ADVERTISEMENT

ಶಿಕ್ಷಣ ವ್ಯವಸ್ಥೆಗೆ ಪರೀಕ್ಷಾ ಕಾಲ

ಡಾ.ಸಿಬಂತಿ ಪದ್ಮನಾಭ ಕೆ.ವಿ.
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಸಿಬಂತಿ ಪದ್ಮನಾಭ  ಕೆ.ವಿ.
ಸಿಬಂತಿ ಪದ್ಮನಾಭ ಕೆ.ವಿ.   

ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸ್ನೇಹಿತರೊಬ್ಬರು ಬೆಳ್ಳಂಬೆಳಗ್ಗೆಯೇ ‘ಎಕ್ಸಾಂ ಡ್ಯೂಟಿ’ ಎಂದು ದೌಡಾಯಿಸುತ್ತಿದ್ದರು. ‘ಕಳೆದ ವಾರ, ಅದರ ಹಿಂದಿನ ವಾರ, ಅದಕ್ಕಿಂತ ಹಿಂದಿನ ತಿಂಗಳೂ ಪರೀಕ್ಷೆಯೆಂದು ಒದ್ದಾಡುತ್ತಿದ್ದಿರಿ; ಏನು ನಿಮ್ಮಲ್ಲಿ ವರ್ಷವಿಡೀ ಪರೀಕ್ಷೆ ಮಾಡುತ್ತೀರೋ ಹೇಗೆ? ಪರೀಕ್ಷೆ ವಿದ್ಯಾರ್ಥಿಗಳಿಗೋ, ನಿಮಗೋ ಅದನ್ನಾದರೂ ಹೇಳಿ ಸ್ವಾಮಿ’ ಎಂದು ತಮಾಷೆ ಮಾಡಿದೆ. ‘ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ, ನಮ್ಮ ಅವಸ್ಥೆ ನಿಮಗೆಲ್ಲಿ ಅರ್ಥವಾಗಬೇಕು’ ಎಂದು ಗೊಣಗಾಡಿದರು ಅವರು.

ಮುಂದಿನ ಮಾರ್ಚ್‌ನಲ್ಲಿ ಪರೀಕ್ಷೆ ನಿಗದಿಯಾಗಿದ್ದರೆ ಹಿಂದಿನ ಅಕ್ಟೋಬರ್‌ನಲ್ಲಿಯೇ ಸಿಲಬಸ್ ಮುಗಿದಿರುವುದು ಕಡ್ಡಾಯ. ಅಲ್ಲಿಂದ ಮುಂದೆ ನಾಲ್ಕು ತಿಂಗಳು ಪರೀಕ್ಷೆಗಳ ಮ್ಯಾರಥಾನ್. ಪ್ರಶ್ನೆಪತ್ರಿಕೆ ತಯಾರಿಸು, ಪರೀಕ್ಷೆ ನಡೆಸು, ಮೌಲ್ಯಮಾಪನ ಮಾಡು- ಇವಿಷ್ಟು ಅಧ್ಯಾಪಕರ ದಿನಚರಿ. ಓದು, ಪರೀಕ್ಷೆ ಬರೆ, ಪುನಃ ಓದು- ಇವಿಷ್ಟು ವಿದ್ಯಾರ್ಥಿಗಳ ದಿನಚರಿ. ಕಾಲೇಜುಗಳು ಏನನ್ನು ಕಲಿಸುತ್ತಿವೆ? ವಿದ್ಯಾರ್ಥಿಗಳು ಏನನ್ನು ಕಲಿಯುತ್ತಿದ್ದಾರೆ?

ಎಷ್ಟು ಚೆನ್ನಾಗಿದ್ದವು ಆ ದಿನಗಳು! ಜೂನ್‍ನಲ್ಲಿ ತರಗತಿಗಳು ಆರಂಭವಾದರೆ ಅಕ್ಟೋಬರ್‌ನಲ್ಲೊಂದು ಅರ್ಧವಾರ್ಷಿಕ ಪರೀಕ್ಷೆ, ಜತೆಗೆ ದಸರಾ ರಜೆಯ ಸಡಗರ. ಮತ್ತೆ ನವೆಂಬರ್‌ನಲ್ಲಿ ತರಗತಿಗಳು ಪುನರಾರಂಭವಾದರೆ ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ, ಏಪ್ರಿಲ್-ಮೇ ಎರಡು ತಿಂಗಳು ಭರ್ಜರಿ ಬೇಸಿಗೆ ರಜೆ. ಏನು ಓಡಾಟ, ಎಷ್ಟೊಂದು ತಿರುಗಾಟ. ಅಜ್ಜನ ಮನೆಯ ತೋಟ, ಚಿಕ್ಕಮ್ಮನ ಮನೆಯ ಗುಡ್ಡ, ದೊಡ್ಡಪ್ಪನ ಮನೆಯ ಹೊಳೆ, ನೆಂಟರಿಷ್ಟರ ಊರಿನ ಜಾತ್ರೆ, ಮನೆಮಂದಿಯೊಂದಿಗಿನ ಪ್ರವಾಸ. ಎರಡೇ ತಿಂಗಳಲ್ಲಿ ಹೊಸದೊಂದು ಪ್ರಪಂಚದ ದರ್ಶನವಾಗುವ ಹೊತ್ತಿಗೆ ರಜೆಯೂ ಮುಗಿದು ಮೈಮನಗಳೆಲ್ಲ ಅರಳಿ ಹೊಸ ಕಲಿಕೆಗೆ ವೇದಿಕೆ ಸಿದ್ಧವಾಗಿರುತ್ತದೆ.

ADVERTISEMENT

ಹತ್ತಿಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಲವೇ ಬದಲಾಗಿ ಹೋಯಿತು ನೋಡಿ. ಮಕ್ಕಳಿಗೆ ರಜೆಯ ಕಲ್ಪನೆ ಹೋಗಲಿ, ಮುಂಜಾನೆ ಮುಸ್ಸಂಜೆಗಳ ಕಲ್ಪನೆಯೇ ಇಲ್ಲ. ವಾರಾಂತ್ಯದ ಬಿಡುವಂತೂ ಇಲ್ಲವೇ ಇಲ್ಲ. ಚಳಿಯಿರಲಿ ಮಳೆಯಿರಲಿ, ಬೆಳಿಗ್ಗೆ ಐದು ಗಂಟೆಗೆ ಬ್ಯಾಗು ಬೆನ್ನಿಗೇರಿಸಿ ಟ್ಯೂಷನ್ ಸೆಂಟರುಗಳ ಮುಂದೆ ಕ್ಯೂ ನಿಂತಿರಬೇಕು. ತಿಂಡಿಯ ಶಾಸ್ತ್ರ ಮಾಡಿ ಕಾಲೇಜು ಸೇರಿದರೆ, ಸಂಜೆ ಮನೆಗೆ ಬರದಿದ್ದರೂ ಮತ್ತೆ ಟ್ಯೂಷನ್ ಸೆಂಟರ್‌ಗಳ ಎದುರು ಜಮಾಯಿಸಲೇಬೇಕು. ಎಂಟೋ ಒಂಬತ್ತೋ ಗಂಟೆಗೆ ಮನೆಗೆ ಬಂದರೆ ಮತ್ತೆ ಓದು, ಬರೆ, ಉರುಹೊಡೆ, ಪರೀಕ್ಷೆಗೆ ತಯಾರಾಗು. ಬಾಲ್ಯ, ಆಟ, ಬಿಡುವು, ಹರಟೆಗಳ ಚೆಲುವು, ಸೂರ್ಯೋದಯ ಸೂರ್ಯಾಸ್ತಗಳ ಸೊಬಗು, ಮನುಷ್ಯ ಸಂಬಂಧಗಳ ಗೊಡವೆ ಇಲ್ಲದೆ ಇವರೆಲ್ಲ ಎಲ್ಲಿಗೆ ಓಡುತ್ತಿದ್ದಾರೆ? ಯಾವ ಗುರಿಯನ್ನು ತಲುಪಹೊರಟಿದ್ದಾರೆ?

ಸ್ಪರ್ಧೆಯ ಯುಗ ಹೌದು. ಆದರೆ ಯಾರ ವಿರುದ್ಧ ಈ ಸ್ಪರ್ಧೆ? ಯಾರನ್ನೋ ಸೋಲಿಸಿ ಮುನ್ನಡೆಯುವ ನೆಪದಲ್ಲಿ ನಮ್ಮನ್ನು ನಾವೇ ಸೋಲಿಸುತ್ತಿರುವುದು ಏಕೆ ನಮಗೆ ಅರ್ಥವಾಗುತ್ತಿಲ್ಲ? ಶಾಲಾ-ಕಾಲೇಜುಗಳಲ್ಲಿ ಪಾಠದ ಬಳಿಕ ಪರೀಕ್ಷೆ ಬರೆಯುತ್ತೇವೆ, ನಿಜ ಜೀವನದಲ್ಲಿ ಪರೀಕ್ಷೆ ಬಳಿಕ ಪಾಠ ಕಲಿಯುತ್ತೇವೆ ಎಂಬ ಹಿರಿಯರ ಮಾತು ನೆನಪಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ನಿಜವಾಗಿಯೂ ಪಾಠಗಳು ನಡೆಯುತ್ತಿವೆಯೇ? ಅವು ಯಾವ ಬಗೆಯ ಪಾಠಗಳು? ಆ ಪಾಠಗಳಿಂದ ನಮ್ಮ ಯುವಕರು ಬದುಕಿನ ಪರೀಕ್ಷೆಗಳನ್ನು ಬರೆಯಲು ಸಮರ್ಥರಾಗುತ್ತಿದ್ದಾರೆಯೇ? ಸಿಲಬಸ್‍ಗಳು ಬದಲಾಗುತ್ತಿವೆ, ಹೊಸ ಬೋಧನಾ ವಿಧಾನಗಳು ಬರುತ್ತಿವೆ ನಿಜ; ಆದರೆ ನಮ್ಮ ಮಕ್ಕಳು ಪಾಠಗಳನ್ನು ಕಲಿಯುತ್ತಿದ್ದಾರೆಯೇ? ಮಾರ್ಚ್- ಅಕ್ಟೋಬರ್‌ಗಳ ನಡುವೆ ಸಿಲಬಸ್‍ ಮುಗಿಸುವುದೇ ನಮ್ಮ ಕಾಲೇಜುಗಳ ಸಾಧನೆಯೇ? ಅವುಗಳಿಂದಾಚೆ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಏನೂ ಇಲ್ಲವೇ?

‘ಬರೀ ಪರೀಕ್ಷೆಗಳನ್ನೇ ಮಾಡುತ್ತಿದ್ದೀರಿ, ಪಾಠಗಳನ್ನು ಯಾವಾಗ ಮಾಡುತ್ತೀರಿ ಸಾರ್’ ಎಂದು ಮೇಲೆ ಹೇಳಿದ ಉಪನ್ಯಾಸಕ ಮಿತ್ರರನ್ನು ಕೇಳಿದೆ. ಅವರಲ್ಲಿ ಉತ್ತರವಿಲ್ಲ. ವಾಸ್ತವವಾಗಿ ಪಾಠ ಮಾಡುವುದು ಅವರ ಮ್ಯಾನೇಜ್‌ಮೆಂಟ್‌ ಭೂಪರಿಗೆ ಬೇಕಾಗಿಲ್ಲ. ಅವರು ಕೇಳುತ್ತಿರುವುದು ರಿಸಲ್ಟ್ ಮಾತ್ರ. ಪಾಠ ಮಾಡಿದಿರೋ ಇಲ್ಲವೋ ಬೇರೆ ಪ್ರಶ್ನೆ, ಎಲ್ಲರೂ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಬೇಕು, ಕಾಲೇಜಿನ ಎದುರು ಸಾಧಕ ವಿದ್ಯಾರ್ಥಿಗಳ ಫ್ಲೆಕ್ಸುಗಳು ರಾರಾಜಿಸುತ್ತಿರಬೇಕು; ಮುಂದಿನ ವರ್ಷ ಹೊಸ ಪ್ರವೇಶಾತಿಗೆ ವಿದ್ಯಾರ್ಥಿಗಳು ಮತ್ತವರ ಪೋಷಕರು ಸರತಿಯಲ್ಲಿ ಬರುತ್ತಿರಬೇಕು, ಹಣದ ಹೊಳೆ ಹರಿಯುತ್ತಿರಬೇಕು. ಆಮೇಲೆ ಆ ಹುಡುಗರು ಬದುಕಿದರೋ, ಬೆಳೆದರೋ, ನೆಮ್ಮದಿಯಾಗಿ ಸಂಸಾರ ಮಾಡಿದರೋ, ನೇಣಿಗೆ ಕೊರಳೊಡ್ಡಿದರೋ ಅವರಿಗೆ ಬೇಕಾಗಿಲ್ಲ. ಈ ಹಣದ ದಾಹ ಎಲ್ಲಿಯವರೆಗೆ?

‘ನಿಮ್ಮ ಕಾಲೇಜಿನಲ್ಲಿ ಮಕ್ಕಳು ಬಿಡುವಿನ ವೇಳೆ ಹೇಗೆ ಕಳೆಯುತ್ತಾರೆ’ ಎಂದು ಅದೇ ಸ್ನೇಹಿತರನ್ನು ಕೇಳಿದೆ. ಹಾಗೆ ಕೇಳುವುದೇ ದೊಡ್ಡ ಮೂರ್ಖತನ. ಬಿಡುವು ಎಂದರೆ ಟೈಂ ವೇಸ್ಟ್ ಎಂಬ ಶಿಕ್ಷಣ ತಜ್ಞರ ಕೂಟ ಅದು. ಬೆಳಿಗ್ಗಿನಿಂದ ಸಂಜೆಯವರೆಗೆ ಸಿಲಬಸ್‍ ಅನ್ನು ಅರೆದರೆದು ಕುಡಿಸುವ ಪಡಿಪಾಟಲಿನಲ್ಲಿ ಮಕ್ಕಳು ಮನಸ್ಸು ಬಿಚ್ಚಿ ಒಂದು ನಿಮಿಷ ನಕ್ಕು ಹಕ್ಕಿಗಳಂತೆ ಹಗುರಾಗುವ ಕಲ್ಪನೆ ಎಷ್ಟು ಕ್ಷುಲ್ಲಕವಾದದ್ದು!

ಭಾಷಣ, ಪ್ರಬಂಧ, ಭಾವಗೀತೆ, ನಾಟಕ, ಯಕ್ಷಗಾನ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಕೋಲಾಟ, ಸಂಗೀತ- ಹಾಗೆಂದರೆ ಏನೆಂದು ಈ ಮಕ್ಕಳನ್ನು ಕೇಳಿ ನೋಡಿ. ಅವರಿಗೆ ಟ್ಯೂಷನ್, ಪರೀಕ್ಷೆಗಳನ್ನುಳಿದು ಇನ್ನೇನೂ ಗೊತ್ತಿಲ್ಲ. ಸಾಂಸ್ಕೃತಿಕ-ಸಾಹಿತ್ಯಕ ಚಟುವಟಿಕೆಗಳ ಕಲ್ಪನೆಯೇ ಈ ಕಾಲೇಜುಗಳಲ್ಲಿಲ್ಲ. ಭಾಷಾ ತರಗತಿಗಳನ್ನು ತೆಗೆದುಕೊಳ್ಳುವ ಅಧ್ಯಾಪಕರು ಏನಾದರೂ ಒಂದಿಷ್ಟು ಉಪಕ್ರಮ ತೋರಬಹುದೇ ಎಂದುಕೊಂಡರೆ ಅಂಥವರು ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಹೊರೆ. ಮುಂದೆ ಎಂಜಿನಿಯರುಗಳು ಡಾಕ್ಟರುಗಳಾಗಬೇಕಾದ ಪ್ರಚಂಡ ಅಂಕಶೂರರಿಗೆ ಭಾಷಾಪಾಠಗಳಿಂದ ವಿಶೇಷ ಅನುಕೂಲವೇನೂ ಇಲ್ಲ. ಭಾಷಾ ಶಿಕ್ಷಕರು ಬೇಗ ಪಾಠ ಮುಗಿಸಿ ತಮ್ಮ ಅವಧಿಗಳನ್ನು ಕೋರ್ ಸಬ್ಜೆಕ್ಟ್‌ ಶಿಕ್ಷಕರಿಗೆ ಬಿಟ್ಟುಕೊಡಬೇಕೆಂಬುದು ಇಲ್ಲಿನ ಅಲಿಖಿತ ಸಂವಿಧಾನ.

ದಿನಕ್ಕೆ ಅರ್ಧ ಗಂಟೆಯನ್ನು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಾದರೂ ಕಳೆಯುತ್ತಾರೋ ಎಂದರೆ ಈ ಕಾಲೇಜುಗಳಲ್ಲಿ ಲೈಬ್ರರಿಗಳೇ ಇಲ್ಲ. ‘ಹಿಂದೆ ಒಂದು ಸಣ್ಣ ಲೈಬ್ರರಿ ಇತ್ತು, ಅದರಿಂದ ಜಾಗ ವೇಸ್ಟ್ ಆಗುತ್ತದೆ ಎಂದು ತಿಳಿದ ನಮ್ಮ ಮ್ಯಾನೇಜ್‌ಮೆಂಟು ಅಲ್ಲಿದ್ದ ಪುಸ್ತಕಗಳನ್ನೆಲ್ಲ ಗೋಡೌನ್‍ಗೆ ಸಾಗಿಸಿತು. ಹೊಸ ಸೆಕ್ಷನ್ ಆರಂಭಿಸಲು ಒಂದು ಕ್ಲಾಸ್‍ರೂಂ ದೊರೆತಂತಾಯಿತು’ ಎಂದು ವಿವರಿಸಿದರು ಉಪನ್ಯಾಸಕ ಮಿತ್ರರು.

ಹೆಚ್ಚೆಂದರೆ ಐವತ್ತು ವಿದ್ಯಾರ್ಥಿಗಳು ಕೂರಬಲ್ಲ ಒಂದೇ ಕೊಠಡಿಯುಳ್ಳ ಒಂದು ಪಿಯು ಕಾಲೇಜನ್ನು ಇತ್ತೀಚೆಗೆ ನೋಡಿದೆ. ಆ ಕಾಲೇಜಿನ ನಿಜವಾದ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು. ಅರೆ, ಈ ವಿದ್ಯಾರ್ಥಿಗಳೆಲ್ಲ ಎಲ್ಲಿದ್ದಾರೆ ಎಂದು ನೋಡಿದರೆ ಟ್ಯೂಷನ್ ಕೇಂದ್ರಗಳಲ್ಲಿ. ಸರ್ಕಾರದ ಮಾನ್ಯತೆ ದೃಷ್ಟಿಯಿಂದ ಒಂದಷ್ಟು ಸಾವಿರ ಕೊಟ್ಟು ಸದರಿ ಕಾಲೇಜಿನಲ್ಲಿ ದಾಖಲಾತಿ ಮಾತ್ರ ಪಡೆಯುತ್ತಾರೆ ಈ ವಿದ್ಯಾರ್ಥಿಗಳು. ಆಮೇಲೆ ತಮ್ಮ ಆಯ್ಕೆಯ ಟ್ಯೂಷನ್ ಸೆಂಟರ್‌ಗಳನ್ನು ಸೇರಿ ಲಕ್ಷಾಂತರ ಶುಲ್ಕ ತೆತ್ತು, ಕೊನೆಗೆ ಪರೀಕ್ಷೆ ವೇಳೆಗೆ ಕಾಲೇಜಿಗೆ ಬಂದು ಪ್ರವೇಶಪತ್ರ ಪಡೆದುಕೊಳ್ಳುತ್ತಾರೆ. ಕಾಲೇಜಿಗೂ ವಿದ್ಯಾರ್ಥಿಗೂ ಇರುವ ಸಂಬಂಧ ದಾಖಲಾತಿ ಮತ್ತು ಅಂಕಪಟ್ಟಿಯದ್ದು ಮಾತ್ರ. ನಾವು ನಿಜಕ್ಕೂ ಎದುರಿಸುತ್ತಿರುವ ಪರೀಕ್ಷೆ ಯಾವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.