದ್ಯರ ಹೆಗಲ ಮೇಲೆ ಬಿದ್ದಿವೆ.
 
ನಗರ ಪ್ರದೇಶಗಳಲ್ಲಿನ ಆಸ್ಪತ್ರೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಿ ಎಲ್ಲವೂ ಅದರಲ್ಲೇ ದಾಖಲೆ ಮಾಡಬೇಕೆಂದು ಆರೋಗ್ಯ ಇಲಾಖೆ ಆಜ್ಞೆ ಮಾಡಿದೆ. ಆದರೆ ಕಂಪ್ಯೂಟರ್ ಆಪರೇಟರ್‌ಗಳನ್ನು ನೀಡಿಲ್ಲ. ಆ ಕೆಲಸವನ್ನು ವೈದ್ಯರೇ ಮಾಡಬೇಕಾಗಿದೆ.

ನಗರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿನಷ್ಟು ಔಷಧಿ ಇತ್ಯಾದಿಗಳಿಗೆ ಅವಕಾಶವಿರುತ್ತದೆ. ಅದಕ್ಕೆ ಅನುಗುಣವಾಗಿ ವೈದ್ಯರು ತಮ್ಮ ಪ್ರದೇಶದ ಅಗತ್ಯಕ್ಕೆ ತಕ್ಕಂತೆ ಔಷಧಿ ಮತ್ತು ಇತರ ಪರಿಕರಗಳ ಪಟ್ಟಿ ತಯಾರಿಸಿ ಇಲಾಖೆಗೆ ಕಳಿಸಬೇಕು.
 
ಆದರೆ ಪಟ್ಟಿಯಲ್ಲಿರುವ ಔಷಧಿಗಳಲ್ಲಿ ಅನೇಕವು ಇಲಾಖೆಯಿಂದ ಸರಬರಾಜಾಗುವುದಿಲ್ಲ. ಕಳಿಸುವ ಔಷಧಿಗಳ ಪ್ರಮಾಣದಲ್ಲೂ ಕೊರತೆ ಕಂಡುಬರುತ್ತದೆ. ಅಲ್ಲದೆ, ಪಟ್ಟಿಯಲ್ಲಿರುವ ಔಷಧಿಗೆ ಬದಲಾಗಿ ಬೇರೆ ಹೆಸರಿನ/ಬೇರೆ ಕಂಪೆನಿಯ ಕಡಿಮೆ ಗುಣಮಟ್ಟದ ಔಷಧಿಗಳು ಕೆಲವೊಮ್ಮೆ ಸರಬರಾಜಾಗುತ್ತದೆ. ಇದಕ್ಕೆ ಕಾರಣ ಖರೀದಿ ಇಲಾಖೆ ಹಾಗೂ ಔಷಧಿ ಕಂಪೆನಿಗಳ ನಡುವಿನ ಅನೈತಿಕ ಹೊಂದಾಣಿಕೆ, ಭ್ರಷ್ಟಾಚಾರ.

ಅಲ್ಲದೆ ಆಸ್ಪತ್ರೆ ಸಿಬ್ಬಂದಿ ತಮ್ಮ ಪಾಲಿನ ಔಷಧಿ ತರಲು ಇಲಾಖೆಯ ದಾಸ್ತಾನು ಮಳಿಗೆಗೆ ಹೋದರೆ ಅಲ್ಲಿನ ಸಿಬ್ಬಂದಿ ಅವಧಿ ಮುಗಿಯುತ್ತಿರುವ ಅಥವಾ ಹಾಗೂ ಅಗತ್ಯವಿಲ್ಲದ ಹೆಚ್ಚುವರಿ ಔಷಧಗಳನ್ನು ತುಂಬಿ ಕಳಿಸುವ ಪ್ರಯತ್ನಗಳೂ ನಡೆಯುತ್ತವೆ. ಅದನ್ನು ಒಪ್ಪದಿದ್ದರೆ `ಅಗತ್ಯ ಔಷಧಿಗಳನ್ನು ಕೊಡುವುದಿಲ್ಲ~ ಎಂಬ ದರ್ಪದ ಮಾತುಗಳನ್ನು ವೈದ್ಯರು ತಮಗಿಂತ ಕೆಳದರ್ಜೆ ಸಿಬ್ಬಂದಿಯಿಂದ ಕೇಳಬೇಕಾಗುತ್ತದೆ.

ತಂತಮ್ಮ ಆಸ್ಪತ್ರೆಗಳ ದುರಸ್ತಿ, ನಿರ್ವಹಣೆ ಇತ್ಯಾದಿ ಅಗತ್ಯಗಳಿಗೆ ಸಾಮಗ್ರಿಗಳನ್ನು ಖರೀದಿಸುವ ಹೆಚ್ಚುವರಿ ಜವಾಬ್ದಾರಿಯೂ ವೈದ್ಯರದ್ದಾಗಿರುತ್ತದೆ. ಆದರೆ ಸಾಮಗ್ರಿಗಳನ್ನು ನೇರವಾಗಿ ಖರೀದಿಸುವಂತಿಲ್ಲ. ಬದಲಿಗೆ ಸರ್ಕಾರ ರಚಿಸಿರುವ ಒಂಬತ್ತು ಸದಸ್ಯರ (ಆರೋಗ್ಯ ರಕ್ಷಾ ಸಮಿತಿ) ಸಮಿತಿಯ ಸಭೆಯನ್ನು ಕರೆದು ಅಲ್ಲಿ ವಿವಿಧ ಕಂಪೆನಿಗಳಿಂದ ಪಡೆದ ಮೂರು ಕೊಟೇಷನ್‌ಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕು.

ಆದರೆ ಬಹುತೇಕ ಸಮಯಗಳಲ್ಲಿ ಎಲ್ಲಾ ಸದಸ್ಯರು ಸಭೆಗೆ ಹಾಜರಾಗುವುದೇ ಇಲ್ಲ. ಅಂತಹ ಸದಸ್ಯರ ಮನೆ ಬಾಗಿಲಿಗೆ ಸಭಾ ನಡವಳಿಕೆ ಪುಸ್ತಕ ತೆಗೆದುಕೊಂಡು ಹೋಗಿ ಅವರ ಸಹಿ ಪಡೆಯುವ ಕೆಲಸವೂ ವೈದ್ಯರದ್ದೇ.

ಸರ್ಕಾರದ ಇತ್ತೀಚಿನ ಯೋಜನೆಯೊಂದರ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) 24 ಗಂಟೆಗಳ ಸೇವಾ ಕೇಂದ್ರಗಳೆಂದು ಘೋಷಿಸಿದೆ. ಆದರೆ ಅದಕ್ಕೆ ಬೇಕಾದ ಸೌಕರ್ಯ ಮತ್ತು ಸಿಬ್ಬಂದಿಯ ನೀಡುತ್ತಿಲ್ಲ.
 
ಒಂದು ಕೇಂದ್ರದಲ್ಲಿ ಕನಿಷ್ಠ ಒಬ್ಬ ವೈದ್ಯ (ಇಬ್ಬರಿದ್ದರೆ ಒಳಿತು), ಒಬ್ಬ ಲ್ಯಾಬ್ ಟೆಕ್ನೀಷಿಯನ್, ಒಬ್ಬ ಹಿರಿಯ ಪುರುಷ ಸಹಾಯಕ, ಒಬ್ಬರು ಹಿರಿಯ ಮಹಿಳಾ ಸಹಾಯಕಿ, ಒಬ್ಬ ಔಷಧಿ ವಿತರಕ, ಒಬ್ಬ ಗುಮಾಸ್ತ, ಒಬ್ಬ ಕಂಪ್ಯೂಟರ್ ಆಪರೇಟರ್, ಜೊತೆಗೆ ಸ್ಟಾಫ್ ನರ್ಸ್‌ಗಳು ಹಾಗೂ ಗ್ರೂಪ್-ಡಿ ನೌಕರರು ಇರಬೇಕೆಂದು ನಿಯಮ. ಆದರೆ ಬಹುತೇಕ ಪಿಎಚ್‌ಸಿಗಳಲ್ಲಿ ಇಷ್ಟು ಸಿಬ್ಬಂದಿ ಇರುವುದೇ ಇಲ್ಲ.

ಇಷ್ಟೆಲ್ಲಾ ಕೊರತೆ, ಒತ್ತಡಗಳ ನಡುವೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ವೈದ್ಯ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಹೆಚ್ಚಿನ ಸೌಲಭ್ಯ, ಸವಲತ್ತು, ಪ್ರೋತ್ಸಾಹಕ ಸಂಭಾವನೆಗಳನ್ನು ನೀಡುವ ಬಗ್ಗೆ ಸರ್ಕಾರ ಎಂದೂ ಚಿಂತಿಸಿಲ್ಲ.

ಆದ್ದರಿಂದ ಮುಖ್ಯಮಂತ್ರಿಗಳು ವೈದ್ಯರ ಸಮಸ್ಯೆಗಳ ಗಂಭೀರತೆಯ ಮೂಲ ಹುಡುಕಿ ರಿಪೇರಿ ಮಾಡಿದರೆ, ಆಗ ವೈದ್ಯರು ಸರ್ಕಾರಿ ಸೇವೆಗೆ ಮನಸ್ಸು ಮಾಡಿಯಾರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈಗಿರುವ ಸರ್ಕಾರಿ ವೈದ್ಯರು ನೌಕರಿ ಬಿಟ್ಟು ಖಾಸಗೀ ಆಸ್ಪತ್ರೆಗಳತ್ತ ಮುಖ ಮಾಡಿದರೆ ಆಶ್ಚರ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.